ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಸಿ
ಇತ್ತೀಚಿನ ದಿನಗಳಲ್ಲಿ ದಿನನಿತ್ಯ ಬಳಕೆಯ ಆಹಾರ ಸಾಮಗ್ರಿಗಳ ಬೆಲೆ ಏರಿಕೆ, ಹಲವಾರು ರೀತಿಯ ತೆರಿಗೆಗಳು, ದುಬಾರಿ ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಗಣನೀಯ ವೈದ್ಯಕೀಯ ವೆಚ್ಚ ಮುಂತಾದ ಕನಿಷ್ಠ ಪ್ರಮುಖ ವೆಚ್ಚಗಳನ್ನು ಪರಿಗಣಿಸಿದರೂ, ಒಂದು ಸಣ್ಣ ಕುಟುಂಬದ ಮಾಹೆಯಾನ ವೆಚ್ಚ ಸುಮಾರು ರು. 25,000ಕ್ಕಿಂತ ಕಡಿಮೆ ಇಲ್ಲ. ಈ ಅಂಶಗಳನ್ನು ಪರಿಗಣಿಸಿದಲ್ಲಿ ಪ್ರಸ್ತುತ, ಈ ವಾರ್ಷಿಕ ಆದಾಯ ತೆರಿಗೆ ವಿನಾಯಿತಿ ಮಿತಿಯು ಕನಿಷ್ಠ ರು. 3 ಲಕ್ಷ ಇದ್ದು, ಪ್ರತಿ 2-3 ವರ್ಷಕ್ಕೊಮ್ಮೆ ಇದು ಕನಿಷ್ಠ ಶೇ.10-20ರಷ್ಟು ಹೆಚ್ಚಾಗಬೇಕಾದ್ದು ನ್ಯಾಯೋಚಿತ. ಕೇಂದ್ರ ಸರ್ಕಾರವು 2-3 ವರ್ಷಕ್ಕೊಮ್ಮೆ ಈ ಮಿತಿಯಲ್ಲಿ ಕೇವಲ 10-20 ಸಾವಿರ ರು.ಗಳ ಹೆಚ್ಚಳ ಮಾಡುತ್ತಿದ್ದು, ಈ ಹೆಚ್ಚಳ ವಸ್ತುಸ್ಥಿತಿಗನುಗುಣವಾಗಿರುವುದಿಲ್ಲ. ಸರ್ಕಾರಕ್ಕೆ ವಿವಿಧ ಯೋಜನೆಗಳಿಗೆ ಸಂಪನ್ಮೂಲಗಳ ಅಗತ್ಯವಿದ್ದಲ್ಲಿ, ನಿರ್ಧಿಷ್ಟ ಯೋಜನೆಗಳನ್ನು ಜಾರಿಗೆ ತಂದು, ಈ ಯೋಜನೆಗಳಲ್ಲಿ ವರಮಾನ ತೆರಿಗೆ ಕಾಯ್ದೆ ಕಲಂ 80(ಸಿ) ಯಡಿ ಹೂಡಿಕೆಗೆ ಅವಕಾಶ ನೀಡಿ, ವರಮಾನ ತೆರಿಗೆ ಕಾಯ್ದೆ ಕಲಂ 80(ಸಿ) ಯಡಿ ನೀಡುತ್ತಿರುವ ಸೌಲಭ್ಯದ ಮಿತಿಯನ್ನು ಕನಿಷ್ಠ ರು. 2-3 ಲಕ್ಷಕ್ಕೆ ಏರಿಸುವುದರ ಜೊತೆಗೆ ಈ ಹೂಡಿಕೆಯ ಮೇಲೆ ಆಕರ್ಷಕ ಬಡ್ಡಿ ನೀಡಿದಲ್ಲಿ, ಹೆಚ್ಚಿನ ಸಂಪನ್ಮೂಲ ಕ್ರೋಢೀಕರಣ ಸಾಧ್ಯ. ಇದು ನಿವೃತ್ತಿಯಾದವರು ಮತ್ತು ಹಿರಿಯ ನಾಗರಿಕರಿಗೆ ಸಹಕಾರಿಯಾಗುತ್ತದೆ. ಸರ್ಕಾರವು ವಿಧಿಸುವ ತೆರಿಗೆಗಳು ನ್ಯಾಯೋಚಿತವಾದಲ್ಲಿ, ಪಾಲನೆ ಹೆಚ್ಚು ಸ್ವಯಂಪ್ರೇರಿತವಾಗಿರುತ್ತದೆ. ತೆರಿಗೆಗಳು ಹೊರೆಯಾದಲ್ಲಿ, ಜನರು ಅನಿವಾರ್ಯವಾಗಿ ಅಪ್ರಮಾಣಿಕರಾಗಿ, ತೆರಿಗೆ ತಪ್ಪಿಸಲು ವಾಮಮಾರ್ಗಗಳ ಮೊರೆ ಹೋಗುವ ಸನ್ನಿವೇಶಗಳಿಗೆ ದಾರಿಯಾಗುತ್ತೆ. ಪ್ರಮುಖವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ನೌಕರರ ಸಂಘಗಳು ಮತ್ತು ಸಂಬಂಧಿತ ಇತರೆ ಸಂಸ್ಥೆಗಳು ಈ ಕುರಿತು ಸಂಬಂಧಪಟ್ಟವರೊಂದಿಗೆ ಸಮಾಲೋಚನೆ, ಪತ್ರ ವ್ಯವಹಾರಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿಪತ್ರ ನೀಡಿ ಅಗತ್ಯ ಅನಸರಣಾ ಕ್ರಮಗಳನ್ನು ಕೈಗೊಂಡಲ್ಲಿ, ಈ ವಿಷಯದಲ್ಲಿ ಸೂಕ್ತ ಪರಿಹಾರ ದೊರೆಯುವುದೆಂಬ ಭರವಸೆ ನನ್ನದು. ಇದು ಅಗತ್ಯವೂ ಹೌದು.
-ಕೆ.ಟಿ.ಕಣ್ಣನ್, ಬೆಂಗಳೂರು
ದರ ಏರಿಕೆ ಬರೆ
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡು ಒಂದು ತಿಂಗಳು ಕಳೆಯುವಷ್ಟರಲ್ಲಿಯೇ ಸಾರಿಗೆ ಬಸ್ ಟಿಕೆಟ್ ದರ ಏರಿಸಿ ಜನತೆಗೆ ಶಾಕ್ ನೀಡಿದೆ. ಈ ಹಿಂದೆ ಉತ್ತಮ ಲಾಭದಲ್ಲಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಈಗ ಡೀಸೆಲ್ ದರ ಏರಿಕೆ, ನೌಕರರ ವೇತನ ಪರಿಷ್ಕರಣೆ ಮತ್ತು ವಿದ್ಯಾರ್ಥಿಗಳಿಗೆ ಕೊಡುತ್ತಿರುವ ಪಾಸ್ಗಳ ಕಾರಣದಿಂದಾಗಿ ಆರ್ಥಿಕ ಹೊರೆ ಅನುಭವಿಸುವುದು ನಿಜಕ್ಕೂ ಆಶ್ಚರ್ಯದ ಸಂಗತಿಯಾಗಿದೆ. ಏನೇ ಇದ್ದರೂ ಸರ್ಕಾರದ ದಿಢೀರ್ ಮತ್ತು ದುಡುಕಿನ ನಿರ್ಧಾರದಿಂದ ಈಗಾಗಲೇ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜಡ ಮತ್ತು ಮಧ್ಯಮ ವರ್ಗದ ಜನತೆಗೆ ಮತ್ತೊಂದು ಬರೆ ಎಳೆದಂತಾಗಿದೆ. ಆದ್ದರಿಂದ ಘನ ಸರ್ಕಾರ ಇದರ ಬಗ್ಗೆ ಗಮನ ಹರಿಸಿ, ಏರಿಕೆ ದರಗಳನ್ನು ಹಿಂಪಡೆದುಕೊಂಡು, ಈ ಹಿಂದಿನ ದರಗಳನ್ನು ಮುಂದುವರಿಸಿ. ಈ ಮೂಲಕ ಸರ್ಕಾರ ಸಾಮಾನ್ಯ ಜನತೆ ಮತ್ತು ವಿದ್ಯಾರ್ಥಿಗಳ ಹಿತ ಕಾಪಾಡುವುದೇ?
-ಮಧುಸೂಧನ ಸಿ.ಪಿ.,ಚಾಮರಾಜನಗರ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

