ಸಂಪಾದಕೀಯ

ಪ್ರತಿಭೆಗಳು ಒಳಪುಟಕ್ಕೆ ಫುಡಾರಿಗಳು ಮುಖಪುಟಕ್ಕೆ (ಗೋಡೆ ಬರಹ)

Published On :

ನಜೀಬ್ ಜಂಗ್‌ರವರ ಹಬ್ಬಬೇಕಿದೆ ಕೋಮು ಸಾಮರಸ್ಯದ ಬಳ್ಳಿ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ರೀತಿ ನಾವೆಲ್ಲ ಆ ಜಾತಿ ಈ ಜಾತಿ ಎನ್ನುವುದಕ್ಕಿಂತ ಮೊದಲು ನಾವೆಲ್ಲರೂ ಭಾರತೀಯರು ಎಂಬ ಸಹಬಾಳ್ವೆಯ ಬೀಜ ಬಿತ್ತುತ್ತಿರುವ ಕನ್ನಡಪ್ರಭಕ್ಕೆ ಧನ್ಯವಾದಗಳು. ನಾವೆಲ್ಲರೂ ಒಂದಾಗಿ ಬದುಕೋಣ. ಅನೇಕ ಜಾತಿ, ಧರ್ಮ, ಸಂಸ್ಕೃತಿಯ ನೆಲೆವೀಡಾದ ಭಾರತದಲ್ಲಿ ಎಲ್ಲಾ ಧರ್ಮ, ಜಾತಿಯವರು ಪ್ರೀತಿ, ಸಹಬಾಳ್ವೆಯಿಂದ ಬದುಕುವುದರೊಂದಿಗೆ ಕೋಮುವಾದವನ್ನು ನಮ್ಮ ದೇಶದಿಂದ ಕಿತ್ತೊಗೆಯುವುದರಲ್ಲಿ (ಕಿತ್ತು ಒಗೆಯುವಲ್ಲಿ) ಮುಂದಿನ ದಿನದಲ್ಲಿ ಕನ್ನಡಪ್ರಭ ಉತ್ತಮ ಹೆಜ್ಜೆಗಳನ್ನು ಇಡಲೆಂದು ಕೋರುತ್ತೇನೆ.
-ಷರೀಫ್‌ಸಾಬ್ ಕಳ್ಳೀಮನಿ, ಬೆಂಗಳೂರು. ಮೊ. 99723 27987.

'ಐಕ್ಯೂ' ಮಟ್ಟದಲ್ಲಿ ಐನ್‌ಸ್ಟೀನ್ ಹಿಂದಿಕ್ಕಿದ ಭಾರತೀಯಬಾಲೆ" ಕ.ಪ್ರ. ದಿನಾಂಕ 06.03.2013. ಸದರಿ ವರದಿ ಅಡಿಯಲ್ಲಿ ಪ್ರಕಟವಾಗಿರುವ ಪ್ರಕಾರ ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ 'ನೇಹಾ' ಎಂಬ 12 ವರ್ಷದ ವಿದ್ಯಾರ್ಥಿನಿ, ಖ್ಯಾತ ವಿಜ್ಞಾನಿಗಳಾದ ಐನ್‌ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್‌ಗಿಂತಲೂ ಹೆಚ್ಚು ಐಕ್ಯೂ ಹೊಂದಿದ್ದಾಳೆ ಎನ್ನುವ ಗೌರವಕ್ಕೆ ಪಾತ್ರಳಾಗಿದ್ದಾಳೆ ಎಂಬುದೇ ವರದಿಯ ಸಾರಾಂಶ. ಈಗ ಎಲ್ಲಾ ಹೈಯರ್ ಪ್ರೈಮರಿ ಶಾಲೆ ಮತ್ತು ಪ್ರೌಢಶಾಲೆಗಳಲ್ಲಿ, ಶಾಲಾ ಪ್ರಾರ್ಥನೆಯಾದ ನಂತರ ಅಂದಿನ ಪತ್ರಿಕೆಗಳ ಮುಖ್ಯಾಂಶಗಳನ್ನು ಆಯ್ದ ವಿದ್ಯಾರ್ಥಿಗಳು ಪ್ರಾರ್ಥನಾ ಸಭೆಯಲ್ಲಿ ಓದಿ ಹೇಳುತ್ತಾರೆ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಮುಖಪುಟದಲ್ಲಿರುವ ವಿಷಯಗಳನ್ನು ಪ್ರಮುಖ ವಿಷಯಗಳೆಂದು ತಿಳಿದುಕೊಂಡು ಓದಿ ಹೇಳುತ್ತಾರೆ. ಸಾಮಾನ್ಯವಾಗಿ ಒಳಪುಟಗಳನ್ನು ನೋಡಲು ಹೋಗುವುದಿಲ್ಲ ಅಥವಾ ನೋಡಲು ಸಮಯ ಸಾಲುವುದಿಲ್ಲ. ಆದ್ದರಿಂದ ನೇಹಾಳಂಥ ವಿದ್ಯಾರ್ಥಿನಿ ಪ್ರತಿಭೆ ಬಹುಶಃ ಇತರೆ ವಿದ್ಯಾರ್ಥಿಗಳಿಗೆ ಗೊತ್ತಾಗದೇ ಹೋಗಬಹುದಾದ ಸಾಧ್ಯತೆಯಿರುತ್ತದೆ. ಯಾವುದೇ ಕೆಲಸಕ್ಕೆ ಬಾರದ ರಾಜಕೀಯ ಪುಢಾರಿಗಳ ಹೇಳಿಕೆಗಳನ್ನು ಮುಖಪುಟದಲ್ಲಿ ಪ್ರಕಟಿಸುತ್ತೀರ! ನಮ್ಮ ದೇಶದ ವಿಜ್ಞಾನಿಗಳ ಸಾಧನೆಯನ್ನು ಕೂಡ ಒಳಪುಟದಲ್ಲಿ ಪ್ರಕಟಿಸುತ್ತೀರ. ಉದಾಹರಣೆಗೆ, ನಮ್ಮ ದೇಶದ ಖಗೋಳ ವಿಜ್ಞಾನಿಗಳು ಆಗಿಂದ್ದಾಗ್ಗೇ ಅನೇಕ ಉಪಗ್ರಹಗಳನ್ನು, ಮಾನವನ ಉಪಯೋಗಕ್ಕೋಸ್ಕರವಾಗಿ ಆಕಾಶದ ಕಕ್ಷೆಗೆ ಹಾರಿಸುತ್ತಾ ಬಂದಿದ್ದಾರೆ. ಆದರೆ ನಮ್ಮ ಪತ್ರಿಕೆಗಳು ಯಾವಾಗಲೂ ಅದನ್ನು ಮುಖಪುಟದಲ್ಲಿ ಪ್ರಕಟಿಸುವುದೇ ಇಲ್ಲ. ಇನ್ನು ಮುಂದಾದರೂ ಇಂತಹ ಮುಖ್ಯ ವಿಷಯಗಳನ್ನು ಮುಖಪುಟದಲ್ಲಿ ಪ್ರಕಟಿಸಬೇಕೆಂದು ಪ್ರಾರ್ಥನೆ.
-ಬ್ಯಾಂಕ್ ಶಿವಕುಮಾರ್, ಜೆ.ಪಿ. ನಗರ,
ಮೈಸೂರು-8., ಮೊ. 9886 301184.

ಪ್ರತಾಪ್‌ಸಿಂಹರ ಟಿಪ್ಪೂ ಬಗೆಗಿನ ಲೇಖನ ತುಂಬಾ ಚೆನ್ನಾಗಿತ್ತು, ಸಕಾಲಿಕವಾಗಿತ್ತು. ಆಧಾರವಿಲ್ಲದೆ ಟೀಕಿಸುವ ಲದ್ದಿ ಜೀವಿಗಳಿಗೆ ಸರಿಯಾದ ಏಟನ್ನೇ ಕೊಟ್ಟಿದ್ದಾರೆ. ಪ್ರತಿಯೊಬ್ಬ ವಿಚಾರವಂತನೂ ಹೀಗೆ ಕಪಟ ಸಾಹಿತಿಗಳ, ಬುದ್ಧಿಜೀವಿಗಳ ವಿರುದ್ಧ ಧ್ವನಿ ಎತ್ತಬೇಕು. ಪ್ರತಾಪ್‌ಸಿಂಹರ ದಿಟ್ಟತನ ಎಲ್ಲರಿಗೂ ಆದರ್ಶ. ಅವರ ಅಕ್ಷರ ಸೇವೆ ನಿರಾತಂಕವಾಗಿ ಹೀಗೇ ಮುಂದುವರೆಯಲಿ. ಪತ್ರಿಕೆಯ ವಕ್ರತುಂಡೋಕ್ತಿ, ಟ್ವಿಭಾಷಿತ, ಪದಪದರ ಅಂಕಣಗಳೂ ಸೂಪರ್. ಮಾಹಿತಿಪ್ರಭ, ಕಸರಸ ಕೂಡ ತುಂಬಾ ಉಪಕಾರಿಯಾಗಿದೆ. ಪತ್ರಿಕೆಯ ಗುಣಮಟ್ಟ ಇನ್ನೂ ಹೆಚ್ಚಲಿ.
-ದಿನೇಶ್ ಹೆಗಡೆ, ಹೊಸಗದ್ದೆ, ತಾ. ಶಿರಸಿ, (ಉ.ಕ.)

ಪ್ರತಿನಿತ್ಯ 'ಬೈಟುಕಾಫಿ' (ಕನ್ನಡಪ್ರಭದ ಪುರವಣಿ) ಯಲ್ಲಿ ಪ್ರಕಟವಾಗುವ ಪುಟ್ಟ ಅಂಕಣ 'ರನ್‌ವೇ' ಒಬ್ಬ ಅತ್ಯುತ್ತಮ ಮಾರ್ಗದರ್ಶಕನ ಸ್ಥಾನವನ್ನು ನಿಭಾಯಿಸುತ್ತಿದೆ. ಮನಸ್ಸಿನ ಅಸಹನೆಗೆ, ಕ್ಷೋಭೆಗೆ, ಅಶಾಂತಿಗೆ, ನೋವಿಗೆ, ಸಂಕಟಕ್ಕೆ ಎಲ್ಲಕ್ಕೂ ಇಲ್ಲಿ ಪರಿಹಾರವಿದೆ. ಎಲ್ಲಾ 'ಇಲ್ಲ'ಗಳ ನಡುವೆಯೂ ನೆಮ್ಮದಿಯಿಂದ ಸಂತಸದಿಂದ ಬದುಕುವ ಬಗೆಯನ್ನು ತಿಳಿಸುವ ಕೀಲಿಕೈ ಈ 'ರನ್‌ವೇ' ಎಂದರೆ ಅತಿಶಯೋಕ್ತಿಯಲ್ಲ. ಪ್ರತಿ ಸಮಸ್ಯೆಗೂ ಆಪ್ತ ಸಲಹೆಕಾರನಂತೆ ಪರಿಹಾರ ಹೇಳುವ, ಸುಂದರವಾದ ಜೀವನ ಶೈಲಿಯ ಟಿಪ್ಸ್‌ಗಳನ್ನು ಆತ್ಮೀಯವಾಗಿ ಹೇಳುವ 'ರನ್‌ವೇ'ಗೆ ನಮ್ಮ ಅನಂತಾನಂತ ಕೃತಜ್ಞತೆಗಳು. ಜೊತೆಗೆ ಕಚಗುಳಿಯಿಡುವ ನಾಲ್ಕೇ ಸಾಲುಗಳ ಅರ್ಥಪೂರ್ಣ ಕವನ 'ಮಳೆಹನಿ, ಖಡಕ್ ಉತ್ತರದ ಶೈಲಿಯ 'ಸ್ಯಾಟಲೈಟ್‌' ರಸಾನುಭವ ನೀಡುವ 'ಚಿತ್ರಗುಪ್ತ' ಅಂಕಣಗಳು ಬೈಟು ಕಾಫಿಯ ಪರಿಮಳವನ್ನು, ಸ್ವಾದವನ್ನು ಹೆಚ್ಚಿಸಿವೆ.
-ಶೀಲಾ ಸತ್ಯೇಂದ್ರಸ್ವಾಮಿ, ಹರವೇ ಮಠ,
ಚಾಮರಾಜನಗರ ತಾ. ಮತ್ತು ಜಿಲ್ಲೆ.

ವಿನಾಯಕಭಟ್ಟರ 'ಸಮ್ಮೇಳನ ಸುಮ್ಮನೆ' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳನ್ನು ಪ್ರಕಟಿಸಿದ ಕನ್ನಡಪ್ರಭಕ್ಕೆ ಧನ್ಯವಾದಗಳು. ಪ್ರಕಟವಾದ ಪ್ರತಿಕ್ರಿಯೆಗಳು ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವವರ ಕಣ್ಣು ತೆರಸುವುದರಲ್ಲಿ ಸಂದೇಹವಿಲ್ಲ. ಆದರೆ ಈ ವಿಷಯದಲ್ಲಿ ಕನ್ನಡಪ್ರಭ ಗಮನಿಸಬೇಕಾದ ಅಂಶವೆಂದರೆ, ಸಾಹಿತ್ಯ ಸಮ್ಮೇಳನಗಳ ಬಗ್ಗೆ ಹೆಸರು ಮಾಡಿದ ಸಾಹಿತಿಗಳು, ಬರಹಗಾರರು ಯಾವಾಗಲೂ ಪತ್ರಿಕೆಗೆ ದೂರವಾಣಿಯ ಮೂಲಕ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರೂ ಪ್ರಕಟಿಸುವುದು ಸಹಜ. ಜನಸಾಮಾನ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಹೆಚ್ಚಾಗಿ ಪ್ರಕಟಿಸಿದ್ದರೆ ಚೆನ್ನಾಗಿತ್ತು ಎನಿಸುತ್ತದೆ.
-ಮೂರ್ತಿ ಮಂಚೇನಹಳ್ಳಿ, ಬಸವನಗುಡಿ, ಬೆಂ.-4


ನಿಮ್ಮ ಅನಿಸಿಕೆಗಳನ್ನು  ಗೋಡೆಗೆ ಛಾಪಿಸಲು: anisikeprabha@gmail.com
ಗೋಡೆಬರಹ ವಿಭಾಗ, ಕನ್ನಡಪ್ರಭ, ಎಕ್ಸ್‌ಪ್ರೆಸ್ ಕಟ್ಟಡ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು -1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.