ಸಂಪಾದಕೀಯ

ವಿದೇಶಿ ಬ್ಯಾಂಕುಗಳ ಹಾದಿ ಸುಗಮ

Published On :

ಭಾರತದಲ್ಲಿ ತನ್ನ ಶಾಖೆಗಳನ್ನು ತೆರೆಯುವುದಕ್ಕೆ ವಿದೇಶಿ ಬ್ಯಾಂಕುಗಳು ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಿದ್ದವು. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಕೆಲವು ಷರತ್ತುಗಳೊಂದಿಗೆ ತನ್ನ ಹಸಿರು ನಿಶಾನೆಯನ್ನು ತೋರಿಸಿದೆ. ರಿಸರ್ವ್ ಬ್ಯಾಂಕ್‌ನ ನೂತನ ಗವರ್ನರ್ ರಘುರಾಮ್ ರಾಜನ್ ವಿದೇಶಿ ಬ್ಯಾಂಕುಗಳಿಗೆ ಅನುಕೂಲವಾಗುವಂಥ ನೀತಿಯನ್ನು ಪ್ರಕಟಿಸಿದ್ದಾರೆ.
ಹೊಸ ನೀತಿಯ ಪ್ರಕಾರ ವಿದೇಶಿ ಬ್ಯಾಂಕ್ ಒಂದು ಭಾರತದಲ್ಲಿ ಸಂಪೂರ್ಣ ಒಡೆತನದ ತನ್ನ ಶಾಖೆಯನ್ನು ಈಗ ತೆರೆಯಬಹುದಾಗಿದೆ. ಅಲ್ಲದೆ ದೇಶದಲ್ಲಿ ಈಗ ಇರುವ ಯಾವುದಾದರೂ ಖಾಸಗಿ ಬ್ಯಾಂಕನ್ನು ಸ್ವಾಧೀನಪಡಿಸಿಕೊಳ್ಳಬಹುದು. ದೇಶದ ಯಾವುದೇ ಮೂಲೆಯಲ್ಲಾದರೂ ಅದು ತನ್ನ ಶಾಖೆಯನ್ನು ತೆರೆಯಬಹುದಾಗಿದೆ. ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಅದು ಆರ್‌ಬಿಐನ ಪೂರ್ವ ಅನುಮತಿಯನ್ನು ಪಡೆದು ತನ್ನ ಶಾಖೆಯನ್ನು ತೆರೆಯಬಹುದು. ವಿಶ್ವವಾಣಿಜ್ಯ ಸಂಸ್ಥೆಯ ನಿಯಮಗಳ ಪ್ರಕಾರ ಒಂದು ವರ್ಷದಲ್ಲಿ ಕೇವಲ 12 ವಿದೇಶಿ ಬ್ಯಾಂಕ್‌ಗಳ ಶಾಖೆ ತೆರೆಯುವುದಕ್ಕೆ ರಿಸರ್ವ್ ಬ್ಯಾಂಕ್ ಅನುಮತಿ ನೀಡಬಹುದು. ಆದರೆ ಈಗ ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆಯಿಂದ ಹೆಚ್ಚಿನ ವಿದೇಶಿ ಬ್ಯಾಂಕ್ ಶಾಖೆಗಳು ಬರಬಹುದಾಗಿವೆ.
ಸಧ್ಯ ದೇಶದಲ್ಲಿ ಮೂವತ್ತು ಲಕ್ಷ ಜನಸಂಖ್ಯೆಗೆ ಒಂದರಂತೆ ವಿದೇಶಿ ಬ್ಯಾಂಕ್ ಇದೆ.  42 ವಿದೇಶಿ ಬ್ಯಾಂಕುಗಳ 334 ಶಾಖೆಗಳು ದೇಶದ ದೊಡ್ಡ ಪಟ್ಟಣಗಳಲ್ಲಿ ಮಾತ್ರ ಇವೆ. ಒಟ್ಟಾರೆ ಬ್ಯಾಂಕುಗಳ ಶಾಖೆಗಳ ಸಂಖ್ಯೆಯಲ್ಲಿ ಇವುಗಳ ಪ್ರಮಾಣ ಶೇ.0.5ಕ್ಕಿಂತ ಕಡಿಮೆ. ಹೊಸದಾಗಿ ಭಾರತದಲ್ಲಿ ತನ್ನ ವ್ಯವಹಾರವನ್ನು ಆರಂಭಿಸುವ ವಿದೇಶಿ ಬ್ಯಾಂಕ್‌ನ ವಿದೇಶಿ ಬಂಡವಾಳ ಮಿತಿಯನ್ನು ಶೇ.74ಕ್ಕೆ ಮಿತಿಗೊಳಿಸಲಾಗಿದೆ. ರಿಸರ್ವ್ ಬ್ಯಾಂಕ್ ಹಳೆಯ ನೀತಿಯು ಯಾವುದೇ ವಿದೇಶಿ ಬ್ಯಾಂಕ್ ಭಾರತದ ಬ್ಯಾಂಕನ್ನು ಸ್ವಾಧೀನಪಡಿಸಿಕೊಳ್ಳಲು ಬಿಡುತ್ತಿರಲಿಲ್ಲ.
ವಿದೇಶಿ ಬ್ಯಾಂಕುಗಳು ತನ್ನ ಮನಸ್ಸಿಗೆ ಬಂದಂತೆ ಇಲ್ಲಿ ಕಾರ್ಯನಿರ್ವಹಿಸಲು ಬರುವುದಿಲ್ಲ. ಆರ್‌ಬಿಐನ ನೀತಿಗಳಿಗೆ ಅನುಗುಣವಾಗಿಯೇ ಅವು ಕಾರ್ಯವನ್ನು ನಿರ್ವಹಿಸಬೇಕು. ಅದು ನಿಗದಿ ಪಡಿಸಿದ ಆದ್ಯತಾ ಕ್ಷೇತ್ರಗಳಿಗೆ ಸಾಲವನ್ನು ನೀಡಬೇಕು. ಪ್ರತಿಯೊಂದು ಅಧೀನ ಬ್ಯಾಂಕ್ ತನ್ನದೇ ಆದ ಆಡಳಿತ ಮಂಡಳಿಯನ್ನು ಹೊಂದಿರಬೇಕು. ಈ ಆಡಳಿತ ಮಂಡಳಿಯಲ್ಲಿ ಅರ್ಧದಷ್ಟು ನಿರ್ದೇಶಕರು ಭಾರತೀಯ ನಾಗರಿಕರಾಗಿರಬೇಕು. ಸ್ಥಳೀಯ ಷೇರುಮಾರುಕಟ್ಟೆಯಲ್ಲಿ ಈ ಬ್ಯಾಂಕುಗಳು ಪಟ್ಟಿಯಾಗಬೇಕು. ಹೀಗೆ ವಿದೇಶಿ ಬ್ಯಾಂಕುಗಳ ಭಾರತೀಕರಣಕ್ಕೆ ಷರತ್ತುಗಳಿವೆ.
ದೇಶದಲ್ಲಿ ಬ್ಯಾಂಕುಗಳ ಜಾಲ ವ್ಯಾಪಕವಾಗಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬ್ಯಾಂಕುಗಳು ಇಲ್ಲ. ದೇಶೀ ಬ್ಯಾಂಕುಗಳೇ ಗ್ರಾಮೀಣ ಪ್ರದೇಶದಲ್ಲಿ ಶಾಖೆಗಳನ್ನು ತೆರೆಯಲು ಹಿಂದೆಮುಂದೆ ನೋಡುತ್ತವೆ. ವಿದೇಶಿ ಬ್ಯಾಂಕುಗಳಿಗೆ ಗ್ರಾಮೀಣ ಪ್ರದೇಶದಲ್ಲಿ ಇಂತಿಷ್ಟು ಶಾಖೆಗಳನ್ನು ತೆರೆಯಬೇಕು ಎಂಬ ನಿಬಂಧನೆಯನ್ನು ವಿಧಿಸುವುದು ಸೂಕ್ತ. ಇಲ್ಲದಿದ್ದರೆ ಇವು ದೊಡ್ಡ ದೊಡ್ಡ ನಗರಗಳಿಗಷ್ಟೇ ಸೀಮಿತವಾಗಿಬಿಡುತ್ತವೆ.
ವಿದೇಶಿ ಬ್ಯಾಂಕುಗಳ ಆಗಮನದಿಂದ ಸ್ಥಳೀಯ ಬ್ಯಾಂಕುಗಳಲ್ಲಿ ಸ್ಪರ್ಧೆ ಏರ್ಪಡುತ್ತದೆ ಮತ್ತು ಅವುಗಳ ದಕ್ಷತೆಯು ಹೆಚ್ಚುತ್ತದೆ. ಹೆಚ್ಚು ಸುಸಜ್ಜಿತವಾದ ಹಣಕಾಸು ಸೇವೆ ಹಾಗೂ ತೊಡಕು ನಿರ್ವಹಣೆ ತಾಂತ್ರಿಕತೆ ಉತ್ತಮಗೊಳ್ಳುತ್ತವೆ. ಕಟ್ಟಕಡೆಯಲ್ಲಿ ಇದರ ಲಾಭ ಪಡೆಯುವವರು ದೇಶದ ಜನರೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.