ಸಂಪಾದಕೀಯ

ನ್ಯಾಯದಾನದ ವಿಳಂಬ

Published On :

ವರದಕ್ಷಿಣೆಗಾಗಿ ಹೆಂಡತಿಯನ್ನು ಕೊಲೆ ಮಾಡಿದ ಆರೋಪ  ಹೊತ್ತ ಒಬ್ಬ ವ್ಯಕ್ತಿ ಆ ಪ್ರಕರಣದಲ್ಲಿ ಆರೋಪದಿಂದ ಮುಕ್ತವಾಗಲು ಇಪ್ಪತ್ತನಾಲ್ಕು ವರ್ಷ ಬೇಕಾಯಿತು. ಈಚೆಗೆ ಈ ಪ್ರಕರಣದ ಅಂತಿಮ ತೀರ್ಪು ನೀಡಿದ ಸುಪ್ರೀಮ್ ಕೋರ್ಟ್ ಆರೋಪವನ್ನು ಸಾಬೀತುಪಡಿಸುವಂತಹ ಸಾಕ್ಷ್ಯ-ಆಧಾರ ಇಲ್ಲ ಎಂದು ತಿಳಿಸಿದೆ.
ಆದರೂ ಆ ವ್ಯಕ್ತಿ ಅನಗತ್ಯವಾಗಿ ಅಥವಾ ಅನ್ಯಾಯವಾಗಿ ಹೆಚ್ಚು ಕಡಿಮೆ 24 ವರ್ಷ ಮಾನಸಿಕ-ದೈಹಿಕ ಯಾತನೆಯನ್ನು ಅನುಭವಿಸಬೇಕಾಯಿತು. ಅದು ಒಂದು ರೀತಿಯಲ್ಲಿ ಮಾನವ ಹಕ್ಕಿನ ಮೇಲಿನ ಆಘಾತವೇ.
ಸುಪ್ರೀಮ್ ಕೋರ್ಟ್ ತನ್ನ ತೀರ್ಪಿನಲ್ಲಿ ಈ ವಿಳಂಬ ನ್ಯಾಯದ ವೈಖರಿಯನ್ನು ಪ್ರಸ್ತಾಪಿಸಿ, ಇಂತಹ ಪ್ರಕರಣಗಳಲ್ಲಿ ವಿಚಾರಣೆಯನ್ನು ಮುಗಿಸಲಿಕ್ಕೆ ಒಂದು ಕಾಲಮಿತಿಯನ್ನು ನಿಗದಿಪಡಿಸುವ ಸೂತ್ರವನ್ನು ನ್ಯಾಯಾಧೀಶರೇ ರೂಪಿಸಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ಮಾಡಿರುವುದು ಸೂಕ್ತವಾಗಿದೆ.
ಕೇಂದ್ರ ಕಾಯಿದೆ ಸಚಿವ ಕಪಿಲ ಸಿಬಲ್ ಅವರು ನ್ಯಾಯಾಂಗದಲ್ಲಿ ಅದರಲ್ಲೂ ಕ್ರಿಮಿನಲ್ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ, ನ್ಯಾಯಾದಾನದಲ್ಲಿ ಈಗ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳುವುದಾಗಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ಕೆಲವು ಕ್ರಮಗಳು ನ್ಯಾಯಾಲಯಗಳ ಮೇಲಿನ ಹೊರೆಯನ್ನು ಈಗಾಗಲೇ ಕಡಿಮೆ ಮಾಡಿರುವುದು ನಿಜ.
ನ್ಯಾಯದಾನದ ವಿಳಂಬ, ಕೇವಲ ಅಧೀನ ನ್ಯಾಯಾಲಯಗಳಿಗಷ್ಟೇ ಸೀಮಿತವೇನೂ ಅಲ್ಲ. ಹೈಕೋರ್ಟ್-ಸುಪ್ರೀಮ್ ಕೋರ್ಟ್‌ಗಳನ್ನೂ ಈ ಪಿಡುಗು ಕಾಡಿದೆ. ಈಗ ಪ್ರಸ್ತಾಪವಾಗಿರುವ ವರದಕ್ಷಿಣೆ ಕೊಲೆ ಆರೋಪದ ಅಪೀಲು ಐದು ವರ್ಷಗಳ ಹಿಂದೆಯೇ ಸುಪ್ರೀಮ್ ಕೋರ್ಟನ್ನು ತಲುಪಿತ್ತು. ತೀರ್ಪು ಪ್ರಕಟವಾಗಿರುವುದು ಈಗ.
ಕೆಲವು ವಕೀಲರ ಪ್ರಕಾರ ಅನೇಕ ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರು ಕೆಲವು ಪ್ರಕರಣಗಳ ವಿಚಾರಣೆಯನ್ನು ಅರ್ಧಕ್ಕೇ ನಿಲ್ಲಿಸಿ, ಕಡತವನ್ನು ಪಕ್ಕದಲ್ಲಿಟ್ಟಿರುವುದೂ ಉಂಟು. ಆ ಕಡತಗಳಿಗೆ ಭಾಗಶಃ ವಿಚಾರಣೆಯಾಗಿರುವ ಕಡತಗಳೆಂದೇ ಹೆಸರು.
ಇನ್ನು ಕೆಲವು ಪ್ರಕರಣಗಳಲ್ಲಿ ನ್ಯಾಯಾಧೀಶರು ವಾದಿ-ಪ್ರತಿವಾದಿಗಳ ವಕೀಲರ ವಾದವನ್ನು ಕೇಳಿದ ಅನಂತರ ತೀರ್ಪನ್ನು ಕಾದಿರಿಸಿ, ವರ್ಷಗಳಗಟ್ಟಲೆ ತೀರ್ಪು ಪ್ರಕಟಿಸದೇ ಇರುವುದೂ ಉಂಟು. ಕರ್ನಾಟಕ ಹೈಕೋರ್ಟ್‌ನಲ್ಲೂ ಇಂತಹ ಪ್ರಕರಣಗಳಿವೆ ಎಂದು ವರದಿ.
ನ್ಯಾಯಾಂಗ ವಿಧಾನಗಳ ಸುಧಾರಣೆ ಸಂಹಿತೆಯಲ್ಲಿ ಇಂತಹ ಪ್ರಕರಣಗಳಿಗೂ ಪರಿಹಾರ ಸೂತ್ರವನ್ನು ಒದಗಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.