ಮೂರ್ಖರೋ, ಮೂರ್ಖತನವೋ -ಏನೋ ಒಂದು
"ಇಷ್ಟಕ್ಕೂ ರಾವ್ ಹೇಳಿದ್ದರಲ್ಲಿ ತಪ್ಪು ಏನಿದೆ" ಎಂಬ ಶೀರ್ಷಿಕೆಯಡಿ ಕೆ.ಎಸ್.ಜಗನ್ನಾಥ್ ಬರೆದಿರುವ ವಿಶ್ಲೇಷಣಾತ್ಮಕ ಲೇಖನ (ಕ.ಪ್ರ. 19.11.2013) ಒಪ್ಪುವಂಥದ್ದೇ ಆಗಿದೆ. ಪ್ರೊ. ರಾವ್ ಅವರು ದೇಶದಲ್ಲಿ ಮೂಲ ವಿಜ್ಞಾನ ಮತ್ತು ವೈಜ್ಞಾನಿಕ ಸಂಶೋಧನೆಗಳು ಸರ್ಕಾರದಿಂದ ಅವಜ್ಞೆಗೆ ಗುರಿಯಾಗಿರುವುದನ್ನು ಹೇಳಿದ್ದಾರೆ. ಈ ಕಾರಣದಿಂದಲೇ ಈ ಕ್ಷೇತ್ರಗಳಲ್ಲಿ ನಾವು ಹಿಂದಿದ್ದೇವೆ ಮತ್ತು ನಮ್ಮ ಪ್ರತಿಭಾವಂತರು ಹೊರದೇಶಗಳತ್ತ ಮುಖ ಮಾಡುತ್ತಿದ್ದಾರೆನ್ನುವುದನ್ನು ಅವರು ಗುರುತಿಸುತ್ತಾರೆ. ಇವನ್ನು ಗಮನಿಸಿದಾಗ ಮತ್ತು ಮೂಲ ವಿಜ್ಞಾನವಿಲ್ಲದೆ ಏನಿರುತ್ತದೆಂಬುದನ್ನು ತಿಳಿದಾಗ ರಾಜಕಾರಣಿಗಳನ್ನು ಪ್ರೊ. ರಾವ್ ಹಳಿದಿರುವುದು ಅರ್ಥವಾಗುತ್ತದೆ; ರಾಜಕಾರಣಿಗಳೇ ತಾನೆ ತಾವೇ ದೇಶದ ಅಭಿವೃದ್ಧಿಯ ಹರಿಕಾರರು ಎಂದು ಭಾವಿಸಿಕೊಂಡು ಯೋಜನೆಗಳನ್ನು ನಿರ್ವಹಿಸುವವರು, ಅಥವಾ ಯೋಜನೆಗಳನ್ನು ಸ್ವೀಕರಿಸುವ/ತಿರಸ್ಕರಿಸುವ ಸ್ಥಾನದಲ್ಲಿರುವವರು. ಪ್ರೊ. ರಾವ್ ಅವರ ಹೇಳಿಕೆಯನ್ನಾಧರಿಸಿ ಒಂದು ದೂರದರ್ಶನ ಛಾನೆಲ್ ಚರ್ಚೆಯನ್ನೇರ್ಪಡಿಸಿತ್ತು. ಅಲ್ಲಿ ವ್ಯಕ್ತವಾದ ಅಭಿಪ್ರಾಯ ರಾಜಕಾರಣಿಗಳ ಪರ ಇರಲಿಲ್ಲ!
ಪ್ರೊ. ರಾವ್ ರಾಜಕಾರಣಿಗಳನ್ನು ತಾವು (idiots)'ಮೂರ್ಖರು' ಎಂದು ಹಳಿಯಲ್ಲಿಲ್ಲವೆಂದೂ, ರಾಜಕಾರಣಿಗಳ ಧೋರಣೆ ಮೂರ್ಖತನದ್ದು (idiotic)ಎಂಬುದೆಂದೂ ಸಮಜಾಯಿಷಿ ನೀಡಿದ್ದಾರೆ. "ಮೂರ್ಖರು" ಎಂದು ಹೇಳಿದರೋ ಅದೇನೇ ಇದ್ದರೂ ಅವರಿಗೆ ಹಾಗೆ ಹೇಳುವ ಅರ್ಹತೆ ಇದೆ; ಅಂತಹ ಎತ್ತರದ ಸ್ಥಾನದಲ್ಲಿದ್ದಾರೆ ಅವರು, ವಿಜ್ಞಾನ ಕ್ಷೇತ್ರವನ್ನು ಪರಿಗಣಿಸಿದಾಗ. ಈಗ ನೋಡಿ, ನಮ್ಮ ಕಾಲೇಜು ವ್ಯಾಸಂಗದಲ್ಲಿ ಮೂಲವಿಜ್ಞಾನ ವಿಷಯಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಲು ಬಯಸುವುದಿಲ್ಲ. ಏಕೆ ಹೀಗೆ ಎಂದು ವಿಚಾರಿಸಿದಾಗ ದೇಶವನ್ನಾಳುವವರ (ಇ ವರು ರಾಜಕಾರಣಿಗಳೇ ತಾನೇ!) -ಅದೂರದೃಷ್ಟಿಯ ಹೆಗ್ಗಳಿಕೆ ವ್ಯಕ್ತವಾಗುತ್ತದೆ. ಕರ್ನಾಟಕ ಮತ್ತು ಬೆಂಗಳೂರು ಎಂದರೆ ಐಟಿ-ಬಿಟಿ ಕ್ಷೇತ್ರಗಳೇ ಎಲ್ಲರಿಗೂ ಹೊಳೆಯುವುದು. ಪ್ರೊ. ರಾಮನ್, ಪ್ರೊ. ಯು.ಆರ್. ರಾವ್, ಪ್ರೊ. ಸಿಎನ್ಆರ್ ರಾವ್ ಮುಂತಾದ ಮಹಾ ಮೇಧಾವಿಗಳ ನೆನಪು ಯಾರಿಗೆ ಬಂದೀತು ಹೇಳಿ. ಅಷ್ಟರಮಟ್ಟಿಗೆ ಸಾಫ್ಟ್ವೇರ್ ಕ್ಷೇತ್ರ ತಿಳಿದವರು ಹಾಗೂ ತಿಳಿಯದವರ ಮನಸ್ಸನ್ನಾಕ್ರಮಿಸಿ ಬಿಟ್ಟಿದೆ. ಹಣಗಳಿಕೆಗೆ ಈ ಕ್ಷೇತ್ರವೇ ಹುಲುಸು ಎನ್ನುವುದು ಯುವ ಜನತೆಯಲ್ಲಿ ಬೇರೂರಿದೆ. ಇದನ್ನು ಪೋಷಿಸುವಂತೆ ಸರ್ಕಾರಗಳು ಈ ಕ್ಷೇತ್ರಕ್ಕೆ ನೀಡುವ ಸೌಲತ್ತು -ಸೌಲಭ್ಯಗಳೂ ಅಪಾರ. ಒಂದು ಉದಾಹರಣೆ: ಲಕ್ಷಾಂತರ ಕೋಟಿ ರೂಪಾಯಿಗಳ ತೆರಿಗೆ ವಿನಾಯಿತಿಯನ್ನು ಸರ್ಕಾರ ಸಾಫ್ಟ್ವೇರ್ ಕ್ಷೇತ್ರಕ್ಕೆ ನೀಡಿರುವ ಕೊಡುಗೈ ದಾನಿಯಾಗಿದೆ. ಯಾವುದೇ ವರ್ಷದಲ್ಲಿ ಹತ್ತು ಹದಿನೈದು ಸಾವಿರ ಕೋಟಿಯನ್ನು ಮೂಲವಿಜ್ಞಾನ ಅಧ್ಯಯನ ಮತ್ತು ಅದರಲ್ಲಿ ಸಂಶೋಧನೆಗಳಿಗೆ ವ್ಯಯಿಸಿರುವುದಿದೆಯೇ? ಮೂರ್ಖರೋ,ಮೂರ್ಖತನೋ -ಏನೋ ಒಂದು. ಇದಂತೂ ಸತ್ಯ ತಾನೇ! ಆಡಳಿತ ನಡೆಸುವವರು ಅನ್ನಿಸಿಕೊಳ್ಳಲೂ ತಯಾರಿರಬೇಕು.
-ಸಾಮಗ ದತ್ತಾತ್ರಿ, ಬೆಂಗಳೂರು
ಸ್ಥಳ ನಾಮಗಳನ್ನು ಕುರಿತು ಮಾಹಿತಿ ನೀಡಿ
ನಾನು ಮಲ್ಲಿಕಾರ್ಜುನ ಜೇವರಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಅಭ್ಯರ್ಥಿಯಾಗಿ ಕಾರ್ಯತತ್ಪರನಾಗಿದ್ದೇನೆ. ನನ್ನ ಸಂಶೋಧನಾ ಶೀರ್ಷಿಕೆ ವಿಜಾಪೂರ ಜಿಲ್ಲೆಯ ಸ್ಥಳ ನಾಮಗಳು ಒಂದು ಅಧ್ಯಯನ ಎಂದಾಗಿದ್ದು ಈ ಜಿಲ್ಲೆಯ ಐದು ತಾಲ್ಲೂಕುಗಳ ಅಂದಾಜು 650-670 ಹಳ್ಳಿಗಳ ಸ್ಥಳನಾಮಗಳ ನಾಮ ನಿಷ್ಪತ್ತಿಯಾಗಬೇಕಾಗಿದೆ. ಈ ಎಲ್ಲ ಹಳ್ಳಿಗಳನ್ನು ಸಂದರ್ಶಿಸಿ ಕ್ಷೇತ್ರಾಧ್ಯಯನ ಅಸಾಧ್ಯ, ಸಾಮಾನ್ಯ ಸುಲಭರ್ಥದ ಹಳ್ಳಿಗಳ ನಾಮ ನಿಷ್ಪತ್ತಿ ಕಷ್ಟವಾಗದು. ಐತಿಹಾಸಿಕ ಶಾಸನ ಮತ್ತಿತರ ಆಧಾರಗಳಿಂದ ಹಳ್ಳಿಗಳ ನೆಲೆ ಶೋಧಿಸಲಾಗುವುದು. ಆದಾಗ್ಯೂ ಕೆಲವು ಸಂಕೀರ್ಣ ವಿಲಕ್ಷಣ ನಾಮಗಳನ್ನು ಹೊಂದಿರುವ ಗ್ರಾಮಗಳ ಹುಟ್ಟಿನ ಚರಿತ್ರೆ ಅಲ್ಲಿರುವ ನಾಗರೀಕರಿಗೆ ಗೊತ್ತಿರುವ ಸಾಧ್ಯತೆಯಿದೆ. ಕಾರಣ ಈ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಸಂಶೋಧನಾ ಬುದ್ಧಿಯ ಪರಿಣಿತರು ನಮ್ಮ ಹಳ್ಳಿ (ಗ್ರಾಮ) ಯ ಬಗೆಗೆ ಗೊತ್ತಿರುವ ಚರಿತ್ರೆ ಐತಿಹ್ಯ, ಸ್ಥಳ ಪುರಾಣಗಳಂತಹ ವಿವರಗಳನ್ನು ಬರೆದು ತಿಳಿಸಿದಲ್ಲಿ ಅಥವಾ ದೂರವಾಣಿಯ ಮುಖಾಂತರ ಸಂಪರ್ಕಿಸಿದರೆ ದಾಖಲಿಸಿಕೊಂಡು ಸಂಶೋಧನೆ ಕಾರ್ಯವನ್ನು ಮುಂದುವರೆಸುತ್ತೇನೆ. ನನ್ನ ದೂರವಾಣಿ ಸಂಖ್ಯೆ 9886 154806.
-ಮಲ್ಲಿಕಾರ್ಜುನ ಜೇವರಗಿ, ಇಂಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

