ಸಂಪಾದಕೀಯ

ಚೆನ್ನಮ್ಮ ಪ್ರತಿಮೆ: ವಿಳಂಬ ಬೇಡ

Published On :

ವೀರರಾಣಿ ಕಿತ್ತೂರ ಚೆನ್ನಮ್ಮಾಜಿ 1824 ಅಕ್ಟೋಬರ್ 23ರಂದು ಆಂಗ್ಲ ಅಧಿಕಾರಿ ಧಾರವಾಡದ ಕಲೆಕ್ಟರ್ ಥ್ಯಾಕರೆಯನ್ನು ಯಮಲೋಕಕ್ಕೆ ಕಳಿಸಿದ ಘಟನೆಯ ಸವಿನೆನಪಿಗಾಗಿ ಕಿತ್ತೂರ ವಿಜಯೋತ್ಸವವನ್ನು ಪ್ರತಿವರ್ಷ ಅಕ್ಟೋಬರ್ 23ರಂದು ಆಚರಿಸಲಾಗುತ್ತದೆ. ಚೆನ್ನಮ್ಮಾಜಿಯು 1824ರಿಂದ 1829ರವರೆಗೆ ಸತತ ಐದು ವರ್ಷಗಳವರೆಗೆ ಬೈಲಹೊಂಗಲದ ಹುಡೇದಗಲ್ಲಿಯ ಮೇಲೆ ಇರುವ ಕೋಟೆಯಲ್ಲಿಯ ಪಾದ್ರಿ ಬಂಗಲೆಯಲ್ಲಿದ್ದ ಸೆರೆಮನೆಯಲ್ಲಿ ಚಿಂತೆಯಿಂದ, 1829 ಫೆಬ್ರವರಿ 2ರಂದು ಶನಿವಾರ ಮರಣ ಹೊಂದಿದಳು. ಚೆನ್ನಮ್ಮಾಜಿಯ ಅಂತ್ಯಕ್ರಿಯೆ ಸಕಲ ಸೈನಿಕ ಗೌರವಗಳೊಂದಿಗೆ ಬೈಲಹೊಂಗಲದಲ್ಲಿ ನಡೆಯಿತು. ಈಗ ಸದ್ಯ ಚೆನ್ನಮ್ಮಾಜಿಯ ಕಂಚಿನ ಮೂರ್ತಿಯನ್ನು ಕಳೆದ ಆರು ವರ್ಷಗಳಿಂದ ಎ.ಪಿ.ಎಂ.ಸಿ. ಮೂಲೆಯಲ್ಲಿ ಇಟ್ಟಿರುವುದು ನೋವಿನ ಸಂಗತಿಯಾಗಿದೆ. ಆದ್ದರಿಂದ ಆದಷ್ಟು ಬೇಗನೆ ಅಕ್ಟೋಬರ್ 23 ಕಿತ್ತೂರೋತ್ಸವದ ಒಳಗಾಗಿ ಕೂಡಲ ಸಂಗಮದ ಪೂಜ್ಯ ಜಯ ಮೃತ್ಯುಂಜಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜನತೆ ಬಯಸಿದ ಸ್ಥಳದಲ್ಲಿ ಬೆಳಗಾವಿ-ಧಾರವಾಡ ಬೈ-ಪಾಸ್ ರಸ್ತೆಯ ಮಧ್ಯದಲ್ಲಿ ಪ್ರತಿಷ್ಠಾಪಿಸಬೇಕು.
-ಎಸ್.ಎಸ್. ರೇವಣ್ಣನವರ, ಬೈಲಹೊಂಗಲ

ತಡೆಗೋಡೆ ನಿರ್ಮಿಸಿ
ಭದ್ರಾವತಿಯಿಂದ ಹೊಳೆಹೊನ್ನೂರಿಗೆ ಹೋಗುವ ರಸ್ತೆ ಮಾರ್ಗ ಮಧ್ಯದಲ್ಲಿರುವ ನಾಗ್ತಿಬೆಳಗಲು ಗ್ರಾಮ ಪ್ರಸಿದ್ಧ ನಂಜುಂಡೇಶ್ವರ ದೇವಾಲಯ ಹೊಂದಿದೆ. ಈ ದೇವಾಲಯದ ಬಲಭಾಗಕ್ಕೆ ಒಂದು ಕಿ.ಮಿ. ರಸ್ತೆ ಹೊಂದಿಕೊಂಡಿರುವ ಕೆರೆಯೂ ಇದೆ.
ಈ ಕೆರೆಯ ಮೇಲೆ ಹಗಲಿರುಳು ವಾಹನಗಳು ಸಂಚರಿಸುತ್ತಿದ್ದು, ಇಲ್ಲಿ ಬಡ ಕೂಲಿಗಾರರು, ವಿದ್ಯಾರ್ಥಿಗಳು, ಮಹಿಳೆಯರು, ದೇವಸ್ಥಾನದ ಭಕ್ತರು, ಬಸ್ಸು ಮತ್ತು ಇತರೆ ವಾಹನಗಳಲ್ಲಿ ಅಪಾಯದ ಅರಿವಿಲ್ಲದೆ ಸಂಚರಿಸುತ್ತಿದ್ದಾರೆ. ಆದರೆ ನೀರಿನಿಂದ ತುಂಬಿದ ಕೆರೆಗೆ ತಡೆಗೋಡೆ ನಿರ್ಮಿಸಿಲ್ಲ. ಇದೇ ಮಾರ್ಗದಲ್ಲಿ ವಿವಿಧ ಕಡೆ ರಸ್ತೆ ಅಪಘಾತಗಳು ಸಂಭವಿಸಿ ಸಾವು ನೋವುಗಳು ಅನುಭವಿಸಿದ್ದರೂ ಯಾವ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು, ಶಾಸಕರು, ಸ್ಥಳೀಯ ಪಂಚಾಯ್ತಿ ಅಧ್ಯಕ್ಷರು ಈ ಕೆರೆಗೆ ಎರಡೂ ಕಡೆ ತಡೆ ಗೋಡೆ ನಿರ್ಮಿಸಿ, ಮುಂದಾಗಬಹುದಾದ ಅನಾಹುತ ತಪ್ಪಿಸಲು ಮುಂದಾಗುತ್ತಾರೆಂದು ಆಶಿಸೋಣವೇ?
-ಸಿ. ನಾಗರಾಜ, ಅರದೋಟ್ಲು, ಭದ್ರಾವತಿ

ಅಭಿಮಾನ ಶೂನ್ಯರು
ನಮ್ಮ ಪತ್ರಿಕೆ ವಿಭಿನ್ನ ರೀತಿಯಲ್ಲಿ ಮೂಡಿ ಬರುತ್ತಿದೆ. ಮನಮುಟ್ಟುವಂತಹ ಸ್ಪಷ್ಟವಾದ ಬರಹಗಳಿವೆ. 8/10ರ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರ 'ದಲಿತ ನಾಯಕರಿಗೆ ದಲಿತರ ಮೇಲೇಕಿಲ್ಲ ಕಾಳಜಿ?' ಎಂಬ ಲೇಖನ ಓದಿ ಮನಸ್ಸಿನ ಯಾವುದೋ ಮೂಲೆಯಲ್ಲಿ ನೋವಿನ ಸೆಳೆತ ಕಾಡ್ತಾ ಇತ್ತು. ರಾಜಕಾರಣಿಗಳಿಗೆ ದಲಿತರ ಮೇಲೆ ಕಾಳಜಿ ಮೂಡಿದೆ ಎಂದರೆ ಹಾಸ್ಯಾಸ್ಪದವೇ ಸರಿ. ದಲಿತರು ನಿತ್ಯ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದನ್ನು ಮರೆತಿರುವ ನಾಯಕರುಗಳಿಗೆ ಏನೆನ್ನಬೇಕೋ? ದಲಿತ ನಾಯಕ ಸುಶೀಲ್ ಕುಮಾರ್ ಶಿಂದೆಯವರಿಗೆ ದಲಿತರ ಬಗ್ಗೆ ಅಭಿಮಾನ ಇಲ್ಲದಿದ್ದಾಗ ಬೇರೆ ನಾಯಕರುಗಳಿಗೆ ಹೇಗೆ ಬರುತ್ತೆ? ಇಂಥ ಲೇಖನ ಕೊಟ್ಟ ನಮ್ಮ ಪತ್ರಿಕೆಗೆ ಧನ್ಯವಾದ.
-ಸುಮಿತ್ರಾ ಹರೀಶ್, ಬಸರೀಕಟ್ಟೆ


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.