ಸಂಪಾದಕೀಯ

ವೈದ್ಯ ಚಿಕಿತ್ಸೆ: ನಿರ್ಲಕ್ಷ್ಯಕ್ಕೆ ಐತಿಹಾಸಿಕ ಪರಿಹಾರ

Published On :

1998ರಲ್ಲಿ ಅಮೆರಿಕದ ಭಾರತೀಯ ನಿವಾಸಿಯೊಬ್ಬರು ಭಾರತಕ್ಕೆ ಬಂದಿದ್ದಾಗ, ಅನಿವಾರ್ಯವಾಗಿ ಅವರು ಒಂದು ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ರೋಗಿಯ ಪತಿಯೂ ಒಬ್ಬ ವೈದ್ಯರೇ. ಚಿಕಿತ್ಸೆಯಲ್ಲಿ ಕಂಡುಬಂದ ಲೋಪ-ದೋಷಗಳ ಪರಿಣಾಮವಾಗಿ ಅನೂರಾಧ ನಿಧನರಾದರು. ಕೊನೆಯ ನಿಮಿಷದಲ್ಲಿ ಅವರನ್ನು ಮುಂಬೈಗೆ ಕರೆದೊಯ್ದರೂ, ಬೀಚ್ ಕ್ಯಾಂಡಿ ಆಸ್ಪತ್ರೆಯಲ್ಲೂ ಪಡೆದ ಚಿಕಿತ್ಸೆ ಫಲ ನೀಡಲಿಲ್ಲ.
ಇಡೀ ದೇಶದ ವೈದ್ಯ ಚಿಕಿತ್ಸಾ ಪ್ರಪಂಚದಲ್ಲೇ ಇದೊಂದು ಅಪರೂಪಕ್ಕೆ ಅಪರೂಪ ಎನ್ನುವಂತಹ ಪ್ರಕರಣ. ಪತ್ನಿಯನ್ನು ಕಳೆದುಕೊಂಡ ವೈದ್ಯಪತಿ ಕುನಾಲ್ ಸಹನಾ ಆಸ್ಪತ್ರೆಯ ಮೇಲೆ, ಮೂವರು ವೈದ್ಯರ ಮೇಲೆ ನಿರ್ಲಕ್ಷ್ಯ ಹಾಗೂ ಅಸಮರ್ಪಕ ಚಿಕಿತ್ಸೆಯ ಆರೋಪವನ್ನು ಹೊರಿಸಿ ಗ್ರಾಹಕರ ಹಿತರಕ್ಷಣಾ ಕಾಯಿದೆಯಂತೆ ಮೊಕದ್ದಮೆಯನ್ನು ದಾಖಲಿಸಿದರು. ಗ್ರಾಹಕರ ಹಿತರಕ್ಷಣಾ ನ್ಯಾಯಾಲಯ 1.79 ಕೋಟಿ ರುಪಾಯಿಗಳ ದಂಡವನ್ನು ವಿಧಿಸಿತ್ತು.
ಆ ತೀರ್ಪನ್ನು ಪ್ರಶ್ನಿಸಿ ಆಸ್ಪತ್ರೆಯ ವೈದ್ಯರು ಸುಪ್ರೀಮ್ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯ ತೀರ್ಪಿನಂತೆ ಈಗ ಆಸ್ಪತ್ರೆ ಹಾಗೂ ಮೂವರು ವೈದ್ಯರು ಸುಮಾರು ಹನ್ನೊಂದು ಕೋಟಿ ರುಪಾಯಿಗಳ ದಂಡ ನೀಡಬೇಕಾಗಿದೆ.
ಇಷ್ಟು ದೊಡ್ಡ ಪ್ರಮಾಣದ ದಂಡವನ್ನು ವೈದ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶದಲ್ಲಿ ಇದುವರೆಗೆ ಯಾವ ನ್ಯಾಯಾಲಯವೂ ವಿಧಿಸಿಲ್ಲ. ಆ ದೃಷ್ಟಿಯಿಂದ ಈ ಪ್ರಕರಣಕ್ಕೆ ಐತಿಹಾಸಿಕ ಸ್ಥಾನ ಸಿಗುವುದು ಸರಿಯಾಗಿಯೇ ಇದೆ.
ಈ ಪ್ರಕರಣದ ತೀರ್ಪನ್ನು ದೇಶದ ಎಲ್ಲ ದೊಡ್ಡ ಆಸ್ಪತ್ರೆಗಳ ಜವಾಬ್ದಾರಿಯುತ ಸ್ಥಾನಗಳಲ್ಲಿ ಕೆಲಸ ಮಾಡುವ ವೈದ್ಯರು, ಆಡಳಿತ ವ್ಯವಸ್ಥೆಯ ಹಿರಿಯ ಅಧಿಕಾರಿಗಳು ಎಚ್ಚರಿಕೆಯಿಂದ ಓದಬೇಕು. ಚೆನ್ನಾಗಿ ಮನನ ಮಾಡಿಕೊಳ್ಳಬೇಕು.
ಕಾಯಿದೆಯ ಈಗಿನ ಸ್ವರೂಪದಲ್ಲಿ ವೈದ್ಯರ ನಿರ್ಲಕ್ಷ್ಯ ಹಾಗೂ ಅಸಮರ್ಪಕವಾದ ಚಿಕಿತ್ಸೆಯನ್ನು ಋಜುವಾತು ಮಾಡುವುದು ಕಡುಕಷ್ಟ. ಅನೇಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರಿಗೆ ಅಗತ್ಯವಾದ ದಾಖಲೆಗಳನ್ನೇ ಕೊಡುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಕಡತಗಳೇ ಮಾಯವಾಗಿರುತ್ತದೆ. ರೋಗಿಗಳಿಗೆ ಇರುವ ಬದುಕುವ ಹಕ್ಕನ್ನೇ ಅನೇಕ ವೈದ್ಯರು ಮರೆತು ಬಿಟ್ಟಂತೆಯೇ ವರ್ತಿಸುತ್ತಾರೆ.
ಯಾವ ಯಾವ ಕಡತಗಳು ಭವಿಷ್ಯದಲ್ಲಿ ಬೇಕಾಗಬಹುದೆನ್ನುವುದು ಸಾಮಾನ್ಯ ರೋಗಿಗಳಿಗೆ ಗೊತ್ತೇ ಇರುವುದಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಕಾಯಿದೆಯಂತೆ ಅಸಮರ್ಪಕ ಚಿಕಿತ್ಸೆಯ ದೂರನ್ನು ದಾಖಲಿಸುವವರು ಇನ್ನೊಬ್ಬ ವೈದ್ಯರ ಅಭಿಪ್ರಾಯವನ್ನು ಪಡೆಯುವುದು ಕಡ್ಡಾಯ. ವೈದ್ಯರ ವಿರುದ್ಧವೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದು, ಅಥವಾ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳುವುದು ಇತರ ವೈದ್ಯರಿಗೂ ಮುಜುಗರದ ಕೆಲಸವೇ.
ಇವೆಲ್ಲ ಕೋಟಲೆಗಳ ನಡುವೆಯೇ ದೂರುದಾರರು ತಜ್ಞರ ಬಳಿಗೆ, ನ್ಯಾಯಾಲಯಗಳಿಗೆ ತಿರುಗಾಡುವಂತಹ ಕೆಲಸ ನಿಜಕ್ಕೂ ಅಸಹನೀಯ. ಇನ್ನು ಸೀಮಿತ ಸಂಪನ್ಮೂಲಗಳ ವರ್ಗದ ಜನರಿಗೆ ಕಾಯಿದೆಯಲ್ಲಿ ಒದಗಿಸಿರುವ ಸೌಲಭ್ಯ ಹಾಗೂ ಪರಿಹಾರ ಸಿಗುವುದು ಗಗನ ಕುಸುಮವೇ. ಇಲ್ಲಿ ಪ್ರಭುತ್ವವೇ ಮುಂದಾಗಿ ಸರ್ವಸಮ್ಮತ ಸರ್ವಹಿತ ರಕ್ಷಕ ಕಾಯಿದೆಯನ್ನು ರಚಿಸುವುದು ಸೂಕ್ತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.