ಸಂಪಾದಕೀಯ

ವಿಶೇಷ ಭತ್ಯೆ ಸಮಸ್ಯೆ ಬಗೆಹರಿಸಿ

Published On :

ಈಗಾಗಲೇ ಐದನೇ ವೇತನ ಅಯೋಗದ ಶಿಫಾರಸಿನಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಮೂಲ ವೇತನವನ್ನು ಪರಿಷ್ಕರಿಸಿದ್ದರಿಂದ, ದಿನಾಂಕ 1-8-2008 ರ ನಂತರ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರು 200 ರು. ಮಾಸಿಕ ವಿಶೇಷ ಭತ್ಯೆಯನ್ನು ಪಡೆಯಲು ಅರ್ಹರಿರುವುದಿಲ್ಲ ಎಂದು ತಿಳಿಸಲಾಯಿತು. ಆದರೆ ಪ್ರಸ್ತುತ ರಾಜ್ಯದ ಆರನೇ ವೇತನ ಆಯೋಗದ ಅಧಿಕಾರಿ ವೇತನ ಸಮಿತಿಯ ಶಿಫಾರಸಿನಂತೆ ಪರಿಷ್ಕೃತ ವೇತನ ನಿಗದಿಪಡಿಸಲಾಗಿದ್ದು, ಈ ಪರಿಷ್ಕೃತ ವೇತನದಲ್ಲಿಯೂ ಪ್ರೌಢ ಶಾಲಾ ಶಿಕ್ಷಕರ ಬೇಡಿಕೆಯನ್ನು ಸಂಪೂರ್ಣವಾಗಿ ಪರಿಗಣಿಸದೇ ಇರುವ ಹಿನ್ನೆಲೆಯಲ್ಲಿ ಈ ವರ್ಗದವರಿಗೆ ವಿಶೇಷ ಭತ್ಯೆಯನ್ನು ಸರ್ಕಾರಿ ಆದೇಶ ಸಂಖ್ಯೆ ಇ.ಡಿ. 264 ಎಸ್‌ಎಲ್‌ಬಿ 2012, ಬೆಂಗಳೂರು, ದಿನಾಂಕ 9 ಮೇ 2012 ರಂದು 200 ರು.ಗಳಿಂದ 400 ರು.ಗಳಿಗೆ ಪರಿಷ್ಕರಿಸಲಾಯಿತು. ಆದರೆ ಯಾವುದೇ ಸಕಾರಣಗಳಿಲ್ಲದಿದ್ದರೂ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ 29-08-2008 ರ ನಂತರ ನೇಮಕವಾದ ಪ್ರೌಢ ಶಾಲಾ ಶಿಕ್ಷಕರ ಎಕ್ಸ್‌ಗ್ರೇಷಿಯಾ (ವಿಶೇಷ ಭತ್ಯೆ)ಯನ್ನು ತಡೆಹಿಡಿದಿದ್ದು, ಮತ್ತು ಈಗಾಗಲೇ ಪಡೆದಿರುವ ವಿಶೇಷ ಭತ್ಯೆಯನ್ನು ಮರುಭರಣ ಮಾಡಿಸಿಕೊಂಡು ಪ್ರೌಢ ಶಾಲಾ ಶಿಕ್ಷಕರಿಗೆ ತೀವ್ರ ಅನ್ಯಾಯ ಮಾಡಿರುತ್ತಾರೆ. ಆಗಿರುವ ಅನ್ಯಾಯವನ್ನು ಸರಿಪಡಿಸಿ, ರಾಜ್ಯದ ಎಲ್ಲ ಪ್ರೌಢ ಶಾಲಾ ಶಿಕ್ಷಕರಿಗೆ ವಿಶೇಷ ಭತ್ಯೆಯನ್ನು ಮುಂದುವರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಲ್ಲಿ ವಿನಂತಿ.
- ಗೌರಿ ಭೂಶೆಟ್ಟಿ, ಹುಬ್ಬಳ್ಳಿ

ಅನರ್ಹರಿಗೆ ನಿವೇಶನ
ಮುಖ್ಯಮಂತ್ರಿಯವರ ವಿವೇಚನಾ ಕೋಟಾ (ಜಿ ಕೆಟಗರಿ) ಅಡಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ 313 ನಿವೇಶನಗಳನ್ನು ಅನರ್ಹರಿಗೆ ನೀಡಲಾಗಿದ್ದು ಅವುಗಳನ್ನು ವಾಪಸ್ ಪಡೆಯುವಂತೆ ನಿವೃತ್ತ ನ್ಯಾಯಮೂರ್ತಿ ಬಿ. ಪದ್ಮರಾಜ್ ನೇತೃತ್ವದ ಸಮಿತಿ ಶಿಫಾರಸು ಮಾಡಿರುವುದು ಸೂಕ್ತವಾಗಿಯೇ ಇದೆ.  ಸಮಿತಿಯ ಶಿಫಾರಸನ್ನು ಅಂಗೀಕರಿಸಿ ಕೂಡಲೇ ನಿವೇಶನಗಳನ್ನು ಹಿಂಪಡೆಯಲು ಬಿಡಿಎ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಇಂತಹ ಪ್ರಕರಣಗಳು ಮುಂದೆ ಇನ್ನೂ ಹೆಚ್ಚುವ ಸಾಧ್ಯತೆಗಳಿವೆ. ನಿವೇಶನಗಳನ್ನು ತಮಗೆ ಅರ್ಹತೆ ಇಲ್ಲದಿದ್ದರೂ ಪಡೆದಿರುವವರಿಂದ ಹಾಗೂ ಅರ್ಹತೆ ಇಲ್ಲದಿದ್ದರೂ ನಿವೇಶನಗಳನ್ನು ನೀಡಿರುವ ಅಧಿಕಾರಿಗಳಿಂದ ನಿವೇಶನವನ್ನು ವಾಪಸ್ ಪಡೆಯುವುದರೊಂದಿಗೆ ದಂಡವನ್ನೂ ಪಡೆಯಬೇಕು. ರಾಜಕಾರಣವೆಂಬುದು ಸ್ವಹಿತಕ್ಕಾಗಿ ಆರಿಸಿಕೊಂಡಿರುವ ಉದ್ಯೋಗವಾಗಿರುವುದು ವಿಷಾದನೀಯ.
- ಕೆ.ವಿ. ಸೀತಾರಾಮಯ್ಯ, ಹಾಸನ

ಒಡೆದು ಆಳುವ ನೀತಿ ಬಿಡಿ
ಗಾಜಿನ ಮನೆಯಲ್ಲಿರುವವರು ಬೇರೆಯವರ ಮನೆಯ ಮೇಲೆ ಕಲ್ಲು ತೂರಬಾರದು ಎಂಬ ಮಾತಿದೆ.  ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಆ ಕೆಲಸ ಮಾಡಿದ್ದಾರೆ. ಸಭೆಯೊಂದರಲ್ಲಿ "ಭಾಜಪ ಜನರನ್ನು ಒಡೆಯುತ್ತದೆ" ಎಂದಿದ್ದಾರೆ. ಕಾಂಗ್ರೆಸ್ ಆಂಧ್ರಪ್ರದೇಶವನ್ನು ವಿಭಜಿಸಿದ್ದು ಅದರಿಂದಾಗಿ ಆ ರಾಜ್ಯ ಕೆಂಡದುಂಡೆಯಾದದ್ದು ಹಳೆಯ ಮಾತೇನಲ್ಲ. ಒಡೆದು ಆಳುವದೇ ರಾಜಕೀಯ ಎಂದು ಎಲ್ಲರೂ ತಿಳಿದುಕೊಂಡಂತಿದೆ. ಬ್ರಿಟಿಷರು ಇಲ್ಲಿ ಬಿತ್ತಿಹೋದ ಒಡೆದು ಆಳುವ ಕಸ ಮಾತ್ರ ಇನ್ನೂ ಕಿತ್ತು ಹೋಗಿಲ್ಲ. ಒಡೆಯುವ ಮೂಲಕವೇ ರಾಜಕಾರಣ ಮಾಡುವುದನ್ನು ರಾಜಕೀಯ ಪಕ್ಷಗಳು ನಿಲ್ಲಿಸಬೇಕು. ಬೇರೆಯವರ ಮುಖಕ್ಕೆ ಮಸಿ ಹಚ್ಚಬೇಕೆನ್ನುವವರು ಮೊದಲು ತಮ್ಮ ಕೈಯನ್ನು ಕೊಳೆ ಮಾಡಿಕೊಳ್ಳಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.
- ಸುಭಾಷ್ ಯಾದವಾಡ, ವಿಜಾಪುರ

ಮೂಢನಂಬಿಕೆ ನಿಷೇಧ ಕಾಯ್ದೆ ಅತ್ಯಗತ್ಯ
ರಾಜ್ಯ ಸರ್ಕಾರ ಮೂಢನಂಬಿಕೆ ಕಾನೂನು ಜಾರಿ ಮಾಡುತ್ತಿರುವುದು ಅಭಿನಂದನಾರ್ಹ.  ಜನತೆ ಶಿಕ್ಷಣವಂತರಾದರೂ ಮೌಢ್ಯಗಳನ್ನು ಆಚರಿಸುತ್ತಿರುವುದು ಖೇದನೀಯ ಸಂಗತಿ. ಹಲವಾರು ಮೂಢನಂಬಿಕೆಗಳು ಈಗ ಜನರಲ್ಲಿ ಬಲವಾಗಿ ಬೇರುಬಿಟ್ಟಿವೆ. ಕೆಲವು ನಂಬಿಕೆಗಳನ್ನು ಧಾರ್ಮಿಕ ಆಚರಣೆಯಂತೆ ಜನತೆ ಆಚರಿಸುತ್ತಿದ್ದಾರೆ. ಸಂವಿಧಾನದ 298 ವಿಧಿಯ ಪ್ರಕಾರ ಧಾರ್ಮಿಕ ಹಕ್ಕಿಗೆ ಧಕ್ಕೆಯಾದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಬಹುದು. ಅದಕ್ಕಾಗಿ ಮೊದಲು ಯಾವುದು ನಂಬಿಕೆ ಮತ್ತು ಯಾವುದು ಮೂಢನಂಬಿಕೆ, ಎನ್ನುವುದನ್ನು ಸರ್ಕಾರ ಅವಲೋಕನ ಮಾಡಬೇಕು.
- ಸುಮಾ ಮುದ್ದಾಪುರ್, ಬೆಂಗಳೂರು



ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.