ಭಾಷಾನೀತಿ ರಚನೆಯಾಗಲಿ
ಪ್ರತಿವರ್ಷ ಸೆಪ್ಟೆಂಬರ್ 14ರ ದಿನವನ್ನು ಹಿಂದಿ ದಿವಸವನ್ನಾಗಿ ನಮ್ಮ ದೇಶದ ಎಲ್ಲ ರಾಜ್ಯಗಳ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಆಚರಿಸಲಾಗುತ್ತಿದೆ. ಮೊದಲು ಹಿಂದಿ ದಿವಸ ಇದ್ದದ್ದು ಈಗ ಹಿಂದಿ ಸಪ್ತಾಹ, ಹಿಂದಿ ಪಾಕ್ಷಿಕವಾಗಿ ವಿಸ್ತರಣೆಗೊಂಡಿದೆ. ರಾಷ್ಟ್ರೀಯ ಏಕತೆಗೆ ದೇಶಕ್ಕೊಂದು ಭಾಷೆ ಬೇಕು ಎಂಬ ಕೆಲವರ ಅಭಿಪ್ರಾಯ ಅವರು ಭಾರತ ದೇಶದ ಸ್ವರೂಪವನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಸಂಕೇತವಾಗಿದೆ. ಬಹು ಭಾಷೆ, ಸಂಸ್ಕೃತಿ, ಸಂಪ್ರದಾಯ, ಪರಂಪರೆ ಇರುವ, ಒಂದು ಒಕ್ಕೂಟ ಎಂದು ಕರೆಸಿಕೊಳ್ಳುವ ಭಾರತದಲ್ಲಿ ಒಂದು ಭಾಷೆಗೆ ಆ ಮೂಲಕ ಒಂದು ಭಾಷಿಕರಿಗೆ ಮಾತ್ರ ಹೆಚ್ಚಿನ ಸ್ಥಾನಮಾನ, ಅವಕಾಶಗಳನ್ನು ಕೊಟ್ಟು ಉಳಿದವರನ್ನು ಎರಡನೇ ದರ್ಜೆ ನಾಗರೀಕರನ್ನಾಗಿ ಮಾಡುತ್ತಿದೆ. ಕೇವಲ ಹಿಂದಿಯೇತರ ಪ್ರದೇಶಗಳಿಗೆ (ತಮಿಳುನಾಡು ಹೊರತುಪಡಿಸಿ.) ಅನ್ವಯವಾಗುವಂತೆ ತ್ರಿಭಾಷಾ ಸೂತ್ರ ಮಾಡಿ ಅದರ ಮೂಲಕ ಕಲಿಕೆ, ಉದ್ಯೋಗ, ಗ್ರಾಹಕ ಸೇವೆ, ಮನರಂಜನೆ ಹೀಗೆ ಎಲ್ಲೆಂದರಲ್ಲೂ ಹಿಂದಿಯನ್ನು ವ್ಯವಸ್ಥಿತವಾಗಿ ಹೇರಲಾಗುತ್ತಿದೆ. ಇದರಿಂದ ಕರ್ನಾಟಕದಂಥ ಹಿಂದಿಯೇತರ ರಾಜ್ಯದ ಕೇಂದ್ರ ಸರಕಾರಿ ಇಲಾಖೆಗಳಲ್ಲಿ ಹಿಂದಿ ಬಲ್ಲವನು ಸುಲಭವಾಗಿ ಕೆಲಸ ಗಿಟ್ಟಿಸಿಕೊಂಡರೆ ಕನ್ನಡ ಬಲ್ಲವನು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಅಸಮಾನತೆಯೇ ಮುಂಬಯಿ ಸೇರಿದಂತೆ ಅನೇಕ ಕಡೆಗಳಲ್ಲಿ ಘರ್ಷಣೆಗೆ ಕಾರಣವಾಗಿರುವುದನ್ನು ಕಾಣಬಹುದು. ಆದಕಾರಣ ಕೇಂದ್ರ ಸರ್ಕಾರ ಅಸಮಾನತೆಯನ್ನು ಹುಟ್ಟು ಹಾಕುವ ಇಂಥ ಹುಳುಕು ಭಾಷಾನೀತಿಯನ್ನು ಕೈಬಿಟ್ಟು ಎಲ್ಲರನ್ನೂ ಸಮಾನವಾಗಿ ಕಾಣುವ, ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಒಂದು ಸಮಾನ ಭಾಷಾನೀತಿಯನ್ನು ರಚಿಸುವತ್ತ ಗಮನಹರಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಭಾರತವೆಂಬ ಒಕ್ಕೂಟ ಒಡೆದ ಕೂಟ ಆಗುವುದಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.
- ಮಹೇಶ ರುದ್ರಗೌಡರ, ವಿಜಾಪುರ
ಅಂತರ್ಜಾಲದಲ್ಲಿ ಅಸಭ್ಯತೆಗೆ ಅಂಕುಶ ಸಾಧ್ಯವೇ?
ಮಹಿಳೆಯರ ಅಸಭ್ಯ ಚಿತ್ರಣಕ್ಕೆ ಸರ್ಕಾರ ಅಂಕುಶ ಹಾಕಲು ನಿಯಮಾವಳಿಗಳನ್ನು ಜಾರಿಗೆ ತರಲು ಹೊರಟಿರುವುದು ಶ್ಲಾಘನೀಯವಾದರೂ ರಾಜ್ಯ ಸರ್ಕಾರವು ಇನ್ನು ಹೆಚ್ಚಿನ ದೃಢ ನಿರ್ಧಾರವನ್ನು ಇಡಬೇಕಾಗಿದೆ. ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ನಿಯಮಾವಳಿಗಳು ಚಲನಚಿತ್ರ ಮತ್ತು ಜಾಹೀರಾತಿಗೆ ಮಾತ್ರ ಸೀಮಿತವಾಗದೇ ಇಂದು ಅಂತರ್ಜಾಲದಲ್ಲಿ ರಾಜಾರೋಷವಾಗಿ ತಾಂಡವಾಡುತ್ತಿರುವ ಅಶ್ಲೀಲ ಸಿನಿಮಾಗಳು ಮತ್ತು ಬೆತ್ತಲೆ ಚಿತ್ರಗಳ ಕಡಿವಾಣ ಹಾಕಲು ಕಾರ್ಯಪ್ರವೃತ್ತವಾಗಬೇಕಾಗಿದೆ. ಇಂದಿನ ದಿನಗಳಲ್ಲಿ ಪ್ರಾಥಮಿಕ ತರಗತಿಯಿಂದಲೇ ಕಂಪ್ಯೂಟರ್ ತರಬೇತು ಲಭ್ಯವಾಗುತ್ತಿರುವುದುರಿಂದ ಇಂಟರ್ನೆಟ್ ಬಳಸುವುದು ಬಹುತೇಕ ಮಕ್ಕಳಿಗೆ ಕಷ್ಟವಾಗುವುದಿಲ್ಲ. ಅಂತರ್ಜಾಲದಲ್ಲಿ ಕಾನೂನು ಬಾಹಿರ ಮತ್ತು ಸಾರ್ವಜನಿಕ ವಲಯಗಳಲ್ಲಿ ಮುಜುಗರ ಆಸ್ಪದ ಕೊಡುವ ಅಶ್ಲೀಲ ಲೈಂಗಿಕ ವಿಷಯಗಳು ಸಾಕಷ್ಟು. ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ನಿಯಮಾವಳಿಗಳು ಅಂತರ್ಜಾಲಕ್ಕೂ ಅನ್ವಯಿಸುವಂತೆ ರೂಪಿಸಲು ಸಾಧ್ಯವೇ?
- ಡಿ. ಆನಂದ್ ಕೌಶಿಕ್
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

