ಕಾನೂನು ಮಹಿಳೆಯ ಪರವೇ?
ದಿ. 3.9.2013ರಂದು ಪತ್ರಪ್ರಭದಲ್ಲಿ ಡಾ. ಮ.ನ. ಜವರಯ್ಯನವರ "ಪುರುಷರ ಮೇಲಿನ ದೌರ್ಜನ್ಯ ಚರ್ಚೆಯಾಗಬೇಕಾದ ವಿಷಯ" ಪತ್ರಕ್ಕೆ ನನ್ನ ಪ್ರತಿಕ್ರಿಯೆ.
ಕೆಲವು ಕಾನೂನುಗಳು ಮಹಿಳೆಯರ ರಕ್ಷಣೆಗೆ ಮಾತ್ರ ಜಾರಿಗೆ ಬಂದಿದೆಯೇ ಹೊರತು ಪುರುಷರ ರಕ್ಷಣೆಗೆ ಆ ರೀತಿಯ ಕಾನೂನುಗಳು ಅಷ್ಟಾಗಿ ಇದ್ದಂತಿಲ್ಲ ಎಂದು ಡಾ. ಮ.ನ. ಜವರಯ್ಯನವರು ತಿಳಿಸಿರುತ್ತಾರೆ. ಆದರೆ ಯಾವ ಕಾನೂನುಗಳು ಮಹಿಳೆಯರನ್ನು ರಕ್ಷಣೆ ಮಾಡುತ್ತಿವೆ ಹೇಳಿ. ವರದಕ್ಷಿಣೆ ಕಿರುಕುಳ ಕಡಿಮೆಯಾಗಿದೆಯಾ? ಅತ್ಯಾಚಾರ ಪ್ರಕರಣಗಳು ಕಡಿಮೆಯಾಗಿವೆಯಾ? ಭ್ರೂಣಹತ್ಯೆಯಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಸಿಗುತ್ತಿದೆಯೇ? ಮಾರುಕಟ್ಟೆಯಲ್ಲಿ ಸರಕನ್ನು ಮಾರಿದಂತೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಾರಲ್ಲಾ. ಅವೆಲ್ಲ ಕಡಿಮೆಯಾಗಿವೆಯಾ? ಮಹಿಳೆಯರಿಗಾಗಿ ಕಾನೂನುಗಳಿದ್ದರೂ ಈ ಮೇಲಿನ ಯಾವ ಪ್ರಕರಣಗಳು ಕಡಿಮೆಯಾಗದೇ ಇನ್ನೂ ಹೆಚ್ಚಾಗುತ್ತಿವೆ. ಬಾಲ್ಯದಲ್ಲಿ ಹೆಣ್ಣು ತಂದೆಯ ಆಶ್ರಯದಲ್ಲಿ, ಯೌವ್ವನದಲ್ಲಿ ಗಂಡನ ಆಶ್ರಯದಲ್ಲಿ, ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿರಬೇಕೆಂದು ಮನುಸ್ಮೃತಿಯಲ್ಲಿ ತಿಳಿಸಲಾಗಿದೆ. ಆದರೆ ಇಲ್ಲಿ ರಕ್ಷಕರೇ ಭಕ್ಷಕರಾದಾಗ ಇನ್ನು ರಕ್ಷಣೆಯ ಮಾತೆಲ್ಲಿ?ಕಾನೂನುಗಳು ಹೇಗೆ ತಾನೇ ರಕ್ಷಿಸುತ್ತವೆ? ಹಾಗೇನಾದರೂ ಕಾನೂನುಗಳು ಮಹಿಳೆಯರಿಗೆ ರಕ್ಷಣೆ ಮಾಡುತ್ತಿದ್ದರೆ ದೆಹಲಿಯ ಸಾಮೂಹಿಕ ಅತ್ಯಾಚಾರದ ಪ್ರಕರಣದ ನಂತರವೂ ಹಲವು ಕಡೆ ಸಾಮೂಹಿಕ ಅತ್ಯಾಚಾರ, ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ನಡೆಯುತ್ತಿರಲಿಲ್ಲ.
ಇನ್ನು ಮಹಿಳೆಯರು ಪುರುಷರ ಮೇಲೆ ನಡೆಸುವ ಹಿಂಸೆ ಮತ್ತು ದೌರ್ಜನ್ಯಗಳು ಅಷ್ಟಾಗಿ ಬೆಳಕಿಗೆ ಬರುವುದೇ ಇಲ್ಲ. ಅದನ್ನು ಬಹಿರಂಗ ಪಡಿಸುವುದು ಪುರುಷರಿಗೆ ಅವಮಾನದ ಸಂಗತಿ ಎಂಬ ಕಾರಣಕ್ಕಾಗಿ, ಪುರುಷರು ಆತ್ಮಹತ್ಯೆಗೆ ತುತ್ತಾಗುತ್ತಿರುವುದು ಎಂದು ಹೇಳಿದ್ದಾರೆ. ಪುರುಷ ಮೂಲಭೂತವಾದಿಗಳ ಅಥವಾ ಪುರುಷಾಂಧರ (ಧರ್ಮದಲ್ಲಿ ಮೂಲಭೂತವಾದಿಗಳು ಮತ್ತು ಪುರುಷಾಂಧರು ಎಂಬ ಪದಗಳಿರುವಂತೆ ಪುರುಷ ಮೂಲಭೂತವಾದಿಗಳು ಮತ್ತು ಪುರುಷಾಂಧರು ಎಂದು ಪದಗಳನ್ನು ಬಳಸಿದ್ದೇನೆ) ಪ್ರಕಾರ ಗಂಡನಾದವನು ರಾತ್ರಿ ಎಷ್ಟೊತ್ತಿಗಾದರೂ ಬರಲಿ, ಬೇರೆ ಹೆಣ್ಣು ಮಕ್ಕಳ ಸಹವಾಸ ಮಾಡಲಿ, ಜೂಜಾಡಿ ಹಣ ಕಳೆದುಕೊಳ್ಳಲಿ, ಕುಡಿದು ಬಂದು ಹೆಂಡತಿ, ಮಕ್ಕಳನ್ನು ಹೊಡೆಯಲಿ, ಏನು ಮಾಡಿದರೂ ಪ್ರಶ್ನಿಸದೇ ಗಂಡ ಮಾಡುವ ಎಲ್ಲಾ ರೀತಿಯ ಹಿಂಸೆ, ದೌರ್ಜನ್ಯಗಳನ್ನು ಸಹಿಸಿಕೊಂಡು ಸಂಸಾರ ನಡೆಸಬೇಕು. ಆಗ ಮಾತ್ರ ಹೆಣ್ಣು ಗರತಿ ಎನ್ನಿಸಿಕೊಳ್ಳುತ್ತಾಳೆ. ಒಂದು ವೇಳೆ ಇದನ್ನೆಲ್ಲ ಪ್ರಶ್ನಿಸಿದರೆ, ಪ್ರತಿಭಟಿಸಿದರೆ ಗಂಡಸರಿಗೆ ಅದು ಕಿರಿಕಿರಿ, ಹಿಂಸೆ ಎನಿಸಿಕೊಳ್ಳುತ್ತದೆ. ಪುರುಷರು ಆತ್ಮಹತ್ಯೆ ಮಾಡಿಕೊಳ್ಳುವುದು ಮಹಿಳೆಯರ ಹಿಂಸೆ, ದೌರ್ಜನ್ಯದಿಂದ ಅಲ್ಲ. ತಮ್ಮ ಮುಖವಾಡ ಬಯಲಾಗುತ್ತದೆಂದು. ಇನ್ನೂ ಹಳ್ಳಿಗಳಲ್ಲಿ ಪುರುಷರು ತಾವು ದುಡಿದ ಹಣವನ್ನು ಸಾರಾಯಿ ಕುಡಿದು, ಜೂಜಾಡಿ ಕಳೆದರೆ, ಸಂಸಾರವನ್ನು ನಿಭಾಯಿಸುವುದು ಹೆಣ್ಣು ಮಕ್ಕಳೇ. ತಮ್ಮ ದುಡಿಮೆಯಿಂದ ಬಂದ ಹಣವನ್ನು ಮನೆ ಖರ್ಚಿಗಾಗಿ ತೆಗೆದಿಟ್ಟರೆ ಗಂಡ ಹೆಂಡತಿಗೆ ಬಡಿದು ಆ ಹಣವನ್ನೂ ಕಿತ್ತುಕೊಂಡು ಹೋಗುತ್ತಾನೆ. ಇಂತಹ ಘಟನೆಗಳು ಹಳ್ಳಿಯಲ್ಲಿ ಸಾಮಾನ್ಯ. ಆದರೂ ಹೆಣ್ಣು ಮಕ್ಕಳು ಗಂಡನೇ ದೇವರೆಂದು ಬಾಳ್ವೆ ನಡೆಸುತ್ತಿದ್ದಾರೆ. ಇಂತಹ ಹಿಂಸೆ, ದೌರ್ಜನ್ಯಗಳಿಗೆ ಯಾವ ಕಾನೂನಿನಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇದೆ ಸ್ವಾಮಿ.
ಅಂಕಿ ಅಂಶಗಳ ಪ್ರಕಾರ ಹೆಣ್ಣು ಮಕ್ಕಳ ಸಾಕ್ಷರತಾ ಪ್ರಮಾಣ ಕಡಿಮೆಯೇ. ಹೀಗಿರುವಾಗ ಇವರಿಗೆ ತಮ್ಮ ರಕ್ಷಣೆಗಾಗಿ ಕಾನೂನುಗಳಿವೆ ಎಂಬುದು ಗೊತ್ತೇ ಇಲ್ಲ. ಮಹಿಳೆಯರಿಂದ ಪುರುಷರ ಮೇಲೆ ಹಿಂಸೆ, ದೌರ್ಜನ್ಯ ಆಗುತ್ತಿದ್ದರೆ ಅದು ಬೆರಳೆಣಿಕೆಯಷ್ಟಿರಬಹುದು. ಅದೂ ಪುರುಷ ಮೂಲಭೂತವಾದಿಗಳ ಪ್ರಕಾರ. ಏಕೆಂದರೆ ಮಹಿಳೆ ಇಂದು ಉನ್ನತ ಶಿಕ್ಷಣ ಹೊಂದಿ ಹಲವು ಕ್ಷೇತ್ರಗಳಲ್ಲಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುತ್ತಿದ್ದಾಳೆ. ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕೆ ಶ್ರಮ ಪಡುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹಕ್ಕನ್ನು ಚಲಾಯಿಸಿದರೆ ಅದು ಪುರುಷ ದೌರ್ಜನ್ಯವಾಗಿ ಕಂಡು ಬರುತ್ತದೆ. ಆದರೆ ಪುರುಷರ ಹಾಗೆ ತನ್ನ ಸ್ವಾರ್ಥ ಲಾಲಸೆಗಾಗಿ ತನ್ನ ವರ್ತನೆಯಲ್ಲಿ ಬದಲಾವಣೆಗೊಂಡಿಲ್ಲ.
ಹೆಣ್ಣನ್ನು ಒಂದು ಭೋಗದ ವಸ್ತುವಿನಂತೆ, ಮನೆಯಲ್ಲಿ ದುಡಿಯುವ ಯಂತ್ರದಂತೆ ಕಂಡ ಪುರುಷರಿಗೆ ಹೆಣ್ಣು ತನ್ನ ಹಕ್ಕನ್ನು ಪ್ರತಿಪಾದಿಸಿದರೆ ಅದು ಅವರಿಗೆ ಹಿಂಸೆ, ದೌರ್ಜನ್ಯವಾಗುತ್ತದೆ. ವಕ್ರತುಂಡೋಕ್ತಿಗಳಲ್ಲಿ, ಜೋಕ್ಗಳಲ್ಲಿ ಹೆಣ್ಣನ್ನು ಕ್ರೂರಿಯಾಗಿ, ರಾಕ್ಷಸಿಯಾಗಿ ಚಿತ್ರಿಸಲಾಗುತ್ತಿದೆ. ಇದು ತಮಾಷೆಗಾಗಿ ಆದರೂ ಯಾವಾಗಲೂ ಇದನ್ನು ಓದುವ, ಕೇಳುವ ಯುವಕರಿಗೆ ಹೆಣ್ಣು ಅಂದರೆ ಹೀಗೇ ಎಂದು ಅವರ ಮನಸ್ಸಿನಲ್ಲಿ ಬೇರೂರುವುದಿಲ್ಲವೇ? ಇದು ಪರೋಕ್ಷವಾಗಿ ಹೆಣ್ಣಿನ ವ್ಯಕ್ತಿತ್ವದ ಮೇಲೆ ನಡೆಸುವ ದೌರ್ಜನ್ಯವಲ್ಲವೇ?
-ಅಂಬಮ್ಮ ಪ್ರತಾಪ್ಸಿಂಗ್, ಮಾನ್ವಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

