ಸಂಪಾದಕೀಯ

ಮುಜಫರ ನಗರ ಗಲಭೆ; ರಾಜಕೀಯ ಚೆಲ್ಲಾಟ ಬೇಡ

Published On :

ಉತ್ತರ ಪ್ರದೇಶ ರಾಜ್ಯದ ಶ್ರೀಮಂತ ಪಶ್ಚಿಮ ಭಾಗದ ಮುಜಫರ ನಗರ ಸೀಮೆಯಲ್ಲಿ, ಆಗಸ್ಟ್ 27 ರಂದೇ ಕಾಣಿಸಿಕೊಂಡ ಕೋಮುವಾದಿ ಹಿಂಸಾಚಾರ ಸೆಪ್ಟೆಂಬರ್ ಹತ್ತರವರೆಗೂ ಏಕಪ್ರಕಾರವಾಗಿ ನಡೆದು ಸುಮಾರು ನಲವತ್ತು ಮಂದಿ ಆಹುತಿಯಾಗಿದ್ದಾರೆ. ನಲವತ್ತು ಸಹಸ್ರ ಜನ ಮನೆಗಳನ್ನು ಬಿಟ್ಟು ಓಡಿಹೋಗಿದ್ದಾರೆ ಇಲ್ಲವೇ ನಿರಾಶ್ರಿತರ ಶಿಬಿರಗಳಲ್ಲಿದ್ದಾರೆ. ಆದರೆ ಭಾನುವಾರದವರೆಗೂ ಮುಜಫರ ನಗರಕ್ಕೆ ಮುಖ್ಯಮಂತ್ರಿ ಅಖಿಲೇಶ ಯಾದವ್ ಹೋಗಿರಲಿಲ್ಲ. ಭಾನುವಾರ ಅಲ್ಲಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಕಣ್ಣಾರೆ ಕಂಡರು. ಅದರಲ್ಲಿ ಆಶ್ಚರ್ಯವೇನೂ ಇಲ್ಲ.
ಸುಮಾರು ಹದಿನಾಲ್ಕು ದಿನ ಬೆಂಕಿ ಹತ್ತಿ ಉರಿದರೂ ಈ ಪ್ರದೇಶಕ್ಕೆ ಬಾರದ ಮುಖ್ಯಮಂತ್ರಿ ಭಾನುವಾರವೇ ಬಂದಿದ್ದೇಕೆ? ಸೋಮವಾರದಿಂದ ಉತ್ತರ ಪ್ರದೇಶ ವಿಧಾನಮಂಡಲದ ಅಧಿವೇಶನ ಆರಂಭ. ಅದೇ ಕಾರಣ.
ಸಾಮಾನ್ಯವಾಗಿ ಪ್ರಧಾನಿಯಾದವರು ಕಾಯಿದೆ ಪಾಲನೆ ವ್ಯವಸ್ಥೆಯ ಕುಸಿತದ ದೂರುಗಳು ಬಂದಾಗ ಅಲ್ಲಿಗೆ ಖುದ್ದಾಗಿ ಹೋಗಿ "ಪರಿಸ್ಥಿತಿಯ ಪರಿಶೀಲನೆ" ಮಾಡುವುದಿಲ್ಲ. ಕಾಯಿದೆ ಪಾಲನೆಯ ವ್ಯವಸ್ಥೆ ರಾಜ್ಯ ಸರ್ಕಾರದ್ದು. ಆದರೆ ಈಗ ಮುಜಫರ ಪುರದ ಗಲಭೆ - ಗೊಂದಲವನ್ನು ವಿಶೇಷವಾದ ಪರಿಸ್ಥಿತಿ ಎಂದು ತೀರ್ಮಾನಿಸಿ, ಪ್ರಧಾನಿ ಮನಮೋಹನ ಸಿಂಗ್ ಸೋಮವಾರ ಅಲ್ಲಿಗೆ ಭೇಟಿ ನೀಡಲಿದ್ದಾರೆ.
ಕಳೆದ ಏಳೆಂಟು ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ಸುಮಾರು ಎಂಬತ್ತು ಕಡೆಗಳಲ್ಲಿ ಕೋಮು ಗಲಭೆಗಳಾಗಿರುವುದು ಸರ್ಕಾರದ ದಾಖಲೆಗಳಿಂದಲೇ ಗೊತ್ತಾಗುತ್ತಿದೆ. ಆಗ ಗಲಭೆ ನಡೆದ ಪ್ರದೇಶಕ್ಕೆ ಮುಖ್ಯಮಂತ್ರಿಯ ವಿಶೇಷ ಭೇಟಿಯ ಕಾರ್ಯಕ್ರಮವಿರಲಿಲ್ಲ. ಪ್ರಧಾನಿ ಮನಮೋಹನ ಸಿಂಗ್ ಅವರ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಅವರು ಈ ಗಲಭೆಗಳ ವರದಿಗಳನ್ನು ಗಮನಿಸಲೇ ಇಲ್ಲ.
ಭಾನುವಾರದ ಅಖಿಲೇಶ ಸಿಂಗ್ ಯಾದವ್ ಭೇಟಿ, ಸೋಮವಾರದ ಪ್ರಧಾನಿ ಮನಮೋಹನ ಸಿಂಗ್ ಅವರ ಭೇಟಿಯ ಅನಂತರ ಮುಜಫರದ ಸುತ್ತಮುತ್ತಲ ಪ್ರದೇಶದಲ್ಲಿ ಶಾಂತಿ - ಸುವ್ಯವಸ್ಥೆ ನೆಲೆಸುವ ವಿಶ್ವಾಸವೇನೂ ಇಲ್ಲ.
ಮುಖ್ಯಮಂತ್ರಿ - ಪ್ರಧಾನಿಯ ಭೇಟಿಯ ಕಾಲದಲ್ಲಿ ಸಂತ್ರಸ್ತರ ಪರವಾಗಿ ಮನವಿಗಳನ್ನು ಅರ್ಪಿಸುವುದು ಸಹಜ. ಆ ಮನವಿ ಪತ್ರಗಳ ಒಕ್ಕಣೆಯಲ್ಲಿ ರಾಜಕೀಯ ಪಕ್ಷಗಳ ಮೇಲಿನ ದೋಷಾರೋಪಣೆಯನ್ನು ಅಳವಡಿಸುವ ಪ್ರಯತ್ನ ಶನಿವಾರವೇ ಆರಂಭವಾಗಿತ್ತು. ಆ ಮನವಿ ಪತ್ರಗಳಿಗೆ ಪ್ರಚಾರ ಸಿಕ್ಕಿದಾಗ ಗಲಭೆಗಳ ಪುನರಾವರ್ತನೆ ಸಂಭವನೀಯವೆಂದು ಪೊಲೀಸ್ ಅಧಿಕಾರಿಗಳು ಭಾವಿಸಿರುವಂತಿದೆ.
ಮುಜಫರ ನಗರದ ಹಿಂಸಾಚಾರವನ್ನು ರಾಜಕೀಯ ಪಕ್ಷಗಳು ನಡೆಸದೇ ಇರಬಹುದು, ಆದರೆ ಯಾವುದೋ ಕಾರಣದಿಂದ ಹಿಂಸಾಚಾರ ನಡೆದಿರುವ ಸನ್ನಿವೇಶವನ್ನು ತಮ್ಮ ಪಕ್ಷಗಳಿಗೆ ಅನುಕೂಲವಾಗುವಂತೆ ಬಳಸಿಕೊಳ್ಳುವ ಪ್ರಲೋಭನೆಗೆ ರಾಜಕೀಯ ಪಕ್ಷಗಳು ಬಲಿಯಾಗುವ ಸಂಭವವೇ ಹೆಚ್ಚು, ಈಗಾಗಲೇ ಹಾಗಾಗಿದೆ.
ಈ ಪ್ರದೇಶದಲ್ಲಿ ಜಾಟ್ ಜನಾಂಗೀಯ ಶ್ರೀಮಂತ ರೈತರ ಪ್ರಾಬಲ್ಯ ಜಾಸ್ತಿ. ಆ ಕಾರಣದಿಂದಲೇ ಕಳೆದವಾರ ಜಾಟ್ ನಾಯಕ ಹಾಗೂ ಕೇಂದ್ರ ಮಂತ್ರಿ ಅಜಿತ್ ಸಿಂಗ್ ಅವರನ್ನು ಗಲಭೆಗ್ರಸ್ತ ಪ್ರದೇಶಗಳಿಗೆ ಹೋಗದಂತೆ ಪೊಲೀಸರು ತಡೆದಿದ್ದು.
ಆದರೆ ಆ ಪ್ರದೇಶದಲ್ಲಿ ಈಗ ಹಲವಾರು ಶಾಸಕರು ಸಕ್ರಿಯವಾಗಿದ್ದಾರೆ. ಅವರಲ್ಲಿ ಗಲಭೆ - ಹಿಂಸಾಚಾರದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲವು ಬಿಜೆಪಿ - ಬಿಎಸ್‌ಪಿ ಶಾಸಕರ ಹೆಸರುಗಳು ಮೊದಲ ಮಾಹಿತಿಯ ವರದಿಗಳಲ್ಲಿ ಕಂಡುಬಂದಿದ್ದರೂ, ಶನಿವಾರ ರಾತ್ರಿಯವರೆಗೂ ಯಾರನ್ನೂ ಬಂಧಿಸಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಜಾಟ್ ರೈತ ಸಮಾಜದ ಮುಖಂಡರಲ್ಲಿ ಕೆಲವರು ಬಿಜೆಪಿ ಕಡೆಗೆ ವಾಲಿರುವ ವರದಿಗಳೂ ಪ್ರಕಟವಾಗಿವೆ. ಇವೆಲ್ಲದರ ಹಿನ್ನೆಲೆಯಲ್ಲಿ, ಇದ್ದಕ್ಕಿದ್ದಂತೆ ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಸಮನ್ವಯ ಮಂಡಳಿಯ ಸಭೆಯನ್ನು ಕರೆಯುವ ಅಗತ್ಯ ಕಂಡು ಬಂದಿದೆ. ದೇಶದ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡಂತೆ 148 ಸದಸ್ಯರಿರುವ ರಾಷ್ಟ್ರೀಯ ಸಮನ್ವಯ ಮಂಡಳಿಯ ಸಭೆ ಕಳೆದ ಎರಡು ವರ್ಷಗಳಿಂದಲೂ ನಡೆದಿಲ್ಲ. ಪ್ರಧಾನವಾಗಿ ಆ ಸಭೆಯಲ್ಲಿ ಚರ್ಚೆಯಾಗಬೇಕಾದ ವಿಚಾರ ದೇಶದ ಎಲ್ಲ ಕಡೆ ಕೋಮುಸೌಹಾರ್ದದ ಸಹಬಾಳ್ವೆಯ ಸಿದ್ಧಾಂತದ ಪ್ರತಿಪಾದನೆ. ಎಲ್ಲಾದರೂ ಕೋಮು ಆಧರಿತ ಹಿಂಸಾಚಾರ ನಡೆದಿದ್ದರೆ, ಸೂಕ್ತ ರೀತಿಯ ಕ್ರಮಗಳಿಂದ ಪರಿಸ್ಥಿತಿಯನ್ನು ಸುಧಾರಿಸುವ ಮಾರ್ಗಗಳನ್ನು ಕುರಿತ ವಿಚಾರ ವಿನಿಮಯ.
ಉತ್ತರ ಪ್ರದೇಶದ ಅಯೋಧ್ಯೆಯ ಸೀಮೆಯಲ್ಲಿ ವಿಶ್ವ ಹಿಂದೂ ಪರಿಷತ್ತು ನಡೆಸಬೇಕೆಂದಿದ್ದ ಪ್ರದರ್ಶನವನ್ನು ಅಲ್ಲಿನ ಸಮಾಜವಾದಿ ಪಕ್ಷದ ಸರ್ಕಾರ ತಡೆಗಟ್ಟಿತ್ತು. ಸರ್ಕಾರದ ಆ ನೀತಿಯನ್ನು ಹಿಂದೂ ಪರ ಸಂಘಟನೆಗಳು ಉಗ್ರವಾಗಿ ಪ್ರತಿಭಟಿಸಿದ್ದೂ ಆಗಿದೆ. ರಾಷ್ಟ್ರೀಯ ಸಮನ್ವಯ ಮಂಡಳಿಯ ಸಭೆಯಲ್ಲಿ ಮತ್ತೆ ರಾಮಮಂದಿರದ ನಿರ್ಮಾಣದ ವಿವಾದವೂ ಪ್ರಸ್ತಾಪವಾಗಲೂ ಬಹುದು. ಲೋಕಸಭೆ ಚುನಾವಣೆಗೆ ಏಳೇ ತಿಂಗಳು ಉಳಿದಿರುವ ಸಮಯದಲ್ಲಿ ಅದು ಅನಿವಾರ್ಯ ಕೂಡಾ.
ಜಮ್ಮು - ಕಾಶ್ಮೀರದಲ್ಲೂ ಗೊಂದಲಗಳಾಗಿವೆ. ಉತ್ತರ ಪ್ರದೇಶದಲ್ಲಂತೂ ಜನ ಸಾಮಾನ್ಯ ವರ್ಗಗಳು ಗಲಭೆ - ಹಿಂಸಾಚಾರದ ಭೀತಿಯ ನೆರಳಲ್ಲೇ ಬದುಕಬೇಕಾಗಿದೆ. ಇಂತಹ ಸನ್ನಿವೇಶವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸುವ ಪಕ್ಷಗಳ, ನಾಯಕರನ್ನು ಜನ ಧಿಕ್ಕರಿಸಬೇಕು. ಜನರ ಬವಣೆಯ ನಿವಾರಣೆ ಮುಖ್ಯ. ಅದರ ರಾಜಕೀಯ ಲಾಭ - ನಷ್ಟದ ಲೆಕ್ಕ ಅಲ್ಲ. ಈ ಮಾನವೀಯ ಸತ್ಯವನ್ನು ನಮ್ಮ ಪಕ್ಷಗಳ ನಾಯಕರಿಗೆ ತಿಳಿಸುವವರು ಯಾರು?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.