ಸಂಪಾದಕೀಯ

ಕನ್ನಡದ ತಾತ್ಸಾರ ಬೇಡ

Published On :

ದಿ. 28ನೇ ಮಾರ್ಚ್ 2014ರಂದು ಕನ್ನಡಪ್ರಭ ದೈನಿಕ ಮುಖಪುಟದಲ್ಲಿ ಪ್ರಕಟವಾಗಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತು ಸೂಕ್ತವಲ್ಲ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಪುಟ್ಟರಾಜು ಅವರಿಗೆ ಕನ್ನಡ ಭಾಷೆ ಒಂದನ್ನು ಬಿಟ್ಟು ಬೇರೆ ಯಾವುದೇ ಭಾಷೆ ಬರುವುದಿಲ್ಲ. ಆದರೆ ಮಂಡ್ಯದಿಂದ ಸ್ಪರ್ಧಿಸಿರುವ ಅಭ್ಯರ್ಥಿ ರಮ್ಯರವರಿಗೆ ಆರು ಭಾಷೆಗಳು ಬರುತ್ತವೆ, ಕೇವಲ ಕನ್ನಡ ಭಾಷೆ ಬರುವ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಏನು ಪ್ರಯೋಜನ? ಆದುದರಿಂದ ರಮ್ಯ ಅವರನ್ನು ಆಯ್ಕೆ ಮಾಡಬೇಕೆಂದು ಒಬ್ಬ ನಾಡಿನ ಮುಖಮಂತ್ರಿಯಾಗಿ ಮಂಡ್ಯದ ಜನತೆಗೆ (ಮತದಾರರಿಗೆ) ಈ ರೀತಿ ಕರೆ ನೀಡಿರುವುದು ಎಷ್ಟು ಸರಿ ಎಂದು ಕನ್ನಡ ಅಭಿಮಾನವುಳ್ಳ ಜನ ಈ ಸಂದರ್ಭದಲ್ಲಿ ಪ್ರಶ್ನಿಸಬೇಕಿದೆ. ಮಂಡ್ಯದಿಂದ ಸ್ಪರ್ಧಿಸಿರುವ ಕಾಂಗೈ ವಿರೋಧಿ ಅಭ್ಯರ್ಥಿಗೆ ಕನ್ನಡ ಬಿಟ್ಟು ಬೇರೆ ಭಾಷೆ (ಸಂಸ್ಕೃತ) ತಿಳಿಯದಿದ್ದರೇನಂತೆ? ಅದೂ ಅಚ್ಚ ಕಸ್ತೂರಿ ಕನ್ನಡದಲ್ಲಿ ಮಾತನಾಡುವ ಕನ್ನಡದ ಕಟ್ಟಾಳೊಬ್ಬ ಲೋಕಸಭೆಯಲ್ಲಿ ರಾರಾಜಿಸಿದರೆ ಅದು ಕನ್ನಡಿಗರ- ಮಂಡ್ಯ ಜನತೆಯ ಸೌಭಾಗ್ಯ ಎಂದೇ ಭಾವಿಸಬೇಕಲ್ಲವೇ? ಅದರಲ್ಲಿಯೂ ರಾಜ್ಯದಿಂದ ಹತ್ತು ಭಾಷೆವುಳ್ಳ ಎಷ್ಟೋ ಜನ ಲೋಕಸಭೆಗೆ ಆರಿಸಿ ಹೋಗಿ ಕಡಿದು ಕಟ್ಟೆ ಹಾಕಿರುವುದಾದರೂ ಏನು? ರಾಜ್ಯದಿಂದ ಆಯ್ಕೆ ಆಗಿ ಹೋಗಿರುವ ಎಷ್ಟೋ ಜನ ರಾಜ್ಯದ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆಯೇ? ತೊಡೆ ತಟ್ಟಿ ಮಾತನಾಡಿದ್ದಾರೆಯೇ? ಕನ್ನಡಿಗರ ಹೆಮ್ಮೆಯ ಸಂಗತಿ ಎಂದರೆ ಅದು ರಾಜ್ಯದಿಂದ ಆಯ್ಕೆಯಾಗಿ ಹೋಗಿದ್ದ ಸದಸ್ಯರಲ್ಲಿ ದಿವಂಗತ ಜೆ.ಹೆಚ್. ಪಟೇಲ್ರಂತಹ ಒಂದಿಬ್ಬರು ಕನ್ನಡದಲ್ಲಿ ಮಾತನಾಡಿ ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದು ಕನ್ನಡದ ಪತಾಕೆಯನ್ನು ಹಾರಿಸಿದ್ದಾರೆ. ಇಂತಹ ಹೃದಯವಂತಿಕೆ ಜನ ಇಂದು ನಮ್ಮನ್ನು ಅಗಲಿದ್ದರೂ ಕೂಡ ಅಂತಹ ಮಹನೀಯರು ಕನ್ನಡ ಭಾಷೆಗೆ ಕೊಟ್ಟ ಅತ್ಯಂತ ಭಾವಪೂರ್ವಕ ಗೌರವ ಕನ್ನಡನಾಡು ಜನ ಎಂದಿಗೂ ಮರೆಯುವಂತಿಲ್ಲ. ಅವರು ಎಂದೆಂದಿಗೂ ಚಿರಸ್ಮರಣೀಯರು.ವಿಶ್ವದ ಎಷ್ಟೋ ದೇಶಗಳ ಅಧ್ಯಕ್ಷರಂತಹ ಪ್ರಮುಖರಿಗೆ ಅವರ ನೆಲೆಯ ಭಾಷೆ ಬಿಟ್ಟು ಇತರೆ ರಾಷ್ಟ್ರಗಳ ಭಾಷೆಯ ಜ್ಞಾನವೇ ಇರುವುದಿಲ್ಲ. ಹಾಗೆಂದರೆ ಆ ರಾಷ್ಟ್ರದ ಅಧ್ಯಕ್ಷರನ್ನು, ಸದಸ್ಯರನ್ನು ಆಯ್ಕೆ ಮಾಡಿರುವ ಅಲ್ಲಿಯ ಜನ ಸಿದ್ದರಾಮಯ್ಯನವರ ಪ್ರಕಾರ ಮೂರ್ಖರೇ? ಏನೇ ಆಗಲಿ ಲೋಕಸಭೆಯಲ್ಲಿ ಇಂಗ್ಲಿಷ್-ಹಿಂದಿ ಭಾಷೆ ಬರಲೇಬೇಕೆಂಬ ಕಡ್ಡಾಯವೇನೂ ಇಲ್ಲ. ಕನ್ನಡ ಭಾಷೆಯಲ್ಲಿಯೇ ಮಾತನಾಡಿದರೂ ಅದಕ್ಕೆ ತರ್ಜುಮೆದಾರರು (ಅನುವಾದಿಸುವವರು) ಇದ್ದೇ ಇರುತ್ತಾರೆ ಅಲ್ಲವೇ? ಹೀಗಿರಬೇಕಾದರೆ ಕೇವಲ ಕನ್ನಡ ಗೊತ್ತಿರುವ ವ್ಯಕ್ತಿ ಆರಿಸಿ ಹೋದರೆ ರಾಜ್ಯಕ್ಕಾಗುವ ನಷ್ಟವೇನು?
-ಶಿವಪ್ರಸಾದ್, ಬೆಂಗಳೂರು

ರಾಜಕೀಯ ವ್ಯಕ್ತಿಗಳಿಗೆ ನಿವೃತ್ತಿಯಿಲ್ಲವೇ?

ಯುವಜನತೆಯನ್ನು ರಾಜಕೀಯಕ್ಕೆ ಆಮಂತ್ರಿಸುವ ನೆಪವೊಡ್ಡಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಕೆಲವು ರಾಜಕೀಯ ವ್ಯಕ್ತಿಗಳ ಆಟಕ್ಕೆ ಯುವಜನತೆ ಸುಲಭದಲ್ಲಿ ಮರುಳಾಗುತ್ತಿದ್ದಾರೆ. 60-70 ವರ್ಷ ದಾಟಿದರೂ ಅಧಿಕಾರ ಬಿಡಲು ಸಿದ್ಧರಿಲ್ಲದ ರಾಜಕೀಯ ನಾಯಕರು ತತ್ವ ಸಿದ್ಧಾಂತ ಎನ್ನುತ್ತಾ ಕೋಮುವಾದಿ, ಭ್ರಷ್ಟಾಚಾರಿಗಳಿಗೆ ಮಣೆ ಹಾಕುತ್ತಿದ್ದಾರೆ. ರಾಜಕಾರಣಿಗಳಿಗೆ ಏನೂ ಗೊತ್ತಿಲ್ಲದಿದ್ದರೂ ಬಣ್ಣ ಬಣ್ಣದ ಮಾತುಗಳಿಗೇನೂ ಕಡಿಮೆಯಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಪಕ್ಷಗಳ ಹೆಸರಿನಲ್ಲಿ ಕಿತ್ತಾಟ ನಡೆಸುವುದು ಸರ್ವೇ ಸಾಮಾನ್ಯವಾಗಿದೆ. ಎಲ್ಲಾ ಉದ್ಯೋಗದಲ್ಲೂ ಅಧಿಕಾರಿಗಳಿಗೆ ನಿವೃತ್ತಿಯ ವಯಸ್ಸು ಅಂತ ಇದೆ. ಆದರೆ ರಾಜಕೀಯದಲ್ಲಿರುವ ವ್ಯಕ್ತಿಗೆ ಮಾತನಾಡಲು ಸಾಧ್ಯವಿಲ್ಲದಿದ್ದರೂ ಆತನಿಗೆ ನಿವೃತ್ತಿ ಎನ್ನುವ ಪದವೇ ಗೊತ್ತಿರುವುದಿಲ್ಲ. ರಾಜಕೀಯ ವ್ಯಕ್ತಿಗಳು ಅನಾರೋಗ್ಯದ ನೆಪವೊಡ್ಡಿ ದೇಶ ಸುತ್ತುವುದೇ ಕಾಯಕವಾಗಿದೆ. ಹಿರಿಯರು, ತಿಳಿದವರು ಕಿರಿಯರಿಂದೇನೂ ಸಾಧ್ಯವಿಲ್ಲ ಎನ್ನುವ ತರ್ಕವನ್ನು ಬದಲಿಸಬೇಕು. ವಿದ್ಯಾರ್ಥಿಗಳನ್ನು ರಾಜಕೀಯದ ಕಿತ್ತಾಟಕ್ಕೆ ಬಳಸುವ ಬದಲು, ಯುವಜನತೆಯನ್ನು ರಾಜಕೀಯ ಪದವಿಗೆ ಆದ್ಯತೆ ನೀಡಿ ಕರೆಯಬೇಕು.
-ಸುಮಯ್ಯ ವಿ.ಕೆ., ಪುತ್ತೂರು



ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.