ಸಂಹಿತೆಯ ಅವಧಿ ಸುದೀರ್ಘ ತುರ್ತು ಪರಿಸ್ಥಿತಿ ಆಗಬಾರದು
ಚುನಾವಣೆಯ ಸಮಯದಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಮತದಾರರ ಮನಸ್ಸನ್ನು ಆಕರ್ಷಿಸಲು, ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಕೊನೆಯ ನಿಮಿಷದ ನಿರ್ಧಾರಗಳನ್ನು ಪ್ರಕಟಿಸುವುದು, ಹಾಗೂ ಆಮಿಷಗಳನ್ನು ಒಡ್ಡುವುದನ್ನು ತಡೆಗಟ್ಟಲು ಆಚಾರ ಸಂಹಿತೆಯನ್ನು ಕೆಲವು ವರ್ಷಗಳ ಹಿಂದೆ ಸದುದ್ದೇಶದಿಂದ ಜಾರಿಗೆ ತರಲಾಯಿತು.
ಈ ಕ್ರಮದಿಂದ ಸರ್ಕಾರದ ಅಧಿಕಾರದ ಮೇಲೆ ನಿಯಂತ್ರಣ ಹೊಂದಿರುವ ಪಕ್ಷಕ್ಕೆ ಇತರ ಪಕ್ಷಗಳಿಗೆ ಇಲ್ಲದ ಅನುಕೂಲಗಳು ಲಭ್ಯವಾಗುವುದು ತಪ್ಪಬೇಕನ್ನುವುದೇ ಚುನಾವಣೆ ಆಯೋಗದ ಉದ್ದೇಶ.
ಅದಕ್ಕಾಗಿ ಚುನಾವಣೆಯ ಪ್ರಕಟಣೆ ಹೊರಬಿದ್ದ ಅನಂತರ ಮತದಾನ ಮುಗಿಯುವವರೆಗೂ ಜಾರಿಯಲ್ಲಿರುವಂತೆ ಆಚಾರ ಸಂಹಿತೆಯನ್ನು ರೂಪಿಸಿದ್ದರೂ, ಲೋಕಸಭೆ ಚುನಾವಣೆಯ ಸಮಯದಲ್ಲಿ, ಮೊದಲ ಚುನಾವಣೆಯ ಪ್ರಕಟಣೆ ಹಾಗೂ ಕಟ್ಟ ಕಡೆಯ ಮತದಾನದ ದಿನದ ನಡುವಣ ಅವಧಿಯಲ್ಲಿ ದೇಶದ ಎಲ್ಲ ಕಡೆ ಚುನಾವಣೆ ಆಚಾರ ಸಂಹಿತೆ ಜಾರಿಯಲ್ಲಿರುವ ಪದ್ಧತಿ ರೂಪಗೊಂಡಿತ್ತು. ಹಿಂದೆ, ಆಚಾರ ಸಂಹಿತೆಯ ಜಾರಿಯ ಅವಧಿ ಕೆಲವೇ ವಾರಗಳಿರುತ್ತಿದ್ದದ್ದು ನಿಜ. ಈಗ ತಿಂಗಳುಗಟ್ಟಲೆ ಆ ಸಂಹಿತೆ ಜಾರಿಯಲ್ಲಿರುತ್ತದೆ.
ವಾಸ್ತವದಲ್ಲಿ ಚುನಾವಣೆ ಕಾಲದ ಆಚಾರ ಸಂಹಿತೆಯ ಬಿಸಿ, ಸರ್ಕಾರಗಳಿಗೆ, ಪಕ್ಷಗಳಿಗೆ, ಅಭ್ಯರ್ಥಿಗಳಿಗೆ ನಿಜವಾಗಲೂ ತಟ್ಟಿದ್ದು ಟಿ.ಎನ್. ಶೇಷನ್ ಮುಖ್ಯ ಚುನಾವಣೆ ಆಯುಕ್ತರಾಗಿದ್ದ ಕಾಲದಲ್ಲಿ. ಈ ಬಾರಿ ಚುನಾವಣೆ ಆಯೋಗ ತನ್ನದೇ ಆದ ಕಾರಣಗಳಿಂದ ಚುನಾವಣೆ ಪ್ರಕ್ರಿಯೆಯ ಅವಧಿಯನ್ನು ಮಾರ್ಚ್ ಕೊನೆಯ ವಾರದಿಂದ ಮೇ ಮಧ್ಯಭಾಗದವರೆಗೂ ವಿಸ್ತರಿಸಿದೆ. ಇಷ್ಟು ದಿನವೂ ಆಚಾರ ಸಂಹಿತೆ ಜಾರಿಯಲ್ಲಿದ್ದರೆ, ಸರ್ಕಾರಕ್ಕೆ, ಮಂತ್ರಿಗಳಿಗೆ, ಅಧಿಕಾರಿಗಳಿಗೆ ಇರುವ ಕೆಲಸವಾದರೂ ಏನು? ಅನೇಕ ಅಧಿಕಾರಿಗಳಿಗೆ, ನಿರ್ಧಾರಗಳನ್ನು ಪ್ರಕಟಿಸುವುದೆಂದರೆ, ಇಕ್ಕಟ್ಟಿಗೆ ಸಿಕ್ಕಿದಂತೆಯೇ ಎನ್ನುವ ಭಾವನೆ ಇರುವುದರಿಂದ ಅಂತಹವರಿಗೆ ಆಚಾರ ಸಂಹಿತೆ ಕೆಲಸ ಮಾಡದೇ ಇರುವುದಕ್ಕೆ ಒಂದು ನೆಪ ಸಿಕ್ಕಿದಂತೆಯೇ ಆಗುತ್ತದೆ.
ಈಗಾಗಲೇ ಸರ್ಕಾರದಲ್ಲಿ ನೌಕರರ ವರ್ಗಾ-ವರ್ಗಿಯಂತಹ ವಿಚಾರಗಳಲ್ಲೂ ಹಿರಿಯ ಅಧಿಕಾರಿಗಳಿಗೆ ನಿಮಯಗಳಂತೆ ಇರುವ ಅಧಿಕಾರವನ್ನು ಚಲಾಯಿಸುವುದೂ ಅಸಾಧ್ಯವಾದಂತಹ ವಾತಾವರಣ ನಿರ್ಮಾಣವಾಗಿದೆ. ಮಂತ್ರಿಗಳ ಅನುಮತಿ ಇಲ್ಲದೇ ಅಧಿಕಾರಿಗಳು ಕೆಲಸ ಮಾಡುವ ಸ್ಥಿತಿಯಲ್ಲೇ ಇಲ್ಲ. ಇಂತಹ ಸ್ಥಿತಿಯಲ್ಲಿ ಆಚಾರ ಸಂಹಿತೆಯತ್ತ ಕೈ ತೋರಿಸಿ, ಸದ್ಯಕ್ಕೇನೂ ಮಾಡುವುದು ಅಸಾಧ್ಯ ಎನ್ನುವ ಮಾತು ಸರ್ಕಾರದಲ್ಲಿ ಕೇಳಿ ಬರುತ್ತಿದೆ.
ಗುಲ್ಬರ್ಗ ಸೀಮೆಯ ತೊಗರಿ ಬೆಳೆಗಾರರು, ಸುಮಾರು 20,000 ಮಂದಿ ಎಂದು ಅಂದಾಜು, ಬೆಲೆ ಕುಸಿತದಿಂದ ಕಂಗೆಟ್ಟು ಕನಿಷ್ಠ ಬೆಂಬಲ ಬೆಲೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಅದು ಇತ್ಯರ್ಥವಾಗಬೇಕಾದರೆ, ಮೇ ಹನ್ನೆರಡರವರೆಗೂ ಕಾಯಬೇಕೇನು?
ಶಿಕ್ಷಣ ವಲಯದಲ್ಲಿ ಏಪ್ರಿಲ್-ಮೇ, ಪ್ರಮುಖ ನಿರ್ಧಾರಗಳನ್ನು ಪ್ರಕಟಿಸುವ ಅವಧಿ. ಈ ಸಮಯದಲ್ಲೇ ಆಚಾರ ಸಂಹಿತೆ ಅಡ್ಡಿ ಬಂದರೆ ಹೇಗೆ? ಈ ಪರಿಸ್ಥಿತಿಯ ನಿವಾರಣೆಗೆ ಸರ್ಕಾರದ ಅತ್ಯುನ್ನತ ಮಟ್ಟದಲ್ಲೇ ಪ್ರಯತ್ನ ನಡೆಯಬೇಕು. ನಿಷ್ಪಕ್ಷಪಾತ, ನ್ಯಾಯವಾದ ಚುನಾವಣೆ ವ್ಯವಸ್ಥೆ ಜನಸಾಮಾನ್ಯರ ಪಾಲಿಗೆ ತುರ್ತು ಪರಿಸ್ಥಿತಿಯ ನೆನಪಾಗುವಂತಹ ವ್ಯವಸ್ಥೆಯಾಗಬಾರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

