ಸಂಪಾದಕೀಯ

ಕೆಲಸವಿಲ್ಲದ ಪ್ರಾಂಶುಪಾಲರುಗಳು

Published On :

ರಾಜ್ಯದ ಎಲ್ಲ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆಗಳಿವೆ. ವಿಪರ್ಯಾಸ ಎಂದರೆ ಅವರಿಗೆ ಪೂರ್ಣ ಪ್ರಮಾಣದ ಕೆಲಸವೇ ಇಲ್ಲ. ಕಾಲೇಜಿನ ವೇತನ ಸೆಳೆಯುವುದು, ವಿದ್ಯಾರ್ಥಿಗಳ ಪರೀಕ್ಷೆ ಕಟ್ಟಿಸುವುದು ಈ ಕೆಲಸವನ್ನು ಗುಮಾಸ್ತರೂ ಸೇರಿ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ಪ್ರೌಢಶಾಲೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು. ಈಗ ಪ್ರತ್ಯೇಕಗೊಳಿಸಿರುವುದರಿಂದ ಅದರ ಜವಾಬ್ದಾರಿ ಇಲ್ಲ. ಇನ್ನೂ ಆಶ್ಚರ್ಯ ಎಂದರೆ ಪ್ರಾಚಾರ್ಯರಿಗೆ ಬೋಧನಾ ಕೆಲಸವೂ ಇಲ್ಲದಿರುವುದು. ಪ್ರಾಂಶುಪಾಲರ ಬೋಧನಾ ವಿಷಯದ ಉಪನ್ಯಾಸಕರನ್ನು ಆ ಕಾಲೇಜಿಗೆ ನೇಮಿಸದಂತೆ ಇದ್ದ ನಿಯಮವನ್ನು ಪಾಲಿಸದೆ ಎಲ್ಲ ಕಾಲೇಜುಗಳಲ್ಲೂ ಪ್ರಾಂಶುಪಾಲರ ಬೋಧನಾ ವಿಷಯದ ಉಪನ್ಯಾಸಕರಿದ್ದಾರೆ. ರಾಜ್ಯದಲ್ಲಿ ಐವತ್ತು ವಿದ್ಯಾರ್ಥಿಗಳ ಸಂಖ್ಯೆ ದಾಟದ ನೂರಾರು ಕಾಲೇಜುಗಳಿವೆ. ಇಲ್ಲಿನ ಪ್ರಾಂಶುಪಾಲರಿಗೆ ಏನು ಕೆಲಸ? ಇಂತಹ ಕಾಲೇಜಿನ ಬಹಳಷ್ಟು ಪ್ರಾಂಶುಪಾಲರು ವಿಶ್ರಾಂತ ಜೀವನ ನಡೆಸಿ ಪೂರ್ಣ ವೇತನ ಪಡೆಯುತ್ತಿದ್ದಾರೆ.
ದಯವಿಟ್ಟು ಸರ್ಕಾರ ಇವರಿಗೆ ಈ ಹಿಂದೆ ಇದ್ದಂತೆ ಬೋಧನಾ ವಿಷಯದ ಜವಾಬ್ದಾರಿ ನೀಡಿ. ಉಪನ್ಯಾಸಕರ ಸಂಖ್ಯೆ ಹೆಚ್ಚಾದರೆ ಅರ್ಹ ವಿದ್ಯಾರ್ಹತೆ (ಎಂ.ಫಿಲ್, ಪಿ.ಹೆಚ್.ಡಿ., ಯು.ಜಿ.ಸಿ.) ಹೊಂದಿದ ಉಪನ್ಯಾಸಕರಿಗೆ ಪದವಿ ಕಾಲೇಜುಗಳಲ್ಲಿ ಬೇಡಿಕೆ ಇದ್ದು ಬಡ್ತಿ ನೀಡಿ. ಅಥವಾ ಪ್ರೌಢಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ಇಲ್ಲದ ಕಾರಣ ಅದರ ಜವಾಬ್ದಾರಿಯನ್ನಾದರೂ ಈ ಹಿಂದೆ ಇದ್ದಂತೆ ನೀಡಿ. ಸರ್ಕಾರ ಆರ್ಥಿಕ ಹೊರೆಯನ್ನು ತಪ್ಪಿಸಿ ವೇತನ ಮತ್ತು ಕೆಲಸ ಎರಡನ್ನೂ ನೀಡಲಿ. ಘನ ಸರ್ಕಾರ ಸೋಮಾರಿಗಳಾಗುತ್ತಿರುವ ಪ್ರಾಂಶುಪಾಲರುಗಳಿಗೆ ಕೆಲಸ ನೀಡಲಿ.
-ಕೋಟ್ರೇಶ್, ದಾವಣಗೆರೆ

ಲ್ಯಾಪ್ ಟಾಪ್ ಪ್ರತಿಷ್ಠೆ ಬೇಕೆ?
ಪ.ಪೂ. ಕಾಲೇಜುಗಳಲ್ಲಿ (ಅದರಲ್ಲೂ ಮುಖ್ಯವಾಗಿ ಸ.ಪ.ಪೂ. ಕಾ.ಲ್ಲಿ) ವಿದ್ಯಾರ್ಥಿಗಳು ಸರಿಯಾಗಿ ಕಾಲೇಜಿಗೆ ಬರುವುದಿಲ್ಲ, ಬಂದರೂ ಓದುವುದಿಲ್ಲ-ಬರೆಯುವುದಿಲ್ಲ, ಯಾವ ಕೆಲಸವನ್ನೂ (ಹೋಂ ವರ್ಕ್, ಟೆಸ್ಟ್...) ನಿಷ್ಠೆಯಿಂದ ಮಾಡುವುದಿಲ್ಲ. ಕೆಲವರಂತೂ ದುಶ್ಚಟಗಳಿಗೆ ಬಲಿಯಾಗಿ ಗುಂಪುಗೂಡಿ ಕಾಲೇಜಿನಲ್ಲಿಯೇ ಅಲೆಯುತ್ತಿರುತ್ತಾರೆ. ಹಾಜರಾತಿ ಶೇ.75 ಇರಬೇಕೆಂಬ ಸರ್ಕಾರದ ನಿಯಮವಿದ್ದರೂ ಕೆಲವರು ನಿರ್ಭಯವಾಗಿ ತರಗತಿಗೆ ವರ್ಷಪೂರ್ತಿ ಗೈರು ಹಾಜರಾಗಿ ಪರೀಕ್ಷೆಗೆ ಹಾಜರಾಗುತ್ತಾರೆ.
ಫೋನ್ ಬಳಸಬಾರದೆಂಬ ಸರ್ಕಾರದ ಇನ್ನೊಂದು ಆದೇಶವಿದ್ದರೂ ತರಗತಿಯ ಒಳಗೂ ಹೊರಗೂ ಯಾರ ಭಯವೂ ಇಲ್ಲದೆ ವಿವಿಧ ಅಶ್ಲೀಲ ವರ್ತನೆಗಳಲ್ಲಿ ತೊಡಗಿಕೊಂಡು ಪ್ರಾಮಾಣಿಕ ವಿದ್ಯಾರ್ಥಿಗಳಿಗೆ-ಉಪನ್ಯಾಸಕರಿಗೆ ಮಾನಸಿಕವಾಗಿ ಹಿಂಸೆ ಕೊಡುತ್ತಾ ರಾಜಾರೋಷವಾಗಿ ಓಡಾಡುತ್ತಿರುತ್ತಾರೆ. ಆದ್ದರಿಂದ ಸರ್ಕಾರಕ್ಕೆ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕೆಂಬ ಮನಸ್ಸಿದ್ದರೆ ಮೊದಲು ಕಾನೂನುಗಳನ್ನು ಗಟ್ಟಿಗೊಳಿಸಿ-ಚಲಾಯಿಸಿ ಕಾಲೇಜಿಗೆ ಸೇರಿದ ಎಲ್ಲಾ ವಿದ್ಯಾರ್ಥಿಗಳು ನಿಯಮದಂತೆ ನಡೆದುಕೊಂಡು ಚೆನ್ನಾಗಿ ಓದಿ ಉನ್ನತ-ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕೆಂದು ಕ್ರಮ ಕೈಗೊಳ್ಳಲಿ. ಎಲ್ಲರಿಗೂ ಕೊಡುವ ಬದಲು ಕಷ್ಟಪಟ್ಟು ಪ್ರಾಮಾಣಿಕವಾಗಿ ಓದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ಕೊಟ್ಟರೆ, ಉಳಿದ ಎಲ್ಲಾ ವಿದ್ಯಾರ್ಥಿಗಳೂ ಉತ್ಸಾಹದಿಂದ ಓದುತ್ತಾರೆ ಎನ್ನಬಹುದು. ಯಾವುದೇ ಯೋಜನೆಗೂ ದೂರಾಲೋಚನೆ ಬಹಳ ಮುಖ್ಯ. ಮೊದಲು ಅತ್ಯಗತ್ಯವಾದ ಮೂಲಭೂತ ಆವಶ್ಯಕತೆಗಳನ್ನು ಪೂರೈಸಿ. ಈಗಾಗಲೇ ಹಲವಾರು ಯೋಜನೆಗಳು ಅಸ್ತಿತ್ವದಲ್ಲಿದ್ದು ಅವುಗಳು ಎಷ್ಟರಮಟ್ಟಿಗೆ ಫಲ ನೀಡಿವೆ ಎಂಬುದನ್ನು  ವಿಮರ್ಶಿಸಬೇಕು.
-ಚಿಕ್ಕಣ್ಣ, ಕೊರಟಗೆರೆ


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.