ದೃಢವಾಗಬೇಕಿದೆ ಬ್ಯಾಂಕ್ ನೌಕರರ ಸಂಘ
"ಬ್ಯಾಂಕ್ ನೌಕರರ ಹೋರಾಟ ಸೌಲಭ್ಯಕ್ಕೋ ಅಥವಾ ನೌಕರರ ಸಂಘಗಳ ಅಸ್ತಿತ್ವಕ್ಕೋ?" (ಕ.ಪ್ರ. 20.2.2014) ಎಂಬ ರಮಾನಂದ ಶರ್ಮರವರ ಲೇಖನದಲ್ಲಿ ಸಾರ್ವಜನಿಕ ಬ್ಯಾಂಕಿನ ನೌಕರರ ಬವಣೆಗಳನ್ನು ಸರಿಯಾಗಿ ವಿಶ್ಲೇಷಿಸಲಾಗಿದೆ. ನಿರಂತರ ವರ್ಗಾವರ್ಗಿಯಿಂದ ಕೌಟುಂಬಿಕ ಜೀವನಕ್ಕೆ ತಿಲಾಂಜಲಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಅನುಭವಿಸುತ್ತಲೇ ಹಳ್ಳಿಗಾಡಿನಲ್ಲಿ ಬ್ಯಾಂಕ್ ನೌಕರಿ ಮಾಡಬೇಕಾದ ಅನಿವಾರ್ಯತೆ, ಜತೆಗೆ ಯಾರೋ ಮಾಡಿದ ಫ್ರಾಡ್ಗಳಿಂದ ಇನ್ಯಾರೋ ಅಮಾಯಕರು ಕೆಲಸ ಕಳೆದುಕೊಂಡು ಬೀದಿಗೆ ಬೀಳುವ ನೂರಾರು ಬ್ಯಾಂಕ್ ನೌಕರರು. ಈಗಿನ ತರುಣರಿಗೆ ಬೇಡವಾದ ಕಡಿಮೆ ಸಂಬಳದ ಬ್ಯಾಂಕ್ ನೌಕರಿ. ಹಾಗಾಗಿ ಅನಾರೋಗ್ಯದಿಂದ ಬಳಲುವ ಹಿರಿಯ ನೌಕರರಿಂದಲೇ ತುಂಬಿರುವ ಬ್ಯಾಂಕ್ ಶಾಖೆಗಳು. ಇಷ್ಟಾಗಿಯೂ ಬ್ಯಾಂಕುಗಳಲ್ಲಿ 38 ವರ್ಷ ಸುಸೂತ್ರ ಸರ್ವೀಸ್ ಮಾಡಿ ಕ್ಷೇಮವಾಗಿ ನಿವೃತ್ತಿಯಾದರೂ ನಿವೃತ್ತಿ ಸೌಲಭ್ಯದ ಹಣ ಪಡೆಯಲು ನೌಕರರು ಐದಾರು ತಿಂಗಳು ಕಾಯಬೇಕು. ಕಾರಣ ಬ್ಯಾಂಕುಗಳು 1969ರಲ್ಲಿ ರಾಷ್ಟ್ರೀಕರಣವಾದ ತಕ್ಷಣ 1970-80ರ ದಶಕಗಳಲ್ಲಿ ಬಿಹಾರ, ಉತ್ತರಪ್ರದೇಶ, ಜಾರ್ಖಂಡ್ ಮುಂತಾದ ಹಿಂದುಳಿದ ರಾಜ್ಯಗಳಲ್ಲಿ ಬೇಕಾಬಿಟ್ಟಿ ಶಾಖೆಗಳನ್ನು ತೆರೆದ ಬ್ಯಾಂಕುಗಳಲ್ಲಿ ಆಗ ಸಾವಿರಾರು ಸಂಖ್ಯೆಯಲ್ಲಿ ಹೊಸ ನೌಕರರನ್ನು ಸಹಾ ನೇಮಿಸಿಕೊಳ್ಳಲಾಗಿತ್ತು. ಈಗ 40ವರ್ಷಗಳ ನಂತರ ಆಗಿನವರೆಲ್ಲ ನಿವೃತ್ತಿ ವಯಸ್ಸನ್ನು ಒಟ್ಟಿಗೆ ತಲುಪಿದ್ದು,
ಕೆಲವು ಹಳೆಯ ಬ್ಯಾಂಕುಗಳಲ್ಲಿ ಪ್ರತಿ ತಿಂಗಳು 200-250 ಹಳೆಯ ನೌಕರರು ನಿವೃತ್ತಿಯಾಗುತ್ತಿದ್ದು, ಒಬ್ಬನಿಗೆ ಸರಾಸರಿ 20 ಲಕ್ಷದಂತೆ ಅವರ ನಿವೃತ್ತಿ ಸೌಲಭ್ಯಗಳಿಗಾಗಿ ಪ್ರತಿ ತಿಂಗಳು 40-50 ಕೋಟಿಯಷ್ಟು ಹಣ ಬ್ಯಾಂಕಿನ ನಿಧಿಯಿಂದ ಹೊರ ಹರಿಯುತ್ತಿದೆ. ನಷ್ಟದಲ್ಲಿರುವ ಬ್ಯಾಂಕುಗಳೂ ಇಷ್ಟು ಹಣ ಪ್ರತಿ ತಿಂಗಳು ಹೊಂದಿಸಲಾಗದೇ ನಿವೃತ್ತಿಯಾದವರಿಗೆ ಆರು ತಿಂಗಳ ನಂತರ ನಿವೃತ್ತಿ ಸೌಲಭ್ಯ ಬಿಡುಗಡೆ ಮಾಡುವಂತಹ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ನನ್ನ ಅಣ್ಣ 38 ವರ್ಷ ಮುಂಬೈ ಮೂಲದ ಸೆಂಟ್ರಲ್ ಬ್ಯಾಂಕಿನಲ್ಲಿ ಕೆಲಸ ಮಾಡಿ ನಿವೃತ್ತಿಯಾದ ನಂತರ ಅವರ ನಿವೃತ್ತಿ ಸೌಲಭ್ಯದ ಹಣ ಪಡೆಯಲು ಆರು ತಿಂಗಳು ಚಪ್ಪಲಿ ಸವೆಸಬೇಕಾಯಿತು. ಆದರೆ ನನ್ನ ಇನ್ನೊಬ್ಬ ಸಂಬಂಧಿ ಕರ್ನಾಟಕ ಮೂಲದ ಬ್ಯಾಂಕಿನಿಂದ ನಿವೃತ್ತಿಯಾದ ಮರುದಿನವೇ ಎಲ್ಲಾ ನಿವೃತ್ತಿ ಸೌಲಭ್ಯದ ಪೂರ್ತಿ ಹಣ ಅವನ ಕೈಗೆ ಬಂದಿತ್ತು. ಸಾರ್ವಜನಿಕ ಬ್ಯಾಂಕುಗಳಲ್ಲೇ ನೌಕರರಿಗೆ ಸಿಗುವ ಸೌಲಭ್ಯಗಳಲ್ಲಿ ಇಷ್ಟೊಂದು ದೊಡ್ಡ ವ್ಯತ್ಯಾಸಗಳಿರುವಾಗ, ಬ್ಯಾಂಕ್ ನೌಕರರ ಸಂಘಟನೆಗಳು ದುರ್ಬಲವಾಗಿ ಅಸ್ತಿತ್ವ ಕಳೆದುಕೊಂಡರೆ, ಮ್ಯಾನೇಜ್ಮೆಂಟ್ನಿಂದ ನೌಕರರಿಗೆ ನ್ಯಾಯ ಸಿಗಲು ಸಾಧ್ಯವೇ ಇಲ್ಲ.
-ಪ್ರಶೀಶ್ ಕುಮಾರ್. ಎಸ್, ಬೆಂಗಳೂರು
ಬೇಕಾಬಿಟ್ಟಿ ಆಶ್ವಾಸನೆಗಳಿಗೆ ಬ್ರೇಕ್
ಚುನಾವಣಾ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ನೀಡುವ ಬೇಕಾಬಿಟ್ಟಿ ಆಶ್ವಾಸನೆಗಳಿಗೆ ಚುನಾವಣಾ ಆಯೋಗ ಅಂಕುಶ ಹಾಕಿರುವುದು ಸ್ವಾಗತಾರ್ಹವಾಗಿದೆ.
ಮತದಾರರಿಗೆ ದೊಡ್ಡ ದೊಡ್ಡ ಆಶ್ವಾಸನೆಗಳನ್ನು ನೀಡಿ ಅವರಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ವಿವಿಧ ರಾಜಕೀಯ ಪಕ್ಷಗಳು ಈಗಾಗಲೇ ಮಾಡುತ್ತಿವೆ. ಇಂತಹ ಆಶ್ವಾಸನೆಗಳನ್ನು ನೀಡುವಾಗ ಅದರ ಈಡೇರಿಕೆ, ಹಣ ಒದಗಿಸುವ ಮಾರ್ಗೋಪಾಯಗಳೇನು ಎಂಬ ವಿವರಣೆಯನ್ನು ಚುನಾವಣೆಗೂ ಮುನ್ನ ಪಕ್ಷಗಳು ನೀಡಬೇಕು ಎಂಬ ಚುನಾವಣಾ ಆಯೋಗದ ಸೂಚನೆ ಸರಿಯಾದುದೇ ಆಗಿದೆ. ಇದು ಮತದಾರರ ಆಶಯ ಕೂಡಾ ಆಗಿತ್ತು. ಇದರಿಂದ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡುವ ಅಂಕೆ ಮೀರಿದ ಟೊಳ್ಳು ಹಾಗೂ ಬೇಕಾಬಿಟ್ಟಿ ಆಶ್ವಾಸನೆಗಳಿಗೆ ಕಡಿವಾಣ ಬಿದ್ದಂತಾಗುತ್ತದೆ. ಹೀಗಾಗಿ ಭೇಷ್ ಚುನಾವಣಾ ಆಯೋಗ!
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ (ಮಂಡ್ಯ)
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

