ಚರ್ಚೆ ಕಳೆಗುಂದಿರುವುದು ನಿಜ
ಪಿ. ತ್ಯಾಗರಾಜ್ ಅವರ ಲೇಖನ 'ವ್ಯಕ್ತಿಗತ ರಾಗ -ದ್ವೇಷಕ್ಕೆ ಶಾಸನ ಸಭೆ ಬಳಕೆ ಸರಿಯೇ?' (ಕ.ಪ್ರ. 24/2) ವಾಸ್ತವಿಕತೆಗೆ ಹಿಡಿದಿಟ್ಟ ಕನ್ನಡಿಯಂತಿದೆ. ಇಂದು, ಶಾಸನಸಭೆಯಲ್ಲಿ ನಡೆಯುವ ಕಲಾಪಗಳನ್ನು ವೀಕ್ಷಿಸಿದರೆ ಅದೊಂದು ನೌಟಂಕಿಯಂತೆ ಅನಿಸುವುದುಂಟು. ಏನೋ ಸಮಯ ಕಳೆಯಲು ಒಂದಿಷ್ಟು ಜೋಕನ್ನೋ, ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ತಾನೊಬ್ಬ ಸೊಬಗ ಎಂಬಂತೆ ನಟಿಸುವವರ ಸಂಖ್ಯೆಯೇ ಹೆಚ್ಚು. ಕೆಲವೊಮ್ಮೆಯಂತೂ ಅದೊಂದು ಸೌಂದರ್ಯ ಪ್ರದರ್ಶನ ವೇದಿಕೆ ಅಂತಲೋ ಅನಿಸಿದ್ದು ಉಂಟು! ಯಾವೊಂದು ವಿಷಯದ ಮೇಲೂ ಗಾಂಭೀರ್ಯತೆ ಅನ್ನುವುದೇ ಇಂದು ಆಳುವ ಹಾಗೂ ಪ್ರತಿಪಕ್ಷಗಳ ನಡುವೆ ನಡೆಯುವ ಆರೋಪ- ಪ್ರತ್ಯಾರೋಪ, ಮೂದಲಿಕೆ-ಪ್ರತಿ ಮೂದಲಿಕೆ, ಕೆಸರೆರೆಚಾಟ ಇವುಗಳನ್ನೆಲ್ಲ ನೋಡಿದರೆ ಇಲ್ಲಿ ಕೂಡಿರುವುದು ಕೆಲವು ವೈಯಕ್ತಿಕ ಪ್ರತಿಷ್ಠೆಯನ್ನು ಈಡೇರಿಸಿಕೊಳ್ಳುವ ಹಂಬಲವೆಂಬುದನ್ನು ಬಿಟ್ಟರೆ ಯಾವೊಂದು ಸಮಸ್ಯೆಯ ಗಂಭೀರವಾದ ಚಿಂತನ-ಮಂಥನದ ಆಸಕ್ತಿಯೇ ನಮ್ಮ ಪ್ರತಿನಿಧಿಗಳಲ್ಲಿ ಇದ್ದಂತೆ ಅನಿಸುವುದಿಲ್ಲ. ಇವರೆಲ್ಲ ಒಂದು ನಾಟಕದ ಪಾತ್ರಧಾರಿಗಳಂತೆಯೂ, ತಮ್ಮ ತಮ್ಮ ಪಾತ್ರಗಳನ್ನು ತಮಗನುಕೂಲವಾಗುವ ರೀತಿಯಲ್ಲಿ ನಿಭಾಯಿಸಿ ವಾಸ್ತವದಲ್ಲಿ ಏನೋ ನಡೆಯಲೇ ಇಲ್ಲ ಎಂಬಂತೆ ನಿರ್ಲಿಪ್ತ ಭಾವದಿಂದ ಸದನದ ಹೊರಬರುವುದು ಸಾಮಾನ್ಯ. ಇದೊಂದು ರೀತಿಯ ಕೃತ್ರಿಮತೆಯ ಬೀಡು ಅಂತೆಲ್ಲ ಅನಿಸುವುದುಂಟು. ಕಾಟಾಚಾರಕ್ಕೇ ಒಂದಿಷ್ಟು ವಿಷಯಗಳ ಪ್ರಸ್ತಾವ ನಡೆದು, ಏನೋ ದಂಟು ಕಡಿದವರಂತೆ ನಟಿಸುವುದೂ ಸಾಮಾನ್ಯ. ಲೇಖಕರೆಂದಂತೆ ಇದೊಂದು ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಒದಗಿಸಿರುವ ವೇದಿಕೆಯಾಗಿಯೂ ಪರಿವರ್ತಿತವಾಗುತ್ತದೆ. ಇಷ್ಟೆಲ್ಲ ನಡೆದು ಸದನದ ಹೊರಬಂದ ಮೇಲೆ ಪಕ್ಷಭೇದ ಮರೆತು ಒಬ್ಬರ ಹೆಗಲ ಮೇಲೆ ಇನ್ನೊಬ್ಬರು ಕೈ ಇಟ್ಟು ನಗುತ್ತಾ ಕುಶಲೋಪರಿ ವಿಚಾರಿಸುವುದನ್ನು ಗಮನಿಸಿದರೆ, ಸದನದಲ್ಲಿ ನಡೆದದ್ದೆಲ್ಲ ನಾಡಿನ ಜನರನ್ನು ಮೂರ್ಖರನ್ನಾಗಿಸುವ ವ್ಯವಸ್ಥಿತ ಪದ್ಧತಿ ಅಂತ ಅನಿಸದೇ ಇರದು. ಲೇಖಕರು ಅಂದಂತೆ ಹಿರಿಯರ 'ಕತೆ' ಹೀಗಾದರೆ, ಕಿರಿಯರ 'ಕವನ' ಇನ್ನೂ ವಿಚಿತ್ರ. ಏನೋ ತಾನೂ ಒಂದು ಪ್ರಶ್ನೆ ಕೇಳಬೇಕೆಂಬ ಹುಮ್ಮಸ್ಸಿನಿಂದ ಪ್ರಶ್ನೆಯೇನನ್ನೋ ತೂರಿಬಿಡುತ್ತಾರೆ. ಆದರೆ ಅದಕ್ಕೆ ತಕ್ಕ ಚರ್ಚೆಗೆ ಅವಕಾಶವನ್ನೇ ಕಲ್ಪಿಸದೆ ತಮ್ಮಷ್ಟಕ್ಕೆ ತಾವು ಉಳಿದು ಕರ್ತವ್ಯ ಪರಿಪಾಲನೆಯ ನೆಪ ಮುಗಿಸುತ್ತಾರೆ.
ನಮ್ಮ ಪ್ರತಿನಿಧಿಗಳಿಂದ ಒಂದು ಅರ್ಥವತ್ತಾದ ಚರ್ಚೆ, ಸಂಭಾಷಣೆ, ಸಮಸ್ಯೆಗಳ ಕೂಲಂಕಷ ವಿಚಾರ ಹಾಗೂ ಪರಿಹಾರಗಳನ್ನು ಎಂದು ಕಾಣಬಹುದು ಎಂಬುದೇ ಬಹುದೊಡ್ಡ ಚರ್ಚೆಯ ವಿಷಯ!
-ಶಂಕರನಾರಾಯಣ ಭಟ್, ಹೊನ್ನಾವರ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

