ಕಿಡಿ ಶೇಷಪ್ಪನವರ ಪತ್ರಿಕಾ ಧರ್ಮ
ಪತ್ರಿಕೆಗಳನ್ನು ನಡೆಸುವುದು, ಇಂದಿಗೂ ಎಂದಿಗೂ ಒಂದು ಸವಾಲೇ ಸರಿ. ಪತ್ರಿಕಾ ಕ್ಷೇತ್ರದಲ್ಲಿರುವ ಸ್ಪರ್ಧೆ, ಅಧಿಕಾರದಲ್ಲಿರುವ ವ್ಯಕ್ತಿಗಳ ಒತ್ತಡ, ಏರುತ್ತಿರುವ ವೆಚ್ಚ ಇವೆಲ್ಲವುಗಳೂ ಪತ್ರಿಕಾ ಕ್ಷೇತ್ರವನ್ನು ಕಾಡುತ್ತಿರುವ ಸಮಸ್ಯೆಗಳು. ಇಂತಹ ಸಮಸ್ಯೆಗಳನ್ನು ಮೆಟ್ಟಿನಿಂತು ಪತ್ರಿಕೆಯನ್ನು ಬೆಳೆಸಿದ ವ್ಯಕ್ತಿಗಳಲ್ಲಿ ಶೇಷಪ್ಪನವರೂ ಒಬ್ಬರು. ಶೇಷಪ್ಪನವರು ತಮ್ಮ ಪತ್ರಿಕೆ "ಕಿಡಿ"ಯಿಂದಾಗಿ ಕಿಡಿ ಶೇಷಪ್ಪನವರಾಗಿ ಪ್ರಸಿದ್ಧರಾದರು. ಅವರ ಬರವಣಿಗೆಯ ಮೊನಚಿಗೆ ಸಿಕ್ಕು ತರಗೆಲೆಯಂತಾದವರೆಷ್ಟೋ ಜನ. ಶೇಷಪ್ಪನವರ ಹೆಸರು ಕೇಳಿದರೇ ಬೆಚ್ಚಿ ಬೀಳುವಂತಾಗಿದ್ದರು. ಹಾಗಿತ್ತು ಅವರ ಬರವಣಿಗೆಯ ಶೈಲಿ. ಸುದ್ದಿಯ ಬೆನ್ನುಹಿತ್ತಿ ಅವರು ಸಂಗ್ರಹಿಸುತ್ತಿದ್ದ ವಿವರಗಳು ಅವರ ಲೇಖನಿಯ ಮೊನಚಿಗೆ ಸಿಕ್ಕಿತೆಂದರೆ ಮುಗಿಯಿತು. ಭ್ರಷ್ಟಾಚಾರ, ಅಧಿಕಾರ ದುರ್ಬಳಕೆ, ಸರ್ಕಾರದ ನಿಧಾನ ಗತಿ, ರಾಜಕಾರಣಿಗಳ ನಿಶ್ಚೇಷ್ಟತೆಯ ಬಗ್ಗೆ ಬರೆಯುತ್ತಿದ್ದ ಲೇಖನಗಳನ್ನು ಜನ ತುಂಬಾ ಆಸ್ಥೆಯಿಂದ ಓದುತ್ತಿದ್ದರು. ಪ್ರಸಿದ್ಧ ವ್ಯಂಗಚಿತ್ರಕಾರ ಬಿ.ವಿ.ರಾಮಮೂರ್ತಿಯವರನ್ನು ಪತ್ರಿಕಾ ರಂಗಕ್ಕೆ ಪರಿಚಯಿಸಿದವರು ಶೇಷಪ್ಪನವರು. 'ಕಿಡಿ' ರಾಜಕಾರಣಿಗಳ ವಿರುದ್ಧ, ಆಡಳಿತದ ಲೋಪದೋಷದ ವಿರುದ್ಧ ಸಿಡಿದೆದ್ದ ಧ್ವನಿಯಾಗಿತ್ತು. ಎಲ್ಲ ರಾಜಕಾರಣಿಗಳೂ ತಮ್ಮ ವಿರುದ್ಧದ ಲೇಖನ ಆ ಪತ್ರಿಕೆಯಲ್ಲಿ ಬರದಿರಲಿ ಎಂದು ಹಂಬಲಿಸುತ್ತಿದ್ದರು. ಆದರೆ ಶೇಷಪ್ಪನವರು ತಮ್ಮ ಪತ್ರಿಕೆಯನ್ನು ನಡೆಸಲಾಗಲೀ, ವೈಯಕ್ತಿಕ ಲಾಭಕ್ಕಾಗಲೀ ಪತ್ರಿಕೆಯನ್ನು ಬಳಸಿಕೊಳ್ಳುತ್ತಿರಲಿಲ್ಲ. ಹಣ ಗಳಿಕೆಗಾಗಿ ಬರೆಯುವ ಪ್ರವೃತ್ತಿ ಅವರದ್ದಾಗಿರಲಿಲ್ಲ. ಹಣ ಕೊಟ್ಟು ಅವರ ಬಾಯಿ ಮುಚ್ಚಿಸಲೆತ್ನಿಸಿದರೆ ಅವರ ಲೇಖನಿ ಇನ್ನೂ ಹರಿತವಾಗುತ್ತಿತ್ತು. ಹೀಗಾಗಿ ಶೇಷಪ್ಪನವರನ್ನು ಮಾತನಾಡಿಸಲು ಯೋಚಿಸಬೇಕಾಗಿತ್ತು. ಅವರ ಪತ್ರಿಕೆ ಶುದ್ಧ ಪತ್ರಿಕಾಧರ್ಮವನ್ನು ಅನುಸರಿಸುತ್ತಿದ್ದುದರಿಂದ ಜನ ಅದನ್ನು ಕೊಂಡು ಓದುತ್ತಿದ್ದರು. ಒಮ್ಮೆ ಐವತ್ತರ ದಶಕದಲ್ಲಿ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರೇ ಸ್ವತಃ ಶೇಷಪ್ಪನವರ ಬಳಿ ಬಂದು "ಟೀಕಿಸಿ ಬರೆಯಬೇಡಿ, ಏನು ಬೇಕಾದರೂ ನೀಡಬಲ್ಲೆ. ಇಚ್ಛಿಸಿದ್ದನ್ನು ಪಡೆಯಿರಿ" ಎಂದು ಯಾಚಿಸಿದ್ದರಂತೆ. ಅದಕ್ಕೆ ಶೇಷಪ್ಪನವರು ಹೇಳಿದ ಉತ್ತರ ನಿಜಕ್ಕೂ ಅವರ ಸಾಮಾಜಿಕ ಕಳಕಳಿಯ ದ್ಯೋತಕವಾಗಿತ್ತು. "ನನಗೇನೂ ಬೇಕಾಗಿಲ್ಲ. ನಿಮ್ಮನ್ನು ಟೀಕಿಸುವುದರ ಹಿಂದೆ ವೈಯಕ್ತಿಕವಾದುದೇನೂ ಇಲ್ಲ. ಆಡಳಿತ ಯಂತ್ರ ಚುರುಕುಗೊಳಿಸಿ" ಎಂದು ಹೇಳಿ ಕಳುಹಿಸಿದರು. ಇಂತಹ ಅದೆಷ್ಟೋ ಉದಾಹರಣೆಗಳು ಅವರ ಜೀವನದಲ್ಲಿ ಕಾಣಿಸುತ್ತವೆ. ಆದರೆ ಅವರೆಂದೂ ಅನ್ಯಾಯದ ಹಣಕ್ಕೆ, ವೈಯಕ್ತಿಕ ಲಾಭಕ್ಕೆ ಪತ್ರಿಕೆಯನ್ನು ನಡೆಸಲಿಲ್ಲ. ಅವರದ್ದು ಪತ್ರಿಕಾ ಲೋಕದಲ್ಲಿ ಪರಿಶುದ್ಧ ನಡವಳಿಕೆ. ಅವರ ಹೆಸರಿನಲ್ಲಿ ಪ್ರತಿವರ್ಷ ಪತ್ರಕರ್ತರಿಗೆ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

