ಸಂಪಾದಕೀಯ

ಕಲ್ಲಿದ್ದಲ ಗಣಿ ಗುತ್ತಿಗೆ ತಪ್ಪಾಗಿದೆ ತಿದ್ಕೋಬೇಕು

Published On :

ಕಳೆದ ಎರಡು ದಶಕಗಳಿಂದಲೂ ಹಗರಣದ ಹಣೆ ಪಟ್ಟಿಯನ್ನು ಅಂಟಿಸಿಕೊಂಡು, ಟೀಕೆ, ತನಿಖೆಗೆ ಒಳಪಟ್ಟಿರುವ ಕಲ್ಲಿದ್ದಲ ಗಣಿಗಳ ಗುತ್ತಿಗೆ ನೀಡಿಕೆ ವಿಚಾರದಲ್ಲಿ ಎಲ್ಲೋ ತಪ್ಪಾಗಿದೆ ನಿಜ ಎಂದು ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಗುಲಾಂ ಇ ವಾಹನ್ವತಿ ಗುರುವಾರ, ಸುಪ್ರೀಮ್ ಕೋರ್ಟಿನ ಮೂವರು ನ್ಯಾಯಮೂರ್ತಿಗಳ ಪೀಠದ ಮುಂದೆ ಒಪ್ಪಿಕೊಂಡಾಗ, ಆ ವ್ಯವಹಾರದ ಹೊಸ ಆಯಾಮವೇ ಪರಿಚಯವಾಗಿದೆ. ಇದುವರೆಗೂ ಕೇಂದ್ರ ಸರ್ಕಾರದ ವಕ್ತಾರರು ಕಲ್ಲಿದ್ದಲ ಗಣಿಗಳ ಹಗರಣದಲ್ಲಿನ ತಪ್ಪಿನ ಒಂದು ಭಾಗವನ್ನು ರಾಜ್ಯ ಸರ್ಕಾರಗಳ ಮೇಲೆ ಹಾಕಲು ಪ್ರಯತ್ನಿಸಿದ್ದು ನಿಜ. ಆದರೆ ಕೆಲವು ಕಾಂಗ್ರೆಸ್ ಸರ್ಕಾರಗಳೂ ಸೇರಿದಂತೆ, ಕಲ್ಲಿದ್ದಲ ಗಣಿಗಳನ್ನು ಹೊಂದಿರುವ ಎಲ್ಲ ರಾಜ್ಯಗಳ ಸರ್ಕಾರಗಳೂ, ಈ ವಿಚಾರದಲ್ಲಿ ಎಲ್ಲ ಜವಾಬ್ದಾರಿಯೂ ಕೇಂದ್ರ ಸರ್ಕಾರದ್ದೇ ಎನ್ನುವ ಪ್ರಮಾಣ ಪತ್ರಗಳನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ತಪ್ಪೊಪ್ಪಿಗೆ ಬಿಟ್ಟು ಬೇರೆ ದಾರಿಯೇ ಇರಲಿಲ್ಲ.
ಈಗಿನ ಎಲ್ಲ ಲೈಸೆನ್ಸ್‌ಗಳನ್ನೂ ದಿಢೀರನೆ ರದ್ದುಪಡಿಸಿ ಹೊಸ ವ್ಯವಸ್ಥೆಯನ್ನೇಕೆ ಮಾಡಬಾರದು ಎನ್ನುವ ಪ್ರಶ್ನೆ ಎದುರಾದಾಗ, ಸರ್ಕಾರದ ವಕೀಲರು, ಆ ವಿಚಾರದಲ್ಲಿ ಸರ್ಕಾರದ ನಿಲವನ್ನು ಮುಂದಿನ ವಾರ ತಿಳಿಸುವುದಾಗಿ ಹೇಳಿದ್ದು ನಿಜಕ್ಕೂ ಗಂಭೀರವಾದ ಪರಿಸ್ಥಿತಿಯನ್ನೇ ಸೃಷ್ಟಿಸಿದೆ. ಇನ್ನು ಈ ವಿವಾದ ತೂಗುಯ್ಯಾಲೆಯಲ್ಲೇ ಇದೆ. ಸರ್ಕಾರದ ವಕ್ತಾರರು ಒಪ್ಪಿಕೊಂಡಿರುವುದು ಎಲ್ಲೋ ಅಚಾತುರ್ಯದಿಂದ ತಪ್ಪಾಗಿದೆ ಎನ್ನುವುದನ್ನು ಮಾತ್ರ. ಆದರೂ, ಹಗರಣ ನಡೆಯಿತೆನ್ನಲಾದ ಕೆಲವು ತಿಂಗಳಕಾಲ ಕಲ್ಲಿದ್ದಲ ಇಲಾಖೆಯ ನಿರ್ವಹಣೆಯ ಹೊಣೆ ಹೊತ್ತಿದ್ದ ಪ್ರಧಾನಿ ಮನಮೋಹನ ಸಿಂಗ್ ಅವರ ವಿರುದ್ಧ ಭಾರತೀಯರು ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಇದೆಲ್ಲವೂ ಅರ್ಥವಾಗುವಂತಹದ್ದು. ಕಳೆದ ಇಪ್ಪತ್ತು ವರ್ಷಗಳಲ್ಲಿ ಅಧಿಕಾರದಲ್ಲಿದ್ದವರು, ಈಗ ಇರುವವರಿಗೆಲ್ಲ ಸಂಪೂರ್ಣ ಮಾಹಿತಿ ಇರುವಂತಿದೆ. ಆಗಿರಬಹುದಾದ ತಪ್ಪನ್ನು ಸರಿಪಡಿಸುವುದೆಂದರೆ ಈಗಿನ ಗುತ್ತಿಗೆ ಆದೇಶಗಳನ್ನು ರದ್ದುಪಡಿಸುವುದಾದರೆ, ಅಂತಹ ಕ್ರಮದ ಪರಿಣಾಮ ಯಾವ ರೀತಿ ಆಗುವುದೋ ಗೊತ್ತಿಲ್ಲ. ಆ ಕಾರಣದಿಂದಲೇ ಕೇಂದ್ರ ಸರ್ಕಾರ ತಲ್ಲಣಿಸಿರುವುದು.
ಕೇಂದ್ರ ಸರ್ಕಾರಕ್ಕೆ ಈ ಪ್ರಕರಣದಲ್ಲಿ ಆಗಿರುವ ತಪ್ಪುಗಳು (ಉದ್ದೇಶ ಒಳ್ಳೆಯದಿತ್ತು. ಆದರೂ ಎಲ್ಲೋ ತಪ್ಪಾಗಿರುವುದು ನಿಜ) ಒಂದು ತಂತ್ರದ ಭಾಗವೋ ಅಥವಾ ಮನುಷ್ಯ ಸಹಜ ಕಾರಣಗಳಿಂದಾಗಿ ಆಗಿರುವ ತಪ್ಪೋ ಎನ್ನುವುದನ್ನು ಈ ಕಾಲಘಟ್ಟದಲ್ಲಿ ನಿರ್ಧರಿಸುವುದು ತಪ್ಪು. ತಪ್ಪಿತಸ್ಥರನ್ನು ಪತ್ತೆಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯ. ಆದರೆ ಆ ಕರ್ತವ್ಯ ಪಾಲನೆಯ ಸಮಯದಲ್ಲಿ ಅಮಾಯಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೂ ಸರ್ಕಾರದ ಮೇಲಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಅವ್ಯವಹಾರಗಳು ಹೆಚ್ಚುತ್ತಿರುವುದು ಗುತ್ತಿಗೆಯ ವ್ಯವಸ್ಥೆಯನ್ನೇ ಪುನಾರಚಿಸುವ ಯೋಚನೆ ಮಾಡಬೇಕಾಗುತ್ತದೆ. ಅದಕ್ಕೆ ಬೇಕಾದ ಪರಿಣತಿ ಸರ್ಕಾರದಲ್ಲಿ ಇಲ್ಲದೇ ಹೋದರೆ ಹೊರಗಿನ ತಜ್ಞರ ನೆರವನ್ನು ಪಡೆಯಲಿಕ್ಕೆ ಹಿಂದೆ-ಮುಂದೆ ನೋಡಬಾರದು. ನಿಸರ್ಗದತ್ತ ಸಂಪತ್ತು ದೇಶದ ಸಂಪತ್ತು. ಅದು ಪೋಲಾಗದಂತೆ, ಸಮುದಾಯಗಳ ಪ್ರಗತಿಗೆ ಅನುಕೂಲವಾಗುವಂತೆ ಅದನ್ನು ಬಳಸುವುದಕ್ಕೆ ಸೂಕ್ತ ಮಾರ್ಗವನ್ನು ಈಗ ಹುಡುಕಲೇ ಬೇಕಾಗಿದೆ. ಸರ್ಕಾರ ಹಾಗೂ ಖಾಸಗಿ ಹಿತಗಳ ನಡುವೆ ಸಹಕಾರ ಎಂದರೆ, ಖಾಸಗಿ ವಲಯಕ್ಕೆ ಲಾಭ, ಸರ್ಕಾರಕ್ಕೆ (ಅಂದರೆ ದೇಶದ ಜನರಿಗೆ) ನಷ್ಟ ಎನ್ನುವಂತೆ ಆಗಬಾರದು. ಈ ಗುರಿಯನ್ನು ಮುಟ್ಟಲು ಯಾವ ಕ್ರಮವನ್ನೂ ಸರ್ಕಾರ ಸಲ್ಲದು ಎನ್ನಬಾರದು. ಇಲ್ಲಿ ಅಡಗಿರುವುದು ಜನಹಿತ. ವ್ಯಕ್ತಿಗಳ ಹಿತವಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.