ಸಂಪಾದಕೀಯ

ನ್ಯಾಯಾಂಗದಲ್ಲಿ ಲೈಂಗಿಕ ಅನಾಚಾರ: ವಿಚಾರಣೆಗೆ ವ್ಯವಸ್ಥೆ ಬೇಕು

Published On :

ನ್ಯಾಯಾಂಗದಲ್ಲಿ, ನ್ಯಾಯಾಲಯಗಳಲ್ಲಿ ಹಾಗೂ ಆ ಇಲಾಖೆಯ ಕಾರ್ಯಾಲಯಗಳಲ್ಲಿ ಯಾರ ವಿರುದ್ಧವಾದರೂ (ಸಾಮಾನ್ಯ ಕೆಲಸಗಾರರು, ನ್ಯಾಯಮೂರ್ತಿಗಳು) ಲೈಂಗಿಕ ಕಿರುಕುಳದ ಆರೋಪ ಬಂದಾಗ, ವಿಚಾರಣೆ ನಡೆಸಲು ಒಂದು ವ್ಯವಸ್ಥೆ ಮಾಡುವ ವಿಚಾರ ಈಗ ಸುಪ್ರೀಮ್ ಕೋರ್ಟಿನ ಮುಂದಿದೆ.
 ಈ ವಿಷಯ ಪ್ರಕಟವಾಗಿರುವುದು ಮಾಜಿ ಕಾನೂನು ವಿದ್ಯಾರ್ಥಿನಿಯೊಬ್ಬರು ನಿವೃತ್ತ ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿ ಸ್ವತಂತ್ರಕುಮಾರ್ ಅವರ ವಿರುದ್ಧ ನೀಡಿರುವ ದೂರನ್ನು "ವಿಚಾರಿಸುವ" ಪ್ರಕ್ರಿಯೆ ಬುಧವಾರ ಸುಪ್ರೀಮ್ ಕೋರ್ಟ್ ಕೈಗೆತ್ತಿಕೊಂಡಾಗ.
 ಸುಪ್ರೀಮ್ ಕೋರ್ಟ್, ವಿಶಾಖ ಪ್ರಕರಣದಲ್ಲಿ ಎಲ್ಲ ಕಾರ್ಯಾಲಯಗಳಲ್ಲೂ (ಸರ್ಕಾರಿ- ಸಾವ್ಕಾರಿ) ಲೈಂಗಿಕ ಕಿರುಕುಳದ ದೂರುಗಳು ಬಂದಾಗ ಕೈಗೊಳ್ಳಬೇಕಾದ ಕ್ರಮಗಳನ್ನು ರೂಪಿಸಿದ್ದರೂ, ಅದು ದೇಶದ ಅತ್ಯುನ್ನತ ಮಟ್ಟದ ನ್ಯಾಯಾಂಗದ ಅಂಗಳದಲ್ಲೇ ಇಂತಹ ದೂರು ಬರಬಹುದು ಎನ್ನುವುದನ್ನು ನಿರೀಕ್ಷಿಸಿರಲಿಲ್ಲ. ಈಗಷ್ಟೇ, ಇಬ್ಬರು ನ್ಯಾಯಮೂರ್ತಿಗಳು ಅಧಿಕಾರದಲ್ಲಿದ್ದಾಗ ವರ್ತಿಸಿದ ರೀತಿಯ ಪ್ರಸ್ತಾಪವಾಗಿರುವುದು. ಆರೋಪದ ರೂಪದಲ್ಲಿ ಅದು ಪ್ರಕಟವಾಗಿರುವುದು.
 ಸೋಮವಾರ ಸುಪ್ರೀಮ್ ಕೋರ್ಟಿನ ತ್ರಿಸದಸ್ಯ ಪೀಠ ಈ ಪ್ರಕರಣವನ್ನು ಪರಿಶೀಲಿಸಿದ ಅನಂತರ ನ್ಯಾಯಾಲಯಕ್ಕೆ ನೆರವು ನೀಡಲು ಇಬ್ಬರು ಹಿರಿಯ ವಕೀಲರನ್ನು- ನಾರಿಮನ್ ಮತ್ತು ಕೆ.ಪಿ. ರಾವ್ ನೇಮಿಸಿಕೊಳ್ಳುವ ಆದೇಶವನ್ನು ನೀಡಿದೆ.
 ಮುಂದಿನ ವಿಚಾರಣೆಯನ್ನು ಕುರಿತು ನಿವೃತ್ತ ನ್ಯಾಯಮೂರ್ತಿ ಸ್ವತಂತ್ರಕುಮಾರ್ ಅವರಿಗೆ ನೋಟೀಸ್ ನೀಡುವ ಆದೇಶವನ್ನೂ ಪ್ರಕಟಿಸಿದ್ದು, ವಿಷಯದ ಗಾಂಭೀರ್ಯವನ್ನು ಹಾಗೂ ಅದಕ್ಕೆ ಸುಪ್ರೀಮ್ ಕೋರ್ಟ್‌ಕೊಟ್ಟಿರುವ ಆದ್ಯತೆಯನ್ನೂ ನ್ಯಾಯದಾನದ ಕಳಕಳಿ ಎಂದು ಭಾವಿಸಬಹುದು. ಆದರೂ ಸುಪ್ರೀಮ್ ಕೋರ್ಟ್‌ನ ನ್ಯಾಯಮೂರ್ತಿಗಳಲ್ಲಿ ಮಾನಸಿಕ ತುಮುಲವಿರುವುದೂ ಸ್ಪಷ್ಟವಾಗಿ ಗೋಚರವಾಗಿದೆ.
 ಬುಧವಾರ ವಿಚಾರಣೆಯ ಕಾಲದಲ್ಲಿ, ನ್ಯಾಯಮೂರ್ತಿ ಸ್ವತಂತ್ರಕುಮಾರ್ ಅವರ ಮೇಲೆ ಇರುವ ಆರೋಪದ ಘಟನೆ ನಡೆದಿದ್ದು 2011ರ ಮೇ ತಿಂಗಳಲ್ಲಿ. ಈಗ ಆ ದೂರನ್ನು ಕೊಡುತ್ತಿರುವುದೇಕೆ ಎನ್ನುವ ಪ್ರಶ್ನೆಯನ್ನು ನ್ಯಾಯಾಲಯ ಎತ್ತಿದರೂ ಅದಕ್ಕೆ ವಕೀಲರಿಂದ ತೃಪ್ತಿಕರವಾದ ಪ್ರತಿಕ್ರಿಯೆ ಪ್ರಕಟವಾಗಲಿಲ್ಲ. ದೂರಿನ ವಿಳಂಬದ ವಿಚಾರ ಇನ್ನೂ ನ್ಯಾಯಾಲಯದ ಮುಂದಿದೆ.
 ಈಗಾಗಲೇ ನ್ಯಾಯಮೂರ್ತಿ ಸ್ವತಂತ್ರ ಕುಮಾರ್ ಅವರು ತಮ್ಮ ವಿರುದ್ಧ ಕೆಲವು ಕಾರ್ಪೊರೇಟ್‌ಗಳು ಪಿತೂರಿ ನಡೆಸಿವೆ ಎಂದು ಬಹಿರಂಗವಾಗಿ ಆರೋಪಿಸಿದ್ದಾರೆ. ಅವರು ಈಗ ಹಸಿರು ಪಂಚಾಯಿತಿಯ ಅಧ್ಯಕ್ಷರು. ಅವರ ಮುಂದೆ ಹಲವಾರು ಕಾರ್ಪೊರೇಟ್‌ಗಳು ಪರಿಸರ ಕಾಯಿದೆಯ ಉಲ್ಲಂಘನೆಯ ಆರೋಪವನ್ನು ಎದುರಿಸುತ್ತಿವೆ. ಆ ಹೇಳಿಕೆಗೆ ಪ್ರತಿಯಾಗಿ ಕೆಲವು ಸಂಘಟನೆಗಳು ಹೇಳಿಕೆಗಳನ್ನು ನೀಡಿದ್ದಾಗಿದೆ.
 ಬುಧವಾರವೇ ಸ್ವಂತಂತ್ರಕುಮಾರ್ ಅವರು ದೆಹಲಿ ಹೈಕೋರ್ಟಿನಲ್ಲಿ, ಈ ಪ್ರಕರಣ ಕುರಿತು ಮಾಧ್ಯಮ ಪ್ರಪಂಚದಲ್ಲಿ ಊಹಾಪೋಹ ಆಧರಿತ ಹೇಳಿಕೆಗಳು, ವರದಿಗಳನ್ನು ಪ್ರಕಟಿಸುವುದರ ವಿರುದ್ಧ ಆದೇಶವನ್ನು ಕೇಳಿ ಅರ್ಜಿ ಸಲ್ಲಿಸಿದ್ದರು.
 ದೆಹಲಿ ಹೈಕೋರ್ಟಿನ ಆದೇಶದಂತೆ, ಮಾಧ್ಯಮಗಳು ನ್ಯಾಯಾಲಯಗಳಲ್ಲಿ ನಡೆಯುವ ವಿಚಾರಣೆಯ ವಿವರಗಳನ್ನಷ್ಟೇ ವರದಿ ಮಾಡಬಹುದೆಂದೂ, ಇತರೆ ಯಾವುದೇ ರೀತಿಯ ವಿಶ್ಲೇಷಣೆ, ಅಭಿಪ್ರಾಯ, ಹೇಳಿಕೆಗಳನ್ನು ಪ್ರಕಟಿಸಬಾರದು ಅಥವಾ ಪ್ರಸಾರ ಮಾಡಬಾರದು ಎಂದೂ ಆದೇಶ ನೀಡಿದೆ.
 ನ್ಯಾಯಾಂಗದಲ್ಲಿ ಹಿಂದೆ ನಡೆಯಿತೆನ್ನಲಾದ ಪ್ರಕರಣಗಳನ್ನು ಈಗ ಪ್ರಸ್ತಾಪಿಸುತ್ತಿರುವುದನ್ನು ಸುಪ್ರೀಮ್ ಕೋರ್ಟ್ ಗಂಭೀರವಾಗಿಯೇ ಪರಿಗಣಿಸಿರುವುದು ಉಚಿತವಾಗಿದೆ. ನ್ಯಾಯಾಂಗದ ಇತಿಹಾಸದಲ್ಲೇ ಈ ಪ್ರಕರಣ ಒಂದು ದಾಖಲೆಯಾಗಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.