ಸಂಪಾದಕೀಯ

ರಾಹುಲ್ ಬಿಟ್ರೆ ಬೇರೆ ಯಾರಿದ್ದಾರೆ? ಕಾಂಗ್ರೆಸ್‌ನ ನೇರಪ್ರಶ್ನೆ

Published On :

ಶುಕ್ರವಾರ, ದೆಹಲಿಯ ತಾಲ್‌ಕಟೂರ ಸ್ಟೇಡಿಯಂನಲ್ಲಿ ಸಮಾವೇಶಗೊಂಡಿದ್ದ ಎಐಸಿಸಿ ಅಧಿವೇಶನದ ಮುಂದೆ ಇದ್ದಿದ್ದು ಒಂದೇ ಒಂದು ಪ್ರಮುಖ ಪ್ರಶ್ನೆ: ಪಕ್ಷದ ನಾಳಿನ ನಾಯಕರು ಯಾರು? ಆ ಪ್ರಶ್ನೆಗೆ ನೇರವಾದ ಉತ್ತರ ನೀಡಲು ಹಿರಿಯ ನಾಯಕರು ಸಿದ್ಧರಿರಲಿಲ್ಲ.
  ಆದರೆ ಪಕ್ಷದ ಪರಂಪರೆ ಹಾಗೂ ಸಂಪ್ರದಾಯವನ್ನು ಉಲ್ಲಂಘಿಸಿ, ಲೋಕಸಭೆ ಚುನಾವಣೆಯ ಪ್ರಚಾರ ಸಮರದಲ್ಲಿ ರಾಹುಲಗಾಂಧಿ ಅವರ ಹೆಸರನ್ನು ಪ್ರಧಾನಿ ಪೀಠದ ಅಭ್ಯರ್ಥಿ ಎಂದು ಪ್ರತಿಬಿಂಬಿಸುವುದಿಲ್ಲ ಎಂದು ವೇದಿಕೆಯ ಮೇಲೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ  ಸ್ಪಷ್ಟವಾಗಿ ಸಾರುತ್ತಿರುವ ಸಮಯದಲ್ಲೇ, ಅಧಿವೇಶನದ ಮೂಲೆ ಮೂಲೆಗಳಿಂದ ರಾಹುಲ್ ಹೆಸರನ್ನು ಪ್ರಧಾನಿ ಪೀಠಕ್ಕೆ ಅಭ್ಯರ್ಥಿ ಎಂದು ಹೇಳಲೇಬೇಕೆನ್ನುವ ಘೋಷಣೆಗಳು ಮತ್ತೆ ಮತ್ತೆ ಕೇಳಿಬಂದವು .
ಪಕ್ಷದ ಹಿರಿಯ, ಪ್ರಧಾನ ಕಾರ್ಯದರ್ಶಿ ಆ ಸಮಯದಲ್ಲೇ ಘೋಷಣೆಗಳನ್ನು ಕೂಗುತ್ತಿದ್ದ ಗುಂಪುಗಳ ಮಧ್ಯೆ ನಿಂತು ಪಕ್ಷ ಚುನಾವಣೆಯಲ್ಲಿ ಗೆದ್ದರೆ ಪ್ರಧಾನಿಯಾಗಬಹುದಾದ ಇನ್ನೊಬ್ಬ ವ್ಯಕ್ತಿಯ ಹೆಸರು ಹೇಳಿ ನೋಡೋಣ ಎಂದು ಕೇಳಿದಾಗ, ಪಕ್ಷದ ನಿಜವಾದ ಅಂತರಂಗದ ನಿಲವು ಸ್ಪಷ್ಟವಾಯಿತು.
ಇದುವರೆಗೆ ನಡೆದಿರುವ ಎಲ್ಲ ಚುನಾವಣೆಗಳಲ್ಲೂ ಚುನಾವಣೆ ಪ್ರಚಾರ ಸಮರದಲ್ಲಿ ನಾಯಕತ್ವವನ್ನು ವಹಿಸಿದ್ದು, ಪಕ್ಷದ ಅಧ್ಯಕ್ಷರು ಅಥವಾ ಪ್ರಧಾನಿ ಈ ವರ್ಷದ ಲೋಕಸಭೆ ಚುನಾವಣೆಯ ಪ್ರಚಾರ ಸಮರದಲ್ಲಿ ಕಾಂಗ್ರೆಸ್ಸಿನ ಸೇನಾನಿ ಪಕ್ಷದ ಅಧ್ಯಕ್ಷೆಯೂ ಅಲ್ಲ, ಪ್ರಧಾನಿಯೂ ಅಲ್ಲ, ಉಪಾಧ್ಯಕ್ಷ ರಾಹುಲಗಾಂಧಿ. ಹಾಗೆಂದು ಎಐಸಿಸಿ ಅಧಿವೇಶನದಲ್ಲಿ ಅಧಿಕೃತವಾಗಿಯೇ ಪ್ರಕಟಿಸಲಾಗಿದೆ.
ಇಷ್ಟೆಲ್ಲ ಆದ ಆನಂತರ, ಚುನಾವಣೆಯ ಅನಂತರ ಪಕ್ಷಕ್ಕೆ ಸರ್ಕಾರ ರಚಿಸುವ ಅವಕಾಶ ಸಿಕ್ಕರೆ ಪ್ರಧಾನಿಯಾಗುವುದು ರಾಹುಲ ಗಾಂಧಿ ಅವರೇ, ಎನ್ನುವುದರಲ್ಲಿ ಅನುಮಾನವಾದರೂ ಯಾಕೆ? ಅಂತಹ ಪ್ರಶ್ನೆಯನ್ನು ನಾಯಕರು ವೇದಿಕೆಯಿಂದ ಕೇಳಲಿಲ್ಲ ಅಷ್ಟೆ.
 ಈ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಧಾನವಾಗಿ ಪ್ರತಿಪಾದಿಸಬೇಕಾಗಿರುವ ವಿಚಾರ ಎಂದರೆ ದೇಶವನ್ನು, ಜನರನ್ನು ಹೋಳು ಹೋಳು ಮಾಡುವ ಚಿಂತನೆಯ ವಿರುದ್ಧದ ಜಾತ್ಯತೀತ ಸಿದ್ಧಾಂತ ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪಷ್ಟವಾಗಿ ಸಾರಿದರು. ಅಧಿವೇಶನದಲ್ಲಿ ಅಧಿಕೃತವಾಗಿ ಅಂಗೀಕೃತವಾದ ರಾಜಕೀಯ ನಿರ್ಣಯದಲ್ಲೂ ಈ ನಿಲವು ಪ್ರಮುಖವಾಗಿ ಪ್ರಸ್ತಾಪವಾಗಿದೆ.
ಒಂದು ದಶಕದ ಕಾಲ, ಕಾಂಗ್ರೆಸ್ ನೇತೃತ್ವದ ಕೂಟ ಸರ್ಕಾರದ ಪ್ರಧಾನಿಯಾಗಿದ್ದ ಮನಮೋಹನಸಿಂಗ್ ಅವರು ದಶಕದಲ್ಲಿ ದೇಶ ಸಾಧಿಸಿದ ಪ್ರಗತಿಯನ್ನು ಯಾರೂ ಹೀಗಳೆಯುವಂತಿಲ್ಲ. ಆ ಸಾಧನೆಯ ಪಟ್ಟಿಯನ್ನೇ ಪ್ರದರ್ಶಿಸಿ, ಕಷ್ಟಪಟ್ಟು ಜನರಿಗೆ ಸೂಕ್ತ ಸಂದೇಶವನ್ನು ರವಾನಿಸಿದರೂ, ಪಕ್ಷ ಗೆಲ್ಲುವುದು ಖಚಿತ. ಸರ್ಕಾರದ ಸಾಧನೆಗೆ ಸಿಗಬೇಕಾಗಿದ್ದ ಪ್ರಮಾಣದಲ್ಲಿ ಪ್ರಚಾರ ಸಿಗಲಿಲ್ಲವಾದ್ದರಿಂದ ಈಗ ಕಾಂಗ್ರೆಸ್ ಕಾರ್ಯಕರ್ತರು ಆ ಕಾರ್ಯಕ್ರಮಗಳ ಪ್ರಚಾರ ಮಾಡಬೇಕಾಗಿದೆ ಎಂದರು. ಕೆಲವು ತಪ್ಪುಗಳು ಆಗಿಲ್ಲ ಎಂದೇನೂ ಅಲ್ಲ. ಆದರೆ ಅದನ್ನು ಸರಿಪಡಿಸಿಕೊಳ್ಳುವ ಕೆಲಸವೂ ನಡೆದಿದೆ.
ಸೋನಿಯಾ ಗಾಂಧಿ ಅವರ ಭಾಷಣದ ಬಹುಭಾಗ ಕೋಮುವಾದದ ದಳ್ಳುರಿಯನ್ನು ಹಬ್ಬಿಸುವ ಹಲವು ಕೆಟ್ಟ ಶಕ್ತಿಗಳ ಪ್ರತಾಪವನ್ನು ಜನತಾಂತ್ರಿಕ ಮಾರ್ಗದಲ್ಲಿ ಅಡಗಿಸಲೇಬೇಕು ಎನ್ನುವುದಕ್ಕೇ ಸೀಮಿತವಾಗಿತ್ತು.
ದೇಶದಲ್ಲಿ ಕಾಂಗ್ರೆಸ್ ಜನತಂತ್ರ, ಜಾತ್ಯತೀತ ಚಿಂತನೆ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಆದರೆ ಕೋಮುವಾದಿ ಶಕ್ತಿಗಳು ಈ ಮೌಲ್ಯಗಳಿಗೆ ದೊಡ್ಡ ರೀತಿಯಲ್ಲೇ ಅಪಾಯವನ್ನು ಒಡ್ಡಿವೆ ಎನ್ನುವುದು ಅವರ ವಾದ.
  ಇತ್ತೀಚಿನ ವಿಧಾನಸಭೆ ಚುನಾವಣೆಗಳಲ್ಲಿ ಪಕ್ಷದ ಪರಾಭವವನ್ನು ಎಲ್ಲ ನಾಯಕರೂ ಪ್ರಸ್ತಾಪಿಸಿದರು. ಅದರಿಂದ ಸ್ವಲ್ಪ ಹಿನ್ನಡೆಯಾಗಿದ್ದರೂ, ಅದನ್ನು ನಿಭಾಯಿಸುವ ಶಕ್ತಿ ಕಾಂಗ್ರೆಸ್ಸಿಗೆ ಇದೆ ಎನ್ನುವ ಆಶಾವಾದವನ್ನು ಪ್ರಕಟಿಸಿದರು. ಪ್ರಧಾನಿ ಮನಮೋಹನ ಸಿಂಗ್ ಅವರ ಪಾಲಿಗೆ ವಿಧಾನಸಭೆ ಚುನಾವಣೆ ಫಲಿತಾಂಶ ಆತ್ಮಶೋಧನೆಗೆ ಅವಕಾಶ ಮಾಡಿಕೊಟ್ಟಿತ್ತು. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ದೃಷ್ಟಿಯಲ್ಲಿ ಜನರ ನಿರೀಕ್ಷೆಯನ್ನು ಅನೇಕ ಕಡೆಗಳಲ್ಲಿ ಪೂರ್ತಿಯಾಗಿ ಈಡೇರಿಸಲಿಕ್ಕೆ ಆಗದೇ ಇದ್ದಿದ್ದು ಸೋಲಿಗೆ ಕಾರಣವಾಗಿದ್ದರೂ ಆಗಿರಬಹುದು.
  ಸೋನಿಯಾ ಗಾಂಧಿ ಅವರು 2003 ರಲ್ಲಿ ಹೇಳಿದ್ದ ಮಾತನ್ನೇ ಪುನರುಚ್ಚರಿಸಿದ್ದೂ ಆಯಿತು. ಚುನಾವಣೆಯಲ್ಲಿ ಸೋಲು - ಗೆಲವು ಎರಡೂ ಇದ್ದಿದ್ದೇ. ಕಾಂಗ್ರೆಸ್ ಹಿಂದೆ ಎದುರಿಸಿದ್ದ ಕಷ್ಟದ ದಿನಗಳಿಗಿಂತಲೂ, ಈಗ ಹೆಚ್ಚಿನ ಕಷ್ಟದ ದಿನಗಳನ್ನೇನು ಎದುರಿಸುತ್ತಿಲ್ಲ. ಪಕ್ಷದ ಸಿದ್ಧಾಂತ ಹಾಗೂ ಸಂಘಟನೆಯಲ್ಲಿ ವಿಶ್ವಾಸವನ್ನು ಇಟ್ಟು ಸಮಾಜದ ಎಲ್ಲ ವರ್ಗಗಳ ಜನರ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಿರುವ ಪಕ್ಷ ಕಾಂಗ್ರೆಸ್ ಎನ್ನುವ ನಂಬಿಕೆ ಅವರದ್ದು. ರಾಹುಲ ಗಾಂಧಿ ಅವರ ಭಾಷಣವಂತೂ ಉದ್ರೇಕವನ್ನು ಕೆರಳಿಸುವಂತಹ ಶೈಲಿ ಹಾಗೂ ಪದಪ್ರಯೋಗದ ಪರಿಚಯ ಮಾಡಿಕೊಟ್ಟಿತ್ತು.
  ಮಾಹಿತಿ ಸ್ವಾತಂತ್ರ್ಯದ ಹಕ್ಕು, ಲೋಕಪಾಲ ವ್ಯವಸ್ಥೆಗೆ ಪಕ್ಷ ಬದ್ಧ. ಕೆಲವು ವಿಧೇಯಕಗಳು ಸಂಸತ್ತಿನಲ್ಲಿ ಉಳಿದಿವೆ. ಅವನ್ನು ಮುಂದಿನ ಅಧಿವೇಶನದಲ್ಲೇ ಅಂಗೀಕರಿಸುವ ವಿಶ್ವಾಸವೂ ಪ್ರಕಟವಾಯಿತು.
  ಅಧಿಕೃತವಾದ ರಾಜಕೀಯ ನಿರ್ಣಯದಲ್ಲಿ ಎಲ್ಲ ಜನತಾಂತ್ರಿಕ, ಜಾತ್ಯತೀತ ಪಕ್ಷಗಳ ಜತೆಯಲ್ಲೂ ಕೆಲಸ ಮಾಡುವ ಬಯಕೆ ಪಕ್ಷಕ್ಕಿದೆ ಎನ್ನುವ ಸೂಚನೆಯೂ ಇದೆ. ಚುನಾವಣೆಯ ಕಣಕ್ಕೆ ಪ್ರವೇಶಿಸುವುದಕ್ಕೆ ಮುಂಚೆಯೇ ಸಹಮನಸ್ಕ ಪಕ್ಷಗಳ ಜತೆ ಸಹಕಾರದ ಪ್ರಸ್ತಾಪ ಅಗತ್ಯವಿತ್ತೇ? ಪ್ರಜ್ಞಾವಂತರ ಮುಂದಿರುವ ಪ್ರಶ್ನೆ ಅದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.