ಸಂಪಾದಕೀಯ

ಪ್ರಾಥಮಿಕ ಶಿಕ್ಷಣಕ್ಕೇ ಆದ್ಯತೆ

Published On :

ಉಚಿತ ಕೊಡುಗೆ - ಉಡುಗೊರೆಗಳ ಸಂಸ್ಕೃತಿಯನ್ನು ನಿಯಂತ್ರಿಸಲೇಬೇಕಾದ ಅಗತ್ಯ ಈಗ ಕಂಡುಬಂದಿದೆ. ಬಡವರಿಗೆ, ಕಡು ಬಡವರಿಗೆ ಹೊಟ್ಟೆ - ಬಟ್ಟೆಯ ಪಾಡಿಗಾಗಿ ಸರ್ಕಾರ ಅತಿ ಅಗ್ಗದ ದರದಲ್ಲಿ ಧಾನ್ಯವನ್ನು ಒದಗಿಸುವುದು ಪ್ರಭುತ್ವದ ಕರ್ತವ್ಯ ಎನ್ನುವ ವಾದವನ್ನು ಒಪ್ಪಿಕೊಳ್ಳಬಹುದು. ಇದನ್ನು ಸೈದ್ಧಾಂತಿಕವಾಗಿಯೇ ವಿರೋಧಿಸುವ ಜನವರ್ಗಗಳೂ ಇವೆ. ಆ ವಿಚಾರ ಬೇರೆ.
ಆದರೆ ಪದವಿ ಪೂರ್ವ ಕಾಲೇಜು ಶಿಕ್ಷಣದ ಹಂತವನ್ನು ತಲುಪಿರುವ ಎಲ್ಲ ವಿದ್ಯಾರ್ಥಿಗಳಿಗೂ ಉಚಿತವಾಗಿ ಲ್ಯಾಪ್-ಟಾಪ್ಗಳನ್ನು ಹಂಚುವುದನ್ನು ಸಮರ್ಥಿಸಿಕೊಳ್ಳುವುದು ಕಷ್ಟ. ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಇಂತಹ ಯೋಚನೆ ಯಾವ ದಿಕ್ಕಿನಿಂದ ಬಂತೋ ಗೊತ್ತಿಲ್ಲ. ಪ್ರಾಯಶಃ ಅದು ವಿಧಾನಮಂಡಲದ ಅಧಿವೇಶನದಲ್ಲಿ ಪ್ರಕಟವಾಗಲೂಬಹುದು. ಈ ಸಲಹೆ ಯಾವ ಮೂಲದಿಂದ ಬಂದಿದ್ದರೂ, ಅದನ್ನು ಸಾರಾಸಗಟು ಒಪ್ಪುವಂತಿಲ್ಲ.
ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ಗಳನ್ನು ಹಂಚುವ ವಿಚಾರ ರಾಜ್ಯದಲ್ಲಿ ಇದುವರೆಗೆ ಯಾವ ವೇದಿಕೆಯಲ್ಲೂ ಚರ್ಚೆಯಾಗಿಲ್ಲ. ಅಂತಹ ಬೇಡಿಕೆ ಇದ್ದರೆ, ಅದು ವಿಧಾನಮಂಡಲದ ಉಭಯ ಸದನಗಳ ಸಂಯುಕ್ತ ಅಧಿವೇಶನದಲ್ಲಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ಭಾಷಣ ಮಾಡುವವರೆಗೂ ರಹಸ್ಯವಾಗಿಯೇ ಇತ್ತು. ಸರ್ಕಾರಕ್ಕೆ (ಇಲ್ಲಿ ಮುಖ್ಯಮಂತ್ರಿ ಹಾಗೂ ಮಂತ್ರಿ ಮಂಡಲ ಎಂದೇ ಅರ್ಥ) ಇದ್ದಕ್ಕಿದ್ದಂತೆ ಇಂತಹ ಯೋಚನೆ ಹೊಳೆದಂತಿದೆ. ಲೋಕಸಭೆ ಚುನಾವಣೆಯಲ್ಲಿ ಜನರ ಮತಗಳನ್ನು ಆಕರ್ಷಿಸಲು ರಾಜ್ಯಗಳ ಸರ್ಕಾರಗಳು ಇಂತಹ ಕೊಡುಗೆಗಳನ್ನು ಪ್ರಕಟಿಸುವುದುಂಟು. ಇಡೀ ದೇಶಕ್ಕೆ ಈ ಉಚಿತ ಕೊಡುಗೆಯ ದಾರಿಯನ್ನು ಮೊದಲು ತೋರಿಸಿದ್ದು ತಮಿಳುನಾಡಿನ ದ್ರಾವಿಡ ಪಕ್ಷಗಳೇ. ಅದು ಈಗ ದೇಶದ ಎಲ್ಲ ಕಡೆ ವ್ಯಾಪಕವಾಗಿ ಹರಡಿದೆ.
ಸುಮಾರು ಹತ್ತು ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಕೊಡುಗೆ ರವಾನೆಯಾಗಲಿದೆ. ಅದರಿಂದ ಸರ್ಕಾರ ಸಮಾಜಕ್ಕೆ ರವಾನಿಸಿರುವ ಸಂದೇಶವಾದರೂ ಏನು? ನೇರವಾಗಿ ತಯಾರಿಕಾ ಕಂಪನಿಗಳಿಂದ ಸುಮಾರು 1500 ಕೋಟಿ ರುಪಾಯಿಗಳ ಮೌಲ್ಯದ ಲ್ಯಾಪ್ಟಾಪ್ಗಳನ್ನು ಕೊಳ್ಳಬೇಕಾಗಿದೆ ಎನ್ನುವುದೇ ಸಂದೇಶ. ಸುಮಾರು ಇಪ್ಪತ್ತು ವರ್ಷಗಳ ಹಿಂದಿನ ಆಪಲ್ ಮೆಕಿಂಟಾಷ್ ಕಂಪ್ಯೂಟರ್ಗಳ ಖರೀದಿಯ ಪ್ರಯತ್ನದ ಪಾಠ ಮರೆತು ಹೋಯಿತೇನು? ಆಗ ದಲ್ಲಾಳಿಗಳಿಗೆ ಕೊಟ್ಟಿದ್ದ ಮುಂಗಡ ಹಣವೂ ನಷ್ಟವಾಗಿತ್ತು.
ಎಲ್ಲ ಪ್ರಗತಿಶೀಲ ಚಿಂತಕರೂ ದೇಶದ ಪ್ರಗತಿಗೆ ನಿಜವಾದ ಅಡಿಗಲ್ಲು ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಎಂದೇ ಭಾವಿಸಿದ್ದಾರೆ. ಈ ಮಾತನ್ನು ಅಮರ್ತ್ಯ ಸೆನ್ ಅವರು ಹೇಳಿದಾಗ ಅದಕ್ಕೆ ದೊಡ್ಡ ಪ್ರಚಾರ ಸಿಕ್ಕಿತ್ತು. ಆದರೆ, ದೇಶದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಈಗಿನ ದುರವಸ್ಥೆಯನ್ನು ವರ್ಣಿಸುವುದೇ ಅಸಾಧ್ಯ. ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಹೋದರೂ ವರ್ಣಮಾಲೆಯನ್ನೂ ಕಲಿತಿರುವುದಿಲ್ಲ. ಇದು ವಾಸ್ತವ ಸ್ಥಿತಿ. ಹಲವಾರು ಸರ್ಕಾರಿ ತಜ್ಞರ ವರದಿಗಳೇ ಈ ಮಾತನ್ನು ಪುಷ್ಟೀಕರಿಸಿವೆ. ಆದ್ದರಿಂದ ಶಿಕ್ಷಣ ವಲಯಕ್ಕೆ ಬಜೆಟ್ನಲ್ಲಿ ಲಭ್ಯವಿರುವ ಹಣದಲ್ಲಿ ಸಾಧ್ಯವಿರುವಷ್ಟು ಮಟ್ಟಿಗೂ ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಯೋಜನೆಗಳಿಗೇ ಬಳಕೆಯಾಗಬೇಕು. ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಹಣ ಕೊಟ್ಟಷ್ಟೂ ದೇಶವನ್ನು ಕಟ್ಟುವುದಕ್ಕೆ ಹೆಚ್ಚು ಹಣ ಕೊಟ್ಟಂತೆಯೇ.
   ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್-ಟಾಪ್ಗಳನ್ನು ಹಂಚುವುದರಿಂದ ಸಮುದಾಯಕ್ಕೆ ಸಿಗಬಹುದಾದ ಸಾಮಾಜಿಕ ಪ್ರತಿಫಲದ ಮೌಲ್ಯ ಸಂಶಯಾಸ್ಪದವಾದ ವಿಚಾರವೇ. ಶಿಕ್ಷಣ ವಲಯಕ್ಕೆ ಬಜೆಟ್ನಲ್ಲಿ ಹೆಚ್ಚು ಹಣವನ್ನು ಒದಗಿಸಿ, ವರ್ಷದ ಕೊನೆಯಲ್ಲಿ ಅದರಲ್ಲಿ ಒಂದು ಭಾಗಕ್ಕೆ ಕತ್ತರಿ ಹಾಕುವುದು ಲಗಾಯ್ತಿನಿಂದಲೂ ನಡೆದುಬಂದ ಸಂಪ್ರದಾಯ. ವಿತ್ತ ಖಾತೆಯ ಹೊಣೆ ಹೊತ್ತ ಮುಖ್ಯಮಂತ್ರಿಗೆ ಇದು ಚೆನ್ನಾಗಿ ಗೊತ್ತು. ಈ ವರ್ಷದಲ್ಲಿ ಹೀಗಾಗಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.