ಹದಿನೇಳನೇ ಶತಮಾನದಲ್ಲಿದ್ದ ಆಲ್ಬನ್ ಬಟ್ಲರ್ ಎಂಬಾತ ಬರೆದ 'ಲೈವ್ಸ್ ಆಫ್ ದಿ ಸೈಂಟ್ಸ್' ಎಂಬ ಕೃತಿಯಲ್ಲಿ ಪ್ರಾಚೀನ ಗ್ರೀಸ್‌ನ ಅಥೆನ್ಸ್‌ನಲ್ಲಿದ್ದ ಸಂತ ಮಾರ್ಟಿನಿಯಾನುಸ್ ಜೊತೆಗೆ ನಡೆದ ಅದ್ಭುತ ಘಟನೆಯೊಂದನ್ನು ದಾಖಲಿಸಿದ್ದಾನೆ. ತನ್ನ ಒಂಭತ್ತನೆಯ ವಯಸ್ಸಿನಲ್ಲಿಯೇ ಮನೆ ಬಿಟ್ಟು ತೆರಳಿದ ಮಾರ್ಟಿಯಾನುಸ್ ಮರುಭೂಮಿ ತಪ್ಪಲಲ್ಲಿದ್ದ ಒಂದು ಬೆಟ್ಟದ ಏಕಾಂತ ಸ್ಥಳಕ್ಕೆ ತೆರಳಿ, ದೇವರ ನಾಮಸ್ಮರಣೆಯಲ್ಲಿ ನಿರತನಾದ. 20 ವರ್ಷಗಳನ್ನು ಹೀಗೆ ಕಳೆದರೂ ಅವನಿಗೆ ದೇವರ ಸಾಕ್ಷಾತ್ಕಾರವಾಗಲಿಲ್ಲ. ಒಂದು ದಿನ ಮುಸ್ಸಂಜೆ ಅವನಿಗೆ ಒಂದು ಹೆಣ್ಣಿನ ಅಳುವ ಧ್ವನಿ ಕೇಳಿಸಿತು. ಯಾರೆಂದು ವಿಚಾರಿಸಲು ಹೋದಾಗ, ಅಲ್ಲಿ ಸುಂದರ ತರುಣಿಯೊಬ್ಬಳು ಹರಿದ ಉಡುಪನ್ನು ಧರಿಸಿ, ಅಳುತ್ತಾ ಕುಳಿತಿದ್ದಳು. ಮಾರ್ಟಿಯಾನುಸ್ ಕರುಣೆಯಿಂದ ಅವಳ ಸ್ಥಿತಿಯನ್ನು ನೋಡಿ ತನ್ನ ಗುಹೆಗೆ ಕರೆತಂದು ಉಪಚರಿಸಿದ. ಅಂದು ಅಲ್ಲಿಯೇ ಉಳಿದು ಮಾರನೇ ದಿನ ತೆರಳುವಂತೆ ತಿಳಿಸಿ, ತಾನು ಗುಹೆಯ ಹೊರಭಾಗದ ಕಡೆ ಹೊರಟ. ಆಗ ಆ ತರುಣಿ ತನ್ನನ್ನು ಒಬ್ಬಳನ್ನೇ ಬಿಟ್ಟು ತೆರಳದಂತೆ ಮನವಿ ಮಾಡಿದಳು. ಅಲ್ಲದೆ, ತನ್ನ ಬಡ ಉಡುಪನ್ನು ತ್ಯಜಿಸಿ, ಉತ್ತಮ ಉಡುಪಲ್ಲಿ ಕಂಗೊಳಿಸಿದಳು. ಅವಳ ರೂಪ, ಲಾವಣ್ಯ ಎಂತಹವರ ಮನಸ್ಸನ್ನೂ ಆಕರ್ಷಿಸುವಂತಿತ್ತು. ಅವಳು ತನ್ನನ್ನು ಪರಿಚಯ ಮಾಡಿಕೊಂಡು ತಾನು ಸಿಸಾರೆಯ ಶ್ರೀಮಂತ ಕುಟುಂಬದ ಜೋಯೆಯಾಗಿದ್ದು, ಮಾರ್ಟಿನಿಯಾನುಸ್‌ನನ್ನು ಪಡೆಯಲೆಂದೇ ಬಂದಿರುವುದಾಗಿ ಹೇಳಿದಳು. ತನ್ನೊಡನೆ ನಗರಕ್ಕೆ ಬಂದರೆ ಸುಖವಾಗಿ ಬದುಕಬಹುದೆಂದು ಅಮಿಷವೊಡ್ಡಿದಳು. ಆಗ ಮಾರ್ಟಿನಿಯಾನುಸನಿಗನ್ನಿಸಿತು, ತಾನು ಆಶ್ರಯ ನೀಡಿರುವುದು ಒಬ್ಬ ದುಷ್ಟ ಹೆಂಗಸಿಗೆ ಎಂದು. ತನ್ನ ತಪಸ್ಸಿಗೆ ಭಂಗ ಬಂದಿದ್ದಕ್ಕೆ ಪಶ್ಚಾತ್ತಾಪವುಂಟಾಗಿ, ಅದಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ನಿರ್ಧರಿಸಿದ. ಗುಹೆಯ ಹಿಂಭಾಗಕ್ಕೆ ಹೋಗಿ ಅಲ್ಲಿದ್ದ ಒಲೆಯಲ್ಲಿ ತನ್ನೆರಡು ಕಾಲುಗಳನ್ನೂ ಚಾಚಿ, ಬೆಂಕಿಯುರಿಸಿದ. ಕಾಲುಗಳು ಬೆಂದು ದುರ್ವಾಸನೆ ಬಂದರೂ ಹೊರತೆಗೆಯದೆ, ದೇವರ ನಾಮಸ್ಮರಣೆ ಮಾಡುತ್ತಾ ತನ್ನನ್ನು ಕ್ಷಮಿಸಬೇಕೆಂದು ಬೇಡುತ್ತಿದ್ದ. ಆ ದೃಶ್ಯವನ್ನು ನೋಡಿದ ಜೋಯೆಗೆ ತನ್ನ ತಪ್ಪಿನ ಅರಿವಾಯಿತು. ಇಂತಹ ಧರ್ಮಭೀರುವನ್ನು ಬಯಸಿದ್ದು ತಪ್ಪೆಂದು ಭಾವಿಸಿ, ತನ್ನ ತಪ್ಪನ್ನು ಕ್ಷಮಿಸಬೇಕೆಂದು, ಒಲೆಯಿಂದ ಅವನ ಕಾಲುಗಳನ್ನು ತೆಗೆಯಲು ಬೇಡಿಕೊಂಡಳು. ನಂತರ ಅವಳು ಸನ್ಯಾಸಿನಿಯಾಗಿ ಬೆತ್ಲಹಮ್‌ನ ಸೇಂಟ್ ಪಾಲ್ ಚರ್ಚ್‌ಗೆ ತೆರಳಿ ಅಲ್ಲಿ ತನ್ನ ಉಳಿದ ಕಾಲವನ್ನು ಕಳೆದಳು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com