ಕಾವೇರಿ ನಿರ್ವಹಣಾ ಮಂಡಳಿ ತಗಾದೆ
ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಜಯಲಲಿತಾ ನೇತೃತ್ವದ ಅಣ್ಣಾ ಡಿಎಂಕೆ ಪಕ್ಷದ ಬೆಂಬಲ ಬೇಕಾಗಿದೆ. ಈ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಈಗ ಮುಂದಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ತಮ್ಮ ಆದ್ಯತೆಗಳ ಪಟ್ಟಿಯನ್ನು ನೀಡಿರುವ ಜಯಲಲಿತಾ, ಅದರಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿರುವ ಅಂಶ ಕಾವೇರಿ ನಿರ್ವಹಣಾ ಮಂಡಳಿಯ ನೇಮಕ ಕುರಿತ ಒತ್ತಾಯದ್ದು.
ಈಗಾಗಲೇ ಕಾವೇರಿ ನೀರು ಹಂಚಿಕೆ ವಿವಾದದಲ್ಲಿನ ಆಯೋಗದ ತಾತ್ಕಾಲಿಕ ತೀರ್ಪಿನ ಜಾರಿಯ ಉಸ್ತುವಾರಿಗೆ ಸುಪ್ರೀಮ್ ಕೋರ್ಟ್ ಒಂದು ವ್ಯವಸ್ಥೆಯನ್ನು ರೂಪಿಸಿದ್ದರೂ, ಆಯೋಗದ ಶಿಫಾರ್ಸುಗಳಲ್ಲಿ ಒಂದಾದ ನಿರ್ವಹಣೆ ಮಂಡಳಿಯ ರಚನೆಗೆ ಜಯಲಲಿತಾ ಒತ್ತಾಯಪಡಿಸುತ್ತಿರುವ ಉದ್ದೇಶ, ತನ್ನ ರಾಜಕೀಯ ಶಕ್ತಿ ಇರುವಾಗಲೇ ಆ ವ್ಯವಸ್ಥೆಯನ್ನು ರೂಪುಗೊಳಿಸುವುದೇ.
ನಿಜ. ನದಿ ನೀರಿನ ಹಂಚಿಕೆಯ ವಿವಾದವನ್ನು ಪರಿಶೀಲಿಸುತ್ತಿರುವ ಆಯೋಗ ಅಂತಹ ಮಂಡಳಿಯ ರಚನೆಗೆ ಶಿಫಾರ್ಸು ಮಾಡಿದೆ. ಆದರೆ ಅದರ ತುರ್ತು ಅಗತ್ಯವೇನೂ ಈಗ ಇಲ್ಲ. ಅಂತಿಮ ತೀರ್ಪು ಬಂದ ಅನಂತರವೇ ಆ ವಿಷಯ ಕುರಿತ ಚಿಂತನೆ ಸೂಕ್ತ.
ಉದ್ದೇಶಿತ ನಿರ್ವಹಣಾ ಮಂಡಳಿಗೆ ಕಾವೇರಿ ಕಣಿವೆಯ ಎಲ್ಲ ಜಲಾಶಯಗಳ ನೀರಿನ ಸಂಗ್ರಹ ಹಾಗೂ ಬಿಡುಗಡೆಯ ಮೇಲೆ ಸಂಪೂರ್ಣವಾದ ನಿಯಂತ್ರಣ ಅಧಿಕಾರ ಪ್ರಾಪ್ತವಾಗುತ್ತದೆ. ಅಂದರೆ ಕರ್ನಾಟಕದಲ್ಲೇ ಹೆಚ್ಚಾಗಿರುವ ಕಾವೇರಿ ಜಲಾಶಯಗಳ ಮೇಲಿನ ನಿಯಂತ್ರಣವೇ ರಾಜ್ಯದ ಕೈ ತಪ್ಪಿಹೋಗುವ ಸಂಭವವೂ ಇದೆ. ಈ ವ್ಯವಸ್ಥೆ ಸ್ಪಷ್ಟವಾಗಿ ಕರ್ನಾಟಕದ ಹಿತಕ್ಕೆ ಮಾರಕ.
ಸುಪ್ರೀಮ್ ಕೋರ್ಟಿನಲ್ಲೂ ನಿಯಂತ್ರಣ ಮಂಡಳಿಯ ರಚನೆಯ ಪ್ರಸ್ತಾಪವಾಗಿದೆ. ಆದರೆ ನ್ಯಾಯಾಲಯ ಈಗಾಗಲೇ ಒಂದು ಉಸ್ತುವಾರಿ ಸಮಿತಿಯನ್ನು ರಚಿಸಿರುವುದರಿಂದ ಅಂತಿಮ ಹಂತದ ನಿಯಂತ್ರಣ ಮಂಡಳಿಯ ರಚನೆ ಒಂದು ತುರ್ತಿನ ಅಗತ್ಯವೇನೂ ಅಲ್ಲ ಎಂದೂ ಹೇಳಿದೆ.
ಆದರೂ ಜಯಲಲಿತಾ, ಈಗ ರಾಜಕೀಯವಾಗಿ ತಮಗೆ ಲಭ್ಯವಾಗಿರುವ ವಿಶಿಷ್ಟವಾದ ಪ್ರಭಾವ ಬೀರುವ ಶಕ್ತಿಯನ್ನು ಬಳಸಿಕೊಳ್ಳಲು ಮುಂದಾಗಿರುವುದು ಅವರ ಅನುಕೂಲದ ದೃಷ್ಟಿಯಿಂದ ಸರಿ. ಆದರೆ ಕರ್ನಾಟಕದ ಹಿತದೃಷ್ಟಿಯಿಂದ ಸರಿ ಅಲ್ಲ.
ಪ್ರಧಾನಿ ಮೋದಿ ಅವರು ನಿಯಂತ್ರಣ ಮಂಡಳಿಯ ರಚನೆಯ ಪ್ರಸ್ತಾಪವನ್ನು ಕುರಿತು ಸಂಬಂಧಪಟ್ಟ ಮಂತ್ರಾಲಯಗಳು ಹಾಗೂ ಅಧಿಕಾರಿಗಳಿಗೆ ರವಾನಿಸಿ, ಅದನ್ನು ಸಚಿವ ಸಂಪುಟದಲ್ಲಿ ಚರ್ಚಿಸುವ ಚಿಂತನೆಯನ್ನು ಪ್ರಕಟಿಸಿದ್ದಾರೆ. ಆದಷ್ಟು ಬೇಗ ಸಚಿವ ಸಂಪುಟದ ಅವಗಾಹನೆಗೆ ಸಲ್ಲಿಸಬೇಕಾಗುವ ಟಿಪ್ಪಣಿಯನ್ನು ಸಿದ್ಧಪಡಿಸುವ ತರಾತುರಿ ಪ್ರಯತ್ನವೂ ನಡೆದಿದೆ.
ಈ ಬೆಳವಣಿಗೆಯನ್ನು ಕರ್ನಾಟಕ ಸರ್ಕಾರವೂ ತುರ್ತು ಸಮಸ್ಯೆಯ ರೀತಿಯಲ್ಲೇ ಪರಿಗಣಿಸಬೇಕು. ಸದ್ಯಕ್ಕೆ ಮಂಡಳಿಯ ರಚನೆಯ ಅಗತ್ಯವಿಲ್ಲ ಎನ್ನುವ ಅಂಶವನ್ನು ಕೇಂದ್ರಕ್ಕೆ ಮನದಟ್ಟು ಮಾಡಿಕೊಡಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಆ ದಿಕ್ಕಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ದೆಹಲಿಗೆ ರಾಜ್ಯದ ಸರ್ವಪಕ್ಷಗಳ ಪ್ರತಿನಿಧಿಗಳ ನಿಯೋಗವನ್ನು ಕೊಂಡೊಯ್ಯುವ ನಿರ್ಧಾರವೂ ಆಗಿದೆ. ರಾಜ್ಯದ ಮೂವರು ಕೇಂದ್ರ ಸಚಿವರನ್ನು ಈ ನಿಯೋಗದಲ್ಲಿ ಸೇರಿಸಿಕೊಳ್ಳುವ ಚಿಂತನೆಯೂ ನಡೆದಿದೆ.
ಈ ವಿಚಾರದಲ್ಲಿ ರಾಜ್ಯ ಸರ್ಕಾರ ನಿರಂತರವಾಗಿ ಎಚ್ಚರಿಕೆಯಿಂದಿರಬೇಕಾದ್ದು ಸದ್ಯದ ಕಾರ್ಯಕ್ರಮ. ಬೇರೆ ಏನಾದರೂ ಬೆಳವಣಿಗೆಯಾದರೆ ಮುಂದಿನ ಮಾತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

