ಸಂಪಾದಕೀಯ

ಛಾವಣಿ, ಶೌಚಾಲಯ ನಿರ್ಮಾಣ ಹೀಗಿರಲಿ

Published On :

ಬೆಂಗಳೂರಿನ ಖ್ಯಾತ ಗಾಂಧೀವಾದಿಗಳಾಗಿದ್ದ ಎನ್. ನರಸಿಂಹಯ್ಯನವರು ಆಗ್ಗಾಗ್ಗೆ ಒಂದು ತಮಾಷೆ ಮಾಡುತ್ತಿದ್ದರು- "ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವಾಗ, ಮೂತ್ರ ವಿಸರ್ಜನೆ ಮಾಡಬೇಕಾಗಿ ಬಂದ ಸಂದರ್ಭದಲ್ಲಿ, ದುರ್ನಾತ ಬೀರುವ ನಗರಪಾಲಿಕೆ ಶೌಚಾಲಯಕ್ಕೆ ಮೂಗು ಮುಚ್ಚಿ ಕೊಂಡು ಹೋಗುವುದಕ್ಕಿಂತ, ರಸ್ತೆ ಬದಿಯ ಮರದ ಹಿಂದೆ ಹೋಗಿ ದೇಹ ಬಾಧೆ ತೀರಿಸಿಕೊಳ್ಳುವುದು ಉತ್ತಮ" ಎಂದು. ಚಾಮುಂಡಿ ಬೆಟ್ಟದ ಮೆಟ್ಟಿಲುಗಳಿಗೆ ಛಾವಣಿ ಹಾಕಿ ಅಲ್ಲಲ್ಲಿ ಶೌಚ ಗೃಹ ನಿರ್ಮಿಸುವ ಯೋಜನೆಯು ಮೇಲಿನಂತೆಯೇ ಒಂದು ತಮಾಷೆಯ ಪ್ರಸಂಗವೇ ಸರಿ. ಮೈಸೂರು ಚಾಮುಂಡಿ ಬೆಟ್ಟವನ್ನು ಕೆಲ ಉತ್ಸಾಹಿ ಮೈಸೂರಿನವರು ಮಾತ್ರ ಮೆಟ್ಟಿಲುಗಳನ್ನು ಹತ್ತಿ ಹೋಗುತ್ತಾರೆ. ಪರಸ್ಥಳಗಳಿಂದ ಬಂದವರು ತಮ್ಮ ಪ್ರವಾಸಿ ವಾಹನಗಳಲ್ಲಿ ಅಥವಾ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತೆರಳುತ್ತಾರೆ. ಮೆಟ್ಟಿಲು ಹತ್ತಿಕೊಂಡು ಹೋಗುವವರು ದೈವೀ ಭಾವನೆಯ ಮಡಿವಂತಿಕೆ ಇರುವುದರಿಂದ ಹಾಗೂ ಬೆಟ್ಟಕ್ಕೆ ಹೋಗಿ ಬರುವ ಅವಧಿ ಅಷ್ಟೇನೂ ಹೆಚ್ಚಿಲ್ಲದಿರುವುದರಿಂದ, ದೇಹಬಾಧೆ ತೀರಿಸಿಕೊಳ್ಳಲು ಅಷ್ಟಾಗಿ ಪ್ರಯತ್ನಿಸುವುದಿಲ್ಲ. ಹಾಗೇನಾದರೂ ಅವಸರವಾದರೂ ಕೂಡ ದೇವಿ ದರ್ಶನ ಪಡೆದ ನಂತರವೇ ಮುಂದಿನ ಕೆಲಸ. ಪುರುಷರು ಆಹ್ಲಾದಕರವಾಗಿ ಪಕ್ಕದ ಕಾಡಿನಲ್ಲೇ ವಿಸರ್ಜನೆಗೆ ಮುಂದಾಗುತ್ತಾರೆ. ಸಮಸ್ಯೆ ಇರುವುದು ಸ್ತ್ರೀ ಭಕ್ತಾದಿಗಳಿಗೆ ಮಾತ್ರ. ಹಾಗಾಗಿ ಒಟ್ಟೂ ಸಾವಿರ ಮೆಟ್ಟಿಲುಗಳಲ್ಲಿ ಎರಡು ಹಂತಗಳಲ್ಲಿ ಮಾತ್ರ ಅಂದರೆ 500 ಮೆಟ್ಟಿಲುಗಳ ನಂತರ ಹಾಗೂ ಬೆಟ್ಟದ ಮೇಲೆ ಸ್ವಚ್ಛ ಶೌಚಾಲಯ ವ್ಯವಸ್ಥೆ ಮಾಡಬಹುದು. ಇನ್ನು ಛಾವಣಿ ವಿಷಯಕ್ಕೆ ಬಂದರೆ, ಭಕ್ತಾದಿಗಳು ಅರಣ್ಯ, ಆಕಾಶ, ವಾಯು ಸೌಂದರ್ಯವನ್ನು ಸವಿಯುತ್ತಾ ಹತ್ತುತ್ತಾರೆ. ಆದರೆ ಬಿಸಿಲಿನ ಝಳ, ಮಳೆಯ ಮಹಾಪೂರ ತಪ್ಪಿಸಲು ನೂರು ಮೆಟ್ಟಿಲುಗಳ ಹಂತಕ್ಕೆ ಒಟ್ಟು ಹತ್ತು ಹಸಿರು ಛಾವಣಿಗಳನ್ನು (ಐವತ್ತು ಜನ ನಿಲ್ಲುವಷ್ಟು ಸ್ಥಳಾವಕಾಶ ಹೊಂದಿರುವಂತೆ) ನಿರ್ಮಿಸಿದರೆ ಸಾಕಷ್ಟಾಗುತ್ತದೆ. ನಗರಾಭಿವೃದ್ಧಿ ಪ್ರಾಧಿಕಾರ ಗಮನಿಸುವುದೇ?
-ಕೆ. ರಘುರಾಂ, ಮೈಸೂರು
ಅರ್ಜಿ ಪ್ರಕ್ರಿಯೆ ಬದಲಾಗಲಿ
ಈಚೆಗೆ ಬಿ.ಡಿ.ಎ. ಬೆಂಗಳೂರಿನಲ್ಲಿ 4228 ಫ್ಲ್ಯಾಟ್‌ಗಳನ್ನು ಹಂಚಿಕೆ ಮಾಡಲು ನಿರ್ಧರಿಸಿದ್ದು ಅದಕ್ಕಾಗಿ ಕೆಲವು ಸಾರ್ವಜನಿಕ ವಲಯ ಬ್ಯಾಂಕುಗಳ ಮೂಲಕ ಅರ್ಜಿಗಳನ್ನು ವಿತರಿಸುವ ಹಾಗೂ ಆರಂಭಿಕ ಠೇವಣಿಯೊಡನೆ ಪುನಃ ಸ್ವೀಕರಿಸುವ ವ್ಯವಸ್ಥೆ ಮಾಡಿದೆ. ಆರಂಭಿಕ ಠೇವಣಿಯು ವಿವಿಧ ವರ್ಗಗಳಿಗೆ ರುಪಾಯಿ 1 ರಿಂದ 4 ಲಕ್ಷಗಳಷ್ಟಾಗಿದ್ದು ಅದನ್ನು ಡಿ.ಡಿ/ಬ್ಯಾಂಕರ್ಸ್ ಚೆಕ್ ಮೂಲಕವೇ ಸಲ್ಲಿಸಲು ಸೂಚಿಸಲಾಗಿದೆ. ಇದಕ್ಕಾಗಿ ಅರ್ಜಿದಾರರು ರುಪಾಯಿ 1000 ದಿಂದ 2000 ವರೆಗೂ ಕಮಿಷನ್ ನೀಡಬೇಕಾಗುತ್ತದೆ. ಇದರ ಬದಲಿಗೆ ಅರ್ಜಿದಾರರ ವೈಯುಕ್ತಿಕ ಬ್ಯಾಂಕ್ ಖಾತೆಯ  ಚೆಕ್ ಮೂಲಕ ಆರಂಭಿಕ ಠೇವಣಿಯನ್ನು ಸ್ವೀಕರಿಸಿದಲ್ಲಿ ಈ ಕಮಿಷನ್ ಉಳಿತಾಯವಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಗಳನ್ನೂ ಬ್ಯಾಂಕುಗಳೇ ನಿರ್ವಹಿಸುವುದರಿಂದ ಅರ್ಜಿಯ ಜೊತೆಗೆ ನೀಡುವ ಚೆಕ್‌ಗಳನ್ನು ಆನ್‌ಲೈನ್ ಮೂಲಕ ಒಂದೆರಡು ದಿನಗಳಲ್ಲೇ ವಿಲೇವಾರಿ ಮಾಡಬಹುದಾಗಿದೆ. ಏನಾದರೂ ಚೆಕ್ ವಾಪಸ್ ಆದಲ್ಲಿ, ಆ ಅರ್ಜಿಯನ್ನು ತಡೆಹಿಡಿಯಬಹುದಾಗಿದೆ. ಜೊತೆಗೆ ಲಭ್ಯವಿರುವ ಫ್ಲ್ಯಾಟ್‌ಗಳಿಗಿಂತ ಅನೇಕ ಪಟ್ಟು ಹೆಚ್ಚಾಗಿ ಅರ್ಜಿಗಳು ಸಲ್ಲಿಕೆಯಾಗುವುದರಿಂದ, ನಂತರ ಹೆಚ್ಚಿನ ಸಂಖ್ಯೆಯ ಅರ್ಜಿದಾರರಿಗೆ ಆರಂಭಿಕ ಠೇವಣಿಯನ್ನು ಹಿಂತಿರುಗಿಸಲಾಗುತ್ತದೆ. ಅವರಿಗೂ ಸಹ ಈ ಕಮಿಷನ್‌ನ ಅನಗತ್ಯ  ಹೊರೆ ಬೀಳುವುದಿಲ್ಲ. ಇದೆಲ್ಲದರ ಹಿನ್ನಲೆಯಲ್ಲಿ ಬಿ.ಡಿ.ಎ. ಆರಂಭಿಕ ಠೇವಣಿಯನ್ನು ವೈಯುಕ್ತಿಕ ಚೆಕ್ ಮೂಲಕವೂ ಸಹ ಸ್ವೀಕರಿಸಲು ಅನುವು ಮಾಡಿಕೊಟ್ಟಲ್ಲಿ ಅರ್ಜಿದಾರರಿಗೆ ಉಪಯುಕ್ತವಾಗುತ್ತದೆ.
-ಬಿ.ಎಸ್. ಮನೋಹರ್, ಬೆಂಗಳೂರು

ಚುನಾವಣಾ ಆಯೋಗ ಕ್ರಮಕೈಗೊಳ್ಳಲಿ
ಲೋಕಸಭಾ ಚುನಾವಣೆ ಮತ್ತೆ ಬಂದಿದೆ. ಕೆಲ ಅಭ್ಯರ್ಥಿಗಳು ಎರಡೆರಡು ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರೆ. ಒಂದು ವೇಳೆ ಇವರು ಎರಡೂ ಕಡೆ ಗೆದ್ದಲ್ಲಿ ಒಂದು ಕ್ಷೇತ್ರದಲ್ಲಿ ಪುನಃ ಚುನಾವಣೆ ನಡೆಸಬೇಕಾಗುತ್ತದೆ. ಸರ್ಕಾರಕ್ಕೆ ಮತ್ತೆ ಕೋಟ್ಯಂತರ ರುಪಾಯಿ ಖರ್ಚು. ಹೀಗಾಗದಂತೆ ಒಬ್ಬ ಅಭ್ಯರ್ಥಿ ಒಂದು ಕ್ಷೇತ್ರದಿಂದ ಮಾತ್ರ ಸ್ಪರ್ಧಿಸುವ ಕಾನೂನು ಜಾರಿಗೆ ತರಬೇಕಾಗಿದೆ. ಚುನಾವಣಾ ಆಯೋಗ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು.
-ಪಿ. ಜಯವಂತ ಪೈ, ಕುಂದಾಪುರ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.