ಕರಾವಳಿ ಜನರಿಗೆ ಪ್ರಧಾನಿಯೇ ಎಲ್ಲ, ಸಂಸದ ಅಲ್ಲ

ಕರಾವಳಿ ಜನರಿಗೆ ಉದ್ಯೋಗ, ಆರ್ಥಿಕತೆ, ರೈತರ ವಿಷಯಗಳು ಈ ಬಾರಿಯ ಚುನಾವಣೆಯಲ್ಲಿ ಲೆಕ್ಕಕ್ಕೆ ...
ಬೆಳ್ತಂಗಡಿ ತಾಲ್ಲೂಕಿನ ಸುಲಿಕೇರಿ ಮೊಗ್ರು ಗ್ರಾಮದ ಮಲೆಕುಡಿಯ ಜನಾಂಗದವರು ವಾಸಿಸುತ್ತಿರುವ ಸ್ಥಳದಲ್ಲಿ ಧೂಳಿನಿಂದ ಕೂಡಿರುವ ರಸ್ತೆ
ಬೆಳ್ತಂಗಡಿ ತಾಲ್ಲೂಕಿನ ಸುಲಿಕೇರಿ ಮೊಗ್ರು ಗ್ರಾಮದ ಮಲೆಕುಡಿಯ ಜನಾಂಗದವರು ವಾಸಿಸುತ್ತಿರುವ ಸ್ಥಳದಲ್ಲಿ ಧೂಳಿನಿಂದ ಕೂಡಿರುವ ರಸ್ತೆ
Updated on: 
ಮಂಗಳೂರು: ಕರಾವಳಿ ಜನರಿಗೆ ಉದ್ಯೋಗ, ಆರ್ಥಿಕತೆ, ರೈತರ ವಿಷಯಗಳು ಈ ಬಾರಿಯ ಚುನಾವಣೆಯಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಕೇಸರೀಕರಣ, ಹಿಂದುತ್ವದ ಬಲಿಷ್ಠ ಕ್ಷೇತ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆ ಜನತೆಗೆ ಚುನಾವಣೆಯಲ್ಲಿ ಪ್ರಮುಖ ವಿಷಯವಾಗುವುದು ರಾಷ್ಟ್ರೀಯತೆ ಮತ್ತು ರಾಷ್ಟ್ರದ ಭದ್ರತೆ.
ಮಂಗಳೂರು ನಗರದಿಂದ ಹಿಡಿದು ಕುಗ್ರಾಮದವರೆಗೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ರಾಷ್ಟ್ರಮಟ್ಟದಲ್ಲಿ ಕೇಳಿಬರುತ್ತಿರುವ ರಫೆಲ್ ಯುದ್ಧ ವಿಮಾನ ಒಪ್ಪಂದ ವಿವಾದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಪುಲ್ವಾಮಾ ಭಯೋತ್ಪಾದಕ ದಾಳಿ, ಬಾಲಾಕೋಟ್ ವಾಯುದಾಳಿ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ಈ ಕ್ಷೇತ್ರದಲ್ಲಿ ಸತತ ಮೂರನೇ ಬಾರಿಗೆ ನಳಿನ್ ಕುಮಾರ್ ಕಟೀಲ್ ಅವರನ್ನು ಕಣಕ್ಕಿಳಿಸಿದೆ. ಅವರು 2009ರಿಂದ ಇಲ್ಲಿ ಸಂಸದರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುತ್ವ ಮತಗಳನ್ನು ಸೆಳೆಯಲು ಕಾಂಗ್ರೆಸ್ ಈ ಬಾರಿ ದೊಡ್ಡ ಯೋಜನೆ ರೂಪಿಸಿ ಮಿತುನ್ ರೈ ಎಂಬ ಯುವಕನನ್ನು ಕಣಕ್ಕಿಳಿಸಿದೆ.ಆದರೆ ಜಿಲ್ಲೆಯ ಜನತೆಗೆ ಯಾರು ಸಂಸದ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ ಎನ್ನುವುದಕ್ಕಿಂತ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಗೆದ್ದು ಬರಬೇಕೆಂಬ ಆಶಯ ಹೆಚ್ಚು. ಹೀಗಾಗಿ ಅದೇ ಪಕ್ಷದ ಅಭ್ಯರ್ಥಿಗೆ ಮತ ಹಾಕುವ ಯೋಚನೆಯಲ್ಲಿದ್ದಾರೆ.
ದೇಶದ ನಾಗರಿಕರಿಗೆ ಭದ್ರತೆ ನೀಡುವುದು ಸರ್ಕಾರದ ಜವಾಬ್ದಾರಿ. ಅದನ್ನು ಮೋದಿ ಸರಿಯಾಗಿ ನಿಭಾಯಿಸುತ್ತಿದ್ದಾರೆ ಎನಿಸುತ್ತಿದೆ ಎನ್ನುತ್ತಾರೆ ಮೂಡಬಿದ್ರಿಯ 33 ವರ್ಷದ ಗೃಹಿಣಿ ಗಾಯತ್ರಿ ವಿರೂಪಾಕ್ಷ. ರಾಷ್ಟ್ರೀಯತೆ ಎಂದರೆ ಬಿಜೆಪಿಗೆ ಮತ ಹಾಕುವುದು ಎಂದರ್ಥ ಎನ್ನುತ್ತಾರವರು. ಗಾಯತ್ರಿಯಂತೆ ಗ್ರಾಮದ ಇನ್ನೂ ಅನೇಕ ಮಹಿಳೆಯರು ತಮ್ಮ ಆದಾಯಕ್ಕೆ ಬೀಡಿ ಕಟ್ಟುತ್ತಾರೆ. ತಮ್ಮ ಕೆಲಸದ ಮಧ್ಯೆ ರಾಜಕೀಯದ ಬಗ್ಗೆ ಈ ಮಹಿಳೆಯರು ಬಿಸಿಬಿಸಿ ಚರ್ಚೆ ಮಾಡುತ್ತಿರುತ್ತಾರೆ. ಸಾವಿರ ಬೀಡಿಗಳಿಗೆ ಇವರಿಗೆ 160ರಿಂದ 170 ರೂಪಾಯಿಗಳು ಸಿಗುತ್ತವೆ.
2018ರ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡದ 8 ಕ್ಷೇತ್ರಗಳ ಪೈಕಿ ಏಳು ಸ್ಥಾನಗಳು ಬಿಜೆಪಿ ಪಾಲಾಗಿದ್ದವು. ಮಂಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ನಿಂದ ಯು.ಟಿ ಖಾದರ್ ಗೆದ್ದಿದ್ದಾರೆ. ಕಳೆದ ವರ್ಷದ ಪರಿಸ್ಥಿತಿಯೇ ಈ ಬಾರಿ ಕೂಡ ಜಿಲ್ಲೆಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ನೋಟು ಅನಾಣ್ಯೀಕರಣ ಮತ್ತು ಜಿಎಸ್ ಟಿ ಜಾರಿ ನಂತರ ವಾಣಿಜ್ಯ ಕೇಂದ್ರ ಮಂಗಳೂರಿನ ಉದ್ಯಮಿಗಳು, ಚಿಲ್ಲರೆ ವ್ಯಾಪಾರಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.ಆದರೆ ಅವುಗಳೆಲ್ಲವೂ ಆರಂಭದ ತೊಂದರೆಗಳಷ್ಟೇ ಎಂದು ಜನ ಮರೆತಿದ್ದಾರೆ.
ಇದು ಭವಿಷ್ಯದ ಬಗ್ಗೆ ಯೋಚನೆ ಮಾಡುವ ಸಮಯ. ಕೇಂದ್ರದಲ್ಲಿ ಬಲಿಷ್ಠ ನಾಯಕತ್ವ ಬೇಕು. ಒಬ್ಬರ ಕಾಲು ಮತ್ತೊಬ್ಬರು ಎಳೆಯುವ ನಾಯಕರು ನಮಗೆ ಬೇಡ ಎನ್ನುತ್ತಾರೆ ಮಂಗಳೂರಿನ ಸಣ್ಣ ಉದ್ಯಮಿ ಉದಯ್ ಎಂ. ಅವರು ಮಿತುನ್ ರೈ ಅವರ ಅಭಿಮಾನಿಯಾಗಿದ್ದರೂ ಕೂಡ ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕೆನ್ನುವ ಇಂಗಿತ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕೂಡ ಈ ಬಾರಿ ಬಲಪಂಥೀಯ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ತಮ್ಮ ಹಿತಾಸಕ್ತಿಗಳನ್ನು ಕೇಳುವವರು ಯಾರು ಎಂಬ ಆತಂಕ ಜಿಲ್ಲೆಯ ಅಲ್ಪಸಂಖ್ಯಾತರದ್ದು. ನಮ್ಮ ಸಂಸದರು ಇದುವರೆಗೆ ಇಲ್ಲಿಗೆ ಭೇಟಿ ನೀಡಿಲ್ಲ, ನಾವು ಉರುಸ್ ಗೆ ಕರೆದರೂ ಬರಲಿಲ್ಲ, ನಮ್ಮ ಗಣನೆಯೇ ಇಲ್ಲ ಎನ್ನುತ್ತಾರೆ ಉಳ್ಳಾಲದ 65 ವರ್ಷದ ಇಬ್ರಾಹಿಂ ಅಬ್ದುಲ್. ಕಾಂಗ್ರೆಸ್ ಗೆ ಮತ ಹಾಕೋಣವೆಂದರೆ ಅವರು ಕೂಡ ನಮ್ಮಂತ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬ ವಿಶ್ವಾಸವಿಲ್ಲ. ಯಾವ ಪಕ್ಷಕ್ಕೆ ಮತ ಹಾಕಬೇಕೆಂಬ ಚಿಂತೆಯಲ್ಲಿದ್ದೇವೆ ಎಂದರು.
ಇನ್ನು ಬೆಳ್ತಂಗಡಿಯ ಮಲೆಕುಡಿಯ ಜನಾಂಗದವರು ವಾಸಿಸುತ್ತಿರುವ ಗ್ರಾಮ ವಿದ್ಯುತ್, ರಸ್ತೆಯಂತಹ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com