ಹಾಸನ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನ್ನಮತ, ಜೆಡಿಎಸ್ಗಲ್ಲ, ಬಿಜೆಪಿಗೆ ಮತ ಹಾಕ್ತೇವೆ ಎಂದ ಕೈ ಕಾರ್ಯಕರ್ತರು
ಹಾಸನ ಲೋಕಸಭೆ ಕ್ಷೇತ್ರದದಲ್ಲಿ ಮೈತ್ರಿ ಅಭ್ಯರ್ಥಿ ಜೆಡಿಎಸ್ ಧುರೀಣ ಎಚ್.ಡಿ. ರೇವಣ್ನ ಪುತ್ರ ಪ್ರಜ್ವಲ್ ರೇವಣ್ಣ ಹಾಗೂ ಬಿಜೆಪಿ ಪರ ಎ. ಮಂಜು ಕಣದಲ್ಲಿದ್ದು ಇದೀಗ ಕಾಂಗ್ರೆಸ್ ಕಾರ್ಯಕರ್ತರು ಪಿಡಬ್ಲು....
ಹಾಸನ: ಹಾಸನ ಲೋಕಸಭೆ ಕ್ಷೇತ್ರದದಲ್ಲಿ ಮೈತ್ರಿ ಅಭ್ಯರ್ಥಿ ಜೆಡಿಎಸ್ ಧುರೀಣ ಎಚ್.ಡಿ. ರೇವಣ್ನ ಪುತ್ರ ಪ್ರಜ್ವಲ್ ರೇವಣ್ಣ ಹಾಗೂ ಬಿಜೆಪಿ ಪರ ಎ. ಮಂಜು ಕಣದಲ್ಲಿದ್ದು ಇದೀಗ ಕಾಂಗ್ರೆಸ್ ಕಾರ್ಯಕರ್ತರು ಪಿಡಬ್ಲುಡಿ ಸಚಿವ ಮತ್ತು ಜೆಡಿಎಸ್ ನಾಯಕ ಎಚ್. ಡಿ.ರೇವಣ್ಣ ಪರ ಪ್ರಚಾರ ಮಾಡಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಜೆಡಿಎಸ್ ಪಿತಾಮಹ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಮೊಮ್ಮಗನಾದ ಪ್ರಜ್ವಲ್ ಅವರಿಗೆ ಬೆಂಬಲಿಸಲು ಕಾಂಗ್ರೆಸ್ ಕಾರ್ಯಕರ್ತರು ಅಲ್ಲಗೆಳೆದಿದ್ದಾರೆ. ಶುಕ್ರವಾರ ನಡೆದ ಸಮಾರಂಭವೊಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಬೆಂಬಲ ಪಡೆದುಕೊಳ್ಳಲು ಆಗಮಿಸಿದ್ದ ರೇವಣ್ಣ ಎದುರಿಗೇ ಮುಜುಗರದ ಘಟನೆ ನಡೆದಿದೆ.
ಜ್ಯೋತಿಷ್ಯ, ವಾಸ್ತುವಿನಲ್ಲಿ ಅಪಾರ ನಂಬಿಕೆಯುಳ್ಳ ರೇವಣ್ಣ ಇಂದಿನ ಕಾರ್ಯಕ್ರಮಕೆ ಆಗಮಿಸುವಾಗಲೂ ಎಂಟು ಲಿಂಬೆಹಣ್ಣಿನೊಡನೆ ಆಗಮಿಸಿದ್ದು ವಿಶೇಷವಾಗಿತ್ತು. ಸಾಮಾನ್ಯವಾಗಿ ಅವರೆಲ್ಲೇ ಹೋಗುವುದಾದರೂ ಒಂದು ಲಿಂಬೆಹಣ್ಣನ್ನು ಜತೆಯಲ್ಲಿ ಒಯ್ಯುತ್ತಾರೆ.
ಇಂದಿನ ಕಾರ್ಯಕ್ರಮಕ್ಕೆ ಏಳೆಂಟು ನಿಂಬೆಹಣ್ಣು ತಂದಿದ್ದು ಅದನ್ನು ಹಿಡಿದೇ ಕಾರ್ಯಕ್ರಮದ ವೇದಿಕೆಯ ಆಸನದಲ್ಲಿ ಕುಳಿತ ರೇವಣ್ಣ ಅವರನ್ನು ಕಂಡ ಕಾಂಗ್ರೆಸ್ ಕಾರ್ಯಕರ್ತರು ತಾವು ಜೆಡಿಎಸ್ ಗೆ ಮತ ಪ್ರಚಾರ ನಡೆಸುವ ಬದಲು ಬಿಜೆಪಿಗೆ ಮತ ಹಾಕುವುದಾಗಿ ಹೇಳಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಗದ್ದಲವೆಬ್ಬಿಸದೆ ಸುಮ್ಮನಿರಲು ಮಾಡಿದ ಮನವಿಗಳು ವ್ಯರ್ಥವಾಗಿದ್ದವು."ನಾವು ಕಾಂಗ್ರೆಸ್ ನಾಯಕರ ನಿರ್ದೇಶನ ಪಾಲಿಸುವುದಿಲ್ಲ!" ಎಂದು ಕೂಗಿದ್ದಾರೆ.
"ನಾವು ನಿರಾಶಾದಾಯಕವಾದ ಕಾಂಗ್ರೆಸ್ ಕಾರ್ಯಕರ್ತರಿದ್ದೇವೆ, ನಾವೆಂದೂ ಜೆಡಿಎಸ್ ಗೆ ಬೆಂಬಲ ಸೂಚಿಸಲಾರೆವು. ಬದಲಾಗಿ ಬಿಜೆಪಿ ಅಭ್ಯರ್ಥಿಗೆ ನಾವು ಮತ ಚಲಾಯಿಸುತ್ತೇವೆ" ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರೇವಣ್ಣ ಉಪಸ್ಥಿತಿಯನ್ನು ಅವರು ವಿರೋಧಿಸಿದರು.
"ನಮ್ಮ ಪಕ್ಷದ ಕಾರ್ಯಕ್ರಮಕ್ಕೆ ಬರಲು ಅವರು (ರೇವಣ್ಣ) ಯಾರು? ಅವರಿಗೇಕೆ ನಾವು ಬೆಂಬಲಿಸಬೇಕು? ನಮಗೆ ಅವರ ಅಗತ್ಯವಿಲ್ಲ!" ಇನ್ನು ಪರಿಸ್ಥಿತಿಯನ್ನು ಶಾಂತಗೊಳಿಸಲು ಪೊಲೀಸರು ಹರಸಾಹಸಪಟ್ಟರು.
ಕಾಂಗ್ರೆಸ್ ನ ಪ್ರಭಾವಿ ನಾಯಕರಾಗಿದ್ದ ಎ. ಮಂಜು ಜೆಡಿಎಸ್ ಜತೆಗಿನ ಮೈತ್ರಿಯನ್ನು ವಿರೋಧಿಸಿ ಇತ್ತೀಚೆಗೆ ಬಿಜೆಪಿ ಸೇರ್ಪಡೆಯಾಗಿದ್ದು ಇದೀಗ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಇದುವೇ ಕಾರಣವಾಗಿದೆ. ಸಮ್ಮಿಶ್ರ ಸರ್ಕಾರ ರಚನೆಯಾದಂದಿನಿಂದ ಮಂಜು ಅದನ್ನು ವಿರೋಧಿಸುತ್ತಾ ಬಂದಿದ್ದರು. ಅದರಂತೆ ಇತ್ತೀಚಿನ ಬೆಳವಣಿಗೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅಲ್ಲದೆ ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಬಹಳಷ್ಟು ಬಾರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಅಸಮಾಧಾನ, ಗದ್ದಲ ಹೆಚ್ಚುತ್ತಿದ್ದಂತೆ ರೇವಣ್ಣ ಕಾಂಗ್ರೆಸ್ ಕಾರ್ಯಕರ್ತರ ಕ್ಷಮೆ ಯಾಚಿಸಿದ್ದಾರೆ."ನಾನೇನಾದರೂ ಸಣ್ಣ ತಪ್ಪುಗಳನ್ನು ಮಾಡಿದರೆ ನನ್ನನ್ನು ಕ್ಷಮಿಸಿನಮ್ಮ ಪುತ್ರನ ಜಯವನ್ನು ಖಚಿತಪಡಿಸಿಕೊಳ್ಳಲು ನಾವೆಲ್ಲಾ ಒಟ್ಟಾಗಿ ಕೆಲಸ ಮಾಡೋಣ" ಎಂದಿದ್ದಾರೆ.