ಕ್ರೊವೇಷಿಯಾ ಔಟ್, ಮೆಕ್ಸಿಕೊ ಪ್ರಿಕ್ವಾರ್ಟರ್‌ಗೆ

ರೇಸಿಫ್: ಅಂತಿಮ ಘಟ್ಟದಲ್ಲಿ ಕೇವಲ 10 ನಿಮಿಷಗಳ ಅಂತರದಲ್ಲಿ ಮೂರು ಗೋಲು ದಾಖಲಿಸಿದ ಮೆಕ್ಸಿಕೊ ಆಟಗಾರರು ಎದುರಾಳಿ ಕ್ರೊವೇಷಿಯಾ ತಂಡದ ಮುನ್ನಡೆಯ ಆಸೆಗೆ ಭಂಗ ಉಂಟುಮಾಡಿ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ 'ಎ' ಗುಂಪಿನಿಂದ ಹದಿನಾರರಘಟ್ಟ ಪ್ರವೇಶಿಸಿದೆ.
ಎರೇನಾ ಪೆರ್ನಾಂಬುಕೊದಲ್ಲಿ ಮಂಗಳವಾರ ನಡೆದ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮೆಕ್ಸಿಕೊ ತಂಡ 3-1 ಗೋಲುಗಳಿಂದ ಕ್ರೊವೇಷಿಯಾ ತಂಡವನ್ನು ಪರಾಭವಗೊಳಿಸಿತು. ಈ ಪಂದ್ಯದಲ್ಲಿ ಮೆಕ್ಸಿಕೊ ತಂಡ ಕ್ರೊವೇಷಿಯಾ ವಿರುದ್ಧ ಕೇವಲ ಡ್ರಾ ಸಾಧಿಸಿದ್ದರೂ ಸಹ ನಾಕೌಟ್ ತಲುಪಲಿತ್ತು. ಆದರೆ, ಕ್ರೊವೇಷಿಯಾ ಆಟಗಾರರು ಗೆದ್ದರೆ ಮಾತ್ರ ಮುನ್ನಡೆಯ ಭಾಗ್ಯ ತಮ್ಮದಾಗಿಸಿಕೊಳ್ಳುತ್ತಿದ್ದರು. ಈ ಗುರಿಯೊಂದಿಗೆ ಕ್ರೊವೇಷಿಯಾ ಹೋರಾಟ ನಡೆಸಿದರೂ ಸಹ ಮೆಕ್ಸಿಕೊ ಆಟಗಾರರ ಸಾಮರ್ಥ್ಯದ ಮುಂದೆ ಮಂಕಾಯಿತು. ಈ ಗೆಲವಿನೊಂದಿಗೆ ಮೆಕ್ಸಿಕೊ ಆಟಗಾರರು ಗುಂಪಿನಲ್ಲಿ ಬ್ರೆಜಿಲ್ ಜೊತೆ ಅಂಕ ಸಂಪಾದನೆಯಲ್ಲಿ ಸಮಗೌರವ ಸಾಧಿಸಿದ್ಗರು. ಆದರೆ, ಗೋಲುಗಳಿಕೆಯ ಸರಾಸರಿ ಆಧಾರದ ಮೆಕ್ಸಿಕೊ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದ ಗೌರವದೊಂದಿಗೆ ಮುಂದಿನ ಸುತ್ತು ಪ್ರವೇಶಿಸಿತು. ಮೊದಲ ಅವಧಿಯ ಆಟದಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ಅಂತಿಮ ಹಂತದಲ್ಲಿ ಕೇವಲ 18 ನಿಮಿಷಗಳ ಆಟದಲ್ಲಿ ಒಟ್ಟು 4 ಗೋಲುಗಳು ಸಂಪಾದನೆಯಾದವು. ಈ ಪೈಕಿ ಮೆಕ್ಸಿಕೊ 3 ಗೋಲು ಗಳಿಸಿ ಪಂದ್ಯವನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಆ್ಯಂಡ್ರೇಸ್ ಗುರ್ಡಾಡೊ, ಜಾವಿಯರ್ ಹೆರ್ನಾಂಡೆಜ್ ಮತ್ತು ಹಿರಿಯ ಆಟಗಾರ ನಾಯಕ ರಾಫೆಲ್ ಮಾರ್ಕ್ಯುಜ್ ತಲಾ ಒಂದೊಂದು ಗೋಲು ಗಳಿಸಿ ಮೆಕ್ಸಿಕೊದ ಪ್ರಭುತ್ವಕ್ಕೆ ಕಾರಣರಾದರು. ಈ ಮಧ್ಯೆ ಪಂದ್ಯದ 89ನೇ ನಿಮಿಷದಲ್ಲಿ ವರಟು ವರ್ತನೆಗಾಗಿ ಕ್ರೊವೇಷಿಯಾದ ಆ್ಯಂಟೆ ರೆಬಿಕ್ ಅವರಿಗೆ ಕೆಂಪು ಕಾರ್ಡ್ ನೀಡಿ ಹೊರಗೆ ಕಳುಹಿಸಲಾಯಿತು. ಕ್ರೊವೇಷಿಯಾ ಆಟಗಾರರೇ ಪಂದ್ಯದ ಮೇಲೆ ಹೆಚ್ಚಿನ ಹಿಡಿತ ಹೊಂದಿದ್ದರು. ಆದರೆ, ಗುರಿ ಸೇರುವ ಹಾದಿಯಲ್ಲಿ ಮಾತ್ರ ಹೆಚ್ಚಿನ ವೈಫಲ್ಯ ಅನುಭವಿಸುವುದರೊಂದಿಗೆ ಅಂತಿಮವಾಗಿ ದಯನೀಯ ಸೋಲು ಅನುಭವಿಸಬೇಕಾಯಿತು. ಕ್ರೊವೇಷಿಯಾ ತಂಡ 5 ಬಾರಿ ಗುರಿಯತ್ತ ಚೆಂಡು ಬಾರಿಸಿದರೆ, ಮೆಕ್ಸಿಕೊ ಆಟಗಾರರು 7 ಬಾರಿ ಈ ಪ್ರಯತ್ನ ಮಾಡಿದ್ದರು. ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮೆಕ್ಸಿಕೊ ಆಟಗಾರರು 'ಬಿ' ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಪ್ರಬಲ ಹಾಲೆಂಡ್ ತಂಡವನ್ನು ಎದುರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


