ಫಿಫಾ ವಿಶ್ವಕಪ್ 2014

ಪೋರ್ಚುಗಲ್ ಹೊರಕ್ಕೆ ಬ್ರೆಜಿಲಿಗರಿಗೆ ಬೇಸರ

ಪೋರ್ಚುಗಲ್ ಹೊರಕ್ಕೆ ಬ್ರೆಜಿಲಿಗರಿಗೆ ಬೇಸರ
Published On :

ಸಾವೊ ಪೌಲೊ: ಪೋರ್ಚುಗಲ್ ಫುಟ್ಬಾಲ್ ತಂಡ ಫಿಫಾ ವಿಶ್ವಕಪ್ ಪಂದ್ಯಾವಳಿಯ ಗುಂಪು ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿರುವುದು, ಪೋರ್ಚುಗಲ್ ಬ್ರೆಜಿಲ್ ಅಭಿಮಾನಿಗಳಿಗೆ ಹೆಚ್ಚು ನಿರಾಸೆ ಮೂಡಿಸಿದೆ.
ಬ್ರೆಜಿಲ್ ಅಭಿಮಾನಿಗಳಿಗೆ ತವರಿನ ತಂಡ ಮೊದಲ ಫೇವರಿಟ್ ತಂಡವಾಗಿದೆ. ನಂತರದ ಫೇವರಿಟ್ ತಂಡ ಎಂದರೆ ಪೋರ್ಚುಗಲ್. ಬ್ರೆಜಿಲ್ ತಂಡ ಆಡದಿದ್ದಾಗ ಸ್ಥಳೀಯ ಅಭಿಮಾನಿಗಳು ಪೋರ್ಚುಗಲ್‌ಗೆ ಬೆಂಬಲ ನೀಡುವುದು ಸಹಜ. ಹಾಗಾಗಿ ಪೋರ್ಚುಗಲ್ ತಂಡ ಈ ಬಾರಿ ಗುಂಪು ಹಂತದಲ್ಲೇ ತಮ್ಮ ಹೋರಾಟ ಅಂತ್ಯಗೊಳಿಸಿರುವುದು, ಬ್ರೆಜಿಲ್ ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ. ಪೋರ್ಚುಗಲ್ ಈ ಹಿಂದೆ ಬ್ರೆಜಿಲ್‌ನಲ್ಲಿ ಆಡಳಿತ ನಡೆಸಿದ್ದು, ಅಲ್ಲಿನ ಸಂಸ್ಕೃತಿ ಹಾಗೂ ಭಾಷೆಯ ಶೈಲಿ ಹೋಲಿಕೆಯಾಗುತ್ತದೆ. ಹಾಗಾಗಿ ಭಾವನಾತ್ಮಕವಾಗಿ ಬ್ರೆಜಿಲ್ ಅಭಿಮಾನಿಗಳು ಪೋರ್ಚುಗಲ್‌ಗೆ ಬೆಂಬಲ ನೀಡುತ್ತಾರೆ. ನಾವು ಬ್ರೆಜಿಲ್ ಹೊರತಾಗಿ ಪೋರ್ಚುಗಲ್ ತಂಡವನ್ನು ಬೆಂಬಲಿಸುತ್ತೇವೆ. ಕೇವಲ ಈಗ ಮಾತ್ರವಲ್ಲ ಬಹಳ ವರ್ಷಗಳಿಂದಲೂ ನಾವು ಬ್ರೆಜಿಲ್ ಆಡದಿದ್ದಾಗ ಪೋರ್ಚುಗಲ್ ತಂಡವನ್ನೇ ಬೆಂಬಲಿಸುತ್ತಿದ್ದೇವೆ. ಈ ಬಾರಿ ಅವರು ಆರಂಭದಲ್ಲೇ ನಿರ್ಗಮಿಸಿರುವುದು ಬೇಸರ ತಂದಿದೆ ಎಂದು ಸ್ಥಳೀಯ ಅಭಿಮಾನಿಗಳು ತಿಳಿಸಿದ್ದಾರೆ.

ಬೋನಸ್ ಪಡೆದ ನೈಜೀರಿಯಾ ಆಟಗಾರರು
ಬ್ರಾಸಿಲಿಯಾ: ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ನೈಜೀರಿಯಾ ತಂಡದ ಮುನಿಸನ್ನು ಶಮನಗೊಳಿಸಲಾಗಿದೆ. ಕಾರಣ ತಂಡದ ಬೇಸರಕ್ಕೆ ಕಾರಣವಾಗಿದ್ದ ಬೋನಸ್ ಹಣವನ್ನು ನೀಡಲಾಗಿದೆ. ಹೀಗಾಗಿ ಫ್ರಾನ್ಸ್ ವಿರುದ್ಧ ಪ್ರಿಕ್ವಾರ್ಟರ್‌ಫೈನಲ್ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ತಂಡ ಖುಷಿಯಿಂದ ಅಭ್ಯಾಸಕ್ಕಿಳಿದಿದೆ ಎಂದು ತಂಡದ ವಕ್ತಾರ ಶನಿವಾರ ತಿಳಿಸಿದ್ದಾರೆ.ಬೋನಸ್ ನೀಡದ ಹಿನ್ನೆಲೆಯಲ್ಲಿ, ತಮ್ಮ ಬೇಡಿಕೆಯನ್ನು ಪೂರೈಸುವಂತೆ ಒತ್ತಾಯಿಸಿದ್ದ ಆಟಗಾರರು ಗುರುವಾರ ಅಭ್ಯಾಸವನ್ನು ರದ್ದುಗೊಳಿಸಿದ್ದರು.
'ಆಟಗಾರರ ಬೇಡಿಕೆಯನ್ನು ಈಡೇರಿಸಲಾಗಿದೆ. ತಂಡದಲ್ಲಿ ಉಂಟಾಗಿದ್ದ ಬೇಸರ ಈಗ ಸಂಪೂರ್ಣ ಮಾಯವಾಗಿದ್ದು, ಎಲ್ಲ ಆಟಗಾರರು ಅಭ್ಯಾಸದಲ್ಲಿ ಮಗ್ನರಾಗಿದ್ದಾರೆ' ಎಂದು ತಂಡದ ಮಾಧ್ಯಮ ಅಧಿಕಾರಿ ಬೆನ್ ಅಲಾಯಿಯಾ ವರದಿಗಾರರಿಗೆ ತಿಳಿಸಿದ್ದಾರೆ.

ಸೂರೆಜ್ ಮೇಲ್ಮನವಿ ವಿಚಾರಣೆಗೆ ಫಿಫಾ ಸಮಿತಿ ಒಪ್ಪಿಗೆ
ಹ್ಯಾಮಿಲ್ಟನ್: ಇಟಲಿ ತಂಡದ ಆಟಗಾರನಿಗೆ ಕಚ್ಚಿದ ಪ್ರಕರಣದಲ್ಲಿ ನಾಲ್ಕು ತಿಂಗಳ ನಿಷೇಧದ ಶಿಕ್ಷೆ ಎದುರಿಸುತ್ತಿರುವ ಉರುಗ್ವೆ ತಂಡದ ಸ್ಟ್ರೈಕರ್ ಲೂಯಿಸ್ ಸೂರೆಜ್ ಫಿಫಾಗೆ ಮೇಲ್ಮನವಿ ಸಲ್ಲಿಸಿದ್ದು, ಫಿಫಾ ಸಮಿತಿ ವಿಚಾರಣೆ ನಡೆಸಲು ಮುಂದಾಗಿದೆ. ಈ ಪ್ರಕರಣದ ವಿಚಾರಣೆ ನಡೆಸುವ ಸಮಿತಿಯ ಅಧ್ಯಕ್ಷತೆಯನ್ನು ಬರ್ಮುಡಾ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಲ್ಯಾರ್ರಿ ಮುಸ್ಸೆಂಡೆನ್ ವಹಿಸಿದ್ದಾರೆ. ಹಾಗಾಗಿ ಲ್ಯಾರ್ರಿ ಕೈಯಲ್ಲಿ ಸೂರೆಜ್ ಭವಿಷ್ಯವಿದೆ ಎಂದು ಬಿಂಬಿಸಲಾಗುತ್ತಿದೆ. ಸೂರೆಜ್ ಇಟಲಿ ತಂಡದ ಆಟಗಾರನಿಗೆ ಕಚ್ಚುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ ಸೂರೆಜ್ ಈ ರೀತಿಯಾದ ಪ್ರಕರಣದಲ್ಲಿ ಮೂರನೇ ಬಾರಿಗೆ ಭಾಗಿಯಾಗುತ್ತಿದ್ದಾರೆ.  ಈ ಪ್ರಕರಣದಿಂದ ಸೂರೆಜ್ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಕೆಲವರು ಸೂರೆಜ್‌ಗೆ ಒಂದು ವರ್ಷದ ನಿಷೇಧ ಹೇರಬೇಕೆಂದು ಆಗ್ರಹಿಸಿದ್ದರು. ಆದರೆ ಉರುಗ್ವೆ ತಂಡ ಮಾತ್ರ ಸೂರೆಜ್ ಮೇಲಿನ ಶಿಕ್ಷೆಗೆ ತೀವ್ರ ಖಂಡಿಸಿದ್ದಾರೆ.  ವಿಚಾರಣೆ ಮುಕ್ತಾಯದ ನಂತರವಷ್ಟೇ ಸೂರೆಜ್ ಕಠಿಣ ಶಿಕ್ಷೆಯಿಂದ ಪಾರಾಗುವರೇ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.