

ನೆಗಡಿ, ಕೆಮ್ಮು, ಜ್ವರ ಬಂದ ಕೂಡಲೇ ಎಲ್ಲರಿಗೂ ತಲೆಬಿಸಿ ಶುರುವಾಗುತ್ತದೆ. ಅದರಿಂದ ಮುಕ್ತಿ ಪಡೆಯುವುದಕ್ಕೆಂದು ಹತ್ತಿರದ ಮೆಡಿಕಲ್ ಶಾಪ್ಗೆ ಹೋಗಿ ಮನಸ್ಸಿಗೆ ಬಂದ ಔಷಧಿ ತೆಗೆದುಕೊಳ್ಳುತ್ತಾರೆ. ನೆಗಡಿ ಪ್ರಾಣ ತೆಗೆಯುವ ಕಾಯಿಲೆ ಅಲ್ಲದಿದ್ದರೂ ನೆಮ್ಮದಿ ಕೆಡಿಸಬಲ್ಲ ಸಮಸ್ಯೆ.
ಮಕ್ಕಳಲ್ಲಿ ನೆಗಡಿ ಸಮಸ್ಯೆ ಕೊಂಚ ಹೆಚ್ಚು. ದೊಡ್ಡವರಿಗೂ ವರ್ಷದಲ್ಲಿ ನಾಲ್ಕಾರು ಬಾರಿ ಬಂದು ಹೋಗುತ್ತದೆ. ಕಟ್ಟಿದ ಮೂಗು, ಉಸಿರಾಟದ ತೊಂದರೆ, ಕಣ್ಣಲ್ಲಿ ನೀರು ಸುರಿಯುವುದು, ಮೂಗಿನೊಳಗೆ ತುರಿಕೆ, ಸುಸ್ತು, ಜ್ವರ, ಕೆಮ್ಮು, ತಲೆನೋವಿನ ಸಮಸ್ಯೆಗಳಿಂದ ಸಾಕಪ್ಪಾ ಸಾಕು ಎನಿಸಿಬಿಡುತ್ತದೆ. ಅದಕ್ಕಿವೆ ಕೆಲವು ಮನೆ ಮದ್ದು...
ನೆಗಡಿಯಾದರೆ ದಿನಕ್ಕೆ ಆರೇಳು ಲೋಟಗಳಷ್ಟು ಬಿಸಿ ನೀರು ಕುಡಿಯಿರಿ.
ಒಂದು ಚಮಚದಷ್ಟು ಬಿಳಿ ಈರುಳ್ಳಿ ರಸವನ್ನು ದಿನಕ್ಕೆ 2ರಿಂದ 5 ಸಲ ಸೇವಿಸಿ. ನೆಗಡಿ, ಒಣ ಕೆಮ್ಮು ಕಡಿಮೆ ಮಾಡಲು ಇದು ಸಹಕಾರಿ.
ಕಷಾಯ ಚಿಕಿತ್ಸೆ
ಕಟ್ಟಿದ ಮೂಗು, ಉಸಿರಾಟದ ತೊಂದರೆ, ಸೈನಸ್ ಮುಂತಾದ ತೊಂದರೆಗಳಿಗೆ ಮನೆಯಲ್ಲಿಯೇ ಕಷಾಯ ತಯಾರಿಸಬಹುದು. 300 ಮಿ.ಲೀ. ನೀರಿಗೆ ಒಂದೊಂದು ಚಮಚದಷ್ಟು ಕರಿಮೆಣಸು, ಜೀರಿಗೆ, ಕೊತ್ತಬಂರಿ ಪುಡಿ ಮಾಡಿ ಹಾಕಬೇಕು. 5 ಲವಂಗ, 1 ತುಂಡು ದಾಲ್ಚಿನ್ನಿ, 10 ಬೆಳ್ಳುಳ್ಳಿ, 5ರಿಂದ 10 ಗ್ರಾಂ ಪುಡಿ ಮಾಡಿದ ಶುಂಠಿ, 10 ತುಳಸಿ ಎಲೆ, 2 ಚಿಟಿಕೆ ಅರಿಶಿನ ಮತ್ತು 1 ಚಿಟಿಕೆ ಉಪ್ಪನ್ನು ನೀರಿಗೆ ಹಾಕಿ ಕುದಿಸಿ. ಈ ಕಷಾಯವನ್ನು ಸೋಸಿ ದಿನಕ್ಕೆ ಮೂರು ಸಲ 20 ಮಿ.ಲೀ.ನಷ್ಟು ಕುಡಿಯಬೇಕು. ಇದನ್ನು ಮೂರು ದಿನ ಮುಂದುವರಿಸಬೇಕು. ಇನ್ನು ಇದೇ ಕಷಾಯವನ್ನು ಸ್ಟೀಮ್ ತೆಗೆದುಕೊಳ್ಳಲೂ ಬಳಸಬಹುದು.
- ಚನ್ನು ಮೂಲಿಮನಿ