ಕ್ಲಿಪ್ ಪಾತ್ರ

ಹಲ್ಲಿಗೆ ಸಂಬಂಧಿಸಿದಂತೆ ಸಾವಿರಾರು ಮೂಢನಂಬಿಕೆಗಳಿವೆ. ಅಂಥದ್ದರಲ್ಲಿ ಕ್ಲಿಪ್ ಹಾಕಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಜನರಲ್ಲಿ ತಪ್ಪು...
ಕ್ಲಿಪ್ ಪಾತ್ರ
Updated on: 

ಹಲ್ಲಿಗೆ ಸಂಬಂಧಿಸಿದಂತೆ ಸಾವಿರಾರು ಮೂಢನಂಬಿಕೆಗಳಿವೆ. ಅಂಥದ್ದರಲ್ಲಿ ಕ್ಲಿಪ್ ಹಾಕಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಜನರಲ್ಲಿ ತಪ್ಪು ಕಲ್ಪನೆಗಳು ಇಲ್ಲದೇ ಇರುತ್ತಾ? ಅವುಗಳಲ್ಲಿ ಇಲ್ಲಿವೆ ಕೆಲವು...

ಹಲ್ಲಿಗೆ ಕ್ಲಿಪ್ (ಉಬ್ಬುಹಲ್ಲು) ಕೇವಲ ಮಕ್ಕಳಿಗೆ ಮಾತ್ರ
ಇದು ತಪ್ಪು. ಉಬ್ಬುಹಲ್ಲಿಗೆ ಧರಿಸುವ ಕ್ಲಿಪ್ 8ನೇ ವರ್ಷದಿಂದ ಪ್ರಾರಂಭಿಸಿ 50 ವರ್ಷದಛವರೆಗೂ ಹಾಕಿಸಬಹುದು. ಮೂಳೆಯ ದೃಢತೆ ಹಾಗೂ ಸಾಂದ್ರತೆ ಆಧರಿಸಿ ಚಿಕಿತ್ಸೆ ನೀಡಲಾಗುತ್ತದೆ. ಆದರೆ 25ರ ವಯಸ್ಸಿನ ಒಳಗೆ ಚಿಕಿತ್ಸೆ ಶೀಘ್ರ ಫಲಕಾರಿಯಾಗುತ್ತದೆ.

ಹಲ್ಲಿಗೆ ಕ್ಲಿಪ್ ಹಾಕಿಸಲು 18 ವರ್ಷವಾಗಿರಬೇಕು.
ಇದೂ ಸುಳ್ಳು. ಹಲ್ಲಿಗೆ ಕ್ಲಿಪ್ ಹಾಕಿಸಲು ಎಲ್ಲ ಹಾಲು ಹಲ್ಲು ಉದುರಬೇಕೆಂಬುದೇನೋ ಸರಿ. ಆದರೆ ಬೆಳವಣಿಗೆ ಹಂತದಲ್ಲಿಯೇ ಸರಿಪಡಿಸುವ ವಿಧಾನದಿಂದ ಕ್ಲಿಪ್‌ನ ಪ್ರಕ್ರಿಯೆ ವೇಗ ಪಡೆಯುತ್ತದೆ. 18 ವರ್ಷವಾಗುವವರೆಗೆ ಕಾಯುವ ಅವಶ್ಯಕತೆಯಿರುವುದಿಲ್ಲ. 8ನೇ ವಯಸ್ಸಿನಿಂದ, 15-16ರವರೆಗೆ ಹಲ್ಲು ಬರುವುದರಿಂದ ಈ ವಯಸ್ಸೇ ಚಿಕಿತ್ಸೆಗೆ ಅತ್ಯಂತ ಪೂರಕವಾಗಿರುತ್ತದೆ.

ಕ್ಲಿಪ್ ಹಾಕಿಸಲು ಹಲ್ಲು ಕಡ್ಡಾಯವಾಗಿ ತೆಗೆಯಲೇಬೇಕು.
ಇದು ಸಹ ತಪ್ಪು. ಹಲ್ಲಿಗೆ ಕ್ಲಿಪ್ ಧರಿಸಲು ಹಲ್ಲು ತೆಗೆಸಲೇಬೇಕೆಂಬ ನಿಯಮವಿಲ್ಲ. ಆದರೆ ಚಿಕಿತ್ಸೆಗೆ ಅನಿವಾರ್ಯತೆ ಇದ್ದಾಗ, ಹಲ್ಲುಗಳ ನಡುವಿನ ಸಂದುಗಳನ್ನು ಬಳಸಿಕೊಳ್ಳಲು ಆಗದಿದ್ದಾಗ ಮಾತ್ರ ಹಲ್ಲು ತೆಗೆಯಬೇಕಾಗುತ್ತದೆ ಹೊರತು ಎಲ್ಲರಿಗೂ ಅಲ್ಲ.

ಕ್ಲಿಪ್ ಚಿಕಿತ್ಸೆ ಅತ್ಯಂತ ನೋವುದಾಯಕ.
ಕ್ಲಿಪ್ ಹಾಕಿಸಿದ ಒಂದೆರಡು ದಿನ ಮಾತ್ರ ಚುಚ್ಚುವ, ಒತ್ತುವ, ಸೆಳೆತದ ಅತ್ಯಂತ ಸಾಧಾರಣ ಮಟ್ಟದ ನೋವಿರುತ್ತದೆ. ಇದು ಸಾಮಾನ್ಯ. ಇದಕ್ಕಾಗಿ ವೈದ್ಯರನ್ನು ಕಾಣಬೇಕು. ನೋವು ನಿವಾರಕ ಪಡೆಯಬೇಕು. ಇದಕ್ಕೆ ಹೆದರಿ ಚಿಕಿತ್ಸೆ ಪಡೆಯದಿರುವುದು ಸರಿಯಲ್ಲ.
ಕ್ಲಿಪ್ ಚಿಕಿತ್ಸೆ ಅತ್ಯಂತ ದೀರ್ಘ ಸಮಯದ್ದಾಗಿರುತ್ತದೆ.
ಹಾಗೇನೂ ಇಲ್ಲ. ಪ್ರತಿ ವ್ಯಕ್ತಿಯ ಮೂಳೆಯ ದೃಢತೆಯ ಆಧಾರದ ಮೇಲೆ ಚಿಕಿತ್ಸೆ, ಹಲ್ಲಿನ ಜರುಗಾಟ ಆಗುತ್ತದೆ. ಕೆಲವರಲ್ಲಿ 6-8 ತಿಂಗಳಿನಲ್ಲಿ ಆದರೆ ಮತ್ತೆ ಕೆಲವರಲ್ಲಿ 11 ತಿಂಗಳು, ಅಥವಾ 2 ವರ್ಷದ ವರೆಗೂ ಹಿಡಿಯಬಹುದು. ಜೀವನಪರ್ಯಂತ ಸುಂದರ ಮುಖ, ಹಲ್ಲು ಬೇಕಾಗಿದ್ದಲ್ಲಿ ಈ ಚಿಕಿತ್ಸೆ ಸಮಯಕ್ಕೆ ಒಗ್ಗಲೇ ಬೇಕಾಗುತ್ತದೆ.

ಕ್ಲಿಪ್ ಹಾಕಿಸಿದರೆ ಊಟ ಮಾಡಲು ಆಗುವುದೇ ಇಲ್ಲ.
ಜಗಿಯುವ ದವಡೆಹಲ್ಲಿನ ಮೇಲ್ಭಾಗದಲ್ಲಿ ಯಾವುದೇ ಕ್ಲಿಪ್ ಇರದ ಕಾರಣ ಊಟ ಮಾಡಲು ತೊಂದರೆ ಆಗುವುದಿಲ್ಲ. ಕ್ಲಿಪ್ ಬಟನ್ ಇರುವ ಸ್ಥಳದ ಮುಂಭಾಗ ಬಾಚಿಹಲ್ಲುಗಳಿಂದ ಎಂದಿಗೂ ಜಗಿಯಬಾರದಷ್ಟೇ. ಅದಕ್ಕಾಗಿ ವೈದ್ಯರು ಸೂಕ್ತ ಸಲಹೆ ನೀಡುತ್ತಾರೆ.

- ಡಾ. ಕೆ.ವಿ. ಸಂತೋಷ್ ಹೊಳಲ್ಕೆರೆ
(9342466936)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com