ಕುಟುಂಬಕ್ಕೆ ಶಿಶುವಿನ ಆಗಮನವಾದಾಗ ನೂತನ ಪೋಷಕರ ಬಳಿ ಸೂಕ್ತ ಮಾಹಿತಿ ಇರುವುದಿಲ್ಲ. ಹಾಗಾಗಿ ಅವರು ಹಿರಿಯರನ್ನು ಅವಲಂಬಿಸುತ್ತಾರೆ. ಸಿಗುವ ಎಲ್ಲ ಸಲಹೆಗಳು ನಿಜ ಅಥವಾ ಲಾಭದಾಯಕವಾಗಿರುತ್ತವೆ ಎಂದೇನಿಲ್ಲ. ಶಿಶು ಆರೈಕೆ ಕುರಿತಂತೆ ಕೆಲವು ಸಾಮಾನ್ಯ ತಪ್ಪು ತಿಳಿವಳಿಕೆಗಳು ಇಲ್ಲಿವೆ...
ಶಿಶು ಜನಿಸಿ ಕೆಲವೇ ಗಂಟೆಗಳ ಒಳಗೆ ಮಗುವನ್ನು ಎತ್ತಿಕೊಳ್ಳದಿದ್ದರೆ ತಾಯಿಗೆ ಅದರೊಂದಿಗೆ ಸೂಕ್ತ ಸಂಬಂಧ ಸಾಧ್ಯವಾಗದು.
ಹಲ್ಲು ಹುಟ್ಟುವಾಗ ಜ್ವರ, ಭೇದಿ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂದು ಕೆಲವರು ನಂಬುತ್ತಾರೆ. ಆದರೆ, ಹಲ್ಲು ಹುಟ್ಟುವ ಪ್ರಕ್ರಿಯೆ ಅತ್ಯಂತ ಸದ್ದಿಲ್ಲದೆ ನಡೆಯುವಂಥದ್ದಾಗಿದೆ.
ಶಿಶುವಿಗೆ ಆಹಾರವನ್ನು ಮೂರು ತಿಂಗಳಿಂದ ನೀಡಬೇಕು ಎಂದು ಕೆಲವರು ಹೇಳುತ್ತಾರೆ. ಆದರೆ, 4ರಿಂದ 6 ತಿಂಗಳ ನಂತರವೇ ಆಹಾರ ನೀಡಬೇಕು. ಅದರಲ್ಲೂ 6 ತಿಂಗಳ ನಂತರ ನೀಡುವುದು ಒಳಿತು.
ತಾಯಂದಿರು ವೃತ್ತಿಜೀವನ ಕಟ್ಟುವಲ್ಲಿ ನಿರತರಾಗಿದ್ದು, ಮಕ್ಕಳಿಗೆ ಬಾಟಲ್ ಹಾಲನ್ನು ಶೀಘ್ರವಾಗಿ ಆರಂಭಿಸಲು ಇಚ್ಛಿಸುತ್ತಾರೆ. ಇದು ಅತ್ಯಂತ ಅಸುರಕ್ಷಿತವಾಗಿದ್ದು ಸೋಂಕು ಮತ್ತು ಅಸ್ವಸ್ಥತೆಗೆ ಆಹ್ವಾನ ನೀಡುತ್ತದೆ.
ಎದೆ ಹಾಲನ್ನು ತಕ್ಷಣ ಮಗುವಿಗೆ ಕುಡಿಸಬೇಕೆಂಬ ತಪ್ಪುಕಲ್ಪನೆ ಜನರಲ್ಲಿದೆ. ಆದರೆ, ಸಾಮಾನ್ಯ ಕೋಣೆಯ ತಾಪಮಾನದಲ್ಲಿ ಈ ಹಾಲನ್ನು 4ರಿಂದ 6 ಗಂಟೆವರೆಗೆ ಸುರಕ್ಷಿತವಾಗಿಡಬಹುದು.
ಅಳುವ ಮಕ್ಕಳಿಗೆ ಘನಂ, ಗುಟ್ಟಿ, ಗ್ರೇಪ್‌ವಾಟರ್ ನೀಡುವುದು ಅತ್ಯಂತ ಅಪಾಯಕಾರಿ. ಇದನ್ನು ಯಾವುದೇ ಸಮಯದಲ್ಲೂ ಅಭ್ಯಾಸವಾಗಿಸಬಾರದು.
ಪೋಷಕರು ಮಕ್ಕಳನ್ನು ಸಾಕಲು ಸುಲಭ ಮಾರ್ಗಗಳನ್ನು ಹುಡುಕಲಾರಂಭಿಸಿದ್ದಾರೆ. ಇದಕ್ಕಾಗಿ ನ್ಯಾಪಿ ಪ್ಯಾಡ್‌ಗಳಂಥ ಆಯ್ಕೆಗಳೂ ಬಂದಿವೆ. ಇವುಗಳನ್ನು ಆದಷ್ಟು ತಪ್ಪಿಸುವುದು ಒಳಿತು.
ರಬ್ಬರ್ ನಿಪ್ಪಲ್ ಮುಂತಾದವುಗಳನ್ನು ಮಕ್ಕಳ ಬಾಯಿಗೆ ನೀಡುವುದೂ ಅಸುರಕ್ಷಿತ. ಇವುಗಳಿಂದ ಸೋಂಕು ಮತ್ತು ಮೊಲೆ ತೊಟ್ಟಿನ ಗೊಂದಲ ಉಂಟಾಗುವ ಸಾಧ್ಯತೆ ಇರುತ್ತದೆ.
ಶಿಶುವಿನ ಆರೈಕೆಯಲ್ಲಿ ಸರಿಯಾದ ಮಾರ್ಗಗಳನ್ನು ಕುರಿತು ಮಕ್ಕಳ ತಜ್ಞರ ಸಲಹೆ ಪಡೆಯುವುದು ಅವಶ್ಯ.
- ಡಾ. ಪಿ.ಎಸ್. ರಾಘವನ್, ಮಕ್ಕಳ ತಜ್ಞರು, ಅಪೋಲೊ ಹಾಸ್ಪಿಟಲ್ಸ್, ಬೆಂಗಳೂರು.