ಮೂತ್ರ ಶೋಕ

ಮುಟ್ಟು, ಲೈಂಗಿಕತೆ ಹಾಗೂ ಮೂತ್ರ ಸೋಂಕುಗಳ ಬಗ್ಗೆ ಮಹಿಳೆ ಮಾತನಾಡುವುದೇ ಕಡಿಮೆ. ಇವುಗಳು ಸಹಜವಾದರೂ ಆಕೆಗೇನೋ ಮಡಿವಂತಿಕೆ.
ಮೂತ್ರ ಶೋಕ
Updated on: 

ಮುಟ್ಟು, ಲೈಂಗಿಕತೆ ಹಾಗೂ ಮೂತ್ರ ಸೋಂಕುಗಳ ಬಗ್ಗೆ ಮಹಿಳೆ ಮಾತನಾಡುವುದೇ ಕಡಿಮೆ. ಇವುಗಳು ಸಹಜವಾದರೂ ಆಕೆಗೇನೋ ಮಡಿವಂತಿಕೆ. ಆ ಕಾರಣಕ್ಕೋ ಏನೋ, ಆಕೆ ಇವುಗಳಿಗೆ ಸಂಬಂಧಿಸಿದಂತೆ ಸಣ್ಣ ಪುಟ್ಟ ಸಮಸ್ಯೆಗಳನ್ನು ಆಗಾಗ ಅನುಭವಿಸುತ್ತಲೇ ಇರುತ್ತಾಳೆ.

ಅದರಲ್ಲೂ ವಿಶೇಷವಾಗಿ ಮೂತ್ರ ಸೋಂಕು ಮಹಿಳೆಯರನ್ನು ಕಾಡುವ ಸಾಮಾನ್ಯ ಸಮಸ್ಯೆ. ಸೀನಿದರೂ ಆಕೆಗೆ ಹನಿ ಹನಿ ಮೂತ್ರ ಹೋಗುತ್ತಿರುತ್ತದೆ. ಮೂತ್ರ ವಿಸರ್ಜಿಸಿದ ನಂತರ ಅತೀವ ಒತ್ತಡ ಹಾಗೂ ಉರಿಯಿಂದ ಬಳಲುತ್ತಾಳೆ. ಹಾಗಂತ ಇದು ಅಂಥ ಡಿಸ್ಟರ್ಬ್ ಮಾಡುವ ಸಮಸ್ಯೆಯೂ ಅಲ್ಲ. ಆದರೂ ಕಿರಿಕಿರಿ. ದೈನಂದಿನ ಕಾರ್ಯಗಳಿಗೆ ತೊಂದರೆಯನ್ನುಂಟುಮಾಡುತ್ತದೆ. ಅಲ್ಲದೆ ಭಾವನಾತ್ಮಕವಾಗಿಯೂ ಹಿಂಸೆಯಾಗುವಂತೆ ಮಾಡುತ್ತದೆ. ಹೇಳಿಕೊಳ್ಳುವಂಥ ಸಮಸ್ಯೆಯಲ್ಲ. ಆದರೆ, ಹೇಳದೇ ಬಿಡೋದಿಕ್ಕಾಗಲ್ಲ. ಒಟ್ಟಿನಲ್ಲಿ ಹೆಣ್ಣು ಮಕ್ಕಳನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಹಾಕುವಂಥ ಸಮಸ್ಯೆ ಯೂರಿನರಿ ಟ್ರ್ಯಾಕ್ ಇನ್‌ಫೆಕ್ಷನ್ (UTI).

ಯುಟಿಐ ಒಂದು ಕಾಮನ್ ವೈದ್ಯಕೀಯ ಸಮಸ್ಯೆ. ಇದನ್ನು ಮುಕ್ತವಾಗಿ ಮತ್ತು ತಕ್ಷಣವೇ ಪರಿಹರಿಸಿಕೊಳ್ಳಬೇಕು. ಮುಂದೆ ಹೆಚ್ಚಿನ ತೊಡಕುಗಳಾಗದ ಹಾಗೆ ವೈದ್ಯರೊಂದಿಗೆ ನಿಸ್ಸಂಕೋಚವಾಗಿ ಚರ್ಚಿಸಬೇಕು. ಸರಿಯಾಗಿ ವಿವರಗಳನ್ನು ತಿಳಿಸದಿದ್ದರೆ ಮುಂದೆ ಸಮಸ್ಯೆಗಳು ಹೆಚ್ಚಾಗಬಹುದು. ಶೇ.50ಕ್ಕೂ ಹೆಚ್ಚು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದು, ಮೂತ್ರಪಿಂಡಕ್ಕೆ ಸೋಂಕು ತಗುಲದಂತೆ ಎಚ್ಚರ ವಹಿಸಬೇಕು ಎನ್ನುತ್ತಾರೆ ಅಪೊಲೋ ಆಸ್ಪತ್ರೆಯ ಗೈನಾಕೋಲಾಜಿಸ್ಟ್ ಡಾ. ಬೀನಾ ಜೇಸಿಂಗ್.

ಶೇ.80-90ರಷ್ಟು ಸಮಸ್ಯೆಗೆ ಇಕೋಲಿ ಎಂಬ ಬ್ಯಾಕ್ಟೀರಿಯಾವೇ ಕಾರಣ. ಕೆಲವೊಮ್ಮೆ ಈ ಸಮಸ್ಯೆಗೆ ಆ್ಯಂಟಿಬಯೋಟಿಕ್ ನೀಡಲಾಗುತ್ತದೆ. ಆದರೆ, ಪ್ರತಿಜೀವಾಣುಗಳನ್ನು ನಿರೋಧಿಸುವ ಬ್ಯಾಕ್ಟೀರಿಯಗಳು ವಿಕಾಸಗೊಂಡಿದ್ದರೆ ಇದೊಂದು ಗಂಭೀರ ಸಮಸ್ಯೆಯಾಗಿದೆ. ಯುಟಿಐಗೆ ತುತ್ತಾದ ಮಹಿಳೆಯರಲ್ಲಿ ಅನೇಕರಲ್ಲಿ ಮತ್ತೆ ಮತ್ತೆ ಸೋಂಕಿಗೆ ಈಡಾಗುವ ಸಾಧ್ಯತೆಗಳೂ ಇವೆ.

ಯಾವಾಗ ಅಲರ್ಟ್ ಆಗಬೇಕು?
=     ಮೂತ್ರ ವಿಸರ್ಜಿಸುವಾಗ ಉರಿ ಅನುಭವ.
=     ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನುವ ಬಯಕೆ.
=     ವಾಂತಿ, ಹೊಟ್ಟೆ ತೊಳಸುವುದು.
=     ಜ್ವರ.
=     ಕಿಬ್ಬೊಟ್ಟೆ ಮೃದುವಾದಂತೆ, ಭಾರವಾದಂತೆ ಭಾಸವಾಗುತ್ತದೆ.
ಚಿಕಿತ್ಸೆಗಿಂತ ತಡೆಯೋದು ಉತ್ತಮ
=     ಹೆಚ್ಚೆಚ್ಚು ದ್ರವಾಹಾರಗಳನ್ನು ಸೇವಿಸಿ.
=     ಮಲ ಹಾಗೂ ಮೂತ್ರ ವಿಸರ್ಜನೆ ನಂತರ ಮುಂದಿನಿಂದ ಹಿಂದಕ್ಕೆ ಸ್ವಚ್ಛಗೊಳಿಸಿಕೊಳ್ಳಬೇಕು. ಇದರಿಂದ ಮಲ ಮೂತ್ರನಾಳಕ್ಕೆ ಸೇರಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಇದೇ ಮೂತ್ರ ಸೋಂಕಿಗೆ ಪ್ರಮುಖ ಕಾರಣ.
=     ಸಂಭೋಗದ ನಂತರ ತಕ್ಷಣ ಮೂತ್ರ ವಿಸರ್ಜಿಸಿದರೆ ಸೋಂಕನ್ನು ತಡೆಯಬಹುದು.

ಮನೆ ಮದ್ದೇನು?
=     ಹಣ್ಣುಗಳು (ಚೆರ್ರಿಗಳು) ಮತ್ತು ತರಕಾರಿಗಳ (ದಪ್ಪ ಮೆಣಸು, ಕುಂಬಳಕಾಯಿ) ಗಳಂಥ ಆ್ಯಂಟಿ- ಆಕ್ಸಿಡೆಂಟ್‌ಗಳು ಹೆಚ್ಚಿರುವ ಆಹಾರವನ್ನು ಹೆಚ್ಚಾಗಿ ಸೇವಿಸಿ.
=     ನಾರು ಹೆಚ್ಚಿರುವ ಆಹಾರ ಸೋಂಕಿನ ಲಕ್ಷಣಗಳನ್ನು ಕಡಿಮೆ ಮಾಡುತ್ತವೆ. ಉದಾ: ಇಡೀ ಕಾಳುಗಳು, ಬೇರು ತರಕಾರಿಗಳು, ಓಟ್ಸ್ ಮತ್ತು ನೈಸರ್ಗಿಕ ಆಹಾರಗಳ ಮಳಿಗೆಯಲ್ಲಿ ಸಿಗುವ ನೈಸರ್ಗಿಕ ನಾರು ಸಿಲಿಯಂ ತೌಡು.
=     ನಿತ್ಯ ಬೆಳಗ್ಗೆ ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆ ರಸ ಬೆರೆಸಿ ಸೇವಿಸಿ. ನಿಂಬೆರಸ ರಕ್ತ ಮತ್ತು ಮೂತ್ರನಾಳದಲ್ಲಿರುವ ಪಿಎಚ್ ಅನ್ನು ಬದಲಾಯಿಸುತ್ತದೆ. ಇದರಿಂದ ಬ್ಯಾಕ್ಟೀರಿಯಾ ವೃದ್ಧಿಯಾಗುವುದಿಲ್ಲ ಮತ್ತು ಹರಡುವುದಿಲ್ಲ.
=     ಮೊಸರಿನಲ್ಲಿ ಪ್ರೊಬಯಾಟಿಕ್ ಲ್ಯಾಕ್ಟೋಬ್ಯಾಸಿಲಸ್ ಆಸಿಡೋಫಿಲಸ್ ಇರುತ್ತದೆ. ಇದೂ ಬ್ಯಾಕ್ಟೀರಿಯಗಳನ್ನು ಆರೋಗ್ಯಕರ ಮಿತಿಯಲ್ಲಿಯೇ ಇಟ್ಟಿರುತ್ತದೆ.
=     ಮಸಾಲೆ ಪದಾರ್ಥಗಳನ್ನು ಕಡಿಮೆ ಮಾಡಿ.
=     ಸಕ್ಕರೆ, ಹಣ್ಣು ಮತ್ತು ಬಿಳಿ ಬ್ರೆಡ್ ಮತ್ತು ಆಮ್ಲ ಹೆಚ್ಚಿರುವ ಹುಳಿ ಸಿಹಿ ಹಣ್ಣುಗಳಿಂದ ದೂರವಿರಿ.
=     ಕೆಫಿನ್ ಮತ್ತು ಚಾಕೊಲೇಟ್ ಕೂಡ ತೊಂದರೆಗಳನ್ನು ಹೆಚ್ಚಿಸಬಹುದು.
=     ಸೋಂಕಿದ್ದಾಗ ಮದ್ಯಪಾನ ಮತ್ತು ತಂಬಾಕನ್ನು ತ್ಯಜಿಸಿ. ಎರಡೂ ಬ್ಯಾಕ್ಟೀರಿಯಾಗಳನ್ನು ವೃದ್ಧಿಸುತ್ತವೆ.
=     ಅಪ್ಪಟ ಕ್ರ್ಯಾನ್ಬೆರ್ರಿ ರಸಕ್ಕೆ ನೀರು ಹಾಗೂ ಸಕ್ಕರೆ ಬೆರೆಸಿ ಕುಡಿದರೆ ಅತ್ಯುತ್ತಮ ಮದ್ದು.

ಸೋಂಕು ತಪ್ಪಬೇಕೇ?
ಯಥೇಚ್ಛವಾಗಿ ನೀರು ಕುಡಿದರೆ ಮೂತ್ರ ನೀರಾಗುತ್ತದೆ. ಮೂತ್ರನಾಳದಲ್ಲಿ ಹರಳಾಗುವುದು ಅಥವಾ ಇನ್ನೂ ಹೆಚ್ಚು ಸೋಂಕಾಗುವುದು ತಪ್ಪುತ್ತದೆ. ದ್ರವಾಹಾರ, ವಿಶೇಷವಾಗಿ ನೀರನ್ನು ಹೆಚ್ಚಾಗಿ ಸೇವಿಸುವುದರಿಂದ ಯೂರಿಕ್ ಆಮ್ಲ ಸಂಗ್ರಹವಾಗುವುದು ಕಡಿಮೆಯಾಗುತ್ತದೆ ಮತ್ತು ಮೂತ್ರಕೋಶದ ಅಥವಾ ಮೂತ್ರ ನಾಳದ ಮೇಲೆ ಬ್ಯಾಕ್ಟೀರಿಯ ಸಂಗ್ರಹವಾಗುವುದೂ ತಪ್ಪುತ್ತದೆ.

- ಡಾ. ಮಂಜರಿ ಚಂದ್ರಾ, ಆಹಾರ ತಜ್ಞೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com