ದಂತ ಕಥೆಗಳು

ದಂತ ಕಥೆಗಳು
Updated on: 

ಇಂದು ಜಗತ್ತು ಎಷ್ಟೇ ಮುಂದುವರಿದಿದ್ದರೂ ಯಾವುದೇ ವಿಚಾರವನ್ನೂ ಪರಿಶೀಲಿಸದೇ ನಂಬುವ ಜನರು ಬಹಳಷ್ಟಿದ್ದಾರೆ. ಇವರು ಯಾವುದೇ ಘಟನೆಗಳಿಗೂ ಕಾರಣ ಪತ್ತೆ ಹಚ್ಚುವುದಿಲ್ಲ ಮತ್ತು ಸತ್ಯವನ್ನು ಒಪ್ಪಲು ತಯಾರಿರುವುದಿಲ್ಲ. ಅದರಂತೆ ದಂತ ವೈದ್ಯ ಕ್ಷೇತ್ರವೂ ಇಂದು ಎಷ್ಟೇ ಆಧುನಿಕವಾಗಿದ್ದರೂ ಜನರು ಮೂಢನಂಬಿಕೆಗಳಿಂದ ಚಿಕಿತ್ಸೆಗೆ ಮುಂದಾಗುವುದಿಲ್ಲ. ತಮಗೆ ತಾವೇ ಸಂಚಕಾರ ತಂದುಕೊಂಡು ಇತರರ ಪ್ರಾಣಕ್ಕೂ ಕೆಲವೊಮ್ಮೆ ಎರವಾಗುತ್ತಾರೆ. ಅದರಲ್ಲೂ ವಿದ್ಯಾವಂತ ಸುಶಿಕ್ಷಿತರೂ ನೈಜಸಂಗತಿ ಯಾವುದು? ಸುಳ್ಳು ಯಾವುದು? ಎಂದು ಪರಾಮರ್ಶಿಸದೆ ತೊಂದರೆ ತಂದುಕೊಳ್ಳುತ್ತಾರೆ. ವೈದ್ಯರಿಗಿಂತ ತಾವು ಹೆಚ್ಚಿದ್ದನ್ನೇ ತಿಳಿದಿದ್ದೇವೆ ಎಂಬಂತೆಯೇ ಆಡುತ್ತಾರೆ. ಆದ್ದರಿಂದ ಯಾವುದೇ ಆರೋಗ್ಯ ವಿಚಾರವನ್ನು ಸಂಪೂರ್ಣವಾಗಿ ಕಡೆಗಣಿಸದಿರಿ, ಜನರ ಮನಸ್ಸಿನಲ್ಲಿ ಸಾಮಾನ್ಯವಾಗಿ ಕಂಡುಬಂದಿರುವ ಮೂಢನಂಬಿಕೆಗಳು ಏನು? ಎತ್ತ? ಕಾರಣವೇನು?

ಹಲ್ಲು ಕಿತ್ತರೆ ಕಣ್ಣು, ನರ, ತಲೆಗೆ ತೊಂದರೆ
ಅತ್ಯಂತ ಸಾಮಾನ್ಯ ನಂಬಿಕೆ ಇದಾಗಿದ್ದು, ಸತ್ಯಕ್ಕೆ ದೂರವಾದದ್ದು. ಹಲ್ಲು, ಕಣ್ಣು, ತಲೆ... ಒಂದಕ್ಕೊಂದು ಬೇರೆ, ಬೇರೆ ನರಗಳಿಂದ ಆವೃತ್ತವಾಗಿರತ್ತವೆ. ಯಾವುದೇ ಹಲ್ಲನ್ನು ಕಿತ್ತರೂ ಕಣ್ಣಿಗೆ ಅಪಾಯವಿಲ್ಲ. ವಯೋ ಸಹಜ ಕಣ್ಣು ಮಂಜಾಗುವುದು, ಹಲ್ಲು ಉದುರುವುದು ಕಾಕತಾಳೀಯ ಅಷ್ಟೇ. ಕೀಳಿಸಿಕೊಳ್ಳಲು ಇಚ್ಛೆ ಇಲ್ಲದಿದ್ದಲ್ಲಿ ಬೇರು ನಾಶ ಚಿಕಿತ್ಸೆ, ವಸಡು ಶಸ್ತ್ರ ಚಿಕಿತ್ಸೆಗಳಂಥವುಗಳಿಗೆ ಮುಂದಾಗಬೇಕು.

ಗಟ್ಟಿಯಾಗಿ ಒತ್ತಿ ತಿಕ್ಕುವುದರಿಂದ ಹಲ್ಲು ಸ್ವಚ್ಛವಾಗುತ್ತದೆ
ಹೆಚ್ಚು ಬಲಪ್ರಯೋಗದಿಂದ ಹಲ್ಲು ಸವೆಯುತ್ತದೆ, 'ಜುಂ' ಎನ್ನುತ್ತದೆ. ಮೃದು ಬ್ರಷ್‌ನಿಂದ ಸರಿಯಾಗಿ ಬ್ರಷ್ ಮಾಡಿದರೆ ಸಾಕಷ್ಟು ಸ್ವಚ್ಛವಾಗಿ ಸುಂದರ, ಆರೋಗ್ಯಕಾರಿ ಹಲ್ಲು ನಿಮ್ಮದಾಗುತ್ತದೆ. ಗಟ್ಟಿಯಾಗಿ, ಒತ್ತಿ ಎಂದಿಗೂ ಹಲ್ಲನ್ನು ತಿಕ್ಕಬಾರದು, ಗಟ್ಟಿ ಬ್ರಷ್ ಬಳಸಬಾರದು.
ಉಪ್ಪು, ಇದ್ದಿಲು, ಸೋಡಾ ಪುಡಿಯಿಂದ ಹಲ್ಲು ತಿಕ್ಕಿದರೆ ಹಲ್ಲು ಬಿಳುಪಾಗಿ ಹೊಳೆಯುತ್ತದೆ
ಇದು ಸಂಪೂರ್ಣ ನಿಜವಲ್ಲ. ಹಲ್ಲು ಬಿಳುಪಾದರೂ ಅದು ಕೇವಲ ಕೆಲವು ನಿಮಿಷಗಳವರೆಗೆ ಮಾತ್ರ. ಹಲ್ಲು ಸ್ವಚ್ಛವಾಗಲು ಬ್ರಷ್, ಪೇಸ್ಟ್ ಬಳಸಬೇಕು. ಜೊತೆಗೆ ಪದೇ-ಪದೇ ಉಪ್ಪು, ಇದ್ದಿಲು, ಸೋಡಾದಿಂದ ಹಲ್ಲು ತಿಕ್ಕಿದರೆ ಹಲ್ಲು ಬಲುಬೇಗ ಸವೆಯುತ್ತದೆ. ಎಂದಿಗೂ ಅದನ್ನು ನೇರವಾಗಿ ಹಲ್ಲಿನ ಮೇಲ್ಮೈ ಭಾಗಕ್ಕೆ ಹಚ್ಚಬಾರದು.

ಹಲ್ಲಿನ ಸ್ವಚ್ಛತೆಗೆ ಯಾವ ವಿಧದ ಬ್ರಷ್ ಆದರೂ ಆದೀತು
ಇಲ್ಲ. ಹಲ್ಲಿನ ದೈನಂದಿನ ಸ್ವಚ್ಛತೆಗೆ ಉತ್ತಮ ಗುಣಮಟ್ಟದ ಮೃದು ಬ್ರಸಲ್‌ಗಳ ಬ್ರಷ್ (Ultra Soft, Soft) ಬಳಸಬೇಕು. ಗಟ್ಟಿ ಬ್ರಸಲ್‌ಗಳ ಬ್ರಷ್ ಬಳಸಬಾರದು. ಇದರಿಂದ ವಸಡಿಗೆ ಘಾಸಿ, ನಾಲಿಗೆ, ಕೆನ್ನೆಯ ಒಳಭಾಗ ಹಾನಿಯಾಗಬಹುದು, ಹಲ್ಲೂ ಬೇಗನೆ ಸವೆಯುತ್ತದೆ.

ಹಲ್ಲಿನ ಸ್ವಚ್ಛತೆಯಿಂದ (Technical cleaning) ಹಲ್ಲು ಅಲುಗಾಡುತ್ತದೆ
ಇದು ಸತ್ಯಕ್ಕೆ ದೂರವಾದದ್ದು. ಹಲ್ಲಿನ ಸ್ವಚ್ಛತೆ ದಂತ ವೈದ್ಯರಿಂದ ಪ್ರತಿ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಇದರಿಂದ ಮುಂದಾಗಬಹುದಾದ ಸಮಸ್ಯೆ ಮುಂಚೆಯೇ ಪತ್ತೆ ಹಚ್ಚಿ ಸರಿಪಡಿಸಬಹುದು. ಹಲ್ಲಿಗೆ ಕಟ್ಟುವ ಗಾರೆ-ಪಾಚಿಯನ್ನು ಬ್ರಷ್‌ನಿಂದ ತೆಗೆಯಲು ಬರಿವುದಿಲ್ಲ. (ನೀರಿನಿಂದ ಬರುವ, ಗಟ್ಟಿ ಗಾರೆ). ಇದನ್ನು ದಂತವೈದ್ಯರಿಂದ ಸ್ವಚ್ಛ ಮಾಡಿಸಬೇಕು. ಇದರಿಂದ ವಸಡು ರೋಗ, ವಸಡು ಸವೆತ. ವಸಡಿನ ರಕ್ತಸ್ರಾವ... ಎಲ್ಲವನ್ನೂ ತಡೆಯಬಹುದು. ಹಲ್ಲಿನ ಸ್ವಚ್ಛತೆಯಿಂದ ಯಾವುದೇ ತೊಂದರೆಯಿಲ್ಲ.

ಹಲ್ಲು ಸ್ವಚ್ಛ ಮಾಡಲು ಪೇಸ್ಟ್/ಬ್ರಷ್ ಬದಲಿಗೆ ಬೆರಳು ಬಳಸಬೇಕು
ತಪ್ಪು. ಹಲ್ಲು ಸ್ವಚ್ಛತೆ ಬೆರಳಿನಿಂದ ಎಂದಿಗೂ ಸಾಧ್ಯವಿಲ್ಲ. ಹಲ್ಲಿನ ನಡುವೆ, ಮಧ್ಯಭಾಗ ಸರಿಯಾಗಿ ಸ್ವಚ್ಛವಾಗುವುದಿಲ್ಲ. ಬ್ರಷ್‌ನಿಂದ ಹಲ್ಲಿನ ನಡುವೆ, ಮಧ್ಯ, ಒಳಭಾಗ ಎಲ್ಲವೂ ಸುಲಭವಾಗಿ ಸ್ವಚ್ಛವಾಗುತ್ತದೆ. ದಂತ ಆರೋಗ್ಯ ಕಾಪಾಡಲು, ದುರ್ವಾಸನೆ ತಡೆಯಲು ಪೇಸ್ಟ್ - ಬ್ರಷ್ ಮಾತ್ರವೇ ಬಳಸಬೇಕು. ಕೇವಲ ಬೆರಳಿನಿಂದ ಸ್ವಚ್ಛೆತೆ ಸಾಧ್ಯವಾಗದು. ಮಕ್ಕಳಿಗೆ ಎರಡೂವರೆ - ಮೂರು ವರ್ಷಗಳಿಂದ ಬ್ರಷ್ ಬಳಸಬಹುದು. ಅದರೊಳಗಿನ ವಯಸ್ಸಿನವರೆಗೆ (0 ಯಿಂದ ಎರಡೂವರೆ) ನೀರಿನಿಂದ, ಬಟ್ಟೆಯಿಂದ ಸ್ವಚ್ಛತೆ ಮಾಡಬೇಕು.

ತಂಬಾಕು ಬಳಕೆಯಿಂದ ಹಲ್ಲು ನೋವು ಬರುವುದಿಲ್ಲ
ಇದು ಎಲ್ಲೆಡೆ ಪ್ರಚಲಿತವಾದ ಶುದ್ಧ ಸುಳ್ಳು. ಕೇವಲ ತಾತ್ಕಾಲಿಕ ನೋವಿನ ಪರಿಹಾರವಾಗುವ ತಂಬಾಕಿನಿಂದ ಬಾಯಿ ಕ್ಯಾನ್ಸರ್ ಬರುತ್ತದೆ. ನೋವಿನ ಮೂಲವನ್ನು / ಕಾರಣವನ್ನು ತಿಳಿದುಕೊಂಡು ಚಿಕಿತ್ಸೆ ಪಡೆಯಬೇಕು. ತಂಬಾಕುವಿನಲ್ಲಿರುವ ಮಾರ್ಫಿನ್ ಅಂಶ ನೋವು ನಿವಾರಕವಾಗಿದ್ದು ಮಾದಕ ವಸ್ತುವಾಗಿದ್ದು, ಚಟ ಹತ್ತಿಸುತ್ತದೆ. ಆದ್ದರಿಂದ ತಂಬಾಕು ನೋವು ನಿವಾರಕವಾಗಿ ಬಳಸಬೇಡಿರಿ.

ಹಲ್ಲಿನ ಕ್ಲಿಪ್ ಹಾಕಿಸುವುದರಿಂದ ಹಲ್ಲು ಸಡಿಲಗೊಳ್ಳುತ್ತದೆ
ಹಲ್ಲಿನ ಕ್ಲಿಪ್ ಚಿಕಿತ್ಸೆ ನಡೆಯುವಾಗ ಹಲ್ಲು ಅಲುಗಾಟ ಶೇ.10ಕ್ಕಿಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಕ್ಲಿಪ್‌ನಿಂದ ಯಾವುದೇ ಶಾಶ್ವತ ಹಾನಿಯೂ ಆಗುವುದಿಲ್ಲ. ಜೊತೆಗೆ ಮೂಳೆಯ ಬಿಗಿ ಹಿಡಿತ ಇರುತ್ತದೆ. ಚಿಕಿತ್ಸಾ ಸಮಯದಲ್ಲಿ ಹಲ್ಲು ಜರುಗುವುದು, ಸಡಿಲಗೊಳ್ಳುವುದು ಸಹಜ. ಇದೂ ತಾತ್ಕಾಲಿಕವಾದ್ದರಿಂದ ಹೆದರುವ ಅವಶ್ಯಕತೆಯಿಲ್ಲ.
ಹಲ್ಲಿನ ಹುಳುಕು ಸಾಯಿಸಲು ಗ್ರಂಥಿಗೆಯುಕ್ತ ಹೊಗೆ ಪಡೆಯಬೇಕು. ಕಾದ ತಂತಿ ಹಲ್ಲಿನೊಳಗೆ ತೂರಿಸಬೇಕು.

ಹಲ್ಲಿನ ಹುಳುಕು ಸಾಯಿಸಲು ಗ್ರಂಥಿಗೆಯುಕ್ತ ಹೊಗೆ ಪಡೆಯಬೇಕು. ಕಾದ ತಂತಿ ಹಲ್ಲಿನೊಳಗೆ ತೂರಿಸಬೇಕು.
ಇದು ಅತ್ಯಂತ ಅಪಾಯಕಾರಿ. ನಕಲಿ ದಂತ ವೈದ್ಯರಿಂದ ಪಡೆಯುವ ಚಿಕಿತ್ಸೆ ಪ್ರಾಣಾಂತಿಕ, ಕೆಲವೊಮ್ಮೆ ಶಾಶ್ವತ ಹಾನಿಯೂ ಆಗಬಹುದು. ಪ್ರಮಾಣೀಕರಿಸಿದ ದಂತ ವೈದ್ಯರಿಂದಲೇ ಚಿಕಿತ್ಸೆ ಪಡೆಯಬೇಕು ಹೊರತು ಯಾವುದೇ ಹೊಗೆ ಕುಡಿಯುವುದರಿಂದ ಪರಿಹಾರ ಸಾಧ್ಯವಿಲ್ಲ. ಕಾದ ಬಿಸಿಯಾದ ತಂತಿ ಇಡುವುದರಿಂದ ತೀವ್ರ ನೋವು, ಶಾಶ್ವತ ನರಹಾನಿ ಸಂಭವಿಸುತ್ತದೆ.

ಉಬ್ಬು ಹಲ್ಲು ಅದೃಷ್ಟ ಸೂಚಕ, ದೇವತೆಯ ರೂಪ. ಅದನ್ನು ಕ್ಲಿಪ್‌ಹಾಕಿ ಸರಿಪಡಿಸಿದರೆ ದುರಾದೃಷ್ಟ ಕಾಡುತ್ತದೆ.
ಹಲ್ಲಿಗೂ, ಅದೃಷ್ಟಕ್ಕೂ ಯಾವುದೇ ಸಂಬಂಧವಿಲ್ಲ. ಉಬ್ಬು ಹಲ್ಲುಗಳಿದ್ದಾಗ ವ್ಯಕ್ತಿ ಸಾಮಾಜಿಕವಾಗಿ ಇತರರ ಜೊತೆ ಮಾತನಾಡದೇ, ಬೆರೆಯದೇ ಕೀಳರಿಮೆ ಅನುಭವಿಸುತ್ತಾರೆ. ಜೊತೆಗೆ ಉಬ್ಬುಹಲ್ಲುಗಳಿದ್ದಾಗ ಸುಲಭವಾಗಿ ಪೆಟ್ಟಾಗುವ, ಮುರಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಹಲ್ಲಿನ ಕ್ಲಿಪ್ ಯಾವುದೇ ಅನುಮಾನಗಳಿಲ್ಲದೆ ಧರಿಸಬಹುದು.

ಮಕ್ಕಳಿಗೆ ಯಾವುದೇ ದಂತ ಚಿಕಿತ್ಸೆ ಅವಶ್ಯಕವಿಲ್ಲ
ಹೇಗೂ ಉದುರುವ ಹಲ್ಲು ಎಂದು ಮಕ್ಕಳ ಹಲ್ಲುಗಳ ಚಿಕಿತ್ಸೆಯನ್ನು ಮಾಡಿಸದೆ ಸುಮ್ಮನಿರಬಾರದು. ಬೆಳೆಯುವ ಪ್ರೌಢ ವಯಸ್ಕ, ಕಾಯಂ ಹಲ್ಲುಗಳಿಗೆ ಹಾಲು ಹಲ್ಲುಗಳೇ ಭದ್ರ ಬುನಾದಿ. ಒಂದೊಮ್ಮೆ ಮಕ್ಕಳ ಹಲ್ಲುಗಳು ರೋಗ ಪೀಡಿತವಾದರೆ ಬರುವ ಖಾಯಂ ಹಲ್ಲುಗಳಿಗೆ ತೊಂದರೆ ಖಂಡಿತ. ಆದ್ದರಿಂದ ಅದಕ್ಕೂ ಚಿಕಿತ್ಸೆ ಅವಶ್ಯಕ ಮತ್ತು ಅನಿವಾರ್ಯ. ದೊಡ್ಡವರಿಗೆ ಮಾಡುವ ವಿಧಾನದ ಚಿಕಿತ್ಸೆಗಳನ್ನು ಮಕ್ಕಳಿಗೂ ಮಾಡಬಹುದು. ಮಕ್ಕಳಿಗೆ ಚಿಕಿತ್ಸೆಯ ಯಾವ ನಿರ್ಬಂಧವೂ ಇಲ್ಲ.

- ಡಾ.ಕೆ.ವಿ.ಸಂತೋಷ್ ಹೊಳಲ್ಕೆರೆ(9342466936)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com