ಸ್ತ್ರೀ ಸೂಕ್ತ

ವಯೋಮಿತಿಯಿಲ್ಲದೆ ಹೆಣ್ಣನ್ನು ಕೆಲವು ಸಮಸ್ಯೆಗಳು ಕಾಡುತ್ತವೆ. ಅವುಗಳಲ್ಲಿ ಕಬ್ಬಿಣಾಂಶ ಕೊರತೆ ಪ್ರಮುಖವಾದದ್ದು. ಇದರಿಂದ ರಕ್ತಹೀನತೆ...
ಸ್ತ್ರೀ ಸೂಕ್ತ
Updated on: 

ಹುಟ್ಟುತ್ತಲೇ ಹೆಣ್ಣು ಮಗುವಿಗೆ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹೆಣ್ಣು ಮಗುವೆಂದರೆ ಸಮಾಜ ಇನ್ನೂ ಮೂಗು ಮುರಿಯುವುದನ್ನು ಕಾಣುತ್ತೇವೆ. ದುರಂತವೆಂದರೆ ಶ್ರೀಮಂತರಲ್ಲಿಯೂ ಹೆಣ್ಣಿನ ಬಗ್ಗೆ ಇಂಥ ತಾತ್ಸಾರವಿದೆ. ಇವೆಲ್ಲದರ ನಡುವೆಯೇ ಹೆಣ್ಣು ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪನ್ನು ಸೃಷ್ಟಿಸುತ್ತಿದ್ದಾಳೆ. ಇಂಥ ಹೆಣ್ಣನ್ನು ಮಾತ್ರ ಕಾಡುವ ಕೆಲವು ಆರೋಗ್ಯ ಸಮಸ್ಯೆಗಳು ನೂರಾರು.

ಹಾರ್ಮೋನ್ ಎಫೆಕ್ಟ್
ಸಾಮಾನ್ಯವಾಗಿ ಹೆಣ್ಣು ಮಕ್ಕಳು 10-14 ವರ್ಷದೊಳಗೆ ಋತುಮತಿಯಾಗುವುದಕ್ಕೆ ಪೂರ್ವಭಾವಿಯಾಗಿ ಹಾರ್ಮೋನ್‌ಗಳ ಬೆಳವಣಿಗೆ, ಈ ಸಂಬಂಧದ ದೈಹಿಕ ವ್ಯತ್ಯಾಸಗಳು ಕಾಣಿಸಲಾರಂಭಿಸುತ್ತವೆ. ಆದರೆ ಕೆಲವರಲ್ಲಿ ಈ ಅಂಶಗಳು 8-9 ವಯಸ್ಸಿನಲ್ಲಿಯೇ ಕಾಣಿಸಲಾರಂಭಿಸುತ್ತವೆ. ಜತೆಗೆ ದೇಹದ ಎಲುಬುಗಳು ಉದ್ದವಾಗಿ ಬೆಳವಣಿಗೆಯಾಗುತ್ತದೆ. ಇದು ಆ ಮಗುವಿನ ಎತ್ತರವನ್ನು ನಿರ್ಧರಿಸುತ್ತದೆ. ಋತುಮತಿಯಾಗಲಿರುವ ಮಗುವಿನ ಹಾರ್ಮೋನ್‌ಗಳು ಮತ್ತು ಎಲುಬಿನ ಏರುಪೇರು ಮಗುವಿನ ಎತ್ತರವನ್ನು ಕುಂಠಿಸಲೂಬಹುದು. ಇದು ನಂತರದ ದಿನಗಳಲ್ಲಿ, ಆ ಮಗು ಮಹಿಳೆಯಾದಾಗ ಹಾರ್ಮೋನ್‌ಗಳ ವೈಪರೀತ್ಯಕ್ಕೂ ಕಾರಣವಾಗಬಹುದು.

ಪಿಸಿಒಎಸ್ ಸಮಸ್ಯೆ
ಋತುಮತಿಯಾಗಿ, ಋತುಚಕ್ರ ಆರಂಭವಾದ ನಂತರ ಪಾಲಿ ಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (ಪಿಸಿಒಎಸ್) ಎಂಬ ಸ್ಥಿತಿ ಕಂಡುಬರುವ ಸಾಧ್ಯತೆಗಳು ಕೆಲವರಲ್ಲಿದೆ. ಋತುಮತಿಯಾದ ನಂತರ ದೇಹದ ತೂಕ ಹೆಚ್ಚುವವರಲ್ಲಿ ಇದು ಕಂಡು ಬರುವುದು ಸಾಮಾನ್ಯ. ಈ ಸ್ಥಿತಿಯಲ್ಲಿ ಋತುಚಕ್ರ ನಿಯಮಿತವಾಗಿರುವುದಿಲ್ಲ. ಋತುಚಕ್ರಗಳ ನಡುವೆ ತುಂಬ ಅಂತರವಿರುತ್ತದೆ. ಮುಖದ ಮೇಲೆ ಕೂದಲು ಬೆಳೆಯುತ್ತವೆ. ಮೊಡವೆಗಳು ಎದ್ದು ಕಾಣುತ್ತವೆ. ಸ್ಕ್ಯಾನಿಂಗ್ ಮಾಡಿಸಿದಾಗ ಅಂಡಾಶಯದ ಮೇಲೆ ಮೂತ್ರಕೋಶವಿರುವುದೂ ಕಾಣುತ್ತದೆ. ಇದನ್ನು ನಿಯಂತ್ರಿಸಬಹುದು. ದೇಹದ ತೂಕ ಹೆಚ್ಚದಂತೆ ಕ್ರಮ ಕೈಗೊಳ್ಳುವುದು, ನಿಯಮಿತವಾಗಿ ಒಳ್ಳೆ ಆಹಾರ ಸೇವಿಸುವುದು ಮತ್ತು ತಪ್ಪದೇ ವ್ಯಾಯಾಮ ಮಾಡಬೇಕು. ಆದರೂ, ಮುಖದ ಮೇಲೆ ಮೊಡವೆ ಹಾಗೂ ಕೂದಲು ಉಳಿದರೆ ಮಕ್ಕಳನ್ನು ಹೆರಬೇಕಾದ ವಯಸ್ಸಿನಲ್ಲಿ ಮಹಿಳೆ ಬಂಜೆಯಾಗುವ ಸಾಧ್ಯತೆಯೂ ಇದೆ.

ಥೈರಾಯ್ಡ್ ತೊಂದರೆ
ಥೈರಾಯ್ಡ್ ಬೆಳವಣಿಗೆ ಮತ್ತೊಂದು ಸಮಸ್ಯೆ. ಮಹಿಳೆಯರಲ್ಲಿ ಬೆಳವಣಿಗೆಗೆ ಅಗತ್ಯವಾದ ಈ ಹಾರ್ಮೋನ್ ಥೈರಾಕ್ಸಿನ್, ಥೈರಾಯಿಡ್ ಗ್ರಂಥಿಯಿಂದ ಉತ್ಪನ್ನವಾಗುತ್ತಿರುತ್ತದೆ. ನಿಧಾನವಾಗಿ ಹೆಣ್ಣನ್ನು ಕಾಡುವ ಈ ಸಮಸ್ಯೆಯಿಂದ ಮಿತಿ ಮೀರಿದ ದೇಹದ ತೂಕ, ಋತುಚಕ್ರದ ಸಂದರ್ಭ ವಿಪರೀತ ರಕ್ತಸ್ರಾವ, ಕೂದಲು ಉದುರುವಿಕೆ, ಧ್ವನಿಯಲ್ಲಿ ಬದಲಾವಣೆ, ಸೋಮಾರಿತನ ಮತ್ತು ಬಂಜೆತನ ತಂದೊಡ್ಡಬಹುದು. ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಸರಿಯಾಗಿ ಪತ್ತೆ ಹಚ್ಚಿದರೆ, ಈ ಸಮಸ್ಯೆಯನ್ನು ಮಹಿಳೆಗೆ ಥೈರಾಕ್ಸಿನ್ ಪೂರೈಸುವ ಮೂಲಕ ನಿವಾರಿಸಬಹುದು. ಥೈರಾಯಿಡ್ ಸಮಸ್ಯೆ ಚಿಕ್ಕವರಿರುವಾಗಲೇ ಶುರುವಾದಲ್ಲಿ ಅದು ಮಗುವಿನ ದೈಹಿಕ ಬೆಳವಣಿಗೆಯನ್ನೂ ಕುಂಠಿಸುತ್ತದೆ. ಋತುಚಕ್ರದಲ್ಲಿ ಏರುಪೇರಾಗಬಹುದು. ಹೀಗಾಗಿ ಮಕ್ಕಳಲ್ಲಿ ಮಾನಸಿಕವಾಗಿ ಹಿನ್ನಡೆ, ಖಿನ್ನತೆ, ಬೇಸರ ಇತ್ಯಾದಿ ತಂದೊಡ್ಡುತ್ತದೆ.

ಕಬ್ಬಿಣಾಂಶ ಕೊರತೆ
ವಯೋಮಿತಿಯಿಲ್ಲದೆ ಹೆಣ್ಣನ್ನು ಕೆಲವು ಸಮಸ್ಯೆಗಳು ಕಾಡುತ್ತವೆ. ಅವುಗಳಲ್ಲಿ ಕಬ್ಬಿಣಾಂಶ ಕೊರತೆ ಪ್ರಮುಖವಾದದ್ದು. ಇದರಿಂದ ರಕ್ತಹೀನತೆ (ಅನಿಮಿಯಾ) ಹೆಣ್ಣನ್ನು ಹೈರಾಣಾಗಿಸುತ್ತದೆ. ಋತುಚಕ್ರದ ಸಮಯದಲ್ಲಿ ರಕ್ತಸ್ರಾವ ಜಾಸ್ತಿಯಾದರೆ ರಕ್ತಹೀನತೆ ಉಂಟಾಗುತ್ತದೆ. ರಕ್ತಸ್ರಾವ ಜಾಸ್ತಿಯಾದಾಗ, ಸೂಕ್ತ ಪೌಷ್ಟಿಕಾಂಶಗಳಿರುವ ಆಹಾರವನ್ನು ಸೇವಿಸಿದರೆ ಕಬ್ಬಿಣಾಂಶ ಕೊರತೆ ನೀಗಿಸಬಹುದು. ಇಲ್ಲದಿದ್ದರೆ ಉಸಿರು ನಿಂತಂತಾಗುವುದು, ಮೂರ್ಛೆ, ಬಳಲಿಕೆ, ಕೂದಲು ಉದುರುವುದು ಕಂಡು ಬರುತ್ತವೆ. ಇನ್ನು ಕೆಲವು ಅಪರೂಪದ ಸಂದರ್ಭಗಳಲ್ಲಿ ರಕ್ತಹೀನತೆಯಿಂದ ಹಾರ್ಟ್ ಫೇಲ್ ಆಗಿ ಸಾಯಲೂಬಹುದು.
ಸೂರ್ಯನ ಕಿರಣಗಳಿಗೆ ಅಗತ್ಯ ಪ್ರಮಾಣದಲ್ಲಿ ಒಡ್ಡಿಕೊಳ್ಳದ ಮಹಿಳೆಯರಲ್ಲಿ ವಿಟಮಿನ್ 'ಡಿ' ಕೊರತೆಯೂ ಕಾಣುತ್ತದೆ. ಇದರಿಂದ ಬಳಲಿಕೆ, ಮೂರ್ಛೆ, ಮೈಕೈ ನೋವು, ಶಕ್ತಿಹೀನತೆ ಉಂಟಾಗುತ್ತವೆ. ಕೆಲವು ಪ್ರಕರಣಗಳಲ್ಲಿ ಖಿನ್ನತೆಯೂ ಕಾಡಬಹುದು. ವಿಟಮಿನ್ 'ಡಿ' ಪೂರೈಕೆಯಿಂದ ದೇಹ ಸುಧಾರಿಸುತ್ತದೆ.

ಕ್ಯಾಲ್ಸಿಯಂ ಏಟು
ಮೊಲೆಯುಣಿಸುತ್ತಿರುವ ಮಹಿಳೆಯರಲ್ಲಿ ನಷ್ಟವಾಗುವ ಕ್ಯಾಲ್ಸಿಯಂ ಮತ್ತೆ ಸರಿದೂಗದೇ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ನಷ್ಟವಾಗುವ ಕ್ಯಾಲ್ಸಿಯಂ ಅನ್ನು ಪೂರಕ ಆಹಾರ ಪದಾರ್ಥಗಳಿಂದ ಸರಿದೂಗಿಸಬಹುದು. ಡೈರಿ ಉತ್ಪನ್ನಗಳು, ಯೋಗರ್ಟ್, ಚೀಸ್, ಬೆಣ್ಣೆ ಮೊದಲಾದವು ಕ್ಯಾಲ್ಸಿಯಂ ಪ್ರಮಾಣವನ್ನು ತುಂಬಿಕೊಡುತ್ತವೆ. ಆದರೆ ಕ್ಯಾಲ್ಸಿಯಂ ಪೂರೈಕೆ ಭರದಲ್ಲಿ ಮಹಿಳೆಯಲ್ಲಿ ಕೊಬ್ಬಿನ ಅಂಶ ಹೆಚ್ಚಾಗದಂತೆ ನೋಡಿಕೊಳ್ಳಲು, ಕೊಬ್ಬಿನ ಪ್ರಮಾಣ ಕಡಿಮೆ ಇರುವ ಹಾಲು ಮತ್ತಿತ್ಯಾದಿ ಆಹಾರವನ್ನು ನೀಡಬೇಕು.

ಕ್ಯಾನ್ಸರ್ ಕಾಟ
ವಿವಿಧ ಬಗೆಯ ಕ್ಯಾನ್ಸರ್‌ಗಳು ಮಹಿಳೆಯರನ್ನು ಕಿತ್ತು ತಿನ್ನುತ್ತಿವೆ. ಅವುಗಳಲ್ಲಿ ಸ್ತನ ಕ್ಯಾನ್ಸರ್ ಪ್ರಮುಖವಾದದ್ದು. ಋತುಚಕ್ರ ಸಂಭವಿಸುತ್ತಿರುವವರೆಗೂ ಇದು ಹೆಚ್ಚಾಗಿದ್ದರೆ, ಋತುಚಕ್ರದ ವಯಸ್ಸು ಮುಗಿಯುತ್ತಿದ್ದಂತೆ ಇದರ ಅಪಾಯ ಕಡಿಮೆಯಾಗುತ್ತದೆ. ಈ ಸಮಸ್ಯೆಯಿಂದ ಆದಷ್ಟು ಪರಿಹಾರ ಹೊಂದಲು ನಿಯಮಿತವಾಗಿ ಸ್ತನ ತಪಾಸಣೆ ಮಾಡಿಸಬೇಕು. ಅಲ್ಲದೆ, 40 ವರ್ಷ ದಾಟಿದ ಮೇಲೆ ಮಹಿಳೆ ನಿಯಮಿತವಾಗಿ ಮ್ಯಾಮೋಗ್ರಾಮ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.

ದಪ್ಪಗಿರುವ ಮಹಿಳೆಯರಲ್ಲಿ ಕೊರಳಿನ ಕ್ಯಾನ್ಸರ್ ಸಾಮಾನ್ಯವಾಗಿ ಕಂಡುಬರುತ್ತದೆ. ಒಬ್ಬರಿಗಿಂತ ಹೆಚ್ಚು ಲೈಂಗಿಕ ಸಂಗಾತಿಗಳಿರುವವರಿಗೂ ಇದರ ಸಾಧ್ಯತೆ ಹೆಚ್ಚು. ವೈರಾಣುಗಳ ಹಬ್ಬುವಿಕೆ ಇಲ್ಲಿ ಸಾಮಾನ್ಯ. ಕೊರಳಿನ ಕ್ಯಾನ್ಸರ್‌ನಿಂದ ರಕ್ಷಣೆ ನೀಡಬಹುದಾದ ಲಸಿಕೆ ಈಗ ಲಭ್ಯವಿದ್ದು, ಹತ್ತು ವರ್ಷದ ಮಗುವಿನಿಂದ 45 ವರ್ಷದ ಮಹಿಳೆಯರವರೆಗೆ ಇದನ್ನು ನೀಡಬಹುದು. ಈ ಸಂಬಂಧ ವಾರ್ಷಿಕ ತಪಾಸಣೆ ಕಡ್ಡಾಯ.

ಇನ್ನು ಅಂಡಾಶಯ ಕ್ಯಾನ್ಸರ್ ಅನ್ನು ಆರಂಭದಲ್ಲಿಯೇ ಪತ್ತೆ ಹಚ್ಚದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಮೂತ್ರಕೋಶ ಮತ್ತು ಒಳಗೇ ಸ್ರವಿಸಬಹುದಾದ ಕ್ಯಾನ್ಸರ್‌ಗಳೂ ಮಹಿಳೆಯರಲ್ಲಿ ಸಾಮಾನ್ಯ. ಋತುಚಕ್ರದ ಸಮಯದಲ್ಲಿ ಸಂಭವಿಸುವ ತೀವ್ರ ರಕ್ತಸ್ರಾವವೂ ಇದಕ್ಕೆ ಕಾರಣ. ಈ ಸನ್ನಿವೇಶದಲ್ಲಿ ಮೂತ್ರಕೋಶದ ಸೂಕ್ಷ್ಮ ಎಳೆಗಳ ರಚನೆ ಕಾಣೆಯಾಗುತ್ತದೆ. ಪ್ರಸ್ತುತ ಇದಕ್ಕೆ ಹಿಸ್ಟರೆಕ್ಟಮಿ ಚಿಕಿತ್ಸೆ ಲಭ್ಯವಿದೆ.

ಹಿಸ್ಟರೆಕ್ಟಮಿ ನಂತರ ಹಾಗೂ ಋತುಚಕ್ರ ನಿಲ್ಲುವಾಗ ಮಹಿಳೆಗೆ ಹಾರ್ಮೋನ್‌ಗಳ ಬದಲಾವಣೆ ಅಗತ್ಯ. ಎಸ್ಟ್ರೋಜೆನ್ ಬದಲಾವಣೆಗೆ ಇದು ಅಗತ್ಯ. ಇದಕ್ಕೀಗ ವೈದ್ಯಕೀಯವಾಗಿಯೂ ಎಸ್ಟ್ರೋಜೆನ್ ಲಭ್ಯವಿದೆ. ಸಿದ್ಧ ರೂಪದ ಇವುಗಳನ್ನು ರೋಗಿಯ ಅಗತ್ಯಕ್ಕಗನುಗುಣವಾಗಿ ನೀಡಬೇಕಾಗುತ್ತದೆ. ಚಿಕಿತ್ಸೆ ನೀಡುತ್ತಿರುವ ವೈದ್ಯರು ಯಾವುದು ಅಗತ್ಯ ಎಂಬುದನ್ನು ನಿರ್ಧರಿಸುತ್ತಾರೆ.

ತಪ್ಪುವ ಮೂತ್ರನಾಳದ ಹಿಡಿತ
ಮಹಿಳೆಗೆ ವಯಸ್ಸಾದಂತೆ ಮೂತ್ರನಾಳದ ಹಿಡಿತ ತಪ್ಪುತ್ತದೆ. ಇದಕ್ಕೆ ಯೂರಿನರಿ ಇನ್ಕಂಟಿನೆನ್ಸ್ ಎನ್ನುತ್ತಾರೆ. ಹೆಚ್ಚು ಗರ್ಭಧಾರಣೆ ಮಾಡುವರಲ್ಲಿ ಇದು ಸಾಮಾನ್ಯ. ಇದರಿಂದ ಕೆಮ್ಮಿದಾಗ, ಸೀನಿದಾಗ, ಜೋರಾಗಿ ನಗುವಾಗಲೂ ಮಹಿಳೆಯ ನಿಯಂತ್ರಣ ಮೀರಿ ಮೂತ್ರ ಸೋರುತ್ತದೆ. ಋತುಚಕ್ರ ನಿಂತ ನಂತರ ಸ್ನಾಯುಗಳು ಬಿಗಿ ಕಳೆದುಕೊಳ್ಳುವುದು ಇದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು. ಇದನ್ನು ಸರಿಪಡಿಸಲು ಸೂಕ್ತ ಶಸ್ತ್ರ ಚಿಕಿತ್ಸೆ ಲಭ್ಯವಿದೆ.

ಜಾರುವ ಗರ್ಭ
ವಯಸ್ಸಾದ ಮಹಿಳೆಯರಲ್ಲಿ ಗರ್ಭ ಜಾರುವ ಸಮಸ್ಯೆ ಸಾಮಾನ್ಯ. ಇದಕ್ಕೆ ಸಾಂಪ್ರದಾಯಿಕ ಚಿಕಿತ್ಸಾ ವಿಧಾನಗಳ ಮೂಲಕವೂ ಚಿಕಿತ್ಸೆ ನೀಡಬಹುದು. ಅಗತ್ಯಬಿದ್ದರೆ ಶಸ್ತ್ರಚಿಕಿತ್ಸೆ ಮಾಡಬಹುದು.

ಟೊಳ್ಳಾಗುವ ಬೋನ್
ಕೆಲವು ಮಹಿಳೆಯರಿಗೆ ಋತುಚಕ್ರ ನಿಂತ ನಂತರ ಎಲುಬುಗಳು ಟೊಳ್ಳಾಗುತ್ತವೆ. ಕ್ಯಾಲ್ಸಿಯಂ ಪೂರೈಸುವ ಔಷಧ ಹಾಗೂ ಕ್ಯಾಲ್ಸಿಯಂಯುಕ್ತ ಆಹಾರ ನೀಡುವುದು ಇದಕ್ಕೆ ಪರಿಹಾರ. ಇದಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ಬೆನ್ನುಹುರಿ ಮುರಿಯುವ ಅಥವಾ ಜಾರುವ ಅಪಾಯ ಇರುತ್ತದೆ. ಹೀಗಾದಲ್ಲಿ ತಡೆಯಲಾಗದ ನೋವು ಉಂಟಾಗುತ್ತದೆ. ಎಲುಬುಗಳ ಟೊಳ್ಳಾಗುವಿಕೆ ತಪ್ಪಿಸಲು ಬೆನ್ನುಹುರಿ ಗಟ್ಟಿಗೊಳಿಸುವ ಮತ್ತು ಬೆನ್ನಿಗೆ ಸೂಕ್ತ ವ್ಯಾಯಾಮಗಳನ್ನು ಮಾಡಬೇಕು. ಈ ಸಮಸ್ಯೆ ಉಂಟಾಗಬಹುದಾದ ಲಕ್ಷಣಗಳು ಕಾಣಿಸಿದರೆ ನಿತ್ಯ ವಾಕಿಂಗ್ ಮಾಡುವುದು ಅಗತ್ಯ. ವಾಕಿಂಗ್ ಮಾಡುವಾಗ ಎರಡೂ ಕೈಗಳಲ್ಲಿ ಡಂಬೆಲ್ಸ್ ಇಟ್ಟುಕೊಂಡು ವೈದ್ಯರ ಸೂಚನೆಯಂತೆ ಕೈ ಚಲಿಸುತ್ತಾ ನಡೆಯುವುದು ಮುಂಬರುವ ಸಮಸ್ಯೆಯನ್ನು ತಪ್ಪಿಸಬಹುದು.

ಒಳ್ಳೆ ಆಹಾರ ಸೇವನೆ ಅಗತ್ಯ

  •     ಮಹಿಳೆಯರು ಅನುಭವಿಸುವ ಅನೇಕ ಸಮಸ್ಯೆಗಳಿಗೆ ಉತ್ತಮ ಆಹಾರ ಸೇವನೆಯೇ ಪರಿಹಾರ.
  •     ತೂಕ ನಿರ್ವಹಣೆ, ದುಶ್ಚಟಗಳಿಂದ ದೂರವಿರುವುದು ಅತ್ಯಗತ್ಯ.
  •     ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ
  •     ವೃತ್ತಿ ಹಾಗೂ ಕುಟುಂಬದ ಜವಾಬ್ದಾರಿಗಳೊಂದಿಗೆ ಆರೋಗ್ಯದ ಕಡೆಯೂ ಮಹಿಳೆ ಹೆಚ್ಚಿನ ಗಮನಹರಿಸಬೇಕು.
- ಡಾ.ದೇವಿಕಾ ಗುಣಶೀಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com