'ಅಯ್ಯೋ ದುಡ್ಡು ಕೊಟ್ಟು ತಂದಿದ್ದು, ಏಕೆ ವೇಸ್ಟ್ ಮಾಡಬೇಕು?' ಎಂಬ ಮನೋಭಾವದಿಂದ ಕೆಟ್ಟು ಹೋದ ಆಹಾರ ಪದಾರ್ಥಗಳನ್ನು ಬಳಸಿದರೆ ಆರೋಗ್ಯ ಹಾಳಾಗೋದು ನಿಶ್ಚಿತ.
ಆಹಾರ ಪದಾರ್ಥಗಳ ಮೇಲೆ ಹತ್ತಿ ಅಥವಾ ತುಪ್ಪಟದ ನವಿರೆಳೆಗಳಂತೆ ಅಥವಾ ಹೊಗೆಯಂಥ ಬಣ್ಣದ ಮತ್ತು ಇತರೆ ಬಣ್ಣಗಳಿದ್ದರೆ ಆಹಾರಕ್ಕೆ ಬೂಸ್ಟ್ ಬಂದಿದೆ ಎಂದರ್ಥ. ಇದನ್ನು ದೃಢಪಡಿಸಿಕೊಳ್ಳಲು ಮೂಸಿ ನೋಡುವುದರಿಂದಲೂ ಉಸಿರಾಟ ಪ್ರದೇಶಕ್ಕೆ ಹೋಗಿ ಗಂಭೀರ ರೂಪದ ತೊಂದರೆಗಳಾಗುವ ಸಾಧ್ಯತೆಗಳಿರುತ್ತವೆ. ಇದು ಮತ್ತಷ್ಟು ಅಪಾಯಕಾರಿ.
ತರಕಾರಿ ಹಾಗೂ ಆಹಾರ ಪದಾರ್ಥಗಳಲ್ಲಿ ಈ 'ಫಂಗಸ್' ಹೆಚ್ಚಿರುತ್ತದೆ. ಅಕಸ್ಮಾತ್ ಕೆಟ್ಟ ಆಹಾರ ಪದಾರ್ಥಗಳಿಂದ ದಮ್ಮುರೋಗದಂಥ ಸಮಸ್ಯೆಗಳು ಉಲ್ಪಣಿಸಿದರೆ ವಾಸಿಯಾಗುವುದೇ ಇಲ್ಲ.
ಹೆಚ್ಚು ಪಕ್ವವಾದ, ಬಣ್ಣಗೆಟ್ಟ, ಗೀರು ಗಾಯಗಳಾದ ಅಥವಾ ಕತ್ತರಿಸಿದ ತರಕಾರಿಗಳು ಮತ್ತು ಹಣ್ಣುಗಳನ್ನು ಕೊಳ್ಳಲೇಬೇಡಿ. ದೀರ್ಘಕಾಲದ ಬಳಕೆಗೆಂದು ತರಕಾರಿಗಳನ್ನು ತಂದಾಗ ಹೆಚ್ಚಿನ ಎಚ್ಚರಿಕೆ ಅಗತ್ಯ.
ಆಹಾರ ಪದಾರ್ಥಗಳ ಮೇಲೆ ಕಟ್ಟಿದ ಬೂಸ್ಟ್ ಅನ್ನು ಕೆರೆದು ಬಳಸಬೇಡಿ. ತೆಂಗಿನಕಾಯಿಗೆ ಬೂಸ್ಟ್ ಕಟ್ಟಿದರೂ ಬಳಸುವುದು ಸಾಮಾನ್ಯ. ಇದು ಡೇಂಜರಸ್.
- ಶಿವರಾಮ್ ಭಟ್, ಹತ್ತೊಕ್ಕಲು