

ಗಿರಿಜಮ್ಮ ಮೂರು ವರ್ಷದ ಹಿಂದೆ ಬಲಗಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಚೆನ್ನಾಗಿ ಕಾಣುತ್ತಿದ್ದ ಕಣ್ಣು ಈಗ ನಾಲ್ಕೈದು ತಿಂಗಳಿಂದ ಮಬ್ಬಾಗತೊಡಗಿತ್ತು. ನೇತ್ರ ಪರೀಕ್ಷೆಗೆ ಒಳಗಾದಾಗ ಈಗಾಗಲೇ ಶಸ್ತ್ರ ಚಿಕಿತ್ಸೆಯಾಗಿರುವ ಕಣ್ಣಲ್ಲಿ ಮರುಪೂರೆ ಬೆಳೆದಿರುವುದು ತಿಳಿದುಬಂತು.
ಪೊರೆಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಕೃತಕ ಕಣ್ಮಣಿಯನ್ನು ಅಳವಡಿಸಿದ ಮೇಲೂ ಮರುಪೊರೆಯೇ ಎಂದು ಗಿರಿಜಮ್ಮನಂತೆ ಬಹಳಷ್ಟು ಮಂದಿ ಆತಂಕಗೊಳ್ಳುತ್ತಾರೆ. ಹಾಗಾದರೆ ಏನಿದು ಮರುಪೊರೆ? ಎಷ್ಟೆಷ್ಟೋ ಸಾವಿರ ರುಪಾಯಿ ವ್ಯಯಿಸಿ ಆಧುನಿಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೂ ಈ ಮರುಪೂರೆ ಬರುತ್ತಾ?
1949ರ ಮೊದಲೇ ಪೊರೆಯ ಶಸ್ತ್ರಚಿಕಿತ್ಸೆ ಮಾಡಿ ಮೊದಲ ಬಾರಿಗೆ ಕೃತಕ ಕಣ್ಮಣಿಯನ್ನು ಅಳವಡಿಸಿದ ಕೀರ್ತಿಗೆ ಭಾಜನನಾದ ರಿಡ್ಲಿಯೇ ಈ ಕಿರಿಕಿರಿಯುಂಟು ಮಾಡುವ ಮರುಪೊರೆಯ ಬಗ್ಗೆ ದಾಖಲಿಸಿದ್ದಾನೆ. ಅಲ್ಲಿಂದ ಇಂದಿನವರೆಗೆ ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ಉಂಟಾಗಿರುವ ಪ್ರಗತಿ ವಿಸ್ಮಯಕಾರಿಯಾಗಿರುವುದಾದರೂ ಇಂದಿಗೂ ಶೇ.50-ಶೇ.100 ಮಂದಿಗೆ ಮರುಪೊರೆಯ ಸಮಸ್ಯೆ ಉಳಿದುಕೊಂಡಿರುವುದು ದುರದೃಷ್ಟಕರ.
ನಡೆದಿದೆ ಅಧ್ಯಯನ
ಪೊರೆಯ ಶಸ್ತ್ರಚಿಕಿತ್ಸೆಯ ಬಳಿಕ ಅನೇಕ ವರ್ಷಗಳವರೆಗೆ ಮರುಪೊರೆ ಬೆಳೆಯುವ ಬಗ್ಗೆ ಹಲವಾರು ಅಧ್ಯಯನಗಳು, ಸಂಶೋಧನೆಗಳು ನಡೆದಿವೆ. ಮಕ್ಕಳ ಪೊರೆಯ ಶಸ್ತ್ರಚಿಕಿತ್ಸೆ ಬಳಿಕ ಮರುಪೊರೆ ಬೆಳೆಯುವುದು ಸಾಮಾನ್ಯ ತೊಂದರೆ. ಹೀಗಾಗಿ ವೈದ್ಯರು ಸರಿಯಾಗಿ ಶಸ್ತ್ರಚಿಕಿತ್ಸೆ ಮಾಡದೇ ಹೋಗಿದ್ದರಿಂದ ಮರುಪೊರೆ ಬೆಳೆದಿದೆ ಎಂದು ಭಾವಿಸುವುದು ತಪ್ಪು.
ನೈಸರ್ಗಿಕವಾದ ಕಣ್ಣಿನ ಮಸೂರವು ಒಂದು ಪದರದಿಂದ(capsule)ಆವೃತ್ತಗೊಂಡಿರುತ್ತದೆ. ಈ ಮಸೂರದ ಪಾರದರ್ಶಕತ್ವ ಕಡಿಮೆಯಾಗುವುದೇ ಪೊರೆ ಅರ್ಥಾತ್ ಕ್ಯಾಟರಾಕ್ಟ್. ಶಸ್ತ್ರಚಿಕಿತ್ಸೆ ಮಾಡುವಾಗ ಸುತ್ತಲಿನ ಪದರದ ಮುಂಭಾಗದಲ್ಲಿ ಸೂಕ್ಷ್ಮಾತಿಸೂಕ್ಷ್ಮ ಉಪಕರಣಗಳಿಂದ ರಂಧ್ರವನ್ನು ಕೊರೆದು ಪೊರೆಯನ್ನು ತೆಗೆಯಲಾಗುತ್ತದೆ. ಸುತ್ತಲಿನ ಪದರದ ಹಿಂಭಾಗವನ್ನು (posteror capsule) ಹಾಗೇ ಉಳಿಸಿಕೊಳ್ಳಲಾಗುತ್ತದೆ. ಇದೇ ಕೃತಕ ಕಣ್ಮಣಿಯನ್ನು ಅಳವಡಿಸಲು ಆಧಾರ. ದುರದೃಷ್ಟವಶಾತ್ ಈ ಹಿಂಭಾಗದ ಪದರವು ಪಾರದರ್ಶಕತ್ವವನ್ನು ಕಳೆದುಕೊಂಡಾಗ ಬೆಳಕಿನ ಕಿರಣಗಳು ಅಕ್ಷಿಪಟಲವನ್ನು ತಲುಪಲಾಗದೇ ದೃಷ್ಟಿ ಮಂಜಾಗುತ್ತದೆ. ಇದೇ ಮರುಪೊರೆ.
ಮರುಪೊರೆ ಹೇಗೆ ಬೆಳೆಯುತ್ತದೆ?
ಪೊರೆಯನ್ನು ತೆಗೆದ ಬಳಿಕ ಉಳಿದುಕೊಂಡಿರುವ ಅಲ್ಪಸ್ವಲ್ಪ ಜೀವಕೋಶಗಳು ವಿಭಜನೆ ಹೊಂದಿ ಸಾಬೂನಿನ ಗುಳ್ಳೆಗಳೋಪಾದಿಯಲ್ಲಿ, ಮುತ್ತಿನ ಮಣಿಗಳಂತೆಯೇ ಸಂಗ್ರಹಗೊಂಡು ಮರುಪೊರೆ ಸೃಷ್ಟಿಯಾಗುತ್ತದೆ. ಕೆಲವೊಮ್ಮೆ ಉಂಗುರಾಕಾರದಲ್ಲಿಯೋ, ಮತ್ತೆ ಕೆಲವೊಮ್ಮೆ ದಪ್ಪನೆಯ ಅಪಾರದರ್ಶಕ ಪದರದ ರೂಪದಲ್ಲೋ ಮರುಪೊರೆ ಬೆಳೆಯಬಹುದು. ಈ ಬಗೆಯ ಜೀವಕೋಶಗಳ ವಿಭಜನೆಯನ್ನು ತಪ್ಪಿಸಿ ಮರುಪೊರೆಯನ್ನು ಬೆಳೆಯದಂತೆ ಮಾಡುವ ಔಷಧಿಗಳ ಕುರಿತು ಅಧ್ಯಯನ ನಡೆಯುತ್ತಿದ್ದು ಇನ್ನೂ ಸೂಕ್ತ ಪರಿಹಾರ ಸಿಕ್ಕಿಲ್ಲ.
ಭಯ ಬಿಟ್ಹಾಕಿ
ಮರುಪೊರೆಯ ಬಗ್ಗೆ ಗಾಬರಿಯಾಗುವ ಅಗತ್ಯವಿಲ್ಲ. ಲೇಸರ್ ಚಿಕಿತ್ಸೆಯ ಮೂಲಕ ಮರುಪೊರೆಯನ್ನು ಛಿದ್ರಗೊಳಿಸಿ ದೃಷ್ಟಿಯ ಕೇಂದ್ರದಲ್ಲಿ ಬೆಳಕಿನ ಕಿರಣಗಳು ಹಾದು ಹೋಗಲು ಅನುವು ಮಾಡಿಕೊಡಬಹುದು. (Nd Yag Laser Capsulotomy)ಇದೊಂದು ಸರಳ ಚಿಕಿತ್ಸೆಯಾಗಿದ್ದು, ದುಬಾರಿಯೂ ಅಲ್ಲ. ಆದರೆ ಕೆಲವೊಮ್ಮೆ ಈ ಚಿಕಿತ್ಸೆಯ ಬಳಿಕ ಕಣ್ಣಿನ ಒತ್ತಡ ಹೆಚ್ಚಾಗುವ, ಕಣ್ಮಣಿಸರಿದುಕೊಳ್ಳುವ ಅಥವಾ ಅಕ್ಷಿಪಟಲ ಸರಿಯುವಂಥ ತೊಂದರೆಗಳಾಗಬಹುದು. ನುರಿತ ವೈದ್ಯರ ಸಲಹೆಯಂತೆ ಕೆಲವು ಮುಂಜಾಗ್ರತಾ ಔಷಧ ಹನಿಗಳನ್ನು ಬಳಸಿ ಈ ತೊಂದರೆಗಳನ್ನು ತಡೆಗಟ್ಟಬಹುದು.
ಮರುಪೊರೆ ದಪ್ಪ ಪದರದಂತೆ ಬೆಳೆದಿದ್ದರೆ ದ್ಯುತಿ ವಿಚ್ಛಿದ್ರ ಯಶಸ್ವಿಗೊಳ್ಳದೇ ಹೋಗಬಹುದು. ಆಗ ಶಸ್ತ್ರಚಿಕಿತ್ಸೆಯಿಂದ ಆ ಪದರವನ್ನು ಕತ್ತರಿಸಬೇಕಾಗಬಹುದು. ಆದಾಗ್ಯೂ ಒಂದು ಹನಿ ನೆತ್ತರು ಬಿದ್ದೆಡೆ ರಾಕ್ಷಸರು ಹುಟ್ಟಿಕೊಳ್ಳುವಂಥ ರಕ್ತ ಬೀಜಾಸುರನಂತೆ ಮರುಪೊರೆ ಬೆಳೆಯಬಲ್ಲದು. ಆರಂಭದಲ್ಲಿಯೇ ಪತ್ತೆ ಹಚ್ಚಿ ಲೇಸರ್ ಚಿಕಿತ್ಸೆ ಪಡೆದುಕೊಳ್ಳುವುದೊಂದೇ ಉತ್ತಮ ಮಾರ್ಗ. ಮರುಪೊರೆಗೆ ಸೂಕ್ತ ಚಿಕಿತ್ಸೆ ಲಭ್ಯವಿದ್ದು ಇದರ ಬಳಿಕ ದೃಷ್ಟಿ ಉತ್ತಮಗೊಳ್ಳುತ್ತದೆಯಾದ್ದರಿಂದ ಈ ವಿಷಯದಲ್ಲಿ ಚಿಂತೆ ಅನಗತ್ಯ.
ಮರುಪೊರೆ ಓಡಿಸೋದು ಹೇಗೆ?