ಆರೋಗ್ಯ-ಜೀವನಶೈಲಿ

ಪಂಚ್‌ರಂಗಿ

ಪಂಚ್‌ರಂಗಿ
Published On :

ನಮ್ಮ ಜನರಲ್ಲಿ ಮಡುಗಟ್ಟಿ ನಿಂತಿರುವ ಮೂಢನಂಬಿಕೆ, ಅಜ್ಞಾನಗಳ ಇಕ್ಕಟ್ಟಾದ ಚೌಕಟ್ಟಿನಲ್ಲಿ ಜನರನ್ನು ಕಟ್ಟಿ ಹಾಕಿ, ಅವರ ದೌರ್ಬಲ್ಯವನ್ನೇ ಬಂಡವಾಳವಾಗಿಸಿಕೊಂಡು ಸೋಂಕು ರೋಗಗಳು ತಾಂಡವ ನೃತ್ಯ ಮಾಡುತ್ತಿವೆ. ಇವು ಶಿಶುಗಳನ್ನು ಮೃತ್ಯುವಿನ ಕೂಪದಲ್ಲಿ ಬೀಳುವಂತೆ ಮಾಡುತ್ತಿವೆ. ಇಲ್ಲವೇ ಅಶಕ್ತತೆಯನ್ನು ಬಳುವಳಿಯಾಗಿ ಕೊಟ್ಟು, ಇತರೆ ರೋಗಗಳು ಮುತ್ತಿಕೊಳ್ಳುವಂತೆ ಮಾಡುತ್ತವೆ. ಅಥವಾ ಅಂಗವೈಕಲ್ಯಕ್ಕೆ ಎಡೆ ಮಾಡಿಕೊಡುತ್ತದೆ.

'ಮುಂಜಾವು ದಿನವನ್ನು ತೋರಿಸಿದಂತೆ ಬಾಲ್ಯ ಮನುಷ್ಯನನ್ನು ತೋರಿಸುತ್ತದೆ' ಎಂದು ಆಂಗ್ಲಕವಿ ಜಾನ್ ಮಿಲ್ಟನ್ ಹೇಳಿದಂತೆ ವಯಸ್ಕರಿಗಿಂತಲೂ ಎಳೆಯರು ಸೋಂಕು ರೋಗಗಳಿಗೆ ಬಲಿಯಾಗುತ್ತಾರೆ. ಆದ್ದರಿಂದ ಈ  ವಯೋವಾನವನ್ನು ಆರೋಗ್ಯ ದೃಷ್ಟಿಯಿಂದ ಅಪಾಯಕಾರಿ ಘಟ್ಟ ಎಂದೇ ಪರಿಗಣಿಸಲಾಗುತ್ತದೆ. ಸಾವು, ನೋವು ಮತ್ತು ಅಂಗವೈಕಲ್ಯವನ್ನುಂಟು ಮಾಡುವ ಮಕ್ಕಳ ಮಾರಕ ರೋಗಗಳ ವಿರುದ್ಧ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿ ದೇಹವನ್ನು ರಕ್ಷಿಸುವುದು ವೈಜ್ಞಾನಿಕ ಅವಿಷ್ಕಾರಗಳಿಂದ ಸಾಧ್ಯವಾಗಿದೆ.

ಪೆಂಟಾವ್ಹೆಲೆಂಟ್ ವರ
ಇಲ್ಲಿಯವರೆಗೆ ಮಗುವಿಗೆ 6, 10 ಹಾಗೂ 14ನೇ ವಾರದಲ್ಲಿ ಗಂಡಾಂತಕಾರಿ ಗಂಟಲುಮಾರಿ, ಕೆಮ್ಮಿಕೆಮ್ಮಿ ಕುತ್ತುಸಿರು ಬಿಡಿಸುವ ನಾಯಿಕೆಮ್ಮು, ದೇಹ ದಂಡಿಸುವ ಧನುರ್ವಾಯು, ದಡಾರ ಹಾಗೂ ಯಕೃತ್ತಿನ ಉರಿಯೂತಕ್ಕೆ ಹೆಪಟೈಟಿಸ್ ಲಸಿಕೆಯನ್ನು ಹಾಕಲಾಗುತ್ತಿತ್ತು. ಇನ್ನು ಮುಂದೆ ಈ ಐದು ರೋಗಗಳ ವಿರುದ್ಧ ರಕ್ಷಣೆ ನೀಡಲು ಪೆಂಟಾವ್ಹೆಲೆಂಟ್ ಎಂಬ ಒಂದೇ ಲಸಿಕೆಯನ್ನು ಮಗುವಿಗೆ ನೀಡಲಾಗುವುದು. ಇದು ಮಕ್ಕಳ ಆರೋಗ್ಯದಲ್ಲಿ ಕ್ರಾಂತಿಯನ್ನು ಮಾಡಲಿದೆ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಪೆಂಟಾವ್ಹೆಲೆಂಟ್ ಎಂಬ ಲಸಿಕೆಯನ್ನು ತಯಾರಿಸಲಾಗಿದೆ. ಇದಕ್ಕಾಗಿ ಸಾವಿರಾರು ರುಪಾಯಿ ವೆಚ್ಚ ಮಾಡಬೇಕಿಲ್ಲ. ಈ ಲಸಿಕೆ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ.

ಆಗಿದೆ ಸೂಕ್ತ ಪ್ರಯೋಗ
ಪೆಂಟಾವ್ಹೆಲೆಂಟ್ ತಯಾರಿಸುವ ಮುನ್ನ ಕೇರಳ ಮತ್ತು ತಮಿಳುನಾಡಿನಲ್ಲಿ ಹುಟ್ಟುವ ಮಕ್ಕಳ ಜನನ ಹಾಗೂ ನ್ಯೂಮೋನಿಯಾದಿಂದ ಅಸು ನೀಗುವ ಮಕ್ಕಳ ಅಂಕಿ ಸಂಖ್ಯೆಯನ್ನು ಕಲೆ ಹಾಕಲಾಗಿತ್ತು. ಇದರ ಆಧಾರದ ಮೇಲೆ ಲಸಿಕೆಯನ್ನು ತಯಾರಿಸಲಾಯಿತು.
2011ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಕೇರಳ ಮತ್ತು ತಮಿಳುನಾಡಿನಲ್ಲಿ ಲಸಿಕೆಯನ್ನು ಬಿಡುಗಡೆ ಮಾಡಿತು. ಪ್ರಯೋಜನಕಾರಿ ಫಲಿತಾಂಶಗಳು ಈ ಪ್ರಾಯೋಗಿಕ ಲಸಿಕೆಯಿಂದ ಲಭ್ಯವಾದಾಗ ಎರಡನೇ ಹಂತವಾಗಿ 2012-13ರಲ್ಲಿ ದೆಹಲಿ, ಜಮ್ಮು-ಕಾಶ್ಮಿರ, ಹರ್ಯಾಣ, ಗುಜರಾತ್, ಗೋವಾ, ಪುದುಚೆರಿ ಮತ್ತು ಕರ್ನಾಟಕಗಳಲ್ಲಿಯೂ ಈ ಲಸಿಕೆಯನ್ನು ಪರಿಚಯಿಸಲಾಯಿತು. ರಾಜ್ಯದಲ್ಲಿ ವರ್ಷಕ್ಕೆ 12 ಲಕ್ಷ ಮಕ್ಕಳು ಜನಿಸುತ್ತಿದ್ದು ಅವರಿಗೆಲ್ಲರಿಗೂ ಈ ಲಸಿಕೆ ಉಚಿತವಾಗಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.  <

ಪೆಂಟಾವ್ಹೆಲೆಂಟ್ ವೈಶಿಷ್ಟ್ಯಗಳು
ಈಗಾಗಲೇ ಹಳೆಯ ಪದ್ಥತಿಯಂತೆ ಲಸಿಕೆ ಕೊಡಿಸಿರುವ ಮಕ್ಕಳಿಗೆ ಅದೇ ವೇಳಾಪಟ್ಟಿಯಂತೆ ಲಸಿಕೆ ಮುಂದುವರಿಸಿ. ಅವರಿಗೆ ಪೆಂಟಾವ್ಹೆಲೆಂಟ್ ಅಗತ್ಯವಿಲ್ಲ. ವೈದ್ಯರ ಈ ಸೂಚನೆಯನ್ನು ನಿರ್ಲಕ್ಷಿಸಿ ಅಥವಾ ಸುಳ್ಳು ಹೇಳಿ ಪೆಂಟಾವ್ಹೆಲೆಂಟ್ ಲಸಿಕೆ ಕೊಡಿಸಿದರೆ ಅದು ಮಕ್ಕಳ ಮೇಲೆ ಅಡ್ಡ ಪರಿಣಾಮ ಬೀರಬಹುದು.

ಮಗುವಿಗೆ ಆರು ವಾರಗಳು ತುಂಬಿದ ನಂತರ ಮೂರು ಡೋಸ್‌ಗಳನ್ನು ನಾಲ್ಕು ವಾರಗಳ ಅಂತರದಲ್ಲಿ ನೀಡಬೇಕು. 0.5 ಮಿ.ಲೀ. ಲಸಿಕೆಯನ್ನು ಮಾಂಸಖಂಡದೊಳಗೆ ನೀಡಬೇಕು. ಮಗುವನ್ನು ತಡವಾಗಿ ಲಸಿಕಾ ಕೇಂದ್ರಕ್ಕೆ ತಂದಾಗ ವರ್ಷದೊಳಗೆ ಅದಕ್ಕೆ ಮೂರು ಡೋಸ್ ಲಸಿಕೆ ಕೊಡುವಂತಿದ್ದರೆ ಪೆಂಟಾವ್ಹೆಲೆಂಟ್ ಕೊಡಬಹುದು.

ಈ ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಒಂದು ವೇಳೆ ಸಣ್ಣ ಪುಟ್ಟ ತೊಂದರೆಗಳಾದರೂ ಭಯ ಪಡುವ ಅವಶ್ಯಕತೆಯಿಲ್ಲ, ಉದಾ: ಜ್ವರ ಬರಬಹುದು. ಅದಕ್ಕಾಗಿ ಲಸಿಕೆ ನಂತರ ನೀಡಿರುವ ಜ್ವರ ಶಮನ ಮಾತ್ರೆ ಹಾಕಿದರೆ ಸಾಕು.

180 ದೇಶಗಳಲ್ಲಿ ಬಳಕೆ
ಪೆಂಟಾವ್ಹೆಲೆಂಟ್ ಲಸಿಕೆಯನ್ನು 20 ವರ್ಷಗಳಿಂದ 180 ದೇಶಗಳಲ್ಲಿ ಬಳಸಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಯಾವುದೇ ಅಡ್ಡ ಪರಿಣಾಮಗಳೂ ವರದಿಯಾಗಿಲ್ಲ. ಈ ಲಸಿಕೆಯಿಂದ ಮಕ್ಕಳು ಬದುಕಿ ಉಳಿದು ಉತ್ಪಾದಕ ಜೀವನವನ್ನು ನಡೆಸಬಲ್ಲವರಾಗುತ್ತಾರೆ.

-ಡಾ. ಕರವೀರಪ್ರಭು ಕ್ಯಾಲಕೊಂಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.