ಆರೋಗ್ಯ-ಜೀವನಶೈಲಿ

ಹುಡುಗರೇಕೆ ಆಂಟಿಯನ್ನು ಪ್ರೀತಿಸುತ್ತಾರೆ?

ಹುಡುಗರೇಕೆ ಆಂಟಿಯನ್ನು ಪ್ರೀತಿಸುತ್ತಾರೆ?
Published On :

ಗಂಡಸೊಬ್ಬನ ಒಳಗೆ ಯಾವಾಗಲೂ ಒಂದು ಮಗು  ಇರುತ್ತದೆ ಎಂಬ ಮಾತಿದೆ. ಅವನೊಳಗಿನ ಮಗು ಸದಾ ತಾಯಿಯ ಆರೈಕೆಗಾಗಿ ಹಂಬಲಿಸುತ್ತಿರುತ್ತದೆ. ಹೆಂಡತಿ ಇವನಿಗಿಂತ ದೊಡ್ಡವಳಾದರೆ ಆ ಆಸೆ ಪೂರೈಸಬಲ್ಲಳು. ಅವಳಲ್ಲಿ ಇವನು ಏಕಕಾಲಕ್ಕೆ ಹೆಂಡತಿಯನ್ನೂ ತಾಯಿಯನ್ನೂ ಕಾಣಬಲ್ಲ. ಚಿಕ್ಕವಳನ್ನು ಮದುವೆಯಾದರೆ ಇದು ಸಿಗಲು ಸಾಧ್ಯವಿಲ್ಲ.

ಮಹಿಳೆಯರಿಗೆ ತಮಗಿಂತ ಸಣ್ಣ ವಯಸ್ಸಿನ ಹುಡುಗರನ್ನು ಮದುವೆಯಾಗುವುದರಲ್ಲಿ ಒಂಥರಾ ಸಾಹಸ ಮಾಡಿದ ತೃಪ್ತಿಯಿದೆ ಎಂಬುದೇನೋ ನಿಜ. ಆದರೆ, ಹುಡುಗರೂ ಬಹಳ ಇಷ್ಟಪಟ್ಟು ಆಂಟಿಯರನ್ನು ಪ್ರೀತಿಸುವುದುಂಟು. ಅನೇಕ ಸಲ ಇದು ಲೈಂಗಿಕ ಆಕರ್ಷಣೆಯಷ್ಟೇ ಆಗಿರಬಹುದು. ಆದರೆ, ಅದಕ್ಕಿಂತ ಹೆಚ್ಚಾಗಿ ಇದು ಪ್ರೌಢ ಸ್ತ್ರೀಯರಲ್ಲಿ ಅವರಿಗೆ ಹುಟ್ಟುವ ಬೌದ್ಧಿಕ ಆಕರ್ಷಣೆಯೂ ಆಗಿರುತ್ತದೆ.

ಇಂತಹ ಸಾಕಷ್ಟು ಮದುವೆಗಳು ಸಕ್ಸಸ್ ಆಗಿವೆ. ಇಷ್ಟಕ್ಕೂ ಪ್ರೀತಿಯೆಂಬುದು ಹೃದಯಗಳ ವಿಷಯ ಎಂದು ನಾವು ಒಪ್ಪಿಕೊಂಡು ಯಾವುದೋ ಕಾಲವಾಯಿತು. ಪ್ರೇಮಕ್ಕೂ ಕಣ್ಣಿಲ್ಲ, ಕಾಮಕ್ಕೂ ಕಣ್ಣಿಲ್ಲ. ಇದು ಮನಸ್ಸು ಹಾಗೂ ದೇಹಕ್ಕೆ ಸಂಬಂಧಿಸಿದ್ದು. ವಯಸ್ಸು ಇಲ್ಲಿ ನಗಣ್ಯ. ಸಮಾಜ ಇದನ್ನು ಅಸಹಜ ಎಂಬಂತೆ ನೋಡುತ್ತದೆ ಎಂಬ ಏಕೈಕ ಕಾರಣಕ್ಕೆ ಇಂದು ಇಂತಹ ಮದುವೆಗಳು ಕಡಿಮೆ ಇರಬಹುದು. ಆದರೆ ನಿಜವಾದ ಪ್ರೀತಿ ಸಮಾಜದ ಅಂಕೆಗೆ ಸಿಗುವುದಿಲ್ಲ. ನನ್ನ ಬದುಕು ನನ್ನದು ಎಂಬ ಬಿಂದಾಸ್ ಪ್ರವೃತ್ತಿ ಹೆಚ್ಚುತ್ತ ಹೋದಂತೆ 'ಆಂಟಿ ಪ್ರೀತ್ಸೆ' ಪ್ರಕರಣಗಳು ಬಹಳ ಸಾಮಾನ್ಯವಾಗುತ್ತ ಹೋಗುತ್ತವೆ. ಅನುಮಾನವೇ ಬೇಡ.
ಹುಡುಗರಿಗೆ ತಮಗಿಂತ ದೊಡ್ಡ ಮಹಿಳೆಯರೇಕೆ ಇಷ್ಟವಾಗುತ್ತಾರೆ? ಇಂತಹ ಸಂಬಂಧದಲ್ಲಿ ಲಾಭವೇನಿದೆ ಒಂದಷ್ಟು ಕಾರಣಗಳು ಇಲ್ಲಿವೆ.

ಬುದ್ಧಿವಂತಿಕೆ ಮತ್ತು ಆತ್ಮವಿಶ್ವಾಸ
ವಯಸ್ಸು ಹಾಗೂ ಅನುಭವ ಹೆಚ್ಚುತ್ತ ಹೋದಂತೆ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಅನೇಕ ಹುಡುಗರು ಆಂಟಿಯರಲ್ಲಿ ಇದನ್ನು ಇಷ್ಟಪಡುತ್ತಾರೆ. ಆಕೆಗೆ ಅನುಭವವಿದೆ. ಬದುಕು ನಡೆಸುವುದು ಹೇಗೆಂದು ಗೊತ್ತು. ಆಕೆಯ ಜೊತೆ ಮಾತನಾಡುವಾಗ ಅವನಿಗೆ ಅವಳು ಹೆಚ್ಚು ಪ್ರೌಢಳಂತೆ ಕಾಣಿಸಬಹುದು. ಸಣ್ಣ ವಯಸ್ಸಿನ ಹುಡುಗಿಯರು ಸಾಮಾನ್ಯವಾಗಿ ಚೆಲ್ಲುಚೆಲ್ಲಾಗಿರುತ್ತಾರೆ. ಹುಡುಗರಿಗೆ ಅವರು ನೋಡಲು ಚಂದವಾಗಿ ಕಾಣಿಸಿದರೂ ಮಾನಸಿಕವಾಗಿ ಅವರು ನಮಗಿಂತ ಅಪ್ರಬುದ್ಧರು ಎಂಬ ಭಾವನೆ ಒಳಗೊಳಗೇ ಇದ್ದಿರುತ್ತದೆ. ಇವರಿಗೆ ಪ್ರೌಢ ಸ್ತ್ರೀಯರೇ ಹೆಚ್ಚು ಆಕರ್ಷಕವಾಗಿ ಕಾಣಿಸಬಹುದು.

ಅವಳೇ ಮುಂದುವರೆಸುತ್ತಾಳೆ!
ಆಂಟಿ ಅನುಭವಸ್ಥೆ. ಮದುವೆಯಾದ ದಿನದಿಂದಲೇ ಅವಳು ಚಾರ್ಜ್ ತೆಗೆದುಕೊಳ್ಳುತ್ತಾಳೆ! ಹುಡುಗನಿಗೆ ತನ್ನ ಹೆಂಡತಿಯನ್ನು ಹೇಗೆ ನಡೆಸಿಕೊಳ್ಳಬೇಕೆಂದು ಗೊತ್ತಿರದಿದ್ದರೂ ಪರವಾಗಿಲ್ಲ, ಅವಳಿಗೆ ಗಂಡನನ್ನು ಹೇಗಿಟ್ಟುಕೊಳ್ಳಬೇಕೆಂಬುದು ಗೊತ್ತು. ಇದು ಹುಡುಗರ ಕೆಲಸವನ್ನು ಸುಲಭವಾಗಿಸುತ್ತದೆ. ಅನುಭವಿ ಸಂಗಾತಿಯೊಂದಿಗೆ ಸೆಕ್ಸ್ ಕೂಡ ಅದ್ಭುತವಾಗಿರುತ್ತದೆ ಎಂದು ಅನೇಕ ಸಮೀಕ್ಷೆಗಳು ಹೇಳಿವೆ. ಇಂಥವೆಲ್ಲ ಬೇಗ ಹುಡುಗರ ತಲೆಗೆ ಹೋಗುತ್ತವೆ. ತನಗೆ ಬೇಕಾದ ಸುಖವನ್ನು ಆಕೆ ಡಿಮ್ಯಾಂಡ್ ಮಾಡಿ ತೆಗೆದುಕೊಳ್ಳುತ್ತಾಳೆ, ಅದೇ ವೇಳೆ, ಇವನಿಗೆ ನೀಡಬೇಕಾದ ಸುಖವನ್ನು ಅನುಭವದಿಂದಲೇ ನೀಡುತ್ತಾಳೆ.

ಇಲ್ಲಿ ಸ್ಪರ್ಧೆ ಕಡಿಮೆ
ಈಗಷ್ಟೇ ಮದುವೆ ವಯಸ್ಸಿಗೆ ಬಂದ ಸುಂದರ ಹುಡುಗಿಯ ಹಿಂದೆ ಹತ್ತಾರು ಹುಡುಗರಿರುತ್ತಾರೆ. ಆದರೆ, ವಯಸ್ಸಿನಲ್ಲಿ ದೊಡ್ಡವರಾದ ಮಹಿಳೆಯ ವಿಷಯದಲ್ಲಿ ಹೀಗಲ್ಲ. ಇಲ್ಲಿ ಹುಡುಗರಿಗೆ ಕಾಂಪಿಟೇಶನ್ ಕಡಿಮೆ. ಮತ್ತು ಸಕ್ಸಸ್ ರೇಟ್ ಜಾಸ್ತಿ! ಸಂಬಂಧಕ್ಕಾಗಿ ಎದುರು ನೋಡುತ್ತಿರುವ ಮಹಿಳೆ ತನ್ನಲ್ಲಿ ಆಸಕ್ತಿ ತೋರುವ ಹುಡುಗನನ್ನು ಸೆಳೆಯಲು ಇನ್ನಷ್ಟು ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಾಳೆ. ಅದೇ ವೇಳೆ, ಈಗಿನ ಇಂಟರ್ನೆಟ್ ಯುಗದಲ್ಲಿ, ಹುಡುಗರು ಸಂಬಂಧಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ವೆಬ್‌ಸೈಟುಗಳಲ್ಲಿ ಹುಡುಗಿಯರಿಗಿಂತ ಹೆಚ್ಚಾಗಿ ದೊಡ್ಡ ವಯಸ್ಸಿನ ಮಹಿಳೆಯರೇ ಕಾಣಿಸಿಕೊಳ್ಳುತ್ತಾರೆ.

ಆರ್ಥಿಕ ಭದ್ರತೆ
ಹೆಚ್ಚು ಕೆಲಸ ಮಾಡದೆ ಸುಲಭವಾಗಿ ಮೋಜಿಗೆ ಹಣ ಸಿಗಬೇಕು ಎಂಬ ಮನಸ್ಥಿತಿಯ ಹುಡುಗರಿಗೆ ಈಗಾಗಲೇ ಆರ್ಥಿಕವಾಗಿ ಬದುಕಿನಲ್ಲಿ ಸೆಟಲ್ ಆದ ಮಹಿಳೆಯರು ಹೇಳಿ ಮಾಡಿಸಿದ ಜೋಡಿ. ಇಂಥ ಮಹಿಳೆಯರ ಬಳಿ ಮನೆ, ಕಾರು, ಹಣ ಎಲ್ಲವೂ ಇರಬಹುದು. ಆಗ ಹುಡುಗನಿಗೆ ಇವುಗಳನ್ನೆಲ್ಲ ಸ್ವಂತವಾಗಿ ಗಳಿಸಿ ಜೀವನದಲ್ಲಿ ಸೆಟಲ್ ಆಗಬೇಕೆಂಬ ಅನಿವಾರ್ಯತೆಯಿಲ್ಲ. ಸುಲಭವಾಗಿ ಸಂಗಾತಿಯೂ, ಅವಳ ಆಸ್ತಿಯೂ ಸಿಗುತ್ತದೆ ಎಂಬ ಕಾರಣಕ್ಕೆ ಪ್ರೌಢ ವಯಸ್ಕರನ್ನು ಹುಡುಕುವ ಹುಡುಗರು ಹೆಚ್ಚಿದ್ದಾರೆ. ಇದು ಅವನನ್ನು ಮದುವೆಯಾಗುವ ಮಹಿಳೆಯ ಆತ್ಮವಿಶ್ವಾಸವನ್ನೂ ಅಹಂ ಅನ್ನೂ ಹೆಚ್ಚಿಸುತ್ತದೆ.

ಹಿರಿಯ ಮಹಿಳೆ ಮದುವೆಗೆ ನಿಷಿದ್ಧ
ಏನು ಮಾಡಬಾರದು ಎಂದು ಸಮಾಜ ಹೇಳುತ್ತದೆಯೋ ಅದನ್ನು ಮಾಡುವುದರಲ್ಲಿ ಈಗಿನ ಹುಡುಗರಿಗೆ ಒಂಥರಾ ಥ್ರಿಲ್. ಮದುವೆಯಾಗುವ ಹುಡುಗಿ ಚಿಕ್ಕವಳಾಗಿರಬೇಕು ಎಂಬ ಸಂಪ್ರದಾಯ ಇರುವುದರಿಂದ ಅದನ್ನು ಮುರಿಯುವುದರಲ್ಲೇ ಅನೇಕರು ತೃಪ್ತಿ ಪಡೆಯುತ್ತಾರೆ. ಇದನ್ನು ಮಾಡಬೇಡ ಎಂದು ಹಿರಿಯರು ಹೇಳುತ್ತರಾದರೂ ಅದರಲ್ಲೇನೋ ವಿಶೇಷವಿದೆ ಎಂಬ ಕುತೂಹಲ ಹುಡುಗರಲ್ಲಿರುತ್ತದೆ. ಹಾಗಾಗಿ ಉದ್ದೇಶಪೂರ್ವಕವಾಗಿ ತನಗಿಂತ ದೊಡ್ಡವಳನ್ನು ಹುಡುಕಿ ಪ್ರೀತಿಸುವ ಹುಡುಗರೂ ಇದ್ದಾರೆ.

ಆಕರ್ಷಣೆ ಮತ್ತು ಪ್ರೀತಿ
ಯುವಕರಿಗೆ ತಮ್ಮ ಸುತ್ತಮುತ್ತ ಇರುವ ತಮ್ಮದೇ ವಯಸ್ಸಿನ ಹುಡುಗಿಯರು ಕೆಲ ಸಲ ಬೋರು ಹೊಡೆಸುತ್ತಾರೆ. ಅವರಲ್ಲಿ ಇವರಿಗೆ ಹೊಸತೇನೂ ಕಾಣಿಸುವುದಿಲ್ಲ. ಇವರು ಫೇಸ್‌ಬುಕ್ ಬಗ್ಗೆ ಮಾತಾಡಿದರೆ ಅವರೂ ಫೇಸ್‌ಬುಕ್ ಬಗ್ಗೆಯೇ ಮಾತಾಡುತ್ತಾರೆ. ಅದರಲ್ಲೇನೂ ವಿಶೇಷವಿಲ್ಲ. ಆದರೆ, ಇವರು ಬೈಕ್ ಬಗ್ಗೆ ಮಾತಾಡಿದರೆ ಇವನಿಗಿಂತ ದೊಡ್ಡವಳಾದ ಮಹಿಳೆ ಕಾರಿನ ಬಗ್ಗೆ ಮಾತಾಡಬಹುದು. ಇವನು ಯಾವುದೋ ಕಂಪನಿಯಲ್ಲಿ ಕೆಲಸಕ್ಕೆ ಸೇರುವ ಮಾತಾಡಿದರೆ ಅವಳು ತಮ್ಮದೇ ಕಂಪನಿ ಶುರುಮಾಡುವ ಬಗ್ಗೆ ಮಾತಾಡಬಹುದು. ಇದು ಹುಡುಗರನ್ನು ಇಂಪ್ರೆಸ್ ಮಾಡಬಹುದು ಅಥವಾ ಕೇವಲ ಆಕರ್ಷಣೆಯೇ ಇಲ್ಲಿ ಗೆಲ್ಲುವ ಸಾಧ್ಯತೆಯೂ ಇದೆ. ಶ್ರೀದೇವಿಗೆ ನಾನು ಪ್ರಾಣ ಬೇಕಾದ್ರೂ ಕೊಡಬಲ್ಲೆ ಎನ್ನುವ ಕಾಲೇಜು ಹುಡುಗರು ಇವತ್ತೂ ಎಷ್ಟಿದ್ದಾರೆ ಗೊತ್ತಾ?

ತಾಯ್ತನದ ಆರೈಕೆಯ ಹಂಬಲ
ಗಂಡಸೊಬ್ಬನ ಒಳಗೆ ಯಾವಾಗಲೂ ಒಂದು ಮಗು ಇರುತ್ತದೆ ಎಂಬ ಮಾತಿದೆ. ಅವನೊಳಗಿನ ಮಗು ಸದಾ ತಾಯಿಯ ಆರೈಕೆಗಾಗಿ ಹಂಬಲಿಸುತ್ತಿರುತ್ತದೆ. ಹೆಂಡತಿ ಇವನಿಗಿಂತ ದೊಡ್ಡವಳಾದರೆ ಆ ಆಸೆ ಪೂರೈಸಬಲ್ಲಳು. ಅವಳಲ್ಲಿ ಇವನು ಏಕಕಾಲಕ್ಕೆ ಹೆಂಡತಿಯನ್ನೂ ತಾಯಿಯನ್ನೂ ಕಾಣಬಲ್ಲ. ಚಿಕ್ಕವಳನ್ನು ಮದುವೆಯಾದರೆ ಇದು ಸಿಗಲು ಸಾಧ್ಯವಿಲ್ಲ. ಹೆಂಡತಿ ದೊಡ್ಡವಳಾಗಿದ್ದರೆ ಇವನಿಗೇನು ಬೇಕು ಎಂಬುದನ್ನು ಇವನು ಹೇಳದೆಯೇ ಅರ್ಥ ಮಾಡಿಕೊಳ್ಳುತ್ತಾಳೆ.

ಗಂಡ ಚಿಕ್ಕವನು, ಹೆಂಡತಿ ದೊಡ್ಡವಳು
(ಸೆಲೆಬ್ರಿಟಿ ಜೋಡಿಗಳು)
ಅಭಿಷೇಕ್ ಬಚ್ಚನ್- ಐಶ್ವರ್ಯ ರೈ

ಬಾಲಿವುಡ್‌ನ ಈ ನಂ.1 ಜೋಡಿ ಮದುವೆಯಾದಾಗ ಅಭಿಷೇಕ್ ಬಚ್ಚನ್‌ಗೆ 37, ಐಶ್‌ಗೆ 39. ತನಗಿಂತ ದೊಡ್ಡವನಾದ ಹಾಗೂ ಅಭಿಷೇಕ್‌ಗಿಂತ ಪ್ರಸಿದ್ಧನಾದ ಸಲ್ಮಾನ್ ಖಾನ್‌ನನ್ನು ಐಶ್ ಬೇಡ ಅಂದಳು. 2007ರಲ್ಲಿ ಇವರು ಮದುವೆಯಾಗಿ ಈಗ ಒಬ್ಬಳು ಮಗಳಿದ್ದಾಳೆ.

ಸಚಿನ್ ತೆಂಡೂಲ್ಕರ್- ಅಂಜಲಿ
ಮಾಸ್ಟರ್ ಬ್ಲಾಸ್ಟರ್ ಸಚಿನ್ ತನಗಿಂತ ಐದು ವರ್ಷ ದೊಡ್ಡವಳಾದ ಅಂಜಲಿಯನ್ನು ಮದುವೆಯಾದಾಗ ಎಲ್ಲರೂ ಹುಬ್ಬೇರಿಸಿದ್ದರು. ಕ್ರಿಕೆಟ್‌ನಲ್ಲಿ ರೋಲ್ ಮಾಡೆಲ್ ಆಗಿದ್ದ ಸಚಿನ್ ಈಗ ತನಗಿಂತ ದೊಡ್ಡ ಹುಡುಗಿಯನ್ನು ಮದುವೆಯಾಗುವವರಿಗೂ ರೋಲ್ ಮಾಡೆಲ್. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.


ರಾಜ್ ಕುಂದ್ರಾ- ಶಿಲ್ಪಾ ಶೆಟ್ಟಿ
ಮದುವೆಯಾದಾಗ ಶಿಲ್ಪಾಗೆ 37 ವರ್ಷ. ಗಂಡ ಆಕೆಗಿಂತ ಮೂರು ತಿಂಗಳು ಸಣ್ಣವನು. ಶಿಲ್ಪಾಳ ಪರ್‌ಫ್ಯೂಮ್ ಬ್ರ್ಯಾಂಡ್ ಬಿಡುಗಡೆಯ ಸಿದ್ಧತೆಯಲ್ಲಿ ರಾಜ್ ಕುಂದ್ರಾ ಎಂಬ ಎನ್‌ಆರ್‌ಐ ವಾಣಿಜ್ಯೋದ್ಯಮಿ ಆಕೆಗೆ ಮನಸೋತ. ಇವರದು ಲವ್ ಅಟ್ ಫಸ್ಟ್‌ಸೈಟ್. 2009ರಲ್ಲಿ ಮದುವೆಯಾದರು. ಈಗ ಒಬ್ಬ ಮಗನಿದ್ದಾನೆ.

ಶಿರೀಶ್ ಕುಂದರ್-ಫರಾ ಖಾನ್
ಇದನ್ನು ಬೇಕಾದರೆ ಪಕ್ಕಾ ಚಿರತೆ ಬೇಟೆಯೆಂದೇ ಕರೆಯಬಹುದು. ಕೋರಿಯೋಗ್ರಾಫರ್ ಕಮ್ ನಿರ್ದೇಶಕಿ ಫರಾ ಖಾನ್‌ಳನ್ನು ಬಲ್ಲ ಎಲ್ಲರಿಗೂ ಆಕೆಯ ಡಾಮಿನೇಟಿಂಗ್ ನಡತೆಯ ಬಗ್ಗೆ ಗೊತ್ತು. ಫರಾ ತನ್ನ 'ಮೇ ಹೂಂ ನಾ' ಸಿನಿಮಾದ ಸಂಕಲನಕಾರನಾಗಿದ್ದ, ತನಗಿಂತ ಎಂಟು ವರ್ಷ ಚಿಕ್ಕವನಾದ ಶಿರೀಶ್‌ನನ್ನು ಬಲೆಗೆ ಬೀಳಿಸಿಕೊಂಡು 2008ರಲ್ಲಿ ಮದುವೆಯಾದಳು.

ಸುನಿಲ್ ದತ್-ನರ್ಗಿಸ್
ಬಾಲಿವುಡ್‌ನ ದಂತಕತೆಯೆಂದೇ ಈ ಜೋಡಿ ಪ್ರಸಿದ್ಧವಾಗಿದೆ. ಸುನಿಲ್‌ಗಿಂತ ನರ್ಗಿಸ್ ಒಂದು ವರ್ಷ ದೊಡ್ಡವಳು. ತೆರೆಯ ಮೇಲಷ್ಟೇ ಅಲ್ಲ, ನಿಜ ಜೀವನದ ಪ್ರೇಮ ಪ್ರಕರಣದಲ್ಲೂ ಈ ಜೋಡಿ ಬಹಳ ಪ್ರೇಮಿಗಳಿಗೆ ರೋಲ್ ಮಾಡೆಲ್ ಆಗಿದೆ. 'ಮದರ್ ಇಂಡಿಯಾ' ಸಿನಿಮಾ ಸೆಟ್‌ಗೆ ಬೆಂಕಿ ಬಿದ್ದಾಗ ಸುನಿಲ್ ನರ್ಗಿಸ್‌ಳನ್ನು ಕಾಪಾಡಿದ್ದರು. ಆಗಲೇ ಪ್ರೇಮಾಂಕುರವಾಗಿತ್ತು.

-ನಿಶಾ ಕೆ.ಎಸ್.
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest//40308ಗೆ ಭೇಟಿನೀಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.