ಜಗತ್ತೆಲ್ಲ ಹಳದಿ!

ಕೋಟ್ಯಂತರ ರುಪಾಯಿ ಖರ್ಚು ಮಾಡಿ ತಯಾರಿಸುವ ಇಂಗ್ಲಿಷ್ ಔಷಧಕ್ಕೂ ಸೆಡ್ಡು ಹೊಡೆದಿದೆ ಅರಿಶಿನ. ರುಚಿಕಟ್ಟಾದ ಅಡುಗೆಗೂ ಇದು ಬೇಕು. ಉತ್ತಮ ಆರೋಗ್ಯಕ್ಕೆ ಅಲ್ಲದೆ ಮೈ ಕಾಂತಿ- ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲೂ ಬೇಕು. ಸಾಸಿವೆ ನಮೂನೆಯ ಸುವಾಸನೆಯುಳ್ಳ ಅರಿಶಿನ, ಸೌಂದರ್ಯ ಪ್ರೇಮಿಗಳ, ಅಡುಗೆಭಟ್ಟರ, ಆಯುರ್ವೇದ ವೈದ್ಯರು ಹಾಗೂ ರೈತರಿಗೂ ಬಲು ಹತ್ತಿರ. ಆದರೂ ಸದ್ಯ ನಮ್ಮೆಲ್ಲರ ಮೈ ಕಾಂತಿಯನ್ನು ಹೆಚ್ಚಿಸಬಲ್ಲ ಈ ಅರಿಶಿನದಿಂದೇನು ಲಾಭ?
ಮೊಡವೆ, ಇಸುಬು ರೋಗವನ್ನು ಅರಿಶಿನ ನಿಯಂತ್ರಿಸುತ್ತದೆ. ಅಲ್ಲದೆ ಇದರಿಂದಾಗುವ ಕಲೆಯನ್ನೂ ಕಳೆದು ಕಾಂತಿಯನ್ನು ಹೆಚ್ಚಿಸುತ್ತಿದೆ. ಚರ್ಮ ಜಿಡ್ಡುಗಟ್ಟುವುದೂ ನಿಲ್ಲುತ್ತದೆ. ಅರಿಶಿನ ಪುಡಿಯನ್ನು ಸ್ಯಾಂಡಲ್ವುಡ್ ಪೌಡರ್ ಮತ್ತು ಲಿಂಬೆ ರಸದೊಂದಿಗೆ ಬೆರೆಸಿ ಲೇಪಿಸಿಕೊಳ್ಳಬೇಕು. 10 ನಿಮಿಷಗಳ ನಂತರ ಬಿಸಿ ನೀರಿನಲ್ಲಿ ಮುಖ ತೊಳೆದು ನೋಡಿ ಮೊಡವೆಗಳು ಆಗಲೇ ಬಾಡಿದಂತಾಗಿರುತ್ತವೆ. ಅಲ್ಲದೆ, ಗಾಯದ ಗುರುತುಗಳನ್ನೂ ಕಳೆದುಕೊಳ್ಳಬಹುದು.
ಎಣ್ಣೆಯುಕ್ತ ಚರ್ಮದಿಂದ ಮುಕ್ತರಾಗಲು ಚಿಟಿಕೆ ಅರಿಶಿನ ಪುಡಿ, ಒಂದೂವರೆ ಚಮಚ ಸ್ಯಾಂಡಲ್ವುಡ್ ಪೌಡರ್ ಮತ್ತು ಮೂರು ಚಮಚ ಕಿತ್ತಳೆಹಣ್ಣಿನ ರಸವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ಬಿಸಿ ನೀರಿನಲ್ಲಿ ತೊಳೆದರೆ ಎಣ್ಣೆಮುಕ್ತ, ಕಾಂತಿಯುಕ್ತ ಚರ್ಮ ನಿಮ್ಮದಾಗಿರುತ್ತೆ.
- ಇನ್ನು ಒಣಗಿದ ಚರ್ಮವುಳ್ಳವರು ಚಿಟಿಕೆ ಹಳದಿಯೊಂದಿಗೆ ಮೊಟ್ಟೆ (ಬಿಳಿಯ ಭಾಗ), ಲಿಂಬೆ ರಸ, ಎರಡು ಹನಿ ಆಲಿವ್ ಆಯಿಲ್ ಮತ್ತು ರೋಸ್ವಾಟರ್ ಮಿಶ್ರಣ ಮಾಡಿ ಲೇಪಿಸಿಕೊಳ್ಳಿ. ಅದು ಒಣಗಿದ ಮೇಲೆ ಉಗುರು ಬೆಚ್ಚಗಿನ ನೀರಿನಲ್ಲಿ ಸ್ವಚ್ಛಗೊಳಿಸಿ. ಚರ್ಮದ ಮೇಲಿನ ಸುಕ್ಕು, ಗೆರೆಗಳ ನಿವಾರಣೆಗೂ ಇದೇ ಮದ್ದು. ಅರಿಶಿನ ಪುಡಿಯೊಂದಿಗೆ ಹಸಿಹಾಲು, ಅಕ್ಕಿ ಹಿಟ್ಟು, ಟೊಮೇಟೊ ರಸವನ್ನು ಚೆನ್ನಾಗಿ ಮಿಶ್ರಣ ಮಾಡಿ ಹಚ್ಚಿಕೊಂಡು ಅರ್ಧ ಗಂಟೆಯ ಬಳಿಕ ತೊಳೆಯಬೇಕು. ಇದರಿಂದ ಸುಕ್ಕು ಕ್ರಮೇಣ ನಿವಾರಣೆಯಾಗುತ್ತೆ.
- ಅರಿಶಿನವು ಮುಪ್ಪಿನಲ್ಲಾಗುವ ಚರ್ಮದ ನೆರಿಗೆಯಿಂದ ಮುಕ್ತಿ ಪಡೆಯಲು ಸಹಾಯಕ. ಇದನ್ನು ಕಡಲೆ ಹಿಟ್ಟಿನ ನೀರು ಹಸಿ ಹಾಲಿನಲ್ಲಿ ಬೆರೆಸಿ ಲೇಪಿಸಿದರೆ ಮುಪ್ಪಾವಸ್ಥೆಯಲ್ಲೂ ಕಾಂತಿ ಸಾಧ್ಯ.
- ಹಳದಿಯೊಂದಿಗೆ ಅಲೋಯಿವೆರಾ ಜೆಲ್ ಮಿಶ್ರಣ ಮಾಡಿ ಲೇಪಿಸಿದರೆ ಸುಟ್ಟಗಾಯ ವಾಸಿಯಾಗುತ್ತದೆ.
- ಮುಖದ ಮೇಲೆ ಹುಟ್ಟುವ ಕೆಂಪು ಕೂದಲುಗಳಿಂದ ಮುಕ್ತರಾಗಲು ಕಸ್ತೂರಿ ಅರಿಶಿನವನ್ನು ಕಡಲೆ ಹಿಟ್ಟಿನೊಂದಿಗೆ ಬೆರೆಸಿ ಮೂರ್ನಾಲ್ಕು ವಾರ ಹಚ್ಚಿಕೊಳ್ಳಿ.
- ಅರಿಶಿನ ಪುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಬೆರೆಸಿ ಒಡೆದ (ಬಿರುಕು) ಹಿಮ್ಮಡಿಗೆ ಲೇಪಿಸಿಕೊಂಡು, ಅರ್ಧ ಗಂಟೆ ಒಣಗಿಸಿಕೊಂಡರೆ ನಿವಾರಣೆ ಸಾಧ್ಯ.
- ಚರ್ಮ ಮೃದು ಮತ್ತು ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಹಳದಿ, ಮೊಸರು ಅಥವಾ ಹಾಲಿನಲ್ಲಿ ಬೆರೆಸಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿ ಬೆಳಗಿನವರೆಗೆ ಬಿಟ್ಟರೆ ಇದರಿಂದಲೂ ಚರ್ಮ ಸುಂದರವಾಗುತ್ತೆ.
- ಚರ್ಮರೋಗ ನಿವಾರಕ ಔಷಧಗಳಿಗೂ ಇದನ್ನು ಬಳಸಲಾಗುತ್ತದೆ. ಉದಾ: ಎಕ್ಝಿಮಾ, ಪಾಯಿಸನ್ ಐವಿ, ಸೋರಿಯಾಸಿಸ್ಗೆ ಬಳಸಲಾಗುತ್ತದೆ. ಚರ್ಮ ತುರಿಕೆ, ಕಜ್ಜಿ ನೋವಿಗೆ ಇವುಗಳ ಬಳಕೆ ಉತ್ತಮ. ಕಸ್ತೂರಿ ಅರಿಶಿನ ಮತ್ತು ಹಾಲನ್ನು ಬೆರೆಸಿ ಹಚ್ಚಬೇಕು.
- ಅರಿಶಿನ ಮತ್ತು ಕಡಲೆ ಹಿಟ್ಟನ್ನು ಮುಖ- ದೇಹದ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ಮೃತ ಜೀವಕೋಶಗಳನ್ನು ಮತ್ತು ಅಶುದ್ಧತೆಯನ್ನು ಕಳೆದುಕೊಳ್ಳಲು ಸಾಧ್ಯ. ಅಲ್ಲದೆ ಸೀಳಿದ ತುಟಿ ಮತ್ತು ಹಿಮ್ಮಡಿಗೆ ಬಳಸಬಹುದು.
- ಇದಲ್ಲದೆ ಆಲಿವ್ ಆಯಿಲ್ ಜೊತೆಗೆ ಹಳದಿ ಬೆರೆಸಿ ತಲೆಯ ನೆತ್ತಿಗೆ ಹಚ್ಚಿದರೆ ಹೊಟ್ಟು (ಡ್ಯಾಂಡ್ರಾಫ್) ನಿವಾರಣೆ, ರಕ್ತ ಪರಿಚಲನೆ, ಕೂದಲು ಹೊಳಪು ಮತ್ತು ಗಟ್ಟಿಗೊಳ್ಳುತ್ತವೆ. ಕೂದಲು ಉದುರುವಿಕೆಗೆ ಅರಿಶಿಣದೊಂದಿಗೆ ಹಾಲು ಮತ್ತು ಜೇನುತುಪ್ಪ ಬೆರೆಸಿ ನೆತ್ತಿಗೆ ಹಚ್ಚಿ.
- ಹಳದಿಯಿಂದ ನೈಸರ್ಗಿಕವಾದ ಹೇರ್ ಡೈ ಮಾಡಿಕೊಳ್ಳಲೂ ಸಾಧ್ಯ. ಅರಿಶಿನ, ಕೇಸರಿ, ಚಾಮೊಮೈಲ್ ಟೀ, ಕೆಲಂಡ್ಯುಲವನ್ನು (ಚೆಂಡು ಹೂವಿನ ಜಾತಿಯ ಸಸ್ಯ) ಹುರಿದು ಪುಡಿ ಮಾಡಿ ಹಚ್ಚಿಕೊಳ್ಳಿ. 20 ನಿಮಿಷದ ಬಳಿಕ ತೊಳೆಯಿರಿ.
ಅರಿಶಿನದಿಂದ ಆರೋಗ್ಯ ಭಾಗ್ಯ
- ಮಕ್ಕಳ ಕ್ಷಯರೋಗ ಮತ್ತು ಕ್ಯಾನ್ಸರ್ ನಿವಾರಣೆಗೆ ಅನುಕೂಲ.
- ಕಾಮಾಲೆ, ಉದರ ಸಂಬಂಧಿ, ಸಕ್ಕರೆ ಕಾಯಿಲೆಯುಳ್ಳವರಿಗೂ ಉತ್ತಮ ಔಷಧ.
- ಬೊಜ್ಜು ನಿವಾರಣೆಗೂ ಸೂಕ್ತ. ಅಜೀರ್ಣತೆ, ಹೊಟ್ಟೆ ಉಬ್ಬುವಿಕೆ ನಿವಾರಣೆಯೂ ಸಾಧ್ಯ.
- ಮುಟ್ಟಿನ ವೇಳೆ ಬರುವ ಸ್ನಾಯು ಸೆಳೆತಕ್ಕೆ ಮುಟ್ಟು ಬರುವ ದಿನಕ್ಕೆ 15 ದಿನಕ್ಕೆ ಮುನ್ನ ಅರಿಶಿನ ನೀರಿನೊಂದಿಗೆ ಸೇವಿಸಬೇಕು.
- ಸ್ನಾಯು- ಕೀಲು ನೋವು, ಸಂಧಿವಾತ, ವಾತರೋಗಗಳಿಗೂ ಇದು ಸೂಕ್ತ ಮದ್ದು.
- ಅರಿಶಿನ ಅರಳುಮರಳಾಗುವುದನ್ನು ತಡೆದು ಮರೆವಿನ ಶಕ್ತಿ ಕುಗ್ಗಿಸುತ್ತೆ. ನೆನಪಿನ ಶಕ್ತಿ ಹೆಚ್ಚುತ್ತೆ. ರಕ್ತ ಪರಿಚಲನೆ, ಯೋಚನಾ ಶಕ್ತಿ ವೃದ್ಧಿಯಾಗುತ್ತದೆ.
- ದೇಹದ ಮೇಲಿನ ಎಲ್ಲ ಥರದ ಗಾಯ, ನೋವನ್ನು ಕ್ಷೀಣಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ಸಂರಕ್ಷಣೆ ಹೇಗೆ?
ಯಾವತ್ತೂ ಅತ್ಯುತ್ತಮ ಗುಣಮಟ್ಟದ ಅರಿಶಿನವನ್ನೇ ಕೊಂಡುಕೊಳ್ಳಿ. ಅದು ಸಾವಯವವಾಗಿದ್ದು ಆದಷ್ಟು ರಾಸಾಯನಿಕದಿಂದ ಮುಕ್ತವಾಗಿರಲಿ. ಅರಿಶಿನ ಕಲಬೆರಕೆಯಿಂದ ಮುಕ್ತವಾಗಿರಬೇಕು. ಇಲ್ಲವಾದಲ್ಲಿ ಅಡ್ಡಪರಿಣಾಮದ ಸಾಧ್ಯತೆ ಇರುತ್ತದೆ. ನೀವು ಖರೀದಿಸುವಾಗ ಆ ಅರಿಶಿನ ಪರಿಶುದ್ಧವೇ ಇಲ್ಲವೇ ಸಾಂಬಾರು ಪದಾರ್ಥಗಳ ಬೆರಕೆಯಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಕೆಲವು ತಯಾರಿಕಾ ಘಟಕಗಳು ಬಣ್ಣಗಳ ಮಿಶ್ರಣ ಮಾಡುವ ಸಾಧ್ಯತೆಯಿದೆ. ಇನ್ನೊಂದು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶವೆಂದರೆ, ಅರಿಶಿನ ಪುಡಿಯನ್ನು ಯಾವಾಗಲೂ ತಂಪು ಪ್ರದೇಶದಲ್ಲಿ ಮಾತ್ರ ಇಡಬೇಕು. ಯಾವುದೇ ಕಾರಣಕ್ಕೂ ಸೂರ್ಯನ ಕಿರಣಗಳು ತಾಗದಂತೆ ಸಂರಕ್ಷಿಸಿಡಬೇಕು.
-ವೀರೇಶ ಜಿ. ಮಠ
mathvg@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


