ಆರೋಗ್ಯ-ಜೀವನಶೈಲಿ

ಆಸ್ಟಿಯೋಪಥಿ ಇದ್ದರೆ ಇನ್ಯಾಕೆ ಚಿಂತೆ?

ಆಸ್ಟಿಯೋಪಥಿ ಇದ್ದರೆ ಇನ್ಯಾಕೆ ಚಿಂತೆ?
Published On :

ರಾತ್ರಿ ಮಲಗಿದ್ದ. ಆದರೆ ಬೆಳಿಗ್ಗೆ ಎದ್ದಾಗ ಏನಾಯಿತೊ ಗೊತ್ತಿಲ್ಲ ಕತ್ತು ಉಳುಕಿದಂತಾಗಿದೆ. ಆಕಡೆ ಈಕಡೆ ತಿರುಗಿಸಲು ಆಗುತ್ತಿಲ್ಲ. ಅಸಾಧ್ಯವಾದ ನೋವು. ಏನಪ್ಪಾ ಮಾಡಲಿ? ಅಷ್ಟೊತ್ತಿಗಾಗಲೆ ಪಕ್ಕದ ಮನೆಯ ಸುಮಾರು 50ರ ಮನುಷ್ಯ ಕೂಗುತ್ತಾನೆ. ಏ ತಮ್ಮ ಬಾ ಇಲ್ಲಿ. ಎಲ್ಲಿ ತೋರಿಸು ಏನಾಗಿದೆ? ಎಲ್ಲಾ ವಿವರಿಸಿದ ನಂತರ ಕುರ್ಚಿ ಮೇಲೆ ಕುಳಿತುಕೊಳ್ಳಲು ಹೇಳುತ್ತಾನೆ. ಇವನಿಗೋ ಭಯ, ಈಗಲೇ ನೋವು ತಿನ್ನುತ್ತಿದ್ದೇನೆ, ಇನ್ನೇನಪ್ಪಾ ಕಾದಿದೆ ಎಂದು ಗೊಣಗುತ್ತಾ, ಬಿಡಿ ಅಂಕಲ್ ನಾನು ಡಾಕ್ಟರ್ ಹತ್ತಿರು ಹೋಗುವೆ, ಮತ್ತೇನಾದರೂ ಆದರೆ? ಅದರೂ ಬಿಡದ ಆ ಮನುಷ್ಯ ಇಷ್ಟು ಚಿಕ್ಕದಕ್ಕೆಲ್ಲಾ ಡಾಕ್ಟರ್ ಯಾಕೆ? 5 ನಿಮಿಷ ಇಲ್ಲಿ ಕುಳಿತುಕೊ. ನಾನೆಲ್ಲಾ ಸರಿ ಮಾಡುವೆ ಎನ್ನುತ್ತಾನೆ. ಸರಿ ಎಂದು ಕುರ್ಚಿಯ ಮೇಲೆ ಕುಳಿತ. ಒಂದು ಕ್ಷಣ ಕತ್ತನ್ನು ಬಲವಾಗಿ ಹಿಡಿದು ಆಕಡೆ ಈಕಡೆ ಸರ್ರನೆ ಹೊರಳಿಸಿದ. ಲಟ್ ಎಂಬ ಶಬ್ದ ಕೇಳಿಸಿತು. ಅಮ್ಮಾ ಎಂದು ಕೂಗಿದ ಕ್ಷಣ ಮಾತ್ರದಲ್ಲಿ ಕತ್ತು ನೋವು ಮಾಯ! ಈ ತರಹ ನಾಟಿಯಾಗಿ ಸೊಂಟ ನೋವು, ಕಾಲು ಉಳುಕು, ಮಂಡಿ ಉಳುಕಿದಾಗಲೂ ಮಾಡುತ್ತಾರೆ. ಶತ ಶತಮಾನಗಳಿಂದ ಒಬ್ಬರಿಂದ ಒಬ್ಬರಿಗೆ ಬಳುವಳಿಯಾಗಿ ಬಂದಿರುವ ಪಾರಂಪರಿಕ ವೈದ್ಯಕೀಯ ವಿಧಾನಗಳು ಇಂದಿಗೂ ನಮ್ಮ ನಿಮ್ಮ ನಡುವೆ ಪ್ರಚಲಿತದಲ್ಲಿವೆ.
ಕಳೆದ 20ನೆಯ ಶತಮಾನದ ಮಧ್ಯ ಭಾಗದಲ್ಲಿ ವೈದ್ಯಕೀಯ ವಿಜ್ಞಾನ ಅಷ್ಟಾಗಿ ಮುಂದುವರೆಯದಿದ್ದ ಕಾಲದಲ್ಲಿ ಈ ತರಹದ ಚಿಕಿತ್ಸಾ ಪದ್ದತಿಗಳು ಜಗತ್ತಿನಾದ್ಯಂತ ಸಾಕಷ್ಟು ಪ್ರಚಲಿತದಲ್ಲಿದ್ದವು. ಈ ಪದ್ಧತಿಗಳ ಮೂಲ ಯಾರಿಗೂ ತಿಳಿಯದು. ವೈದ್ಯಕೀಯ ವಿಜ್ಞಾನ ಮುಂದುವರಿದಂತೆ ಚಿಕಿತ್ಸಾಪದ್ದತಿಗಳು ಬದಲಾಗಿ ಪಾರಂಪರಿಕ ಪದ್ಧತಿಗಳಿಗೆ ವೈಜ್ಞಾನಿಕ ವಿಷ್ಲೇಷಣೆ ಹಾಗೂ ಆಧುನಿಕತೆ ಲೇಪನವಾಯ್ತು. ಇವುಗಳಲ್ಲಿ ಒಂದು ಆಸ್ಟಿಯೋಪಥಿ.
ಈ ಆಸ್ಟಿಯೋಪಥಿ ಚಿಕಿತ್ಸೆಯು ಹುಟ್ಟಿದ್ದು ಅಮೆರಿಕದಲ್ಲಿ. 1900ರಿಂದ 1960ರ ದಶಕದವರೆಗೆ ಸಾಕಷ್ಟು ಪ್ರಚಲಿತವಾಗಿತ್ತು. ಆ ಸಮಯದಲ್ಲಿ ಈಗಿನಂತೆ ಯಾವುದೇ ಅತ್ಯಾಧುನಿಕ ಉಪಕರಣಗಳು ಲಭ್ಯವಿರಲಿಲ್ಲ. ಜನರು ಸರ್ಜರಿ ಹಾಗೂ ಆಪರೇಷನ್ ಎಂದರೆ ಹೆದರುತ್ತಿದ್ದರು. ಹಾಗಾಗಿ ಪಾರಂಪರಿಕ ಚಿಕಿತ್ಸೆಗಳ ಕಡೆಗೆ ಒಲವು ಜಾಸ್ತಿ ಇತ್ತು. 90ರ ದಶಕದಿಂದೀಚೆಗೆ ಅತ್ಯಾಧುನಿಕ ಎಕ್ಸ್‌ರೇ, ಎಂಆರ್‌ಐನಂತಹ ಉಪಕರಣಗಳ ಆವಿಷ್ಕಾರದಿಂದ ಈ ಆಸ್ಟಿಯೋಪಥಿ ಮತ್ತೆ ಬೆಳಕಿಗೆ ಬಂತು. ಇದರ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಈಗಲೂ ನಡೆಯುತ್ತಿವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದಕ್ಕಾಗಿಯೇ ಕಾಲೇಜುಗಳಲ್ಲಿ ಕೋರ್ಸ್‌ಗಳು ಹುಟ್ಟಿಕೊಂಡಿವೆ.

ಆಸ್ಟಿಯೋಪಥಿ ಎಂದರೇನು?
ಕಾರಣಾಂತರಗಳಿಂದಾಗುವ ಮನುಷ್ಯನ ದೇಹದ ಮೂಳೆಗಳು ಹಾಗು ಮಾಂಸಖಂಡಗಳ ಹಾಗೂ ಅಂಗಾಂಗಗಳ ಅಸಮತೋಲನಗಳನ್ನು ಯಾವುದೇ ಉಪಕರಣಗಳನ್ನು ಬಳಸದೆ ಕೇವಲ ಮಸಾಜ್ ಹಾಗೂ ಮೂಳೆಗಳ ಚಲನೆಯಿಂದ ಸಮತೋಲನ ಮಾಡುವ ಚಿಕಿತ್ಸೆ ಎಂದರ್ಥ. ಇದಕ್ಕೆ ಬಳಸುವ ಉಪಕರಣಗಳೇ ಕೈಗಳು!

ಯಾರಿಗೆ ಸೂಕ್ತ? ಯಾರಿಗೆ ಅಲ್ಲ?
ಇದಕ್ಕೆ ವಯಸ್ಸಿನ ಮಿತಿಯಿಲ್ಲ. ಮಕ್ಕಳಿಂದ ಹಿಡಿದು ಎಲ್ಲಾ ವಯಸ್ಸಿನವರಿಗೂ ಕೊಡಬಹುದು. ಮೂಳೆ ಮುರಿದಿದ್ದರೆ, ತೆರೆದ ಗಾಯಗಳು, ತೀವ್ರ ತೆರನಾದ ರೋಗಗಳು, ಟ್ಯುಮರ್ ಗಡ್ಡೆಗಳು, ಜಾಸ್ತಿ ಅಂಗ ಊನತೆ, ಮೃದುವಾದ ಮೂಳೆಗಳು, ಇನ್ನಿತರ ಕಾರಣಗಳಿದ್ದರೆ ಚಿಕಿತ್ಸೆಗೆ ಅರ್ಹರಲ್ಲ.

ಚಿಕಿತ್ಸಾ ವಿಧಾನ ಹೇಗೆ?
ಇದಕ್ಕೆಂದೆ ಪರಿಣಿತಿ ಪಡೆದ ವೈದ್ಯರಿರುತ್ತಾರೆ. ಒಮ್ಮೆ ರೋಗಿಯು ವೈದ್ಯರ ಬಳಿಗೆ ಬಂದಾಗ ವೈದ್ಯರು ರೋಗಿಯನ್ನು ಸೂಕ್ತವಾಗಿ ಪರೀಕ್ಷೆ ಮಾಡಿ ಚಿಕಿತ್ಸೆಗೆ ಅರ್ಹರೇ ಇಲ್ಲವೆ ಎಂದು ಗುರುತಿಸುತ್ತಾರೆ. ಉದಾಹರಣೆಗೆ ಕತ್ತು ನೋವಿನ ಸಮಸ್ಯೆಯ ವ್ಯಕ್ತಿ ಚಿಕಿತ್ಸೆಗೆ ಬಂದಾಗ ಮೊದಲು ಆತನ ಸಮಸ್ಯೆ ಹಾಗು ನೋವಿನ ಪ್ರಮಾಣವನ್ನು ವಿವಿಧ ರೀತಿಯ ಪರೀಕ್ಷೆಗಳಿಂದ ಅರಿಯುತ್ತಾರೆ. ನಂತರ ಚಿಕಿತ್ಸೆಗೆ ಅರ್ಹನಾದರೆ ಮುಂದಿನ ಚಿಕಿತ್ಸಾ ಕ್ರಮವನ್ನು ತಿಳಿಯಪಡಿಸಲಾಗುತ್ತದೆ. ತೊಂದರೆಯ ಕಂಡಿಷನ್‌ಗೆ ಅನುಗುಣವಾಗಿ ಚಿಕಿತ್ಸಾ ಸಮಯವನ್ನು ನಿಗದಿಪಡಿಸಲಾಗುತ್ತದೆ. ಚಿಕಿತ್ಸೆಯ ಅವಧಿ 5 ದಿವಸದಿಂದ 15 ದಿವಸದವರೆಗೂ ತೆಗೆದುಕೊಳ್ಳಬಹುದು. ಪ್ರತಿ ದಿವಸ ಸುಮಾರು 45ರಿಂದ 90 ನಿಮಿಷಗಳವರೆಗೆ ಚಿಕಿತ್ಸೆ ನೀಡಲಾಗುತ್ತದೆ. ಆಶ್ಚರ್ಯವೆಂದರೆ ಚಿಕಿತ್ಸೆಗೆ ಬಳಸುವುದು ಕೇವಲ ಟವೆಲ್ ಹಾಗು ಕೈಗಳು. ರೋಗಿಯು ಅಲ್ಲಾಡದಂತೆ ಬೆಲ್ಟ್ ಹಾಗೂ ಅಗತ್ಯ ಬಿದ್ದರೆ ಸಹಾಯಕರನ್ನು ಬಳಸಿಕೊಳ್ಳಲಾಗುವುದು.

ಪರಿಹಾರ ಹೇಗೆ?
ಆಸ್ಟಿಯೋಪಥಿ ಚಿಕಿತ್ಸೆಯಿಂದ ರೋಗಿಯ ಮೂಳೆ ಹಾಗೂ ಮಾಂಸಖಂಡಗಳು ಹಗುರವಾಗಿ ಚರ್ಮಗಳು ಸಡಿಲಗೊಳ್ಳುವವು. ಇದರಿಂದ ನರಗಳ ಹಾಗು ಮೂಳೆಗಳ ಮೇಲಿನ ಅನಗತ್ಯ ಒತ್ತಡ ನೋವು ಕಡಿಮೆಯಾಗಿ ಮಾಂಸಖಂಡಗಳು ತಮ್ಮ ಮೊದಲಿನ ಹಗುರ ಸ್ಥಿತಿಗೆ ತಲುಪುವವು. ತೊಂದರೆ ನೂರಕ್ಕೆ ನೂರರಷ್ಟು ಕಡಿಮೆ ಯಾಗದಿದ್ದರೂ ಮುಂದೆ ಯಾವುದೇ ಕಾರಣಕ್ಕೂ ಹೆಚ್ಚಾಗದಂತೆ ತಡೆಯಬಹುದು. ಶೇ.75ರಿಂದ 85 ರಷ್ಟು ತೊಂದರೆ ಕಡಿಮೆಯಾಗುವುದು ಗ್ಯಾರಂಟಿ. ಇದೇ ರೀತಿ ಮೂರ್ನಾಲ್ಕು ಸೆಷನ್ ಮಾಡಿದರೆ ರೋಗಿಯ ಸಮಸ್ಯೆಗೆ ಪರಿಹಾರ ಕೊಡಬಹುದು.

ಉಪಯೋಗವೇನು?
ಆಸ್ಟಿಯೋಪಥಿ ಚಿಕಿತ್ಸೆಯಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ ತೊಂದರೆ ಗುಣವಾಗುವುದಲ್ಲದೆ ಭವಿಷ್ಯದಲ್ಲಿ ಭರಿಸಬಹುದಾದ ವೈದ್ಯಕೀಯ ವೆಚ್ಚಗಳನ್ನು ಕಡಿಮೆ ಮಾಡಬಹುದು. ಕೆಲವೊಂದು ಸಂದರ್ಭಗಳಲ್ಲಿ ವೈದ್ಯರು ಸರ್ಜರಿಗೆ ರೆಫರ್ ಮಾಡುತ್ತಾರೆ. ಅಂಥದ್ದನ್ನು ತಡೆಯಬಹುದು ಈ ಚಿಕಿತ್ಸಾ ವಿಧಾನದ ಮೂಲಕ.



-ಡಾ ಚಂದ್ರಶೇಖರ್ ಬೆಳ್ಳೂಡಿ,
ಬೆಂಗಳೂರು, ಮೊ: 8710964433

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.