ಆರೋಗ್ಯ-ಜೀವನಶೈಲಿ

ಬೇಗ ಮದ್ವೆ ಆಗ್ರೀ...

ಬೇಗ ಮದ್ವೆ ಆಗ್ರೀ...
Published On :

ಹೊತ್ತು ಮೀರಿದರೆ ಪ್ರೆಗ್ನೆನ್ಸಿಗೆ ಕುತ್ತು

ವೃತ್ತಿ ಬದುಕಿನಲ್ಲಿ ಒಂದೊಂದೇ ಸಾಧನೆ ಗೈಯ್ಯುವ ರಾಮ್‌ಗೆ 36 ವರ್ಷವಾದರೂ ಮದುವೆಯಾಗುವ ಮನಸ್ಸಿಲ್ಲ. ಮದುವೆ ವಿಷ್ಯ ಬಂದ್ರೆ ಸಾಕು, ಪೋಷಕರಿರುವ ಜಾಗವನ್ನೇ ಖಾಲಿ ಮಾಡ್ತಾರೆ. ಈಗಿನ ಕಾಲದಲ್ಲಿ ನೂರಾರು ಮಂದಿ ನೂರಾರು ಕಾರಣಗಳನ್ನೊಡ್ಡಿ ಬೇಗನೇ ಸಪ್ತಪದಿ ತುಳಿಯಲು ಮುಂದಾಗುವುದಿಲ್ಲ. ಆದರೆ, ಜೈವಿಕ ಚಕ್ರ ಹಾಗೆಯೇ ನಿಲ್ಲಬೇಕಲ್ಲ? ಸೂಕ್ತ ವಯಸ್ಸಲ್ಲಿ ಮದ್ವೆ ಆಗದಿದ್ದರೆ ಅನುಭವಿಸುವ ಸಮಸ್ಯೆ ಒಂದೆರಡಲ್ಲ.

ಪುರುಷರಲ್ಲಿ ಲೈಂಗಿಕ ಆಸೆ ಕುಂದುತ್ತದೆ. ನಪುಂಸಕತೆ ಹಾಗೂ ಲೈಂಗಿಕ ಚಟುವಟಿಕೆಗಳಲ್ಲಿ ನಿರಾಸಕ್ತಿ. ಅಲ್ಲದೇ ವಂಶಾವಳಿ ಮೇಲಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಅನೇಕ ಅಧ್ಯಯನಗಳಾಗಿವೆ. ಅಂದರೆ, ವಯಸ್ಸಾದ ತಂದೆಗೆ ಹುಟ್ಟುವ ಮದುವಿಗೆ ಭವಿಷ್ಯದಲ್ಲಿ ಮಾರ್ಫನ್ ಸಿಂಡ್ರೋಮ್, ಪಾಲಿಫಾರ್ಮೇಶನ್ ಇನ್ ಲಾರ್ಜ್ ಬಾವೆಲ್ ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಧ್ಯಯನದ ಪ್ರಕಾರ, 30-34 ವಯಸ್ಸಿನ ಅವಧಿಯಲ್ಲಿ ತಂದೆಯಾಗುವವರ ಮಕ್ಕಳಲ್ಲಿ 1000ಕ್ಕೆ ಒಂದು ಮಗುವಿಗೆ, 40-45 ವಯಸ್ಸಿನಲ್ಲಿ ತಂದೆಯಾದರೆ 1000ಕ್ಕೆ 4 ಅಥವಾ 5 ಮಕ್ಕಳಿಗೆ ಹಾಗೂ 45 ವಯಸ್ಸಿನ ನಂತರ ತಂದೆಯಾದರೆ 1000ಕ್ಕೆ 37 ಮಕ್ಕಳಿಗೆ ಇಂಥ ಸಮಸ್ಯೆಗಳು ಕಾಣಿಸಿಕೊಳ್ಳಬಹುದು! ಜತೆಗೆ ಮಗುವಿನ ಲೈಂಗಿಕ ಸಾಮರ್ಥ್ಯ ಹಾಗೂ ಹೆಣ್ಣು ಮತ್ತು ಗಂಡಿನ ಅನುಪಾತದ ಮೇಲೂ ತಂದೆಯ ವಯಸ್ಸು ಪರಿಣಾಮ ಬೀರಬಹುದು.

ಸ್ತ್ರೀಯರಲ್ಲೇನು ತೊಂದರೆ?
ಮಹಿಳೆಯರಲ್ಲಿ 24 ವರ್ಷದ ನಂತರ ಅಂಡಾಣು ಉತ್ಪತ್ತಿ ಕಡಿಮೆಯಾಗುತ್ತದೆ. ಬಂಜೆತನವೂ ಕಾಡಬಹುದು. ಗರ್ಭ ಧರಿಸಿದರೂ ಆರಂಭದ ಹಂತದಲ್ಲೇ ನಷ್ಟವಾಗಬಹುದು. ಋತುಮತಿ ಆದಾಗ ರಕ್ತಸ್ರಾವದೊಂದಿಗೆ ಈ ಬಗೆಯ ಗರ್ಭಪಾತ ಸಂಭವಿಸುತ್ತೆ. ಸಾಮಾನ್ಯವಾಗಿ ಋತುಚಕ್ರದ 17-18ನೇ ದಿನ ಈ ಪ್ರಕ್ರಿಯೆ ಸಂಭವಿಸುತ್ತದೆ. ಮಹಿಳೆಯರ ಅರಿವಿಗೂ ಬಾರದಂತೆ ಇದು ನಡೆಯುತ್ತದೆ. ಗರ್ಭಪಾತವಾಗುವ ಅಪಾಯವು ಕಿರಿ ವಯಸ್ಸಿನ ಮಹಿಳೆಯರಲ್ಲಿ ಶೇ.24ರಷ್ಟು ಮತ್ತು 35 ವರ್ಷ ದಾಟಿದ ಮಹಿಳೆಯರಲ್ಲಿ ಶೇ.38ರಷ್ಟಿರುತ್ತದೆ.

ಗರ್ಭದ ಅಂಶಗಳೂ ವಯಸ್ಸಾದ ಸ್ರೀಯರ ಬಂಜೆತನದಲ್ಲಿ ಮುಖ್ಯಪಾತ್ರ ವಹಿಸುತ್ತದೆ. ಅಂಡಾಣುಗಳನ್ನು ಕಿರಿ ವಯಸ್ಸಿನಲ್ಲೇ ಪಡೆದು ಭಿನ್ನ ವಯೋವಾನದ ಮಹಿಳೆಯರ ಗರ್ಭಾಶಯಕ್ಕೆ ದಾನ ಮಾಡಿದಾಗಲೂ ಫಲಪ್ರದ ಫಲಿತಾಂಶ ನೀಡೋಲ್ಲ. ಅಂದರೆ 40 ಅಥವಾ ಅದಕ್ಕಿಂತ ಹೆಚ್ಚಿನ ವಯೋವಾನದ ಮಹಿಳೆಯರಲ್ಲಿ ಶೇ.10 ಗರ್ಭ ಕಟ್ಟುವಿಕೆ ಯಶಸ್ಸಿಯಾದರೆ, 35ಕ್ಕಿಂತ ಸಣ್ಣ ವಯಸ್ಸಿನ ಮಹಿಳೆಯರಲ್ಲಿ ಇದರ ಯಶಸ್ಸಿನ ಪ್ರಮಾಣ ಶೇ.23 ರಷ್ಟಿರುತ್ತದೆ.

ಮೊದಲು ಗರ್ಭ ಧರಿಸುವಾಗ ಮಹಿಳೆಯರಿಗೆ 30 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬಾರದು. ವೃತ್ತಿಪರ ಸ್ತ್ರೀಯರು ಕುಟುಂಬದ ವಿಸ್ತರಣೆ ಬಗ್ಗೆ ತಡವಾಗಿ ಯೋಚಿಸುವುದಾದರೆ ದೇಹಾರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಫಲವತ್ತತೆಯ ವೈರಿಯಾದ ಬೊಜ್ಜನ್ನು ಬೆಳೆಸಿಕೊಳ್ಳಬಾರದು. ಬೊಜ್ಜಿರುವ ಮಹಿಳೆಯರಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿ ಅದು ತಡವಾಗಿ ಗರ್ಭ ಧರಿಸಲು ಇಚ್ಚಿಸುವವರಿಗೆ ಅಡ್ಡಿಯಾಗುತ್ತದೆ. ಧೂಮಪಾನ, ಮದ್ಯ ಸೇವನೆಯೂ ಋತುಚಕ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಕಾಫಿ ಹೆಚ್ಚು ಸೇವಿಸಿದರೂ ಅಪಾಯ. ಜತೆಗೆ ಪದೇ ಪದೇ ಗರ್ಭಪಾತವಾದರೆ ಅಥವಾ ಮಾಡಿಸಿಕೊಂಡರೂ ಹುಟ್ಟುವ ಮಗುವಿನ ಮೇಲೆ ಅಡ್ಡ ಪರಿಣಾಮ. ಮದುವೆ ಮುಂದೂಡಿದಾಗ ವಿವಾಹೇತರ ಸಂಬಂಧಗಳೂ ಹುಟ್ಟಿಕೊಳ್ಳುವ ಸಾಧ್ಯತೆ ಇರುವುದರಿಂದ ಇತರೆ ಸಮಸ್ಯೆಗಳಿಗೆ ಎಡೆ ಮಾಡಿಕೊಡಬಹುದು. ತಡವಾಗಿ ಮದುವೆಯಾದವರು ಯಾವುದೇ ಕುಟುಂಬ ಯೋಜನೆಯನ್ನು ಅನುಸರಿಸದೇ ಹೋದರೆ ಒಳ್ಳೆಯದು. ಆರು ತಿಂಗಳಾದರೂ ಗರ್ಭ ಧರಿಸದೇ ಹೋದಲ್ಲಿ ಸೂಕ್ತ ಚಿಕಿತ್ಸೆಯ ಅಗತ್ಯವಿರುವುದರಿಂದ ತಕ್ಷಣವೇ ತಜ್ಞರನ್ನು ಕಾಣಬೇಕು.

- ಡಾ.ದೇವಿಕಾ ಗುಣಶೀಲ
ಸ್ತ್ರೀರೋಗ ಮತ್ತು ಸಂತಾನಫಲ ಚಿಕಿತ್ಸೆ ತಜ್ಞರು
ಸಂಪರ್ಕಿಸಿ: 080, 41312600

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.