ಹುಣಸೆ ಹಣ್ಣು: ಉಪಯೋಗ ಹಲವು

ಹುಣಸೆ ಹಣ್ಣಿನ ಬೀಜ, ಎಲೆ, ತೊಗಟೆಯಲ್ಲಿ ಸಹ ಅನೇಕ ಔಷಧೀಯ ಗುಣಗಳಿವೆ...
ಹುಣಸೆ ಹಣ್ಣು
ಹುಣಸೆ ಹಣ್ಣು
Updated on

ಅಡುಗೆ ಮನೆಯಲ್ಲಿ ಹುಣಸೆ ಹಣ್ಣು ಯಾವಾಗಲೂ ಇದ್ದೇ ಇರುತ್ತದೆ. ಹುಣಸೆ ಹಣ್ಣನ್ನು ಸಾರು, ಸಾಂಬಾರಿಗೆ ಬಳಸುವುದು ಗೊತ್ತು. ಈ ಹುಣಸೆ ಹಣ್ಣಿನ ಬೀಜ, ಎಲೆ, ತೊಗಟೆಯಲ್ಲಿ ಸಹ ಅನೇಕ ಔಷಧೀಯ ಗುಣಗಳಿವೆ.

ಹುಣಸೆ ಹಣ್ಣಿನಲ್ಲಿ ವಿಟಮಿನ್ ಬಿ ಹೇರಳವಾಗಿದ್ದು, ಕ್ಯಾಲ್ಸಿಯಂ ಅಧಿಕವಾಗಿದೆ. ವಿಪರೀತ ತಲೆನೋವು ಕಂಡುಬಂದ ಸಂದರ್ಭದಲ್ಲಿ ಹುಣಸೆ ಹಣ್ಣಿನ ರಸವನ್ನು ಹಿಂಡಿ ನೆತ್ತಿಗೆ ಹಾಕಿದರೆ ಕೆಲ ಹೊತ್ತಿನ ಬಳಿಕ ನೋವು ಉಪಶಮನವಾಗುತ್ತದೆ.

ಹುಣಸೆ ಹಣ್ಣಿನ ರಸ ಉತ್ತಮ ಜೀರ್ಣಕಾರಿ. ತಿಂದ ವಸ್ತು ಸರಿಯಾಗಿ ಜೀರ್ಣವಾಗದಿದ್ದರೆ ಹುಣಸೆ ಹಣ್ಣಿನ ರಸವನ್ನು ನೀರಿನ ಜೊತೆ ಕಲಸಿ ಕುಡಿದರೆ ಚೆನ್ನಾಗಿ ಜೀರ್ಣವಾಗುತ್ತದೆ.

ಗಂಟಲು ನೋವಿಗೆ ಹುಣಸೆ ಹಣ್ಣಿನ ರಸವನ್ನು ಉಪ್ಪಿನ ಜೊತೆ ಚೆನ್ನಾಗಿ ಅರೆದು ಗಂಟಲಿನ ಬಳಿ ಹಚ್ಚಬೇಕು. ದೇಹದ ಸಂದುಗಳಲ್ಲಿ ನೋವಾಗುತ್ತಿದ್ದರೆ, ಕೈ-ಕಾಲು, ಮಂಡಿ ನೋವಿನ ಸಂದರ್ಭದಲ್ಲಿ ಹುಣಸೆ ಮರದ ಎಲೆ, ಹೂವುಗಳನ್ನು ಬೆಂಕಿಯಲ್ಲಿ ಬಾಡಿಸಿಕೊಂಡು ನೋವು ಇರುವ ಜಾಗಗಳಿಗೆ ಹಚ್ಚಬೇಕು.

ಬೇಸಿಗೆಯ ಉರಿ ಬಿಸಿಲಿಗೆ ಹುಣಸೆ ಹಣ್ಣಿನ ಜ್ಯೂಸ್ ಉತ್ತಮ. ಹಣ್ಣಿನ ರಸಕ್ಕೆ ನೀರು, ಸಕ್ಕರೆ ಹಾಕಿ, ಸ್ವಲ್ಪ ಶುಂಠಿ ಬೆರೆಸಿ ಕುಡಿಯಲು ರುಚಿಯಾಗಿರುತ್ತದೆ. ಬೆಲ್ಲ, ಏಲಕ್ಕಿ ಹಾಕಿಯೂ ಜ್ಯೂಸ್ ಮಾಡಬಹುದು.

ಭೇದಿಯುಂಟಾದ ಸಂದರ್ಭದಲ್ಲಿ ಸ್ವಲ್ಪ ಹುಣಸೆ ರಸ, ಒಂದು ಚಮಚ ಮೊಸರು ಮತ್ತು  ಬಾಳೆಹಣ್ಣನ್ನು ನುಣ್ಣಗೆ ಹಿಚುಕಿ ಕುಡಿದರೆ ಬೇಧಿ ನಿಲ್ಲುತ್ತದೆ.

ಶೀತಕ್ಕೆ ಹುಣಸೆ ಹಣ್ಣು ರಾಮಬಾಣ. ಹುಣಸೆಹಣ್ಣಿನ ರಸಕ್ಕೆ ಬೆಲ್ಲ, ಸ್ವಲ್ಪ ಉಪ್ಪು, ಕಾಳು ಮೆಣಸು ಸೇರಿಸಿ ಸೂಪು ತಯಾರಿಸಿ ಕುಡಿಯಬೇಕು. ಚರ್ಮದಲ್ಲಿ ತುರಿಕೆ, ನಂಜು, ನವೆಯುಂಟಾಗಿದ್ದರೆ ಹುಣಸೆ ರಸವನ್ನು ಆ ಜಾಗದಲ್ಲಿ ಉಜ್ಜಿದರೆ ತುರಿಕೆ ವಾಸಿಯಾಗುತ್ತದೆ. ಹೆಂಗಸರಲ್ಲಿ  ಬಿಳಿದ್ರವದ ಸಮಸ್ಯೆಗೆ ಹುಣಸೆ ಬೀಜವನ್ನು ಎರಡು ದಿನಗಳ ಕಾಲ ನೀರಿನಲ್ಲಿ ನೆನೆಸಿಟ್ಟು ಹಾಲಿನ ಜೊತೆ ಅರೆದು ಕುಡಿಯಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com