ಮಧುಮೇಹದ ಎಫೆಕ್ಟ್: ದೇಶದಲ್ಲಿ ಪ್ರತಿ ವರ್ಷ ನಾಳೀಯ ಕಾಯಿಲೆಗಳ ಪ್ರಮಾಣ ಶೇ.10 ರಷ್ಟು ಹೆಚ್ಚಳ!

ದೇಶದ ಒಟ್ಟಾರೆ ಜನಸಂಖ್ಯೆಯ ಶೇಕಡ 5ರಷ್ಟು ಜನರು ನಾಳೀಯ ಕಾಯಿಲೆಯಿಂದ ಬಳಲುತ್ತಿದ್ದು, ಮದುಮೇಹ ರೋಗಕ್ಕೊಳಗಾದವರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೀಯ ಕಾಯಿಲೆ ಪ್ರಮಾಣ ಪ್ರತೀವರ್ಷ ಶೇ.10ರಷ್ಟು ಹೆಚ್ಚಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೇಶದ ಒಟ್ಟಾರೆ ಜನಸಂಖ್ಯೆಯ ಶೇಕಡ 5ರಷ್ಟು ಜನರು ನಾಳೀಯ ಕಾಯಿಲೆಯಿಂದ ಬಳಲುತ್ತಿದ್ದು, ಮದುಮೇಹ ರೋಗಕ್ಕೊಳಗಾದವರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೀಯ ಕಾಯಿಲೆ ಪ್ರಮಾಣ ಪ್ರತೀವರ್ಷ ಶೇ.10ರಷ್ಟು ಹೆಚ್ಚಾಗುತ್ತಿದೆ ಎಂದು ನಾಳೀಯ ಸೊಸೈಟಿ ಆಫ್ ಇಂಡಿಯಾದ ಮುಖ್ಯ ನಾಳೀಯ ಶಸ್ತ್ರಚಿಕಿತ್ಸಕ ಡಾ.ರವಿಕುಮಾರ್ ಬಿ.ಎಲ್. ಅವರು ಹೇಳಿದ್ದಾರೆ.

ನಾಳೀಯ ಕಾಯಿಗೆ ಮಧುಮೇಹ ಪ್ರಮುಖ ಕಾರಣವಾಗಿದೆ. ವಿಶ್ವದ ಮಧುಮೇಹ ರಾಜಧಾನಿ ಭಾರತ ಎಂದು ಕರೆಯಲಾಗುತ್ತಿದ್ದು, ಮುಂಬರುವ ವರ್ಷಗಳಲ್ಲಿ ನಾಳೀಯ ಕಾಯಿಲೆ ದೇಶದಲ್ಲಿ ತಲೆದೋರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ರೋಗದ ಕುರಿತು ರಾಷ್ಟ್ರೀಯ ಗಮನವನ್ನು ಸೆಳೆಯುವ ಉದ್ದೇಶದಿಂದ ಭಾನುವಾರ ಬೆಂಗಳೂರು ಸೇರಿದಂತೆ 26 ನಗರಗಳಲ್ಲಿ ವಾಕಥಾನ್ ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ ವೈದ್ಯರು, ನಾಳೀಯ ಕಾಯಿಲೆಗಳನ್ನು ಉಂಟುಮಾಡುವ ಅಪಾಯಕಾರಿ ಅಂಶಗಳಲ್ಲಿ ಮಧುಮೇಹವೂ ಒಂದು, ಆನುವಂಶಿಕ, ಅಧಿಕ ರಕ್ತದೊತ್ತಡ ಮತ್ತು ಧೂಮಪಾನದಿಂದಲೂ ಈ ಕಾಯಿಲೆ ಕಾಣಿಸಿಕೊಳ್ಳುವುದುಂಟು ಎಂದು ಹೇಳಿದ್ದಾರೆ

ಧೂಮಪಾನ ಮಾಡದವರಿಗೆ ಹೋಲಿಕೆ ಮಾಡಿದರೆ, ಧೂಮಪಾನ ಮಾಡುವವರಲ್ಲಿ ಈ ಕಾಯಿಲೆ ಶೇ.25ರಷ್ಟು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ತಿಳಿಸಿದ್ದಾರೆ.

ಪ್ಲೇಕ್ ಎಂಬ ಕೊಬ್ಬಿನ ಪದಾರ್ಥದ ಶೇಖರಣೆಯಿಂದಾಗಿ ಅಪಧಮನಿಗಳ ಗಟ್ಟಿಯಾಗುವಿಕೆ ಅಥವಾ ಕಿರಿದಾಗುವಿಕೆಗೆ ಕಾರಣವಾಗುತ್ತದೆ. ಮಧುಮೇಹ ಇರುವವರಲ್ಲಿ ಅಧಿಕ ಕೊಲೆಸ್ಟ್ರಾಲ್ ಇರುವ ಸಾಧ್ಯತೆಗಳು ಹೆಚ್ಚು. ಕಾಯಿಲೆ ಹೆಚ್ಚಾದಂತೆ ಅದು ಕಣ್ಣುಗಳು, ಮೂತ್ರಪಿಂಡಗಳು, ಹೃದಯ ಮತ್ತು ಅಂಗಗಳ ಮೇಲೆ ಪರಿಣಾಮ ಬೀರತ್ತವೆ. ಸಾಕಷ್ಟು ಮಂದಿ ಇದರಿಂದಾಗಿ ಕೈ ಹಾಗೂ ಕಾಲುಗಳನ್ನು ಕಳೆದುಕೊಂಡಿದ್ದಾರೆ.. ಈ ಸ್ಥಿತಿಯನ್ನು ಪೆರಿಫೆರಲ್ ಆರ್ಟರಿ ಡಿಸೀಸ್ (PAD) ಎಂದು ಕರೆಯಲಾಗುತ್ತದೆ.

ಭಾರತದಲ್ಲಿ ನಾಳೀಯ ಕಾಯಿಲೆಯ ಪ್ರಕರಣಗಳಲ್ಲಿ ಹೆಚ್ಚಳಗಳು ಕಂಡು ಬರುತ್ತಿದೆ. ಪ್ರತಿ ಆರು ಸೆಕೆಂಡಿಗೆ ಒಬ್ಬರು ತಮ್ಮ ಅಂಗಗಳನ್ನು ಕಳೆದುಕೊಳ್ಳುತ್ತಿದ್ದಾರೆಂದು  ಡಾ ರವಿಕುಮಾರ್ ಅವರು ಹೇಳಿದ್ದಾರೆ.

60 ವರ್ಷಕ್ಕಿಂತ ಮೇಲ್ಪಟ್ಟ ಜನರು ಇಂತಹ ಕಾಯಿಲೆಗಳಿಗೆ ಒಳಗಾಗುವುದು ಹೆಚ್ಚು. ಹೀಗಾಗಿ ಕಾಲು ನೋವು, ಸೆಳೆತ, ಕಾಲ್ಬೆರಳುಗಳಲ್ಲಿನ ನೋವು ಅಥವಾ ಪಾದಗಳಲ್ಲಿ ಹುಣ್ಣುಗಳಂತಹ ರೋಗಲಕ್ಷಣಗಳನ್ನು ಕಂಡು ಬಂದರೆ ಕೂಡಲೇ ವೈದ್ಯರ ಸಂಪರ್ಕಿಸಿ, ಚಿಕಿತ್ಸೆ ಪಡೆಯುವುದು ಅತ್ಯಗತ್ಯ ಎಂದು ತಿಳಿಸಿದ್ದಾರೆ.

ತಂತ್ರಜ್ಞಾನದ ಪ್ರಗತಿಯು ಈ ರೋಗಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡಬಲ್ಲವು. ನಿಯಮಿತ ವ್ಯಾಯಾಮ ಮತ್ತು ಸರಿಯಾದ ಆಹಾರಕ್ರಮವು ಈ ರೋಗಗಳ ಸಂಭವವನ್ನು ನಿಯಂತ್ರಿಸಲು ಸುಲಭವಾದ ಮಾರ್ಗವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಏನಿದು ನಾಳೀಯ ಕಾಯಿಲೆ?
ನಾಳೀಯ ಕಾಯಿಲೆಯು ರಕ್ತ ಮತ್ತು ನಾಳಗಳಲ್ಲಿ ಕಂಡು ಕಂಡುಬರುವ ಉರಿಯೂತ ಹಾಗೂ ನೋವು ಆಗಿದೆ. ರಕ್ತನಾಳಗಳಲ್ಲಿನ ಕೊಬ್ಬಿನ ಪದಾರ್ಥಗಳು, ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ. ನಾಳೀಯ ಕಾಯಿಲೆಯು ರಕ್ತನಾಳಗಳ ಒಳಕೆ ಪ್ಲೇಕ್ ರಚನೆಯಂತಿರುತ್ತವೆ. ಇದು ದೇಹದ ಆಯಾ ಭಾಗಗಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ರೋಗಲಕ್ಷಣಗಳೇನು?
ಈ ರೋಗಕ್ಕೆ ಒಳಗಾಗದವರಲ್ಲಿ ಕೈಕಾಲುಗಳಲ್ಲಿ ಆಗಾಗ್ಗೆ ಸೆಳೆತ, ಕಾಲುಗಳು ತಣ್ಣಗಿರುವುದು. ಮರಗಟ್ಟುವುದು, ಚಲನಶೀಲತೆ ಕಡಿಮೆಯಾಗುವುದು, ದೇಹದ ನೋವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಪತ್ತೆ ಹೇಗೆ?
ರಕ್ತದ ಪರೀಕ್ಷೆ, ಪಾದದ ಬ್ರಾಚಿಯಲ್ ಇಂಡೆಕ್ಸ್, ಅಲ್ಟ್ರಾಸೌಂಡ್ ಮತ್ತು ಆಂಜಿಯೋಗ್ರಫಿ ಸೇರಿದಂತೆ ಇತರೆ ಪರೀಕ್ಷೆಗಳಿಂದ ಈ ಕಾಯಿಲೆಯನ್ನು ಪತ್ತೆ ಮಾಡಬಹುದು.

ರೋಗದಿಂದ ದೂರ ಉಳಿಯುವುದು ಹೇಗೆ, ಚಿಕಿತ್ಸೆ ಹೇಗೆ?
ರೋಗದಿಂದ ಮುಕ್ತವಾಗಲು ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ಜೊತೆಗೆ ನಿಯಮಿತ ದೈಹಿಕ ಚಟುವಟಿಕೆ, ದೂಮಪಾನ ತ್ಯಜಿಸುವುದು, ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಔಷಧಿಗಳು ತೆಗೆದುಕೊಳ್ಳಬೇಕಾಗುತ್ತೆ.
ಕಾಯಿಲೆಯಿಂದ ತೀವ್ರತರವಾಗಿ ಬಳಲುತ್ತಿರುವವರಿಗೆ ಆಂಜಿಯೋಪ್ಲ್ಯಾಸ್ಟಿ ಮತ್ತು ಬೈಪಾಸ್ ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com