

ಬೆಳಗಾವಿ: ಬರಗಾಲದಿಂದ ಕೆಂಗೆಟ್ಟಿರುವ ರಾಜ್ಯಕ್ಕೆ ಇದೀಗ ನೀರು ಬಿಡುವ ಭರವಸೆಯನ್ನು ಮಹಾರಾಷ್ಟ್ರ ಸರ್ಕಾರ ನೀಡಿರುವುದಾಗಿ ತಿಳಿದುಬಂದಿದೆ.
ರಾಜ್ಯದಲ್ಲಿ ಸಂಭವಿಸಿರುವ ಬರಗಾಲ ಜನರನ್ನು ಕೆಂಗೆಡುವಂತೆ ಮಾಡಿದ್ದು, ರಾಜ್ಯ ಸರ್ಕಾರದ ಮನವಿಯನ್ನು ಪುರಸ್ಕರಿಸಿರುವ ಮಹಾರಾಷ್ಟ್ರ ಸರ್ಕಾರ 2 ಟಿಎಂಸಿಯಷ್ಟು ನೀರನ್ನು ಮಂಗಳವಾರ ಅಥವಾ ಬುಧವಾರ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಮಹಾರಾಷ್ಟ್ರ ಸರ್ಕಾರ ತಾನು ನೀಡಿರುವ ಭರವಸೆಯನ್ನು ಈಡೇರಿಸಿದ್ದೇ ಆದರೆ, ರಾಜ್ಯದ ಅಥಣಿ, ಚಿಕ್ಕೋಡಿ ಹಾಗೂ ರಾಯ್ಬಾಗ್ ತಾಲೂಕು, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಜನರಿಗೆ ಕೊಂಚ ಮಟ್ಟಿಗಾದರೂ ಸಮಾಧಾನ ಸಿಕ್ಕಂತಾಗುತ್ತದೆ.
ಉತ್ತರ ಕರ್ನಾಟಕ ಭಾಗದಲ್ಲಿನ ಭೀಕರ ಬರಗಾಲ ಕುರಿತಂತೆ ಈ ಹಿಂದೆ ಚಿಕ್ಕೋಡಿ ಕಾಂಗ್ರೆಸ್ ಸಂಸದ ಪ್ರಕಾಶ್ ಹುಕ್ಕೇರಿ ಮತ್ತು ಜಿಲ್ಲೆಯ ಬಿಜೆಪಿ ನಾಯಕರು ಮಹಾರಾಷ್ಟ್ರ ಸರ್ಕಾರದ ಬಳಿ ಮನವಿಯನ್ನು ಮಾಡಿಕೊಂಡಿದ್ದರು. ಇದರಂತೆ ಮಹಾರಾಷ್ಟ್ರ ಸರ್ಕಾರ ವಾರಣಾ, ಕೊಯ್ನಾ ಅಥವಾ ರಾಜಪುರ ಜಲಾಶಯದಿಂದ ರಾಜ್ಯಕ್ಕೆ ನೀರು ಬಿಡುವುದಾಗಿ ಭರವಸೆ ನೀಡಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಸಣ್ಣ ಕೈಗಾರಿಕಾ ಸಚಿವ ಸತೀಶ ಜಾರಕಿಹೊಳಿ ಅವರು, ಬರಪೀಡಿತ ಬೆಳಗಾವಿ. ಬಾಗಲಕೋಟೆ ಮತ್ತು ವಿಜಯಪುರ ಜನತೆಗೆ ನೆರವಾಗಲು ಕೃಷ್ಣಾ ನದಿಗೆ 2 ಟಿಎಂಸಿ ಅಡಿ ನೀರು ಬಿಡುವ ಭರವಸೆಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ. ವಾರಣಾ ಅಥವಾ ಕೊಯ್ನ ಜಲಾಶಯದಿಂದ ನೀರುವ ಬಿಡುವುದಾಗಿ ಮಹಾರಾಷ್ಟ್ರ ಸರ್ಕಾರ ಮೌಖಿಕವಾಗಿ ತಿಳಿಸಿದೆ ಎಂದು ಹೇಳಿದ್ದಾರೆ.
ಸರ್ಕಾರ ಗಮನಿಸಿರುವ ಪ್ರಕಾರ ನದಿಗಳ ಪಕ್ಕದಲ್ಲಿ ಕೆಲವು ರೈತರು ಭೂಮಿಯನ್ನು ಹೊಂದಿದ್ದು, ಡೀಸೆಲ್ ಪಂಪ್ ಗಳ ಮುಖಾಂತರ ನದಿ ನೀರನ್ನು ಕೃಷಿಗೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ನೀರಿನ ಕೊರತೆಯುಂಟಾಗುತ್ತಿದೆ ಎಂದು ಹೇಳಿದ್ದಾರೆ.
ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತ ಎನ್. ಜಯರಾಮ್ ಮಾತನಾಡಿ, ಸುಮಾರು 553 ಹಳ್ಳಿಗಳು ಇಂದು ನೀರಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರಲ್ಲಿ ವಿಜಯಪುರದಲ್ಲಿನ 253, ಧಾರವಾಡದ 23, ಗದಗ 5 ಹಾಗೂ ಬೆಳಗಾವಿಯ 105 ಹಳ್ಳಿಗಳಿಗೆ ಟ್ಯಾಂಕ್ ಗಳ ಮುಖಾಂತರ ನೀರನ್ನು ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.