ಕಳ್ಳತನ ಮಾಡಿ ತಂದೆಗಾಗಿ ದೇಗುಲ ಕಟ್ಟಿದ ಭೂಪ!

ತಂದೆ ಮೇಲಿನ ಪ್ರೀತಿಗೆ ಮಕ್ಕಳು ದೇಗುಲ ಕಟ್ಟುವುದು, ಅವರ ವೃತ್ತಿಯನ್ನೇ ತಾವು ಮುಂದುವರೆಸುವುದು....ಹೀಗೆ ನಾನಾ ರೀತಿಯಲ್ಲಿ ಪ್ರಕರಣಗಳನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಖತರ್ನಾಕ್ ಕಳ್ಳ ತಂದೆಯ ಮೇಲಿನ ಪ್ರೀತಿಗಾಗಿ...
ಬಂಧಿತ ಕಳ್ಳ ಶಂಕರ್ ಹಾಗೂ ಆಭರಣ ಕದ್ದು ಮಾಡಿಸಿರುವ ಮೂರ್ತಿ
ಬಂಧಿತ ಕಳ್ಳ ಶಂಕರ್ ಹಾಗೂ ಆಭರಣ ಕದ್ದು ಮಾಡಿಸಿರುವ ಮೂರ್ತಿ

ಬೆಂಗಳೂರು: ತಂದೆ ಮೇಲಿನ ಪ್ರೀತಿಗೆ ಮಕ್ಕಳು ದೇಗುಲ ಕಟ್ಟುವುದು, ಅವರ ವೃತ್ತಿಯನ್ನೇ ತಾವು ಮುಂದುವರೆಸುವುದು....ಹೀಗೆ ನಾನಾ ರೀತಿಯಲ್ಲಿ ಪ್ರಕರಣಗಳನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಖತರ್ನಾಕ್ ಕಳ್ಳ ತಂದೆಯ ಮೇಲಿನ ಪ್ರೀತಿಗಾಗಿ ಕಳ್ಳತನ ಮಾಡಿ ದೇಗುಲವನ್ನು ಕಟ್ಟಿ, ಕಳ್ಳತನ ಮಾಡಿದ ಆಭರಣಗಳಿಂದಲೇ ಮೂರ್ತಿ ಪ್ರತಿಷ್ಟಾಪನೆ ಮಾಡಿರುವ ಘಟನೆ ನಡೆದಿದೆ.

ಶಂಕರ್ (54) ಕಳ್ಳತನ ಮಾಡಿ ದೇಗುಲ ಕಟ್ಟಿಸಿರುವ ಭೂಪ. ಈತ ಮೂಲತಃ ಗುಜರಾತ್ ನ ವಡಾ ಮೂಲದವನಾಗಿದ್ದು, ತಂದೆಯ ಮೇಲೆ ವಿಪರೀತ ಪ್ರೀತಿ, ಅಭಿಮಾನದಿಂದಾಗಿ ತಂದೆಗೊಂದು ದೇವಸ್ಥಾನ ಕಟ್ಟಿಸಬೇಕೆಂದು ನಿರ್ಧರಿಸಿದ್ದಾನೆ.

ಇದರಂತೆ ಗುಜರಾತ್ ನಲ್ಲಿರುವ ತನ್ನ ಸ್ವಗ್ರಾಮದಲ್ಲಿ ಭವ್ಯ ದೇವಸ್ಥಾನವನ್ನು ಕಟ್ಟಿಸಿದ್ದಾನೆ. ದೇಗುಲದಲ್ಲಿ ಮೂರ್ತಿಯನ್ನೂ ಕದ್ದ ಆಭರಣಗಳ ಮೂಲಕವೇ 100 ಕೆ.ಜಿ ತೂಕದ ಪ್ರತಿಮೆಯನ್ನು ಮಾಡಿಸಿ ಪ್ರತಿಷ್ಟಾಪಿಸಿದ್ದಾನೆ. ಇದಲ್ಲದೆ ಅಪಘಾತದಲ್ಲಿ ಸಾವನ್ನಪ್ಪಿದ್ದ ತನ್ನ ಅಣ್ಣನಿಗೂ ಬೆಳ್ಳಿ ಮೂರ್ತಿಯನ್ನು ಮಾಡಿಸಿ ಪ್ರತಿಷ್ಟಾಪಿಸಿದ್ದಾನೆ. ದೇವಸ್ಥಾನದಲ್ಲಿ ಪೂಜೆ ಮಾಡಲು ಹಾಗೂ ಉಸ್ತುವಾರಿಯನ್ನು ತನ್ನ ಪತ್ನಿ ಶೋಭಾಬೆನ್ ಗೆ ವಹಿಸಿದ್ದಾನೆ.

ದೇಗುಲ ಹಾಗೂ ಮೂರ್ತಿ ಪ್ರತಿಷ್ಠಾಪನೆಗಾಗಿ ಹಲವು ವರ್ಷಗಳಿಂದಲೂ ನಗರದಲ್ಲಿ ಕಳ್ಳತನ ಮಾಡಿಕೊಂಡು ತಿರುಗುತ್ತಿದ್ದ ಈ ಕಳ್ಳ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಅಲ್ಲದೆ, ಈತನ ಸಾಥ್ ನೀಡಿದ್ದ ರಾಜು (32) ಹಾಗೂ ಮಿತೇಶ್ ಪಂಚಾಲ್ (25) ಎಂಬುವವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

2007ರಲ್ಲಿ ಕುಟಂಬ ಸಮೇತರಾಗಿ ಬೆಂಗಳೂರಿಗೆ ಬಂದಿದ್ದ ಶಂಕರ್ ಹೊಸಕೆರೆ ಹಳ್ಳಿಯಲ್ಲಿ ನೆಲೆಯೂರಿದ್ದ. ನಗರಕ್ಕೆ ಬಂದ ಕೆಲವೇ ತಿಂಗಳಲ್ಲಿ ತನ್ನ ಕೈಚಳಕ ಆರಂಭಿಸಿದ್ದ ಈತ, ಈ ವರೆಗೂ ರು. 3 ಕೋಟಿಯಷ್ಟು ಕಳ್ಳತನ ಮಾಡಿದ್ದಾನೆ. ಅಲ್ಲದೆ, ಈತನ ವಿರುದ್ಧ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಇದೀಗ ಬಂಧನಕ್ಕೊಳಗಾದ ಕಳ್ಳನಿಂದ 400 ಗ್ರಾಂ ಚಿನ್ನದ ಆಭರಣ ಹಾಗೂ ಚಿನ್ನ ಲೇಪಿತ 100 ಕೆಜಿ ತೂಕದ ಮತ್ತೊಂದು ಬೆಳ್ಳಿಯ ಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆನ್ನಲಾಗಿದೆ. ಶಂಕರ್ ನ್ನು ಪೊಲೀಸರು ಬಂಧನಕ್ಕೊಳಪಡಿಸುತ್ತಿದ್ದಂತೆ ಇದೀಗ ಆತನ ಪತ್ನಿ ಹಾಗೂ ದೇಗುಲದ ಆಡಳಿತ ನಿರ್ವಹಿಸುತ್ತಿದ್ದ ಶೋಭಾಬೆನ್ ತಲೆಮರೆಸಿಕೊಂಡಿದ್ದು, ಆಕೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com