ಬಿಬಿಎಂಪಿ ನೂತನ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ನೇಮಕ

ಬಿಬಿಎಂಪಿ ಆಯುಕ್ತರಾಗಿದ್ದ ಜಿ.ಕುಮಾರ ನಾಯ್ಕ್ ಅವರನ್ನು ವರ್ಗಾವಣೆಗೊಳಿಸಿದ ಬಳಿಕ ಇದೀಗ ನೂತನ ಬಿಬಿಎಂಪಿ ನೂತನ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ...
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು: ಬಿಬಿಎಂಪಿ ಆಯುಕ್ತರಾಗಿದ್ದ ಜಿ.ಕುಮಾರ ನಾಯ್ಕ್ ಅವರನ್ನು ವರ್ಗಾವಣೆಗೊಳಿಸಿದ ಬಳಿಕ ಇದೀಗ ನೂತನ ಬಿಬಿಎಂಪಿ ನೂತನ ಆಯುಕ್ತರಾಗಿ ಮಂಜುನಾಥ್ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ.

ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಿದ ಅವಧಿಯಲ್ಲಿ ಬೆಂಗಳೂರಿನ ಸಮಸ್ಯೆಗಳ ನಿವಾರಣೆ, ಆಡಳಿತ ಸುಧಾರಣೆ ದೃಷ್ಟಿಯಿಂದ ಆಯುಕ್ತರಾಗಿ ಕುಮಾರ ನಾಯ್ಕ್ ಅವರನ್ನು ನೇಮಕ ಮಾಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸಿಗೆ-ದಿಂಬು ಹಗರಣ ನಡೆದ ಬಳಿಕ ಅಲ್ಲಿಂದ ಕೃಷಿ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆಯಾಗಿದ್ದ ಮಂಜುನಾಥ ಪ್ರಸಾದ್ ಅವರನ್ನು ಇದೀಗ ಬಿಬಿಎಂಪಿ ನೂತನ ಆಯುಕ್ತರಾಗಿ ನೇಮಕ ಮಾಡಲಾಗಿದೆ.

ಬಿಬಿಎಂಪಿ ಆಯುಕ್ತರಾಗಿದ್ದ ಜಿ.ಕುಮಾರ್ ನಾಯಕ್ ಸೇರಿ ಮೂವರನ್ನು ರಾಜ್ಯ ಸರ್ಕಾರ ವಿರ್ಗಾವಣೆಗೊಳಿಸಿತ್ತು. ಇದೀಗ ಕುಮಾರ್ ನಾಯಕ್ ಅವರನ್ನು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ, ಎಂ.ಮಹೇಶ್ವರ್ ರಾವ್ ಅವರನ್ನು ಕೃಷಿ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.

1994ರ ಐಎಎಸ್ ಅಧಿಕಾರಿಯಾಗಿದ್ದ ಮಂಜುನಾಥ್ ರೆಡ್ಡಿಯವರು, ಕೃಷಿ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಸಂಭವಿಸಿರುವ ಭೀಕರ ಬರಗಾಲ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಪರಿಶೀಲನೆಗೆ ಪ್ರವಾಸ ಹೋಗಿದ್ದಾರೆ. ಹೀಗಾಗಿ ಮಂಜುನಾಥ್ ಪ್ರಸಾದ್ ಅವರು ಇಂದು ಸಂಜೆ ನಗರಕ್ಕೆ ಆಗಮಿಸಲಿದ್ದು, ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆಂದು ಹೇಳಲಾಗುತ್ತಿದೆ.

ಈ ಕುರಿತಂತೆ ಮಾತನಾಡಿರುವ ಅವರು, ಪ್ರಸ್ತುತ ನಾನು ಕೋಲಾರದಲ್ಲಿದ್ದೇನೆ. ನಾನು ಮೂಲತಃ ಬೆಂಗಳೂರಿನವನೇ ಆಗಿದ್ದು, ಇಲ್ಲಿಯೇ ಶಾಲೆ ಹಾಗೂ ಕಾಲೇಜು ವಿದ್ಯಾಭ್ಯಾಸ ಮಾಡಿದ್ದೇನೆ. ಉದ್ಯಾನನಗರಿಯಾಗಿದ್ದ ಬೆಂಗಳೂರಿನಲ್ಲಿ ಇಂದು ತಾಪಮಾನ ಹೆಚ್ಚಾಗಿದೆ. ನಗರದಲ್ಲಿ ಮತ್ತಷ್ಟು ಮರಗಳನ್ನು ಬೆಳೆಸುವ ಉದ್ದೇಶವಿದ್ದು, ಮತ್ತೆ ಬೆಂಗಳೂರು ಉದ್ಯಾನನಗರಿಯಾಗುವಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆಂದು ಹೇಳಿದ್ದಾರೆ.

ಇನ್ನು ಮುಂದಿನ ಸವಾಲುಗಳನ್ನು ಯಾವ ರೀತಿಯಲ್ಲಿ ಎದುರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಮೊದಲು ಅಧಿಕಾರ ಪಡೆದ ನಂತರ ಸಾಮಾನ್ಯ ವ್ಯಕ್ತಿಯಂತೆ ಪರಿಸ್ಥಿತಿಯನ್ನು ಅವಲೋಕಿಸುತ್ತೇನೆ. ನಗರ ಕಸ ಸಮಸ್ಯೆ ಎದುರಿಸುತ್ತಿದ್ದ ಪರಿಸ್ಥಿತಿಯನ್ನು ನಾನು ನೋಡಿದ್ದೇನೆ. ಜನರು ಕಸ ವಿಂಗಡನೆ ಮಾಡುವ ಅಗತ್ಯವಿದೆ. ಬೆಂಗಳೂರಿನಲ್ಲಿ ಕಸ ಸಮಸ್ಯೆ ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com