

ಬೆಂಗಳೂರು: ನ್ಯಾಯಾಲಯದಲ್ಲಿ ಸತತ ಒಂದು ವರ್ಷದ ಹೋರಾಟದ ನಂತರ, ವಿವಾಹವಾಗುವುದಾಗಿ ತನ್ನನ್ನು ನಂಬಿಸಿ, ಕೈಕೊಟ್ಟಿದ್ದ ವ್ಯಕ್ತಿಯೇ ತನ್ನ ಮಗುವಿನ ತಂದೆ ಎಂಬುದನ್ನು ಸಾಬೀತು ಪಡಿಸುವಲ್ಲಿ ಮಹಿಳೆಯೊಬ್ಬಳು ಯಶಸ್ವಿಯಾಗಿದ್ದಾಳೆ. ಒಂದು ವರ್ಷದ ಹಿಂದೆ ಡಿಎನ್ ಎ ಪರೀಕ್ಷೆ ನಡೆದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ಬನಶಂಕರಿ ನಿವಾಸಿಗಳಾದ ರಾಜು(33) ಮತ್ತು ಶುಭಾ(28) (ಹೆಸರು ಬದಲಾಯಿಸಲಾಗಿದೆ) ಬಾಲ್ಯದಿಂದಲೂ ಸ್ನೇಹಿತರು. ನಂತರ ಇಬ್ಬರಲ್ಲಿ ಪ್ರೇಮಾಂಕುರವಾಗಿತ್ತು. ಶುಭಾ ರಾಜುವನ್ನು ವಿವಾಹವಾಗಲು ಬಯಸಿದ್ದಳು. ಈ ವೇಳೆ ಮನೆಗೆ ಬಂದ ರಾಜು ತನ್ನ ಪೋಷಕರನ್ನು ಒಪ್ಪಿಸಿ ಶುಭಾಳನ್ನು ಮದುವೆಯಾಗುವುದಾಗಿ, ತನಗೆ ಸಮಯ ನೀಡಬೇಕೆಂದು ಶುಭಾ ತಾಯಿಗೆ ಮಾತು ನೀಡಿದ್ದ. ಹೀಗಾಗಿ ತನ್ನ ಮಗಳು ಶುಭಾಳಿಂದ ದೂರವುಳಿಯುವಂತೆ ರಾಜುಗೆ ಶುಭಾ ತಾಯಿ ತಿಳಿಸಿದ್ದರು.
ಒಂದು ದಿನ ಶುಭಾ ತಾಯಿ ಮನೆಯಲ್ಲಿಲ್ಲದ ವೇಳೆ ಆಕೆಯ ಮನೆಗೆ ರಾಜು ಆಕೆಗೆ, ತಿನ್ನಲು ಇಡ್ಲಿ ತಂದು ಅದರಲ್ಲಿ ನಿದ್ರೆ ಮಾತ್ರೆ ಬೆರಿಸಿಕೊಟ್ಟಿದ್ದ, ಅದನ್ನು ತಿಂದ ಶುಭಾ ನಿದ್ದೆಗೆ ಜಾರಿದ ವೇಳೆ ರಾಜು ಆಕೆಯೊಂದಿಗೆ ದೈಹಿಕ ಸಂಪರ್ಕ ನಡೆಸಿದ್ದ. ಕೆಲ ಸಮಯದ ನಂತರ ತಾನು ಗರ್ಭಿಣಿ ಎಂಬ ವಿಷಯ ಶುಭಾಗೆ ತಿಳಿಯಿತು. ನಂತರ ರಾಜು ಬಳಿ ಈ ವಿಷಯ ಪ್ರಸ್ತಾಪಿಸಿದಾಗ ಆತ ಗರ್ಭಪಾತ ಮಾಡಿಸುವಂತೆ ಹೇಳಿ ಅದಕ್ಕಾಗಿ ಪರಿಹಾರ ಹಣ ನೀಡುವುದಾಗಿ ತಿಳಿಸಿದ್ದಾನೆ. ಗರ್ಭಪಾತ ಮಾಡಿಸಲು ಒಪ್ಪದ ಶುಭಾ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು.
ನಂತರ ಶುಭಾ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದಳು. ಐಪಿಸಿ ಸೆಕ್ಷನ್ 448, 376, 420, ಮತ್ತು 506 ಅಡಿಯಲ್ಲಿ 2014 ರಲ್ಲಿ ರಾಜು ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.
ಇದೇ ವೇಳೆ ರಾಜು ಮತ್ತೊಬ್ಬ ಯುವತಿ ಜೊತೆ ವಿವಾಹವಾಗುವ ವಿಷಯ ಶುಭಾಳಿಗೆ ಗೊತ್ತಾಗಿದೆ. ಕೋರ್ಟ್ ಮೆಟ್ಟಿಲೇರಿದ ಶುಭಾ ರಾಜು ಬೇರೊಬ್ಬ ಯುವತಿ ಜೊತೆ ವಿವಾಹವಾಗದಂತೆ ತಡೆಯಾಜ್ಞೆ ತಂದಿದ್ದಳು. ನಾನು ಮಗುವಿನ ತಂದೆಯಲ್ಲ ಎಂದು ರಾಜು ಕೋರ್ಟ್ ನಲ್ಲಿ ಹೇಳಿದ್ದ.
ನಂತರ 2015ರ ಜುಲೈ 25 ರಂದು ನ್ಯಾಯಾಲಯ ಡಿಎನ್ ಎ ಟೆಸ್ಟ್ ನಡೆಸುವಂತೆ ಆದೇಶಿಸಿತ್ತು, ಅದರಂತೆ ಮಗುವಿಗೆ ತಿಂಗಳು ತುಂಬಿದ ನಂತರ ಡಿಎನ್ ಎ ಪರೀಕ್ಷೆ ನಡೆಸಲಾಗಿತ್ತು. ಆ ಪರೀಕ್ಷೆಯ ವರದಿ ಈಗ ನ್ಯಾಯಾಲಯಕ್ಕೆ ನೀಡಿದ್ದು, ರಾಜುವೇ ಆ ಮಗುವಿನ ಜನ್ಮದಾತ ಎಂಬುದು ಸಾಬೀತಾಗಿದೆ.