

ಬೆಂಗಳೂರು: ಆಮ್ನೆಸ್ಟಿ ವಿವಾದದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡುತ್ತಿದೆ ಎಂದು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಭಾನುವಾರ ಆರೋಪಿಸಿದೆ.
ಈ ಕುರಿತಂತೆ ಮಾತನಾಡಿರುವ ಬಿಜೆಪಿ ನಾಯಕ ಎಸ್. ಪ್ರಕಾಶ್ ಅವರು, ಭಾರತ ವಿರೋಧಿ ಘೋಷಣೆ ಕೂಗಿ ವಿವಾದಕ್ಕೀಡಾಗಿರುವ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾಗೆ ಕರ್ನಾಟಕ ಗೃಹ ಸಚಿವ ಪರಮೇಶ್ವರ ಅವರು ಕ್ಲೀಟ್ ಚಿಟ್"ನ್ನು ನೀಡಿದ್ದಾರೆ. ಪರಮೇಶ್ವರ್ ಅವರು ಕಾಂಗ್ರೆಸ್ ಹೈಕಮಾಂಡ್ ನ ಆದೇಶದಂತೆ ಕೆಲಸ ಮಾಡುತ್ತಿದ್ದಾರೆಂಬುದು ಇದರಿಂದ ತಿಳಿಯುತ್ತದೆ ಎಂದು ಹೇಳಿದ್ದಾರೆ.
ಸಾಕಷ್ಟು ಸುಧೀರ್ಘ ಚರ್ಚೆ ನಂತರ ಬೆಂಗಳೂರು ಪೊಲೀಸರು ಆಮ್ನೆಸ್ಟಿ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಿದರು. ಗೃಹ ಸಚಿವ ಪರಮೇಶ್ವರದ ಅವರ ಆದೇಶದಂತೆಯೇ ಪ್ರಕರಣವನ್ನು ದಾಖಲಿಸಲಾಗಿದೆ. ಆದರೆ, ವರದಿ ಸಲ್ಲಿಸುವುದಕ್ಕೂ ಮುನ್ನವೇ ಪರಮೇಶ್ವರ್ ಅವರೇ ಆಮ್ನೆಸ್ಟಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ಹೈಕಮಾಂಡ್ ಒತ್ತಡದಲ್ಲಿ ಅವರು ಕೆಲಸ ಮಾಡುತ್ತಿದ್ದಾರೆಂಬುದು ಇದರಿಂದ ಸ್ಪಷ್ಟವಾಗುತ್ತಿದೆ.
ಆಮ್ನೆಸ್ಟಿ ವಿವಾದದಲ್ಲಿ ಸ್ವತಃ ಗೃಹ ಸಚಿವರೇ ಕ್ಲೀನ್ ಚಿಟ್ ನೀಡುವುದರಿಂದ ಪ್ರಕರಣ ಸಂಬಂಧ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕಿದೆ. ವಿವಾದವೊಂದು ಗಂಭೀರ ವಿಚಾರವಾಗಿದೆ. ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಬೇಕಿದೆ ಎಂದು ಹೇಳಿದ್ದಾರೆ.