

ಬೆಂಗಳೂರು: ಸಂಸದ ಡಿ.ಕೆ.ಸುರೇಶ್ ಅವರು ನನ್ನನ್ನು ವಸೂಲಿಗಾರ ಎಂದು ನಿಂದಿಸಿದ್ದಾರೆ ಎಂದು ಆರೋಪಿಸಿ ಅತ್ತಿಬೆಲೆ ಠಾಣೆ ಎಸ್‌ಐ ಬೆಂಗಳೂರು ಗ್ರಾಮಾಂತರ ಎಸ್ಪಿ ಅಮಿತ್ ಸಿಂಗ್ ಅವರಿಗೆ ದೂರು ಕೊಟ್ಟಿದ್ದಾರೆ.
ಗುರುವಾರ ಬೆಳಿಗ್ಗೆ ಸದಾಶಿವನಗರದ ತಮ್ಮ ಮನೆಯಲ್ಲಿ ಪೊಲೀಸರ ಸಭೆ ಕರೆದಿದ್ದ ಸುರೇಶ್, ನೀವೆಲ್ಲ ದರೋಡೆ ಮಾಡುತ್ತಿದ್ದೀರಿ. ಗ್ರಾನೈಟ್, ಮರಳು ಲಾರಿಗಳನ್ನು ತಡೆದು ಸುಲಿಗೆ ಮಾಡುತ್ತಿದ್ದೀರಿ’ ಎಂದು ಆರೋಪ ಮಾಡಿದರು. ಇದರಿಂದ ಬೇಸರವಾಗಿ ಸ್ಪಷ್ಟನೆ ಕೇಳಲು ಮುಂದಾಗಿದ್ದಕ್ಕೆ ನನಗೆ ಅವಮಾನ ಮಾಡಿದರು ಎಂದು ಎಸ್ ಐ ಶ್ರೀನಿವಾಸ್ ದೂರಿದ್ದಾರೆ.
ಸಭೆ ಮುಗಿಸಿಕೊಂಡು ಹೊರಗೆ ಹೋಗುತ್ತಿದ್ದಾಗ ನನ್ನನ್ನು ಮಾತ್ರ ಕರೆದ ಅವರು, ನೀವು ಯಾವ ಠಾಣೆಯವರು ಎಂದು ಪ್ರಶ್ನಿಸಿದರು. ಅತ್ತಿಬೆಲೆ ಎಂದಿದ್ದಕ್ಕೆ, ಓಹ್, ಸರಿಯಾಗಿ ವಸೂಲಿ ಮಾಡುತ್ತಿದ್ದೀಯಾ ಎಂದು ವ್ಯಂಗ್ಯ ಮಾಡಿದರು.
ಸಾರ್ವಜನಿಕ ರೆದುರು ನಿಂದಿಸಿದ್ದಾರೆ ಎಂದು ಎಸ್‌ಪಿಗೆ ಬರೆದ ಪತ್ರದಲ್ಲಿ ಹೇಳಿಕೊಂಡಿದ್ದು ಈ ಸಂಬಂಧ ನಡವಳಿ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಸುರೇಶ್ ಸಾರ್ವಜನಿಕರಿಂದ ದರೋಡೆ, ದೌರ್ಜನ್ಯಗಳ ಕುರಿತು ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ನಾನು ಜನಪ್ರತಿನಿಧಿಯಾಗಿ ಸಭೆ ಕರೆದಿದ್ದೆ. ಯಾವುದೇ ನಿಂದನೆ ಮಾಡಿಲ್ಲ. ಈ ಬಗ್ಗೆ ತನಿಖೆಯಾಗಲಿ ಏನು ನಡೆದಿದೆ ಎನ್ನುವುದು ಹೊರ ಬರಲಿ ಎಂದುು ಹೇಳಿದ್ದಾರೆ.