ಬಿಬಿಎಂಪಿಯಿಂದ ಹಣ ಬಾಕಿ; ಮನನೊಂದು ಕಾಂಟ್ರಾಕ್ಟರ್ ಆತ್ಮಹತ್ಯೆ!

ಬೆಂಗಳೂರು: ತನಗೆ ನೀಡಬೇಕಾದ ಬಾಕಿ ಹಣವನ್ನು ಬಿಬಿಎಂಪಿ ಅಧಿಕಾರಿಗಳು ಬಿಡುಗಡೆ ಮಾಡುತ್ತಿಲ್ಲ ಎಂದು ಮನನೊಂದ ಗುತ್ತಿಗೆದಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ರಾಜಾಜಿನಗರದ ನಿವಾಸಿ ಹಾಗೂ ಬಿಬಿಎಂಪಿಗೆ ವಾಹನಗಳನ್ನು ಒದಗಿಸುತ್ತಿದ್ದ ಗುತ್ತಿಗೆದಾರ 60 ವರ್ಷದ ಮಾರೇಗೌಡ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ತನ್ನ ಸಾವಿಗೆ ಬಿಬಿಎಂಪಿ ಅಧಿಕಾರಿಗಳೇ ಕಾರಣ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಪೊಲೀಸ್ ಮೂಲಗಳು ತಿಳಿಸಿರುವಂತೆ ಗುತ್ತಿಗೆದಾರ ಮಾರೇಗೌಡ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದ ಬಳಿ ‘ಮಾರುತಿ ಟ್ರಾವೆಲ್ಸ್’ ನಡೆಸುತ್ತಿದ್ದರು. ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳ ಓಡಾಟಕ್ಕೆ ವಾಹನಗಳನ್ನು ಪೂರೈಸುವ ಗುತ್ತಿಗೆ ಪಡೆದಿದ್ದರು. ನಾಲ್ಕೈದು ವರ್ಷಗಳಿಂದ 25ಕ್ಕೂ ಹೆಚ್ಚು ಕಾರುಗಳನ್ನು ಬಿಬಿಎಂಪಿಗೆ ಬಾಡಿಗೆ ನೀಡಿದ್ದರು. ಈ 25 ಕಾರುಗಳ ಪೈಕಿ ಐದು ವಾಹನಗಳು ಮಾತ್ರ ಮಾರೇಗೌಡ ಅವರಿಗೆ ಸೇರಿದ್ದಾಗಿದ್ದು, ಇನ್ನುಳಿದ ವಾಹನಗಳನ್ನು ಸ್ನೇಹಿತರಿಂದ ಪಡೆದುಕೊಂಡು ಸೇವೆಗೆ ನೀಡಿದ್ದರು.
ಅದರಂತೆ ಮಾರೇಗೌಡ ಅವರಿಗೆ ಬಿಬಿಎಂಪಿ 29 ಲಕ್ಷ ಬಾಡಿಗೆಯನ್ನು ನೀಡಬೇಕಿತ್ತು. ಆದರೆ ಈ ಹಣ ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗಿರಲಿಲ್ಲ. ಇತ್ತ ವಾಹನಗಳನ್ನು ಕೊಟ್ಟಿದ್ದ ಸ್ನೇಹಿತರು ಮೇಲಿಂದ ಮೇಲೆ ಬಾಡಿಗೆ ಕೇಳುತ್ತಿದ್ದರಿಂದ ಮತ್ತು ಚಾಲಕರಿಗೆ ವೇತನ ಪಾವತಿ ಮಾಡಲಾಗದೇ ಮಾರೇಗೌಡ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಬಾಕಿ ಹಣ ನೀಡುವಂತೆ ಮಾರೇಗೌಡ ಹಲವು ಬಾರಿ ಬಿಬಿಎಂಪಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಮಾರೇಗೌಡ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಕೈಕೊಟ್ಟ ವಹಿವಾಟು ಮತ್ತು ದಾಂಪತ್ಯ ಜೀವನದಲ್ಲಿ ಬಿರುಕು ಮಾರೇಗೌಡ ಆತ್ಮಹತ್ಯೆ ಕಾರಣ
ಅತ್ತ ವಹಿವಾಟಿನ ಹಿನ್ನಡೆ ಅನುಭವಿಸಿದ್ದ ಮಾರೇಗೌಡ ಅವರ ದಾಂಪತ್ಯ ಜೀವನದಲ್ಲಿ ಕೂಡ ಸಂಕಷ್ಟ ಅನುಭವಿಸುತ್ತಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾರೇಗೌಡ ಪತ್ನಿ ಜಾನಕಿ ಜತೆಗೂ ಗಲಾಟೆ ಮಾಡಿಕೊಂಡಿದ್ದರು. ಹೀಗಾಗಿ ವಯಕ್ತಿಕವಾಗಿ ಹಾಗೂ ವ್ಯಾವಹಾರಿಕವಾಗಿ ನೊಂದಿದ್ದ ಮಾರೇಗೌಡ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆತ್ಮಹತ್ಯೆಗೂ ಮುನ್ನ ಡೆತ್ ನೋಟ್!
ಮೃತ ಮಾರೇಗೌಡ ಅವರು ಆತ್ಮಹತ್ಯೆಗೂ ಮುನ್ನ ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ "ನನ್ನ ಸಾವಿಗೆ ಬಿಬಿಎಂಪಿ ಕಾರ್ಯ ನಿರ್ವಾಹಕ ಎಂಜಿನಿಯರ್ ಧರಣೇಂದ್ರ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮಹದೇವ್, ಗುಮಾಸ್ತರಾದ ಶಾಂತಮ್ಮ ಹಾಗೂ ನನ್ನ ಪತ್ನಿ ಜಾನಕಿ ಕಾರಣ. ಬಿಬಿಎಂಪಿಯ ನಿರ್ಲಕ್ಷ್ಯ ಧೋರಣೆಯ ಜತೆಗೆ, ಕೌಟುಂಬಿಕ ಕಲಹದಿಂದಲೂ ಸಾಕಷ್ಟು ಯಾತನೆ ಅನುಭವಿಸಿದ್ದೇನೆ’ ಎಂದು ಬರೆದಿದ್ದಾರೆ.
ಮಾರೇಗೌಡ ಅವರು ಬರೆದಿರುವ ಪತ್ರವನ್ನು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರಸ್ತೆ ಪೊಲೀಸರು ಬಿಬಿಎಂಪಿ ಕಾರ್ಯ ನಿರ್ವಾಹಕ ಎಂಜಿನಿಯರ್ ಧರಣೇಂದ್ರ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮಹದೇವ್, ಗುಮಾಸ್ತರಾದ ಶಾಂತಮ್ಮ ಹಾಗೂ ಪತ್ನಿ ಜಾನಕಿ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಬಾಕಿ ಹಣ ಪಾವತಿ ಮಾಡಿದ್ದೇವೆ: ಬಿಬಿಎಂಪಿ
ಬಿಬಿಎಂಪಿಗೆ ವಾಹನ ಪೂರೈಸುವ ಗುತ್ತಿಗೆ ಪಡೆದಿದ್ದ ಮಾರೇಗೌಡ ಅವರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಗುರುವಾರವಷ್ಟೇ ರು. 27 ಲಕ್ಷ ಪಾವತಿಸಿದ್ದೇವೆ ಎಂದು ಪಾಲಿಕೆ ಅಧಿಕಾರಿ ಎಂಕೆ ಗುಣಶೇಖರ್ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


